15 ಕ್ಷೇತ್ರ: 62 ಅಭ್ಯರ್ಥಿಗಳ ನಡುವೆ ಪೈಪೋಟಿ

ಭಾನುವಾರ, ಜೂನ್ 16, 2019
22 °C
13ರಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಚುನಾವಣೆ, ಗರಿಗೆದರಿದ ಚಟುವಟಿಕೆ, 33 ಮಂದಿ ಅವಿರೋಧ ಆಯ್ಕೆ

15 ಕ್ಷೇತ್ರ: 62 ಅಭ್ಯರ್ಥಿಗಳ ನಡುವೆ ಪೈಪೋಟಿ

Published:
Updated:

ಚಾಮರಾಜನಗರ: ವಾರದಿಂದೀಚೆಗೆ ಜಿಲ್ಲೆಯ ವಿವಿಧ ಇಲಾಖೆಗಳ ಸರ್ಕಾರಿ ನೌಕಕರು ಚುನಾವಣಾ ರಾಜಕೀಯದಲ್ಲಿ ನಿರತರಾಗಿದ್ದಾರೆ. 

2019ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಆಯ್ಕೆಗೆ ಇದೇ 13ರಂದು ಮತದಾನ ನಡೆಯಲಿದ್ದು, ಜಿಲ್ಲಾಡಳಿತ ಸಿದ್ಧತೆಯಲ್ಲಿ ತೊಡಗಿದೆ. 

ನಾಮಪತ್ರ ಸಲ್ಲಿಸುವ, ಪರಿಶೀಲನೆ, ವಾಪಸ್‌ ಪಡೆಯುವ ಪ್ರಕ್ರಿಯೆಗಳು ಈಗಾಗಲೇ ಎಲ್ಲ ಪೂರ್ಣಗೊಂಡಿವೆ. ನಗರದ ಸತ್ಯಮಂಗಲ ರಸ್ತೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಒ) ಕಚೇರಿಯ ಪಕ್ಕದಲ್ಲಿರುವ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಕಟ್ಟಡದಲ್ಲಿ ಮತದಾನ ನಡೆಯಲಿದೆ.   

ಜಿಲ್ಲಾ ಮಟ್ಟದಲ್ಲಿ 48 ಕ್ಷೇತ್ರಗಳಿದ್ದು (ಇಲಾಖೆಯನ್ನೇ ಕ್ಷೇತ್ರ ಎಂದು ಪರಿಗಣಿಸಲಾಗುತ್ತದೆ), 3,280 ಮಂದಿ ಮತದಾರರಿದ್ದಾರೆ. 33 ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 15 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಒಟ್ಟು 62 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 

ಕಂದಾಯ ಇಲಾಖೆ, ಲೋಕೋಪಯೋಗಿ ಮತ್ತು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ಇಲಾಖೆ, ಅಬಕಾರಿ, ಅರಣ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಕಾಲೇಜು, ತೋಟಗಾರಿಕಾ, ಪ್ರಾಥಮಿಕ ಶಿಕ್ಷಣ, ಪ್ರೌಢಶಾಲೆ, ತಾಂತ್ರಿಕ ಶಿಕ್ಷಣ, ಮಾರುಕಟ್ಟೆ ಮತ್ತು ಎಪಿಎಂಸಿ, ಎನ್‌ಸಿಸಿ ಕಾರಾಗೃಹ ಇಲಾಖೆ, ಮುದ್ರಾಂಕಗಳ ನೋಂದಣಿ ಮತ್ತು ಸಣ್ಣ ಉಳಿತಾಯ ಮತ್ತು ನ್ಯಾಯಾಂಗ ಇಲಾಖೆಗಳಿಗೆ ಚುನಾವಣೆ ನಡೆಯಲಿದೆ.  

ಪ್ರಾಥಮಿಕ ಶಿಕ್ಷಣದಲ್ಲಿ ಹೆಚ್ಚು: ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ ಅತ್ಯಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 12 ಮಂದಿ ನೌಕರರು ಸ್ಪರ್ಧಿಸಿದ್ದಾರೆ. ನಂತರದ ಸ್ಥಾನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇದೆ. ತಮ್ಮ ಇಲಾಖೆಯಲ್ಲಿರುವ ನೌಕರರ ಪ್ರತಿನಿಧಿಯಾಗಲು ಅಲ್ಲಿ ಎಂಟು ಮಂದಿ ಬಯಸಿದ್ದಾರೆ. ಕಂದಾಯ ಮತ್ತು ಪ್ರೌಢಶಾಲಾ ಇಲಾಖೆಗಳಲ್ಲಿ ತಲಾ ಆರು ಮಂದಿ ಸ್ಪರ್ಧಿಸಿದ್ದಾರೆ.

ಲೋಕೋಪಯೋಗಿ ಮತ್ತು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ಇಲಾಖೆಯಿಂದ ಐವರು, ವೈದ್ಯಕೀಯ ಶಿಕ್ಷಣ ಮತ್ತು ನ್ಯಾಯಾಂಗ ಇಲಾಖೆಗಳಲ್ಲಿ ತಲಾ ನಾಲ್ಕು ಮಂದಿ ಕಣದಲ್ಲಿದ್ದಾರೆ. ಉಳಿದ ಇಲಾಖೆಗಳಲ್ಲಿ ತಲಾ ಇಬ್ಬರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತಮ್ಮ ಇಲಾಖಾ ವ್ಯಾಪ್ತಿಯ ಮತದಾರರನ್ನು ಓಲೈಸಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. 

ತಾಲ್ಲೂಕು ಮಟ್ಟದಲ್ಲೂ ಚುನಾವಣೆ: ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆಗಳಿಗೂ 13ರಂದೇ ಚುನಾವಣೆ ನಡೆಯಲಿದೆ. ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ಮತ್ತು ಹನೂರು ತಾಲ್ಲೂಕುಗಳ ಶಾಖೆಗಳಿಗೆ ಮತದಾನ ನಡೆಯಲಿದೆ. 

ನೌಕರರಿಗೆ ಒಒಡಿ: 13ರಂದು ನಡೆಯಲಿರುವ ಮತದಾನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಒಒಡಿ ಸೌಲಭ್ಯ ನೀಡಲಾಗುವುದು ಎಂದು ಚುನಾವಣಾಧಿಕಾರಿಯಾಗಿರುವ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಎಲ್‌. ಶಿವಪ್ರಸಾದ್‌ ಅವರು ಈಗಾಗಲೇ ಹೇಳಿದ್ದಾರೆ.

ಜುಲೈ 1ರಂದು ನೂತನ ಸಂಘ ಅಸ್ತಿತ್ವಕ್ಕೆ

13ರಂದು ನಡೆಯಲಿರುವ ಚುನಾವಣೆಯಲ್ಲಿ ಸರ್ಕಾರಿ ನೌಕರ ಮತದಾರರು ಸಂಘದ ಕಾರ್ಯಕಾರಿ ಸಮಿತಿಗೆ ವಿವಿಧ ಕ್ಷೇತ್ರಗಳಿಂದ  ನಿರ್ದೇಶಕರನ್ನು ಆಯ್ಕೆ ಮಾಡಲಿದ್ದಾರೆ. ಈ ನಿರ್ದೇಶಕರು ಅಂತಿಮವಾಗಿ ಸಂಘದ ಅಧ್ಯಕ್ಷರು, ಖಜಾಂಚಿ ಮತ್ತು ರಾಜ್ಯ ಪರಿಷತ್‌ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ. ಮೂರು ಹುದ್ದೆಗಳಿಗೂ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದರೆ ಚುನಾವಣೆ ನಡೆಯಲಿದೆ. 

‘ಜುಲೈ 1ರ ನಂತರ ಐದು ವರ್ಷಗಳ ಅವಧಿಗೆ ಹೊಸ ಸಂಘ ಅಸ್ತಿತ್ವಕ್ಕೆ ಬರಲಿದೆ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಹಾಲಿ ಅಧ್ಯಕ್ಷ ಆರ್.ರಾಚಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಲ್ಲೂಕು ಸಂಘವೂ ಭಾಗಿ: ‘ಜಿಲ್ಲಾ ಅಧ್ಯಕ್ಷ ಹಾಗೂ ಇತರ ಪದಾಧಿಕಾರಿಗಳ ಆಯ್ಕೆಯಲ್ಲಿ ತಾಲ್ಲೂಕು ಸಂಘದ ಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್‌ ಸದಸ್ಯರೂ ಭಾಗವಹಿಸುತ್ತಾರೆ. ಅವರಿಗೆ ಮತದಾನದ ಹಕ್ಕಿದೆ’ ಎಂದು ರಾಚಪ್ಪ ಅವರು ಮಾಹಿತಿ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !