ಶನಿವಾರ, ನವೆಂಬರ್ 23, 2019
23 °C
ಹಿರಿಯ ಪತ್ರಕರ್ತ ಕೆ.ಎನ್‌. ಹರಿಕುಮಾರ್ ಅಭಿಮತ

‘ಇಂದಿರಾ ಗಾಂಧಿ ಆಕ್ರಮಣಕಾರಿ ಆಳ್ವಿಕೆಗೆ ಹೋಲಿಸಿದರೆ ಮೋದಿ ಧೋರಣೆ ಮೃದು’

Published:
Updated:
Prajavani

ಬೆಂಗಳೂರು: ‘ಇಂದಿರಾ ಗಾಂಧಿ ಅವರ ಆಕ್ರಮಣಕಾರಿ ಆಳ್ವಿಕೆಗೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿ ಮೃದು ಧೋರಣೆಯನ್ನು ಹೊಂದಿದ್ದಾರೆ. ಅದೇ ರೀತಿ, ಈವರೆಗೂ ಸಂವಿಧಾನದ ಅಡಿಯಲ್ಲಿಯೇ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸಿದೆ’ ಎಂದು ಹಿರಿಯ ಪತ್ರಕರ್ತ ಕೆ.ಎನ್‌. ಹರಿಕುಮಾರ್ ಅಭಿಪ್ರಾಯಪಟ್ಟರು.

‘ಬಯಲು ಬಳಗ’ ಹಾಗೂ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರವು ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಮಾಧ್ಯಮ ಹಾಗೂ ವರ್ತಮಾನದ ಸವಾಲುಗಳು’ ವಿಷಯ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

‘ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ), ಕಾಶ್ಮೀರದ ವಿಚಾರವಾಗಿ 370ನೇ ವಿಧಿ ರದ್ದತಿ ಸೇರಿದಂತೆ ವಿವಿಧ ವಿಷಯಗಳಲ್ಲಿ ಕೇಂದ್ರದಲ್ಲಿರುವ ಎನ್‌ಡಿಎ ಸರ್ಕಾರ ಸಂವಿಧಾನದ ಚೌಕಟ್ಟಿನಲ್ಲಿಯೇ ಕಾರ್ಯನಿರ್ವಹಿಸಿದೆ. ಎನ್‌ಡಿಎ ಸರ್ಕಾರ ಸುಪ್ರೀಂ ಕೋರ್ಟ್‌ ಹಾಗೂ ಮಾಧ್ಯಮಗಳನ್ನು ಪೂರ್ಣ ಪ್ರಮಾಣದಲ್ಲಿ ಹಿಡಿತಕ್ಕೆ ಪಡೆದುಕೊಂಡಿದೆ ಎನ್ನುವುದೂ ಸತ್ಯಕ್ಕೆ ದೂರವಾದುದು. ಆದರೆ, ಆಕ್ರಮಣಕಾರಿ ನೀತಿಯನ್ನು ಅನುಸರಿಸುತ್ತಿರುವುದು ನಿಜ’ ಎಂದು ಹೇಳಿದರು.

‘ಅಧಿಕಾರದಲ್ಲಿರುವ ಸರ್ಕಾರಗಳು ಮಾಧ್ಯಮಗಳನ್ನು ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ಹಿಂದಿನಿಂದಲೂ ನಡೆದು ಬಂದಿದೆ. ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಮಾಧ್ಯಮದ ಧ್ವನಿ ಅಡಗಿಸಿದ್ದರು. ಆದರೆ, ಸದ್ಯ ಆ ಸ್ಥಿತಿ ಇಲ್ಲ. ಸರ್ಕಾರದ ವಿರುದ್ಧ ಕೂಡಾ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ’ ಎಂದು ತಿಳಿಸಿದರು.

‘ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್‌) ಹಿಂದುತ್ವದ ಕಾರ್ಯಸೂಚಿಯನ್ನು ಹೊಂದಿದ್ದರೂ ಮೋದಿ ಸರ್ಕಾರ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಆಡಳಿತ ನಡೆಸುತ್ತಿದೆ. ಚುನಾವಣೆಗೆ ಮುನ್ನ ಇದ್ದ ಕಾರ್ಯಸೂಚಿ ಬಳಿಕ ಬದಲಾಗಿರುವುದು ಆಶಾದಾಯಕ. ಪೂರ್ಣ ಪ್ರಮಾಣದಲ್ಲಿ ಹಿಂದೂ ರಾಷ್ಟ್ರ ನಿರ್ಮಾಣ ಅಸಾಧ್ಯ ಎನ್ನುವುದನ್ನು ಮನಗಂಡು ಹಂತ ಹಂತವಾಗಿ ತನ್ನ ಅಜೆಂಡಾವನ್ನು ಜಾರಿ ಮಾಡಲು ಮುಂದಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ’ ಎಂದರು.

‘ಮೋದಿ ಅವರು ‘ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್’ ಎಂಬ ಧ್ಯೇಯ ಇಟ್ಟುಕೊಂಡು ಆಡಳಿತ ನೀಡುತ್ತಿದ್ದಾರೆ. ಇದೇ ಧ್ಯೇಯವನ್ನು ಯುಪಿಎ ಸರ್ಕಾರವೂ ಹೊಂದಿತ್ತು. ಬಿಜೆಪಿಯಲ್ಲಿ ಮೃದು ಹಾಗೂ ಆಕ್ರಮಣಕಾರಿ ನಾಯಕತ್ವದ ಸಂಯೋಜನೆ ಕಾಣಬಹುದು. ಹಿಂದೆ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ವಾಜಪೇಯಿ ಮೃದು ಧೋರಣೆ ಹೊಂದಿದ್ದರೆ, ಅಡ್ವಾಣಿ ಆಕ್ರಮಣಕಾರಿ ಸ್ವಭಾವ ಹೊಂದಿದ್ದರು. ಮೋದಿ ಮತ್ತು ಅಮಿತ್‌ ಶಾ ಜೋಡಿಯಲ್ಲಿಯೂ ಅದನ್ನೇ ಕಾಣಬಹುದು’ ಎಂದು ತಿಳಿಸಿದರು.

ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ‘ಗುಜರಾತ್ ಅನ್ನು ಭಾರತವಾಗಿಸುವ ಪ್ರಯತ್ನಗಳು ಕಾಣಿಸುತ್ತಿಲ್ಲ. ಈ ರೀತಿ ಆರೋಪ ಇಂದಿರಾ ಗಾಂಧಿ ಅವರ ಮೇಲೂ ಇತ್ತು’ ಎಂದರು.

ಪ್ರತಿಕ್ರಿಯಿಸಿ (+)