ವಿರಾಮದಲ್ಲಿ ಉಣ್ಣುತ್ತ

7

ವಿರಾಮದಲ್ಲಿ ಉಣ್ಣುತ್ತ

Published:
Updated:
Prajavani

ಎಂ.ಜಿ ರಸ್ತೆಯ ಗೌಜು ಗದ್ದಲುಗಳಿಂದ ದೂರ, ಆದ್ರೆ ಎಂಜಿ ರಸ್ತೆಯಲ್ಲಿಯೇ ತಾಣ ಒಂದಿದೆ. ವಿರಾಮವಾಗಿ ಹರಟುತ್ತ, ಮಾತಾಡುತ್ತ, ಜೂಸು ಹೀರುತ್ತ, ಕಬಾಬುಗಳನ್ನು ಸವಿಯುತ್ತ, ಪಾನಿಪುರಿ ತಿನ್ನುತ್ತ, ದಿನವಿಡೀ ತಿಂದುಂಡು, ಮಾತಾಡಿ, ಹರಟಿ ಹೋಗುವಂಥ ತಾಣ. ಅದು ಬಿ.ಬಿ.ಕ್ಯು@52

ಉಣ್ಣಿ, ತಿನ್ನಿ ಹಾಗೂ ಮಾತಾಡಿ ಎಂದೇ ಪರಿಸರವನ್ನು ಶಾಂತವಾಗಿರಿಸಲಾಗಿದೆ. ಹಿನ್ನೆಲೆಯಲ್ಲಿ ಹಳೆಯ ಹಾಡುಗಳ ವಾದ್ಯಸಂಗೀತವಿದ್ದರೆ ನಗುಮುಖದ ಸುಂದರಿಯರು, ಟೇಬಲ್‌ಗೆ ಒಂದಾದ ನಂತರ ಒಂದು ತಿನಿಸು, ಪಾನೀಯಗಳನ್ನು ನೀಡುತ್ತಲೇ ಇರುತ್ತಾರೆ. ಮಾತಿಗೆ ಅಡ್ಡಿಯಾಗುವುದಾದರೆ ನೀವೇ ಹೋಗಿ ಬೇಕಿರುವುದನ್ನು ಬಡಿಸಿಕೊಳ್ಳಬಹುದು.

ಉಣ್ಣುವುದೆಂದರೆ ಬರೀ ಹೊಟ್ಟೆ ತುಂಬಿಸಿಕೊಳ್ಳುವುದು ಮಾತ್ರವಲ್ಲ. ಊಟ ಮಾಡುತ್ತ, ಉಪಚರಿಸುತ್ತ ಪರಸ್ಪರ ನಗುತ್ತ, ಕಾಳಜಿ ಮಾಡುತ್ತ ಉಣ್ಣುವ ಪರಿಸರ ಈ ರಸ್ತೆಗೆ ಹೊಂದಿಕೊಂಡಂತೆ ಬೇಕಿತ್ತು. ಅದೇ ಪರಿಕಲ್ಪನೆಯಲ್ಲಿ ಈ ಹೊಟೆಲ್‌ ಆರಂಭಿಸಿದೆವು ಎನ್ನುತ್ತಾರೆ ಶೇಖರ್‌.

ಹೋದೊಡನೆ ವೆಲ್‌ಕಮ್‌ ಡ್ರಿಂಕ್‌ ನೀಡಿ, ನಸುನಗುವ ಸುಂದರಿಯರು ಕಬಾಬ್‌ನ ಆಯ್ಕೆಗಳನ್ನು ಕೇಳಿ ಉಪಚರಿಸುತ್ತಾರೆ. ದಾಹ ತಣಿಸುವ, ನಿಧಾನವಾಗಿ ಹೊಟ್ಟೆಗೇನಾದರೂ ಬೇಕೆನಿಸುವಂತೆ ಮಾಡುತ್ತದೆ ಈ ಪಾನೀಯ. ಅಲ್ಲಿಯ ಶಾಂತ ವಾತಾವರಣದಲ್ಲಿ ಮೆಲು
ಧ್ವನಿಯಲ್ಲಿಯೇ ಮಾತು ಆರಂಭವಾಗುತ್ತವೆ. ಆದರೆ ಆ ವಾತಾವರಣ ಕೆಲ ಕ್ಷಣಗಳಲ್ಲಿಯೇ ಮನೆಯ ವಾತಾವರಣದಂತೆ ಎನಿಸತೊಡಗಿ, ನಗು, ಕೇಕೆ, ಮಾತು ಎಲ್ಲವೂ ಹರಡಲಾರಂಭಿಸುತ್ತವೆ.

ಮಾತುಗಳು ಒಂದು ಹಂತಕ್ಕೆ ಬಂದಿರುವಾಗಲೇ ಬಿಸಿಬಿಸಿಯಾದ ಕಬಾಬ್‌ಗಳು ಶೀಕಿನಿಂದ ಹೊಟ್ಟೆ ಸೀಳಿಸಿಕೊಂಡು, ನಮ್ಮ ಟೇಬಲ್‌ ನಡುವೆಯೇ ಬಂದು ಪವಡಿಸುತ್ತವೆ. ಬಿಸಿಬಿಸಿಯಾಗಿ ತಿನ್ನುವ ಅಭ್ಯಾಸವಿದ್ದವರಿಗೆ ಈ ಹೊಗೆಯಾಡುವ ಕಬಾಬ್‌ಗಳು ಖಂಡಿತವಾಗಿಯೂ ಉತ್ತಮ ಆರಂಭವನ್ನೇ ನೀಡುತ್ತವೆ. ಹಿತೋಷ್ಣವೆನಿಸುವಂತೆ ಬೇಕಿದ್ದಲ್ಲಿ ಜೊತೆಗಿರುವ ಚಟ್ನಿಗಳೊಡನೆ ನಂಜಿಕೊಂಡರೆ ಸಾಕು. ಅತ್ಯದ್ಭುತ ರುಚಿಯೊಂದು ರುಚಿಮೊಗ್ಗುಗಳನ್ನರಳಿಸುತ್ತ, ಮಾತನ್ನೇ ಮರೆಯುವಂತೆ ಮಾಡುತ್ತವೆ.

 ಇವೆಲ್ಲ ಮುಗಿಸಿ, ಒಂದಷ್ಟು ಹರಟುವಾಗಲೇ ಮೇನ್‌ಕೋರ್ಸ್‌ನ ಸಂಭ್ರಮ ಆರಂಭವಾಗುತ್ತದೆ. ರೊಟ್ಟಿ, ಕುಲ್ಛಾ, ಫುಲ್ಕಾ, ಸ್ಟಫ್ಡ್‌ ಪರಾಠಾ ಹೀಗೆ ರೋಟಿಯ ಬಗೆಗಳು. ಜೊತೆಗೆ ಒಂದಷ್ಟು ಗ್ರೇವಿ, ಕರಿ ಹಾಗೂ ಪಲ್ಯಗಳು. ಬಿರಿಯಾನಿ, ಅನ್ನ ರಸಂ ಜೊತೆಗೂಡುತ್ತದೆ. ಡೆಸರ್ಟ್‌ಗೆ ಎರಡು ಬಗೆಯ ಸಿಹಿಗಳು. ಹೊಟ್ಟೆ ಭಾರವೆನಿಸದಂಥ ಊಟ. ಎಣ್ಣೆ, ಮಸಾಲೆ ಎಲ್ಲವೂ ಹಿತವಾಗಿ, ಮಿತವಾಗಿರುವುದರಿಂದ ಎಲ್ಲವನ್ನೂ ಸವಿಯುವ ಅವಕಾಶ ಸಿಕ್ಕೇ ಸಿಗುತ್ತದೆ.

ಅಬ್ಬಾ... ಇನ್ನೇನು ಹೊಟ್ಟೆ ಬಿರಿಯುತ್ತದೆ ಎನ್ನುವಾಗಲೇ ಸವಿಯಾದ ಕೋಲ್ಟ್‌ಸ್ಟೋನ್ ಐಸ್‌ಕ್ರೀಮ್‌, ರೋಲ್‌ ಹೆಂಚಿನ ಮೇಲೆ ಹದವಾಗಿ ನಾದಿಸಿಕೊಂಡು, ಬಡಿಸಿಕೊಂಡು, ಚಚ್ಚಿಸಿಕೊಂಡು ನಿಮ್ಮೆದುರಿಗೆ ಬರುತ್ತದೆ. ಅದನ್ನು ನಿರಾಕರಿಸಲಾರಿರಿ. ನಾಲಗೆಗೆ ಇಟ್ಟೊಡನೆ ಕರಗುವ ಈ ಸಿಹಿ, ಈ ಕ್ಷಣಗಳೂ ದಾಟಿ ಹೋದವಲ್ಲ ಎಂದೆನಿಸದೇ ಇರದು.

ಸದ್ಯಕ್ಕೆ ಸಾಕಷ್ಟು ಕುಟುಂಬಗಳು, ಕಾರ್ಪೊರೇಟ್‌ ಕಂಪನಿಗಳು ಈ ಹೋಟೆಲ್‌ನ ಶಾಶ್ವತ ಗ್ರಾಹಕರಾಗಿದ್ದಾರೆ. ಜೊಮ್ಯಾಟೊದೊಂದಿಗೆ ಸಹ ಕೈ ಜೋಡಿದ್ದಾರೆ. ಸಸ್ಯಾಹಾರಿಗಳಿಗೆ ವಾರದ ದಿನಗಳಲ್ಲಿ ₹799, ವಾರಂತ್ಯಕ್ಕೆ ₹849 ನಿಗದಿ ಪಡಿಸಿದ್ದಾರೆ. ಮಾಂಸಾಹಾರಿ ಬಫೆಗೆ ವಾರದ ದಿನಗಳಲ್ಲಿ ₹899, ವಾರಾಂತ್ಯದಲ್ಲಿ ₹949 ನಿಗದಿ ಪಡಿಸಿದ್ದಾರೆ. 12 ವರ್ಷದವರೆಗಿನ ಮಕ್ಕಳಿಗೆ ₹425 ನಿಗದಿ ಪಡಿಸಿದ್ದಾರೆ. ಪಾರ್ಕಿಂಗ್‌ ಸೌಲಭ್ಯವಿದೆ. ಎಲ್ಲ ಕಾರ್ಡುಗಳನ್ನೂ ಸ್ವೀಕರಿಸುತ್ತಾರೆ. ಮುಂಗಡ ಬುಕ್ಕಿಂಗ್‌ ಮಾಡಿದರೆ ಒಳಿತು. ಮಧ್ಯಾಹ್ನ 12ರಿಂದ 4, ಸಂಜೆ 7ರಿಂದ 11ರವರೆಗೆ ಮಾಹಿತಿಗೆ: 080 4965 3050 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !