ಚಿಣ್ಣರ ಚಿತ್ತಾರ

ಶುಕ್ರವಾರ, ಮಾರ್ಚ್ 22, 2019
26 °C

ಚಿಣ್ಣರ ಚಿತ್ತಾರ

Published:
Updated:
Prajavani

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಗುಂಡೇರಿ ಗ್ರಾಮದ ಸರ್ಕಾರಿ ಶಾಲೆಯ ಗೋಡೆಗಳು ಚಿತ್ತಾರಗಳಿಂದ ಕಳೆಗಟ್ಟಿವೆ. ಕಂಬದ ಮೇಲೆ ನೀಲಿ ಬಣ್ಣದಲ್ಲಿ ಬಿಡಿಸಿರುವ ಚಿತ್ರಗಳು ಕಟ್ಟಡದ ಸೌಂದರ್ಯ ಹೆಚ್ಚಿಸಿವೆ. ಕಾಂಪೌಂಡ್‌ಗೆ ಮೆರೂನ್‌ ಬಣ್ಣ ಬಳಿದು, ಅದರ ಮೇಲೆ ಕ್ರೀಮ್‌ ಕಲರ್‌ನಲ್ಲಿ ಅಂಬಾರಿ ಹೊತ್ತ ಆನೆ, ಗ್ರಾಮೀಣ ಮಹಿಳೆಯರು ನರ್ತಿಸುವ ಕಡ್ಡಿ ಚಿತ್ರಗಳನ್ನು ಬರೆಯಲಾಗಿದೆ. ಕಾಂಪೌಂಡ್‌ನ ಬಾರ್ಡರ್ ಪಟ್ಟಿಯ ಮೇಲೆ ದೇಸಿ ಕಲೆಗಳೇ ತೋರಣಗಳಾಗಿವೆ. 

ಶಾಲೆ ಹೊಕ್ಕಾಗ, ‘ಸರ್ಕಾರಿ ಶಾಲೆಯನ್ನು ಇಷ್ಟು ಅಂದವಾಗಿ ಇಡಲು ಸಾಧ್ಯವೇ? ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ‘ಇಷ್ಟೆಲ್ಲ ಅಲಂಕಾರ ಮಾಡಿಸಲು ಸಾಕಷ್ಟು ಹಣವೂ ಖರ್ಚಾಗಿರಬೇಕು. ಯಾರೋ ತಜ್ಞ ಕಲಾವಿದರ ತಂಡವೇ, ಇಲ್ಲಿಗೆ ಬಂದು ಚಿತ್ರ ಬಿಡಿಸಿರಬೇಕು’ ಎಂದು ಮನಸ್ಸು ಊಹೆ ಮಾಡಲಾರಂಭಿಸುತ್ತದೆ, ಅಲ್ವಾ?

ಹೀಗೆಲ್ಲ ಊಹೆ ಮಾಡಿಕೊಳ್ಳಲೇಬೇಡಿ. ಏಕೆಂದರೆ, ಇಲ್ಲಿ ಬಿಡಿಸಿರುವ ಎಲ್ಲ ಚಿತ್ತಾರಗಳು ಅದೇ ಶಾಲೆಯ ವಿದ್ಯಾರ್ಥಿಗಳ ಕಲಾ ಕೌಶಲದಿಂದ ಅರಳಿರುವುದು. ಹಾಗೆ ಚಿತ್ರ ಬರೆಯಲು ಮಕ್ಕಳಿಗೆ ತರಬೇತಿ ನೀಡಿದವರು, ಅದೇ ಶಾಲೆಯ ಚಿತ್ರಕಲಾ ಶಿಕ್ಷಕ ಸೋಮಶೇಖರ್. ಇಷ್ಟು ದಿನ ಪುಸ್ತಕದ ಮೇಲೆ ಚಿತ್ರ ಬರೆಯುತ್ತಿದ್ದ ಮಕ್ಕಳು ಈಗ ಶಾಲೆಯ ಗೋಡೆಗಳನ್ನೇ ಕ್ಯಾನ್ವಾಸ್ ಮಾಡಿಕೊಂಡಿದ್ದಾರೆ. ಶಿಕ್ಷಕರ ಮಾರ್ಗದರ್ಶನದಲ್ಲಿ ಕಲಾವಿದರೇ ಮೆಚ್ಚುವಂತೆ ಚಿತ್ರ ಬಿಡಿಸಿದ್ದಾರೆ.

ಹೇಗೆ ಬಂತು ಈ ಐಡಿಯಾ?
ಕಲಾಶಿಕ್ಷಕ ಸೋಮಶೇಖರ್ ಶಾಲಾ ಮಕ್ಕಳೊಂದಿಗೆ ಹೊನ್ನಾವರ, ಗೋಕರ್ಣ, ಶಿರಸಿ ಕಡೆಗೆ ಪ್ರವಾಸ ಹೋಗಿ ದ್ದರು. ಆ ಪ್ರವಾಸದಲ್ಲಿ ಅಲ್ಲಿನ ದೇವಾಲಯಗಳ ಗೋಡೆ ಮೇಲೆ ಬಿಡಿಸಿದ್ದ ಚಿತ್ತಾರಗಳನ್ನು ನೋಡಿ, ‘ನಾವು ಕೂಡ ಶಾಲಾ ಗೋಡೆಗಳ ಮೇಲೇಕೆ ಚಿತ್ರಗಳನ್ನು ಬಿಡಿಸಬಾರದು’ ಎಂದು ಯೋಚಿಸಿದರು. ಈ ಕುರಿತು ಶಾಲಾ ಸಿಬ್ಬಂದಿ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ಸದಸ್ಯರೊಡನೆ ಸಮಾಲೋಚಿಸಿದರು. ಎಲ್ಲರನ್ನೂ ಒಪ್ಪಿಸಿ ಈ ಚಿತ್ರಕಲಾ ಕಾರ್ಯಕ್ಕಾಗಿ ಮಕ್ಕಳನ್ನು ಸಜ್ಜುಗೊಳಿಸಲು ಆರಂಭಿಸಿದರು.

ಮಕ್ಕಳಿಂದಲೇ ಚಿತ್ರ ಬರೆಸಬೇಕೆಂದಾಗ, ‘ನಮ್ಮಿಂದ ಈ ಕೆಲಸ ಆಗಲ್ಲ’ ಎಂದು ಮಕ್ಕಳು ಹಿಂಜರಿದರು. ಆದರೆ, ಸೋಮಶೇಖರ್ ಮಕ್ಕಳಲ್ಲಿ ‘ನೀವು ಚಿತ್ರ ಬರದೇ ಬರೆಯುತ್ತೀರಿ’ ಎಂಬ ಆತ್ಮವಿಶ್ವಾಸ ತುಂಬಿದರು. ಆರಂಭದಲ್ಲಿ ತರಗತಿಯಲ್ಲಿ ಕಪ್ಪುಹಲಗೆಯ ಮೇಲೆ ಸ್ಕೆಚ್ ಮಾಡಿದರು. ಚಿತ್ರಗಳು ಹೇಗೆ ಮೂಡಬಹುದು ಎಂಬ ಆಕಾರವನ್ನು ಮಕ್ಕಳ ಮನದಲ್ಲಿ ಮೂಡಿಸಿದರು. ನಂತರ ಸ್ಕೆಚ್‌ ಮಾಡಿದ ಪ್ರತಿ ಚಿತ್ರಕ್ಕೆ ಬಣ್ಣ ತುಂಬುವಂತೆ ಮಾರ್ಗದರ್ಶನ ಮಾಡಿದರು. ಒಂದೆರಡು ವಾರ ಸ್ಲೇಟು, ಪುಸ್ತಕದ ಮೇಲೆ ಚಿತ್ರ ಬರೆಯುವ ಅಭ್ಯಾಸ ಮುಂದುವರಿಯಿತು. ಕೊನೆ ಹಂತಕ್ಕೆ ಶಾಲೆ ಗೋಡೆಗಳ ಮೇಲೆ ಸ್ಕೆಚ್ ಹಾಕಿದರು. ವೃತ್ತ, ಚೌಕ, ಕೋನಗಳ ಆಧಾರದಲ್ಲಿ, ರಂಗೋಲಿ ರೀತಿಯಲ್ಲಿ ಚಿತ್ರ ಬರೆದರು. ‘ಚಿತ್ರ ಬರೆಯುವ ಕಾರ್ಯದಲ್ಲಿ 9 ಮತ್ತು 10 ನೇ ತರಗತಿಯ 41 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ 23 ವಿದ್ಯಾರ್ಥಿ ನಿಯರು,18 ವಿದ್ಯಾರ್ಥಿಗಳು’ ಎಂದು ಸೋಮಶೇಖರ್ ಮಾಹಿತಿ ನೀಡಿದರು.

ಚಿತ್ರಕಲಾ ಪ್ರಕಾರಗಳು
ಶಾಲೆಯ ಕಟ್ಟಡಗಳ ಬೇರೆ ಬೇರೆ ಭಾಗದಲ್ಲಿ ಬೇರೆ ಬೇರೆ ಪ್ರಕಾರಗಳ ಚಿತ್ರ ಬಿಡಿಸಲಾಗಿದೆ. ಒಂದು ಬದಿ ಮಲೆನಾಡಿನ ಹಳ್ಳಿ ಮನೆಗಳ ಗೋಡೆಗಳ ಮೇಲೆ ಬಿಡಿಸಿರುವ ಹಸೆ ಚಿತ್ತಾರ, ಮಹಾರಾಷ್ಟ್ರದ ವರ್ಲಿ ಕಲೆ, ಮಂದಾಲ, ರಂಗೋಲಿ, ಅಲಂಕಾರಿಕ ನಕ್ಷೆಯ ಜತೆಗೆ ಅಮೂರ್ತ ಚಿತ್ರಗಳನ್ನೂ ಬಿಡಿಸಲಾಗಿದೆ.  ‘ಎಲ್ಲವೂ ಜನಪದ ಶೈಲಿಯ ಚಿತ್ರಗಳು. ಇವೆಲ್ಲ ಒಂದೇ ಬಾರಿಗೆ ಕಲಿತು ರಚಿಸಿದಂತವಲ್ಲ. ಇದಕ್ಕೆ ಸಾಕಷ್ಟು ಅಭ್ಯಾಸ ಮಾಡಿದ್ದಾರೆ ಮಕ್ಕಳು. ಅವರೊಂದಿಗೆ ನಾನೂ ಕೈ ಜೋಡಿಸಿದ್ದರಿಂದ, ಒಂದಷ್ಟು ಕೆಲಸ ವೇಗವಾಯಿತು’ ಎನ್ನುತ್ತಾರೆ ಸೋಮಶೇಖರ್. ನಮ್ಮ ನೆಲ ಮೂಲ ಸಂಸ್ಕೃತಿ ಅಳಿಯುತ್ತಿರುವ ಈ ಹೊತ್ತಿನಲ್ಲಿ, ಆ ಸಂಸ್ಕೃತಿಯನ್ನು ಇಂಥ ಕಲೆ ಮೂಲಕ ಕಟ್ಟಿಕೊಡಬೇಕು. ಅದಕ್ಕಾಗಿ ಶಾಲೆ ಮೇಲೆ ಚಿತ್ತಾರಗಳನ್ನು ಬಿಡಿಸುವ ಯೋಚನೆ ಬಂತು ಎಂಬುದು ಅವರ ಅಭಿಪ್ರಾಯ.

ಶಾಲೆಯತ್ತ ಜನರ ಚಿತ್ತ
ಗುಂಡೇರಿ ಗ್ರಾಮಕ್ಕೆ ಬರುವ ಅಕ್ಕಪಕ್ಕದ ಗ್ರಾಮಸ್ಥರು, ಈ ಶಾಲಾ ಕಟ್ಟಡದ ಮೇಲಿನ ಚಿತ್ತಾರಗಳನ್ನು ನೋಡಿ ಖುಷಿ ಪಟ್ಟಿದ್ದಾರೆ. ಕೆಲವರು ಇದರ ಮುಂದೆ ನಿಂತು ಸೆಲ್ಫಿ ತೆಗೆಸಿಕೊಳ್ಳುತ್ತಿದ್ದಾರೆ. ‘ಹೇಗೆ ಚಿತ್ರ ಬಿಡಿಸಿದಿರಿ, ಯಾರು ಹೇಳಿಕೊಟ್ಟಿದ್ದು’ ಎಂದೆಲ್ಲ ಮಕ್ಕಳನ್ನು ವಿಚಾರಿಸುತ್ತಾರೆ. ಬೇರೆ ಊರಿನ ಶಿಕ್ಷಕರು, ಅಧಿಕಾರಿಗಳು ಶಾಲೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಚಿತ್ರಗಳನ್ನು ಶಾಲಾ ಕೋಣೆಯ ಒಳಗೂ ಮಾಡುವ ಯೋಚನೆಯಿದೆ.

‘ನಾವು ಬರೆದ ಚಿತ್ರವನ್ನು ಬೇರೆಯವರು ನಿಂತು ನೋಡುತ್ತಿದ್ದಾಗ ತುಂಬಾ ಹೆಮ್ಮೆಯೆನಿಸುತ್ತದೆ. ಚಿತ್ರದ ಕೊನೆಯಲ್ಲಿರುವ ನಮ್ಮ ಹೆಸರು ತೋರಿಸಿ ಇದನ್ನು ನಾವೇ ಬರೆದಿದ್ದು ಹೇಳಿದಾಗ, ಎಷ್ಟು ಚೆನ್ನಾಗಿ ಚಿತ್ರ ಬರೆದ್ದೀಯ ಎಂದು ಅವರು ಪ್ರತಿಕ್ರಿಯಿಸುವಾಗ ತುಂಬಾ ಖುಷಿಯಾಗುತ್ತದೆ’ ಎನ್ನುತ್ತಾರೆ ವಿದ್ಯಾರ್ಥಿಗಳಾದ ಸಾಕಮ್ಮ, ಲಾವಣ್ಯ, ಮಂಜುನಾಥ್.

ಈ ಶಾಲೆಯ ಮಕ್ಕಳು ತಮ್ಮ ಮನೆಗೆ ಬಂದ ನೆಂಟರಿಷ್ಟರು, ಆಪ್ತೇಷ್ಟರನ್ನು ಶಾಲೆಯ ಬಳಿ ಕರೆತಂದು ಚಿತ್ತಾರಗಳನ್ನು ತೋರಿಸುತ್ತಾರೆ. ‘ಚಿತ್ರ ಬರೆಸಲು ಕಾರಣರಾದ ಸೋಮಶೇಖರ್ ಅವರಿಗೆ ತುಂಬಾ ಧನ್ಯವಾದ ಅರ್ಪಿಸುತ್ತೇವೆ. ನಮ್ಮ ಜೀವನದಲ್ಲಿ ಒಂದು ಮರೆಯಲಾರದ ಘಟನೆ ಇದು‘ ಎನ್ನುತ್ತಾರೆ ವಿದ್ಯಾರ್ಥಿಗಳು.


*
ಗುಣಮಟ್ಟದ ಬಣ್ಣದಿಂದ ಚಿತ್ರ ಬರೆಸಲು ಹೆಚ್ಚು ಹಣ ಖರ್ಚು ಬರುತ್ತದೆ. ಹಾಗಾಗಿ ₹15 ಸಾವಿರ ಖರ್ಚಿನಲ್ಲಿ ಎಲ್ಲ ಕೆಲಸ ಮುಗಿಸಿದ್ದೇವೆ. ಈ ಚಿತ್ರಗಳೂ ಗರಿಷ್ಠ 5 ವರ್ಷ ಬಾಳಿಕೆ ಬರುತ್ತವೆ. ಗುಣಮಟ್ಟದ ಬಣ್ಣದ ಚಿತ್ರ ಬರೆಸಿದರೆ ಕನಿಷ್ಠ 10-15 ವರ್ಷ ಇರುತ್ತದೆ.
–ಸೋಮಶೇಖರ್, ಚಿತ್ರಕಲಾ ಶಿಕ್ಷಕ, ಗುಂಡೇರಿ

ಚಿತ್ರಕಲೆ ಕುರಿತ ಮಾಹಿತಿಗಾಗಿ ಶಿಕ್ಷಕ ಸೋಮಶೇಖರ್ ಮೊಬೈಲ್: 9900366567.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !