56 ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ

7
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 10ನೇ ಘಟಿಕೋತ್ಸವ ನಾಳೆ

56 ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ

Published:
Updated:

ವಿಜಯಪುರ: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 10ನೇ ಘಟಿಕೋತ್ಸವ ಇದೇ 13ರ ಬುಧವಾರ ನಡೆಯಲಿದ್ದು, ಸಕಲ ಸಿದ್ಧತೆಗಳು ಬಿರುಸಿನಿಂದ ನಡೆದಿವೆ ಎಂದು ವಿ.ವಿ.ಯ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ತಿಳಿಸಿದರು.

ಮಹಿಳಾ ಶಿಕ್ಷಣದ ಪ್ರವರ್ತಕಿ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರದಿಂದ ಹೊರ ಹೊಮ್ಮಿರುವ ಮಹಿಳಾ ಶಿಕ್ಷಣದ ವಿವಿಧ ಆಯಾಮಗಳು ಮತ್ತು ಮಹಿಳಾ ಶೈಕ್ಷಣಿಕ ಸಬಲೀಕರಣದ ಪರಿಕಲ್ಪನೆ ಈ ಬಾರಿಯ ಸಭಾಂಗಣದ ವೈಶಿಷ್ಟ್ಯಗಳಲ್ಲೊಂದಾಗಿದೆ ಎಂದು ಸೋಮವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಘಟಿಕೋತ್ಸವದಲ್ಲಿ ಸ್ನಾತಕ, ಸ್ನಾತಕೋತ್ತರ ಮತ್ತು ಪಿಜಿ ಡಿಪ್ಲೊಮಾ ಸೇರಿ ಒಟ್ಟು 10,873 ವಿದ್ಯಾರ್ಥಿನಿಯರು ಪದವಿ ಪಡೆಯಲು ಅರ್ಹರಾಗಿದ್ದಾರೆ. 46 ವಿದ್ಯಾರ್ಥಿನಿಯರಿಗೆ ಪಿಎಚ್.ಡಿ, 10 ವಿದ್ಯಾರ್ಥಿನಿಯರಿಗೆ ಎಂ.ಫಿಲ್. ಪದವಿ, 56 ವಿದ್ಯಾರ್ಥಿನಿಯರಿಗೆ 67 ಚಿನ್ನದ ಪದಕ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ಅನುದಾನಕ್ಕೆ ಬೇಡಿಕೆ:
‘ಮಹಿಳಾ ಅಸ್ಮಿತೆ ಮತ್ತು ಅನನ್ಯತೆಯನ್ನು ಪ್ರತಿಬಿಂಬಿಸುವ ಮಹಿಳಾ ಮ್ಯೂಜಿಯಂ ಸ್ಥಾಪನೆಗಾಗಿ ₹ 10 ಕೋಟಿ ಮೊತ್ತದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ ಮತ್ತು ರಾಜ್ಯ ಸರ್ಕಾರಕ್ಕೆ ಪ್ರತ್ಯೇಕವಾಗಿ ಸಲ್ಲಿಸಲಾಗಿದೆ’ ಎಂದು ಕುಲಪತಿ ತಿಳಿಸಿದರು.

‘ವಿ.ವಿ.ಯ ಅಂಗಳದಲ್ಲಿ ಸುಸಜ್ಜಿತ ಕ್ರೀಡಾ ಸಮುಚ್ಚಯ ಸ್ಥಾಪನೆಗಾಗಿ ಕೇಂದ್ರ ಸರ್ಕಾರಕ್ಕೆ ₹ 25 ಕೋಟಿ ಮೊತ್ತದ ಪ್ರಸ್ತಾವನೆಯೊಂದನ್ನು ಕಳುಹಿಸಿಕೊಟ್ಟಿದ್ದೇವೆ’ ಎಂದು ಹೇಳಿದರು.

‘ರಾಜ್ಯ ಸರ್ಕಾರಕ್ಕೆ ಬಜೆಟ್‌ನಲ್ಲಿ ₹ 60 ಕೋಟಿ ಅನುದಾನ ಒದಗಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಎಷ್ಟು ಸಿಕ್ಕಿದೆ ಎಂಬುದರ ನಿಖರ ಮಾಹಿತಿ ಲಭ್ಯವಿಲ್ಲ’ ಎಂದು ಕುಲಪತಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ವಿಶ್ವವಿದ್ಯಾನಿಲಯ ಪರ್ಯಾಯ ಇಂಧನ ಬಳಕೆಯನ್ನು ಉತ್ತೇಜಿಸುತ್ತಿದ್ದು, ಕೇಂದ್ರ ಸರ್ಕಾರದ ಯೋಜನೆಯಡಿ ಎರಡು ಸೌರ ಘಟಕಗಳನ್ನು ಸ್ಥಾಪಿಸಲಾಗಿದೆ. ಈ ಘಟಕಗಳು ಒಟ್ಟು 170 ಕಿಲೊ ವಾಟ್‌ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಮಾಸಿಕ ₹ 1 ಲಕ್ಷ ಉಳಿಸುತ್ತಿವೆ’ ಎಂದು ಮಾಹಿತಿ ನೀಡಿದರು.

‘ಗ್ರಾಮೀಣ ಮಹಿಳೆಯರಿಗೆ ಕೌಶಲ ತರಬೇತಿ ನೀಡಲು ಅಲ್ಪಾವಧಿ ಮತ್ತು ಮಧ್ಯಮಾವಧಿ ಕೋರ್ಸ್‌ ಆರಂಭಿಸಲು ಮಹಿಳಾ ಕೌಶಲ ತರಬೇತಿ ಕೇಂದ್ರ ಸ್ಥಾಪನೆಯ ಉದ್ದೇಶ ಹೊಂದಲಾಗಿದೆ. ಪದವಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೂ ಈ ಕೋರ್ಸ್‌ ಆರಂಭಿಸಲು ಸಿದ್ಧತೆ ನಡೆದಿವೆ.’

‘ಆಹಾರ ಮತ್ತು ಪೌಷ್ಟಿಕಾಂಶ ವಿಭಾಗದಿಂದ ವಿವಿಧ ಬಗೆಯ ಸಿದ್ಧ ಆಹಾರ ಉತ್ಪನ್ನಗಳ ಮಾದರಿಗಳನ್ನು ತಯಾರಿಸಲಾಗುತ್ತಿದೆ. ವಿಶೇಷವಾಗಿ ಸಿರಿಧಾನ್ಯಗಳನ್ನು ಬಳಸಿ ಈ ಆಹಾರ ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು, ‘ಅನನ್ಯ’ ಬ್ರ್ಯಾಂಡ್ ಮೂಲಕ ಈ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ವಿವರಿಸಿದರು.

ಬೋಧನೆ, ಕಲಿಕೆಯನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಲು ಮಾಹಿತಿ ತಂತ್ರಜ್ಞಾನ ಆಧಾರಿತ ಮೂಲ ಸೌಕರ್ಯಗಳ ಸ್ಥಾಪನೆಗೆ ಕ್ರಮ ಕೈಕೊಳ್ಳಲಾಗಿದೆ. ಸಂಲಗ್ನ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಟೆಲಿ ಎಜುಕೇಷನ್ ಕಾರ್ಯಕ್ರಮ ಪ್ರಸಾರ ಮಾಡಲು ಉದ್ದೇಶಿಸಿದ್ದು, ಮಾರ್ಚ್‌ನಿಂದ ಈ ಕಾರ್ಯಕ್ರಮ ಆರಂಭಿಸಲಾಗುವುದು ಎಂದು ಪ್ರೊ.ಸಬಿಹಾ ಹೇಳಿದರು.

ಕುಲಸಚಿವರಾದ ಪ್ರೊ.ಆರ್.ಸುನಂದಮ್ಮ, ಪ್ರೊ.ಪಿ.ಜಿ.ತಡಸದ, ಘಟಿಕೋತ್ಸವದ ಸಂಯೋಜನಾಧಿಕಾರಿ ಪ್ರೊ.ಡಿ.ಎಂ.ಜ್ಯೋತಿ, ಮಾಧ್ಯಮ ಸಂಯೋಜನಾಧಿಕಾರಿ ಪ್ರ್ರೊ.ಓಂಕಾರ ಕಾಕಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !