ಬುಧವಾರ, ನವೆಂಬರ್ 13, 2019
17 °C
ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಚಾರ್ತುಮಾಸ್ಯ ಇಂದು ಮುಕ್ತಾಯ

‘ಸಂಸ್ಕೃತ ಜನರ ಭಾಷೆಯಾಗಲಿ’

Published:
Updated:
Prajavani

ಮೈಸೂರು: ‘ಸಂಸ್ಕೃತ ದೇವ ಭಾಷೆ ಎಂಬ ಕಲ್ಪನೆ ಹೋಗಿ, ಜನ ಸಾಮಾನ್ಯರ ಭಾಷೆಯಾದಾಗ ಮಾತ್ರ ಉಳಿಯಲಿದೆ, ಬೆಳೆಯಲಿದೆ’ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಶ್ರೀಕೃಷ್ಣಧಾಮದಲ್ಲಿ ಶುಕ್ರವಾರ ಮುಸ್ಸಂಜೆ ನಡೆದ ಸುಧರ್ಮಾ ಸಂಸ್ಕೃತ ದಿನಪತ್ರಿಕೆಯ ಸುವರ್ಣ ಮಹೋತ್ಸವ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಆ‌ಶೀರ್ವಚನ ನೀಡಿದ ಸ್ವಾಮೀಜಿ, ‘ಸಂಸ್ಕೃತ ಮೃತ ಭಾಷೆಯಲ್ಲ. ಅಪಾರವಾದ ಜ್ಞಾನ ಭಂಡಾರ ಹೊಂದಿರುವ ಭಾಷೆ’ ಎಂದು ಹೇಳಿದರು.

‘ಜನರ ಬಳಕೆಯಲ್ಲಿ ಇಲ್ಲದಿರುವ ಭಾಷೆಯಲ್ಲಿ ದಿನ ಪತ್ರಿಕೆ ನಡೆಸುವುದು ಸಾಹಸದ ಕೆಲಸ. ಸುಧರ್ಮಾ ದಿನಪತ್ರಿಕೆ 50 ವರ್ಷ ಪೂರೈಸಿರುವುದು ಹೆಮ್ಮೆಯ ವಿಚಾರ ಹಾಗೂ ಪ್ರಶಂಸನೀಯವಾದುದು’ ಎಂದರು.

ಪತ್ರಿಕೆಯ ಗೌರವ ಸಂಪಾದಕ ಡಾ.ಎಚ್.ವಿ.ನಾಗರಾಜರಾವ್, ಸಂಪತ್ ಕುಮಾರ್ ಪಾಲ್ಗೊಂಡಿದ್ದರು.

ಧರ್ಮಕ್ಕೆ ಜಯ: ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥ ಸ್ವಾಮೀಜಿ ಅವರ 81ನೇ, ವಿಶ್ವಪ್ರಸನ್ನತೀರ್ಥರ 32ನೇ ಚಾರ್ತುಮಾಸ್ಯ ಶನಿವಾರ ಮುಕ್ತಾಯಗೊಳ್ಳಲಿದೆ.

ಶುಕ್ರವಾರ ಗಾನಸಿರಿ ವೇದಾಂತ ಲಹರಿಯ ಸಮಾರೋಪ ನಡೆಯಿತು. ಬಳಿಕ ಮಹಾಭಾರತದ ಅನುಗ್ರಹ ಸಂದೇಶ ನೀಡಿದ ವಿಶ್ವೇಶತೀರ್ಥ ಸ್ವಾಮೀಜಿ, ‘ಎಲ್ಲ ಕಾಲದಲ್ಲಿಯೂ ಧರ್ಮಕ್ಕೆ ಜಯ ಲಭಿಸಿದೆ. ಅಧರ್ಮಕ್ಕೆ ಎಂದೂ ಗೆಲುವಿಲ್ಲ. ಶ್ರೀಕೃಷ್ಣನ ಕೃಪೆಯಿಲ್ಲದೆ ನಮ್ಮ ಶಕ್ತಿ ಬಳಸಿ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ’ ಎಂದರು.

‘ಇಂದಿನ ರಾಜಕಾರಣಿಗಳು ಸಂಪತ್ತು, ಆಸ್ತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಇವರು ಪಾಂಡವರು–ಕೌರವರ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಕೃಷ್ಣ ಯಾವುದೇ ರಾಗ-ದ್ವೇಷ ಇಲ್ಲದವ. ಧರ್ಮ ಅಂತ ಬಂದಾಗ ತನ್ನವರು ಬೇರೆಯವರು ಎಂದು ನೋಡುತ್ತಿರಲಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡುತ್ತಿದ್ದ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)