ಪ್ರತಿ 5 ಲಕ್ಷ ಜನರಿಗೆ ನಗರ ಕೌನ್ಸಿಲ್‌ ಬೇಕು: ವಿ.ಬಾಲಸುಬ್ರಹ್ಮಣಿಯನ್‌

ಬುಧವಾರ, ಜೂನ್ 26, 2019
22 °C
ಬೆಂಗಳೂರು ಮಹಾನಗರ ಆಡಳಿತದ ಸಂವಾದ

ಪ್ರತಿ 5 ಲಕ್ಷ ಜನರಿಗೆ ನಗರ ಕೌನ್ಸಿಲ್‌ ಬೇಕು: ವಿ.ಬಾಲಸುಬ್ರಹ್ಮಣಿಯನ್‌

Published:
Updated:

ಬೆಂಗಳೂರು: ‘ಬೆಂಗಳೂರಿನಲ್ಲಿ 5 ಲಕ್ಷ ಜನರಿಗೆ ಒಂದು ನಗರ ಕೌನ್ಸಿಲ್‌ ರಚಿಸಬೇಕು. ಆಗ ಬಿಬಿಎಂಪಿಯ ಆಡಳಿತ ಸುಗಮವಾಗುತ್ತದೆ’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ವಿ.ಬಾಲಸುಬ್ರಹ್ಮಣಿಯನ್‌ ಹೇಳಿದರು.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪಬ್ಲಿಕ್‌ ಅಡ್ಮಿನಿಸ್ಟ್ರೆಷನ್‌ನ ಕರ್ನಾಟಕ ಘಟಕವು ಶನಿವಾರ ಆಯೋಜಿಸಿದ್ದ ‘ಬೆಂಗಳೂರು ಮಹಾನಗರ ಆಡಳಿತ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

‘ಪ್ರತಿ ಕೌನ್ಸಿಲ್‌ನಲ್ಲಿ ತಲಾ 10 ವಾರ್ಡ್‌ಗಳು ಇರಬೇಕು. ಕೌನ್ಸಿಲ್‌ನ ಅಧ್ಯಕ್ಷರನ್ನು ಆ ವಾರ್ಡ್‌ಗಳ ಸದಸ್ಯರು ಆಯ್ಕೆ ಮಾಡಬೇಕು. ಕೌನ್ಸಿಲ್‌ಗಳ ವ್ಯಾಪ್ತಿಯ ಅಭಿವೃದ್ಧಿ ಚಟುವಟಿಕೆಗಳ ಮೇಲ್ವಿಚಾರಣೆಯನ್ನು ಮುಖ್ಯಮಂತ್ರಿಯು ಸೇರಿದಂತೆ ಐವರು ಸಂಪುಟ ದರ್ಜೆಯ ಸಚಿವರು ಮಾಡಬೇಕು’ ಎಂದು ಅವರು ಹೇಳಿದರು.

‘ಇಂದು ಬಹುತೇಕ ಕಾರ್ಪೊರೇಟರ್‌ಗಳು ವಾರ್ಡ್‌ನಲ್ಲಿನ ಶೇ 20ರಷ್ಟು ಮತಗಳಿಂದ ಆಯ್ಕೆಯಾಗುತ್ತಿದ್ದಾರೆ. 5 ಸಾವಿರ ಮತಗಳಿಂದ ಪಾಲಿಕೆ ಸದಸ್ಯರಾದ ಉದಾಹರಣೆಗಳು ನಮ್ಮ ಮುಂದಿವೆ. ಅವರು ವಾರ್ಡ್‌ನಲ್ಲಿನ ಎಲ್ಲರ ಹಿತ ಕಾಯುತ್ತಾರೆ ಎಂದು ನಾವು ನಿರೀಕ್ಷಿಸಲು ಆಗದು’ ಎಂದು ಹೇಳಿದರು.

‘ಕಾಮಗಾರಿಗಳಿಗಾಗಿ ಜಮೀನು ಸ್ವಾಧೀನಪಡಿಸಿಕೊಂಡಾಗ ಅಭಿವೃದ್ಧಿ ಹಕ್ಕು ವರ್ಗಾವಣೆ(ಟಿಡಿಆರ್) ಮಾಡುವುದು ಉತ್ತಮ ಕ್ರಮ. ಆದರೆ, ಇಂದು ಅದರಲ್ಲಿಯೂ ಭ್ರಷ್ಟಾಚಾರ ಹೆಚ್ಚುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ‘ವಿದೇಶಗಳಲ್ಲಿ ನೆಲೆಸಿ ಬೆಂಗಳೂರಿಗೆ ಬರುವ ಜನರು ಅಲ್ಲಿರುವಂತಹ ಗುಣಮಟ್ಟದ ಸೌಲಭ್ಯಗಳು ಈ ನಗರದಲ್ಲಿಯೂ ಸಿಗಬೇಕು ಎಂದು ಬಯಸುತ್ತಾರೆ. ಅವರ ನಿರೀಕ್ಷೆಯನ್ನು ತಲುಪಲು ನಾವು ಪ್ರಯತ್ನಿಸುತ್ತಿದ್ದೇವೆ. ನಗರದ ಅಭಿವೃದ್ಧಿಯ ಕುರಿತು ನ್ಯಾಯಾಲಯ ಸಹ ನಿರ್ದೇಶನಗಳನ್ನು ನೀಡುತ್ತಿದೆ. ಅವುಗಳನ್ನು ಪಾಲಿಸುತ್ತಿದ್ದೇವೆ’ ಎಂದರು.

‘ಸುಗಮ ಆಡಳಿತಕ್ಕಾಗಿ ಬಿಬಿಎಂಪಿಯನ್ನು ವಿಭಜನೆ ಮಾಡಬೇಕು ಎಂದು ಬಿ.ಎಸ್‌.ಪಾಟೀಲ ಸಮಿತಿ ಶಿಫಾರಸು ಮಾಡಿದೆ. ಎಷ್ಟು ಭಾಗ ಮಾಡಬೇಕು, ಹೇಗೆ ಮಾಡಬೇಕು ಎಂದು ಚರ್ಚಿಸಿ, ನಿರ್ಧಾರ ತಳೆಯಬೇಕಿದೆ’ ಎಂದು ಹೇಳಿದರು.

*

‘ಶಾಸಕರಿಗೆ ವಾರ್ಡ್‌ ಸಮಿತಿ ಬೇಕಿಲ್ಲ’

‘ಶಾಸಕರಿಗೆ ಆಡಳಿತದ ವಿಕೇಂದ್ರಿಕರಣ ಬೇಕಾಗಿಲ್ಲ. ವಾರ್ಡ್‌ ಮತ್ತು ವಾರ್ಡ್‌ ಸಮಿತಿಗಳ ರಚನೆಯಲ್ಲಿ ಅವರಿಗೆ ಆಸಕ್ತಿಯಿಲ್ಲ’ ಎಂದು ನಗರ ಯೋಜನೆ ತಜ್ಞ ವಿ.ರವಿಚಂದರ್‌ ಹೇಳಿದರು.

‘ಲಂಡನ್‌ನಲ್ಲಿ 80 ಲಕ್ಷ ಜನರಿಗೆ 36 ಪಾಲಿಕೆಗಳಿವೆ. ಆದರೆ, ನಮ್ಮಲ್ಲಿ ಒಂದು ಕೋಟಿ ಜನಸಂಖ್ಯೆಗೆ ಒಂದು ಪಾಲಿಕೆ ಇದೆ. ಪಾಲಿಕೆಯ ಕೇಂದ್ರ ಕಚೇರಿಯಿಂದ ದೂರವಿರುವ ಮಹದೇವಪುರ, ವೈಟ್‌ಫೀಲ್ಡ್‌ನ ವಾರ್ಡ್‌ ಸದಸ್ಯರು ಹಡ್ಸನ್‌ ವೃತ್ತದ ಕಚೇರಿಗೆ ಬಂದು ಹೋಗುವುದರಲ್ಲೇ ಸಮಯ ವ್ಯಯವಾಗುತ್ತದೆ. ನಗರ ಬೆಳೆದಿದೆ. ಹಾಗಾಗಿ ಪಾಲಿಕೆಯ ವಿಭಜನೆಯಾದರೆ ಸ್ಥಳೀಯ ಜನಪ್ರತಿನಿಧಿಗಳು ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲ ಆಗಲಿದೆ’ ಎಂದರು.

*

ಜಲಮಂಡಳಿ, ಬಿಡಿಎ, ಬಿಎಂಆರ್‌ಡಿಎ, ಬಿಎಂಟಿಸಿಯಂತಹ ನಗರಾಡಳಿತ ಸಂಸ್ಥೆಗಳಲ್ಲಿ ಪಾರದರ್ಶಕ ವ್ಯವಸ್ಥೆ ಬಾರದಿದ್ದರೆ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಲಿದೆ.
– ಸುಧೀರ್‌ ಕೃಷ್ಣಸ್ವಾಮಿ, ಪ್ರಾಧ್ಯಾಪಕ, ಅಜೀಮ್‌ ಪ್ರೇಮ್‌ಜಿ ವಿಶ್ವವಿದ್ಯಾಲಯ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !