ಪ್ರತ್ಯೇಕ ತಾಲ್ಲೂಕು ಈಗ ಅಧಿಕೃತ

7
ಹನೂರಿಗೆ ಕಾಯಂ ತಹಶೀಲ್ದಾರ್‌ ನಿಯೋಜನೆ, ಜನರಿಗೆ ಅನುಕೂಲ, ಇನ್ನು ಕೊಳ್ಳೇಗಾಲಕ್ಕೆ ಓಡಾಡಬೇಕಿಲ್ಲ

ಪ್ರತ್ಯೇಕ ತಾಲ್ಲೂಕು ಈಗ ಅಧಿಕೃತ

Published:
Updated:
Prajavani

ಚಾಮರಾಜನಗರ: ಹನೂರು ಭಾಗದ ಜನರ ನಿರೀಕ್ಷೆ ಕೊನೆಗೂ ಈಡೇರುತ್ತಿದೆ. ಪ್ರತ್ಯೇಕ ತಾಲ್ಲೂಕು ಕೇಂದ್ರ ಎಂದು ಘೋಷಿಸಿದ್ದರೂ, ಕಾಯಂ ತಹಶೀಲ್ದಾರ್‌ ಇಲ್ಲದೆ ತೊಂದರೆ ಅನುಭವಿಸುತ್ತಿದ್ದ ಜನರು ಇನ್ನು ನಿಟ್ಟುಸಿರುಬಿಡಬಹುದು. ತಾಲ್ಲೂಕಿಗೆ ಕಾಯಂ ತಹಶೀಲ್ದಾರ್‌ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.

2018ರ ಜನವರಿ 1ರಂದು ರಾಜ್ಯ ಸರ್ಕಾರ ಹನೂರು ಅನ್ನು ಪ್ರತ್ಯೇಕ ತಾಲ್ಲೂಕು ಎಂದು ಘೋಷಿಸಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 9ರಂದು ಅಧಿಕೃತವಾಗಿ ಹನೂರು ಅನ್ನು ತಾಲ್ಲೂಕು ಕೇಂದ್ರವನ್ನಾಗಿ ಉದ್ಘಾಟಿಸಿದ್ದರು. ಅದಾಗಿ ಒಂದು ವರ್ಷ ಒಂದು ತಿಂಗಳ ಬಳಿಕ ಸರ್ಕಾರ ಕಾಯಂ ತಹಶೀಲ್ದಾರ್‌ ಒಬ್ಬರನ್ನು ನಿಯೋಜಿಸಿದೆ. 

ಇದುವರೆಗೂ ತಾಲ್ಲೂಕಿನಲ್ಲಿ ವಿಶೇಷ ತಹಶೀಲ್ದಾರ್‌ ಕಚೇರಿ ಇತ್ತು. ತಹಶೀಲ್ದಾರ್‌– ಗ್ರೇಡ್‌ 2 ಅಧಿಕಾರಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಕೆಲವೇ ಕೆಲವು ಕೆಲಸಗಳನ್ನು ಮಾತ್ರ ಅವರು ಮಾಡಬಹುದಿತ್ತು. ಪಹಣಿ ತಿದ್ದುಪಡಿ ಸೇರಿದಂತೆ ಕಂದಾಯ ಇಲಾಖೆಗೆ ಸೇರಿದ ಪ್ರಮುಖ ಕೆಲಸಗಳಿಗೆ ಜನಸಾಮಾನ್ಯರು ಕೊಳ್ಳೇಗಾಲಕ್ಕೆ ಹೋಗಬೇಕಿತ್ತು. 

ಈಗ ಬಿ.ಎಚ್‌.ನಾಗರಾಜ್‌ ಎಂಬುವವರನ್ನು ಗ್ರೇಡ್‌–1 ತಹಶೀಲ್ದಾರ್‌ ಆಗಿ ಹನೂರಿಗೆ ಇದೇ 7ರಂದು ವರ್ಗ ಮಾಡಲಾಗಿದೆ. ಇದರಿಂದಾಗಿ ತಾಲ್ಲೂಕಿಗೆ ಮೊದಲ ಕಾಯಂ ತಹಶೀಲ್ದಾರ್‌ ಸಿಕ್ಕಂತೆ ಆಗಿದೆ. ಆ ಮೂಲಕ ಕೊಳ್ಳೇಗಾಲ ತಾಲ್ಲೂಕಿನಿಂದ ಹನೂರು ಆಡಳಿತಾತ್ಮಕವಾಗಿ ಪ್ರತ್ಯೇಕಗೊಳ್ಳುವ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾದಂತಾಗಿದೆ. ಅಲ್ಲದೇ ತಹಶೀಲ್ದಾರ್‌ ಮಟ್ಟದಲ್ಲಿ ನಡೆಯಬೇಕಾದ ಕೆಲಸಗಳನ್ನು ಇನ್ನು ಇಲ್ಲೇ ಮಾಡಿಸಬಹುದು.

ಗ್ರಾಮ ಪಂಚಾಯಿತಿಯಾಗಿದ್ದ ಹನೂರು, 2002ರಲ್ಲಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಇದನ್ನೊಂದು ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕು ಎಂಬ ಆಶಯ ಅಂದಿನ ಶಾಸಕ ರಾಜೂಗೌಡ ಅವರಿಗೆ ಇತ್ತು. ಅದೇ ಉದ್ದೇಶದಿಂದ ಇಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಒ) ಹಾಗೂ ವಿಶೇಷ ತಹಶೀಲ್ದಾರ್‌ ಕಚೇರಿಗಳನ್ನು ತೆರೆಯಲಾಗಿತ್ತು. 

ಹನೂರು ಭಾಗವು ಕೊಳ್ಳೇಗಾಲ ತಾಲ್ಲೂಕಿನ ಭಾಗವಾಗಿದ್ದರಿಂದ ಸಣ್ಣಪುಟ್ಟ ಸರ್ಕಾರಿ ಕೆಲಸಕ್ಕೂ ಮಹದೇಶ್ವರ ಬೆಟ್ಟ ಹಾಗೂ ಹನೂರು ಹಾಗೂ ಸುತ್ತಮುತ್ತಲಿನ ಜನರು ಕೂಡ 70–80 ಕಿ.ಮೀ ದೂರದಲ್ಲಿರುವ ಕೊಳ್ಳೇಗಾಲಕ್ಕೆ ತೆರಳಬೇಕಿತ್ತು. ಹಾಗಾಗಿ ಪ್ರತ್ಯೇಕ ತಾಲ್ಲೂಕು ರಚನೆಯಾಗಬೇಕು ಎಂಬ ಕೂಗು ಜೋರಾಗಿ ಕೇಳಿ ಬಂದಿತ್ತು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಈ ಕೂಗಿಗೆ ಸ್ಪಂದಿಸಿ, ಪ್ರತ್ಯೇಕ ತಾಲ್ಲೂಕು ಎಂದು ಘೋಷಿಸಿತ್ತು. ಆದರೆ, ತಹಶೀಲ್ದಾರ್‌ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳು ಇಲ್ಲಿಗೆ ಸ್ಥಳಾಂತರ ಆಗಿರಲಿಲ್ಲ. ಬಹುತೇಕ ಎಲ್ಲ ಕೆಲಸಗಳಿಗೂ ಜನರು ಕೊಳ್ಳೇಗಾಲಕ್ಕೆ ಬರಬೇಕಿತ್ತು. ಈಗ ಕಾಯಂ ತಹಶೀಲ್ದಾರ್‌ ಅವರ ನಿಯೋಜನೆಯಿಂದಾಗಿ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. 

‘ಭೌಗೋಳಿಕವಾಗಿ ಕಾಡಂಚಿನ ಗ್ರಾಮಗಳು ಹಾಗೂ ಬೆಟ್ಟ ಗುಡ್ಡ ಪ್ರದೇಶಗಳಿಂದ ಕೂಡಿರುವ ಹನೂರು ತಾಲ್ಲೂಕಿನಲ್ಲಿ ಸಾರಿಗೆ ವ್ಯವಸ್ಥೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಎಲ್ಲ ಕೆಲಸಗಳಿಗೂ ಕೊಳ್ಳೇಗಾಲಕ್ಕೆ ಹೋಗಬೇಕಿತ್ತು. ಈಗ ಕಾಯಂ ತಹಶೀಲ್ದಾರ್‌ ಅವರ ನೇಮಕ ಆಗಿರುವುದರಿಂದ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ಕೆಲಸಗಳಿಗೆ  ಅನುಕೂಲವಾಗಲಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಶಾಗ್ಯ ಮಹೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಾಲ್ಲೂಕು ಕೇಂದ್ರ ಎಂದ ಮೇಲೆ ಎಲ್ಲ 28 ಇಲಾಖೆಗಳ ಕಚೇರಿ ಅಲ್ಲಿರಬೇಕು. ಜನಸಾಮಾನ್ಯರು ಹಾಗೂ ರೈತರು ಎಲ್ಲ ಕೆಲಸಗಳಿಗೂ ತಾಲ್ಲೂಕು ಕಚೇರಿಯನ್ನೇ ಅವಲಂಬಿಸಿದ್ದಾರೆ. ಹಾಗಾಗಿ ತಹಶೀಲ್ದಾರ್‌ ಅವರ ಕಚೇರಿ ಮಾತ್ರ ಇದ್ದರೆ ಸಾಕಾಗುವುದಿಲ್ಲ ಉಳಿದ ಎಲ್ಲ ಕಚೇರಿಗಳು ಇಲ್ಲಿಗೆ ಬರಬೇಕು. ಆಗ ಕೊಳ್ಳೇಗಾಲಕ್ಕೆ ಹೋಗುವ ತಾಪತ್ರಯ ತಪ್ಪಿ ನಮಗೆ ಇನ್ನಷ್ಟು ನೆರವಾಗಲಿದೆ’ ಎಂದು ಅವರು ಹೇಳಿದರು. 

ಮಾರ್ಚ್‌ ನಂತರ ಇಲಾಖೆಗಳ ಕಚೇರಿ ಸ್ಥಳಾಂತರ

ತಾಲ್ಲೂಕಿಗೆ ಕಾಯಂ ತಹಶೀಲ್ದಾರ್‌ ನಿಯೋಜನೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಈಗ ನಾಗರಾಜ್‌ ಎಂಬುವವರನ್ನು ವರ್ಗ ಮಾಡಿದ್ದಾರೆ. ಇದರಿಂದಾಗಿ ಜನರಿಗೆ ಅನುಕೂಲವಾಗಲಿದೆ. ಉಳಿದ ಇಲಾಖೆಗಳ ಕಚೇರಿಗಳೂ ಇಲ್ಲಿ ಆರಂಭವಾಗಬೇಕಿದೆ. ಮಾರ್ಚ್‌ ನಂತರ ಕಚೇರಿಗಳ ಸ್ಥಳಾಂತರ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹನೂರು ಶಾಸಕ ಆರ್‌. ನರೇಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !