ಅಜ್ಜನ ಮನೆಯ ಕರಿಕೋಣವೂ.. ನಾನೂ..

7
ಭೂಮಿಕಾ ಲಲಿತಾ ಪ್ರಬಂಧ 2019

ಅಜ್ಜನ ಮನೆಯ ಕರಿಕೋಣವೂ.. ನಾನೂ..

Published:
Updated:

ಪಟ್ಟಣಕ್ಕೆ  ತುಸು  ಹತ್ತಿರವೇ ಎನ್ನಬಹುದಾದ, ಆದರೆ ಅದರ ಸದ್ದು-ಗದ್ದಲಗಳಿಂದ ದೂರವಾದ, ಶಾಂತವಾಗಿ ಹರಿಯುವ ಅಘನಾಶಿನಿಯ ಮಡಿಲಲ್ಲಿ ಬೆಚ್ಚಗಿರುವ ಪುಟ್ಟ ಹಳ್ಳಿ ನಮ್ಮದು. ತೂಕದ ಲೆಕ್ಕದಲ್ಲಿ ಹಣ್ಣುತಂದು ಎಣಿಸಿ ತಿನ್ನುವ ಹಂಗಿಲ್ಲದ, ಪ್ಲಾಸ್ಟಿಕ್ ಪ್ಯಾಕೆಟ್ ನಲ್ಲಿ ತುಂಬಿಸಿದ ನಿನ್ನೆ ಮೊನ್ನೆಯ ಹಾಲುತಂದು ಕುಡಿಯುವ ಭಂಗವಿಲ್ಲದ ಬದುಕು. ಅದರಲ್ಲೂ ನಮ್ಮ ಗೌರಮ್ಮನ ಹಾಲು-ಮೊಸರಿನ ರುಚಿಯೆಂದರೆ ಈಗ ನೆನೆಸಿಕೊಂಡರೂ ಮನಸ್ಸೆಲ್ಲ ಕೆನೆ..ಕೆನೆ..


ಗಾಯತ್ರಿ ಹೆಗಡೆ

ಆಯಿ ಮುದ್ದಿನಿಂದ ಹುಲ್ಲು-ಮುರ-ಅಕ್ಕಚ್ಚುಉಣಿಸಿ, ಮೈಗೆಲ್ಲ ಎಣ್ಣೆಬಳಿದು ಸಾಕಿದ ಎಮ್ಮೆ ಗೌರಮ್ಮ. ಮೊದಲ ನೋಟಕ್ಕೆ ಭಯ ಹುಟ್ಟಿಸುವಂತ ದೊಡ್ಡ ಕಣ್ಣು, ದಪ್ಪ ಶರೀರ, ತಲೆ ವಾರೆಯಾಗಿಟ್ಟುಕೊಂಡೇ ಕೊಟ್ಟಿಗೆ ಬಾಗಿಲಿನಿಂದ ಒಳ-ಹೊರಗೆ ಹೋಗುವಂತೆ  ಅಗಲವಾಗಿ ಬೆಳೆದ ಉದ್ದ-ದಪ್ಪ ಕೊಂಬು. ಆದರೆ ಸ್ವಭಾವ ಮಾತ್ರ ಅವಳದೇ ಹಾಲು-ಮೊಸರಿನಿಂದ ಕಡೆದ ಬೆಣ್ಣೆಯಂತೆ ಮೃದು.. ನಾವೆಲ್ಲ ಅವಳ ಹೊಟ್ಟೆಯ ಕೆಳಗೇ ನುಸುಳಿದರೂ ಕದಲಿದರೆ ನಮಗೆಲ್ಲಿ ಪೆಟ್ಟಾದೀತೋ ಎಂದು ಸ್ವಲ್ಪವೂ ಕದಲದೇ  ಮಮತೆಯಿಂದ ನಮ್ಮನ್ನೇ ನೊಡುತ್ತ ನಿಲ್ಲುತ್ತಿದ್ದ ವಾತ್ಸಲ್ಯಮಯಿ..

ಗೌರಮ್ಮ ಕರು ಹಾಕಿದಾಗ ಮನೆ ತುಂಬ ಸಂಭ್ರಮ. ಮನೆಯಲ್ಲಿ ಗಂಡುಮಗು, ಕೊಟ್ಟಿಗೆಯಲ್ಲಿ ಹೆಣ್ಣುಗರು ಹುಟ್ಟಿದರೆ ಚೆಂದ ಎನ್ನುವ ಅಜ್ಜಿಗೆ ಮಾತ್ರ ಕೋಣಗರು ಹುಟ್ಟಿತೆಂಬ ಬೇಸರ..ನಮಗೆಲ್ಲ ಆಡಲೊಂದು ಕರು ಸಿಕ್ಕಿತೆಂಬ ಸಂತಸ..

ಹಾಲುಕರೆಯುವ ಮುಂಚೆ  ಕರುವಿಗೆ ಸ್ವಲ್ಪ ಕುಡಿಸಿ ಅದನ್ನು ತಾಯಿಯ ಮುಂದೆ ಕಟ್ಟಿ, ಗೌರಮ್ಮ ಕರುವನ್ನೇ ಮುದ್ದಿನಿಂದ ನೆಕ್ಕುತ್ತಿರುವಾಗ ಹಾಲು ಕರೆದುಕೊಂಡು ಕೊನೆಯಲ್ಲಿ ಕರುವಿಗೊಂದಿಷ್ಟು ಹಾಲು ಕೆಚ್ಚಲಲ್ಲೇ ಉಳಿಸಿ, ಬರುವಾಗ ಕರುವಿನ ಹಗ್ಗ ಬಿಚ್ಚಿ ಬರುವುದು ಆಯಿಯ ವಾಡಿಕೆ. ಹೊಟ್ಟೆತುಂಬ ಹಾಲುಕುಡಿದಾದ ಮೇಲೆ ದೊಡ್ಡ ಅಂಗಳದ ತುಂಬ ಅಲ್ಲಿಂದಿಲ್ಲಿಗೆ ಜಿಂಕೆಯ ಮರಿಯಂತೆ ಜಿಗಿದು ಓಡುವ ಕರುವನ್ನು ನೊಡುವುದೇ ನಮ್ಮ ಕಣ್ಣಿಗೆ ಹಬ್ಬ. ಎಲ್ಲ ಬಿಟ್ಟು ಎಮ್ಮೆ ಕರುವಿನೊಂದಿಗೇನು ಆಟ? ಹೋಗಿ ಓದಿಕೊಳ್ಳಿ ಎನ್ನುವ ಅಪ್ಪಯ್ಯನ ಗದರಿಕೆ ಎಮ್ಮೆ ಮೇಲೆ ಮಳೆಸುರಿದಂತೆ ವ್ಯರ್ಥವಾಗುತ್ತಿತ್ತು. ಅದೊಂದು ದಿನ  ಕರುವಿಗೆ ಹಾಲು ಕುಡಿಸಿ  ಗೌರಮ್ಮನ ಮುಂದೆ ಕಟ್ಟಲೆಂದು ಹೋದ ಆಯಿಯ ಕೈಯಿಂದ ದಾಬನ್ನು(ಹಗ್ಗ) ತಾನೇ ಕರುವನ್ನು ಕಟ್ಟುತ್ತೇನೆಂದು ಹಟಮಾಡಿ ತೆಗೆದುಕೊಂಡ ನನ್ನ ತರಲೆ ತಮ್ಮ,ಆಯಿ ಆ ಕಡೆ ತಿರುಗಿ ಹಾಲು ಕರೆಯಲು ಕುಳಿತುಕೊಳ್ಳುತ್ತಿದ್ದಂತೆ ದಾಬನ್ನು ತನ್ನ ಸೊಂಟಕ್ಕೆ ಕಟ್ಟಿಕೊಂಡು ಬಿಟ್ಟ. ಹಗ್ಗದ ಒಂದು ಕೊನೆ ಕರುವಿನ ಕುತ್ತಿಗೆಯಲ್ಲಿ,ಇನ್ನೊಂದು ಕೊನೆ ತಮ್ಮನ ಸೊಂಟಕ್ಕೆ..ಅದೇನನ್ನಿಸಿತೋ.. ಕರು ಕ್ಷಣಮಾತ್ರದಲ್ಲಿ  ಛಂಗನೆ ನೆಗೆದು ಅಂಗಳದ ತುಂಬ ಓಡತೊಡಗಿತು. ಅಲ್ಲೇ ಪಕ್ಕದಲ್ಲಿಬಾವಿಯಿಂದ ನೀರೆತ್ತುತ್ತಿದ್ದ ಮನೆಕೆಲಸದ ಸುಬ್ಬಜ್ಜಿ ಅರ್ಧ ತುಂಬಿದ ಕೊಡವನ್ನು ಹಾಗೆಯೇ ಬಿಟ್ಟು “ ಅಯ್ಯಯ್ಯೋ..”  ಎನ್ನುತ್ತ ಓಡಿ ಬಂದಳು. ಹೆಣ್ಣುಮಕ್ಕಳೇ ತುಂಬಿರುವ ಮನೆಯಲ್ಲಿ ಅವನೊಬ್ಬನೇ ಗಂಡುಮಗ. ತನ್ನದೇ ಸ್ವಂತ ಮೊಮ್ಮಗನೋ ಎಂಬಂತೆ ಅವನೆಡೆಗೆ ತುಸು ಹೆಚ್ಚೇ ಅಕ್ಕರೆ ತೋರುವ ಅವಳು, ಕಲ್ಲು-ಮಣ್ಣು ತುಂಬಿರುವ ಅಂಗಳದಲ್ಲಿ ಸೊಂಟಕ್ಕೆ ಕಟ್ಟಿಕೊಂಡಿರುವ ಹಗ್ಗದಿಂದಾಗಿ ಕರುವಿನ ಹಿಂದೆ ಎಳೆದಾಡಿಸಿಕೊಂಡು ಅಳುತ್ತಿರುವ  ತಮ್ಮನನ್ನು  ನೊಡಲಾರದೇ  ಓಡಿಹೋಗಿ  ತಾನೇ ರಕ್ಷಾಕವಚವಾಗಿ ಅವನನ್ನು ತಬ್ಬಿಕೊಂಡಳು. ಮೊದಲೇ   ಗಾಬರಿಗೊಂಡಿದ್ದ ಕರು ತನ್ನ ಹಿಂದ್ಹಿಂದೆ ಹೊರಳಾಡುತ್ತ್ತಾ ಬರುತ್ತಿದ್ದ ತಮ್ಮನ ಕಿರುಚಾಟ, “ ಹ್ವಾದ್ನೇ..ನನ್ ಮಮ್ಮಗ ಹ್ವಾದ್ನೇ..ಅಯ್ಯಯ್ಯಪ್ಪೋ..ಯಾರಾದ್ರೂ ಬರ‍್ರೋ..” ಎಂದು ಕೂಗುತ್ತಿರುವ ಸುಬ್ಬಜ್ಜಿಯ ಅರಚಾಟದಿಂದ ಇನ್ನಷ್ಟು ಗಾಬರಿಗೊಂಡು ಅಡ್ಡಡ್ಡ ಓಡತೊಡಗಿತು.   ಹಾಲು ಕರೆಯುವುದನ್ನು ಅರ್ಧಕ್ಕೇ ಬಿಟ್ಟು ಬಂದ ಆಯಿ ಅದು ಹೇಗೋ ಕರುವನ್ನು ತಡೆದು ನಿಲ್ಲಿಸಿ ಇಬ್ಬರನ್ನೂ ಬಚಾವು ಮಾಡಿದಳು. ತರಚು ಗಾಯಗಳಿಂದ  ಹೈರಾಣಾದ ಸುಬ್ಬಜ್ಜಿ ಮುಂದೆ ಒಂದು ವಾರ ಕೆಲಸಕ್ಕೆ ಬರಲಿಲ್ಲ..ಕೈ-ಕಾಲು-ಮಂಡಿ ಚರ್ಮವೆಲ್ಲ ಕಿತ್ತು.ಡಾಕ್ಟರ‍್ರೂ.. ಇಂಜೆಕ್ಷನ್ನೂ..ಜೊತೆಗೆ ಮುರಿದ ಮುಂದಿನ ಹಲ್ಲೂ..ಅದನ್ನು ತೋರಿಸಿ ತೋರಿಸಿ , ಬಾಯಿ ತೆರೆಯಲೂ ಅವಕಾಶಕೊಡದೇ ನಾವು ಅಕ್ಕ- ತಂಗಿಯರು ಕಾಡಿಸಿದ ಪರಿಗೆ..ತಮ್ಮ ಇನ್ನೊಮ್ಮೆ ಎಮ್ಮೆಕರುವಿನ ಹತ್ತಿರ ಸುಳಿದರೆ ಕೇಳಿ.. ಕರುವಿಗೆ ವರುಷ ತುಂಬುವಷ್ಟರಲ್ಲಿ ಅಪ್ಪಯ್ಯನ ಆದೇಶದಂತೆ ಅದನ್ನು ಮಾರಿಕಾಂಬಾ ದೇವಸ್ಥಾನಕ್ಕೆ ಕಾಣಿಕೆಯಾಗಿ ಅರ್ಪಿಸಿ ಬಂದಾಯಿತು..

ನಮ್ಮೂರ ಮಾರಿಕಾಂಬಾ ಜಾತ್ರೆ ಎಂದರೆ ಕರ್ನಾಟಕದ ಹೊರಗೂ ಮನೆಮಾತು..ಮೊದಲೆಲ್ಲ ಜಾತ್ರೆಯಲ್ಲಿ ಕೋಣನ ಬಲಿ ಕೊಡುತ್ತಿದ್ದರಂತೆ. ಸ್ವಾತಂತ್ರ್ಯಪೂರ್ವದಲ್ಲಿ  ಗಾಂಧೀಜಿಯವರೊಮ್ಮೆ ನಮ್ಮೂರಿಗೆ ಬಂದವರು ದೇವಾಲಯದಲ್ಲಿ ಜೀವಬಲಿ ಕೊಡುವ ವಿಚಾರ ತಿಳಿದು ಬರುವುದನ್ನೇ ನಿರಾಕರಿಸಿದರಂತೆ. ಇವೆಲ್ಲ ನಾವು ಹುಟ್ಟುವುದಕ್ಕೂ ಬಹಳ ಮುಂಚಿನ ಕತೆ..ಕೋಣನ ಬಲಿಗೇ ಅಷ್ಟು ನೊಂದುಕೊಂಡ ಆ ಮಹಾತ್ಮ ಇವೊತ್ತೇನಾದರೂ ಬದುಕಿದ್ದರೆ  ಇಂದು ನಮ್ಮ ನೇತಾರರು-ಅಧಿಕಾರಶಾಹಿಗಳು ಸೇರಿ ಜನಸಾಮಾನ್ಯನನ್ನು ಗೋಳಿಟ್ಟುಕೊಂಡು ಕೊಡುತ್ತಿರುವ ನರಬಲಿಯನ್ನು ಕಂಡು ಏನನ್ನುತ್ತಿದ್ದರೋ..ಅಲ್ಲಿಂದ ಮುಂದೆ ಮಾರಿಜಾತ್ರೆಗೆ ಕೋಣನಬಲಿ ಕೊಡುವುದು ನಿಂತು ಹೋಗಿದೆ. ಈಗ ದೇವಾಲಯದ ಹಿಂಭಾಗದಲ್ಲಿ ಮಹಿಷಾಸುರನ ಪ್ರತಿನಿಧಿಯಾಗಿ ಕೋಣವೊಂದನ್ನು ಕಟ್ಟಿರುತ್ತಾರೆ. ತಮ್ಮ ಮನೆಯಲ್ಲಿ ಹುಟ್ಟಿದ ಕೋಣಗರುವನ್ನು ಭಕ್ತಾದಿಗಳು ಹರಕೆಯೆಂದೋ, ಕಾಣಕೆಯೆಂದೋ  ದೇವಾಲಯಕ್ಕೆ ಅರ್ಪಿಸಿರುವ  ಈ ಕರು ಇಲ್ಲಿಗೆ ಬಂದು ಎರಡೇ ವರ್ಷಕ್ಕೆ ಹುಲ್ಲು-ಮೇವಿನ ಆರೈಕೆಯಿಂದ ಹೇಗೆ ಮಾರಿಕೋಣವಾಗಿ ಕೊಬ್ಬಿರುತ್ತದೆಯೆಂದರೆ, ಹಣ್ಣು-ತರಕಾರಿಯೆಂದರೆ ಅಸಹ್ಯಿಸಿಕೊಳ್ಳುತ್ತ ಪಿಜ್ಜಾ, ಬರ್ಗರ್,ಮಣ್ಣುಮಸಿಗಳೆಂಬ ಜಂಕ್ ಫುಡ್ ತಿಂದು ಹತ್ತು ಹೆಜ್ಜೆ ನಡೆಯಲೂ ಏದುಸಿರು ಬಿಡುವ ನಮ್ಮ-ನಿಮ್ಮೆಲ್ಲರ ಮನೆಗಳಲ್ಲಿರುವ ಮರಿಕೋಣಗಳ ನೆನಪಾದರೆ ಅದು ಖಂಡಿತವಗಿಯೂ ನನ್ನ ತಪ್ಪಲ್ಲ. ದೇವಿಗೇ ಸುಳ್ಳುಹೇಳಿ ಮೋಸಮಾಡಿದ ರಾಕ್ಷಸ ಎಂದು ನಿಂದಿಸುತ್ತಲೇ ಈ ಕೋಣಕ್ಕೆ ಅರಿಸಿನ-ಕುಂಕುಮ-ಹೂವಿಟ್ಟು, ಹಣ್ಣು ತಿನ್ನಿಸಿ ನಮಸ್ಕರಿಸುವ ವಿಡಂಬನೆಗೆ ಏನನ್ನುತ್ತೀರೊ..ಧನ-ಅಧಿಕಾರದ ಮದದಿಂದ ನಮ್ಮನ್ನೆಲ್ಲ ಸುಲಿದು ಅಳಿಸುವ ಜನನಾಯಕರೆನಿಸಿಕೊಂಡ ಮಹಾ-ಮಹಾ ಅಸುರರನ್ನೇ ಪೂಜಿಸಿ-ಆರಾಧಿಸುವ ಮೂರ್ಖರ ಮುಂದೆ ಈ ನಮ್ಮ ಬಡ ಮಹಿಷಾಸುರನ ಪೂಜೆ ಯಾವ ಲೆಕ್ಕ ಬಿಡಿ.. ಜನರ ಒಳಿತಿಗಾಗಿ ಯಾವುದೇ ಯೋಜನೆಗಳನ್ನು ಮಾಡ ಹೊರಟರೂ ಎತ್ತು ಏರಿಗೆಳೆದಿತ್ತು ಕೋಣ ಕೆರೆಗೆಳೆದಿತ್ತು ಎಂಬ ಗಾದೆಯನ್ನು ಸಾಕ್ಷಾತ್ಕರಿಸಿ, ಪರ-ವಿರೋಧವೆಂದು ಕೂಗಾಡಿ ಕೆಲಸ ಕೆಡಿಸುವ ಈ ಎಮ್ಮೆ ಚರ್ಮದ ನಾಯಕರು ಒಂದುಗೂಡುವುದು ತಮ್ಮ ಸಂಬಳ-ಸೌಲಭ್ಯಗಳನ್ನುಹೆಚ್ಚಿಸಿಕೊಳ್ಳುವಾಗ ಮಾತ್ರ. ಸ್ವಾರ್ಥ ಬಿಟ್ಟು ಇನ್ನೇನೂ ಚಿಂತಿಸದ ಇವರ ಮುಂದೆ ಜನಕಲ್ಯಾಣದ ಮಾತನಾಡುವುದು ಕೋಣನ ಮುಂದೆ ಕಿನ್ನರಿ ನುಡಿಸಿದಂತೆ. ಮಾತಿನ ಪೆಟ್ಟು ತಾಗದ ಇಂಥ ಕೋಣಗಳಿಗೆ ಜಾಣ ಮತದಾರ ಓಟೆಂಬ ಲತ್ತೆ ಪೆಟ್ಟು ಕೊಡಬೇಕಷ್ಟೆ.

ಇನ್ನು ಎತ್ತು ಏರಿಗೆಳೆಯುವ ಕೋಣ ಕೆರೆಗೆಳೆಯುವ ಗಾದೆಯನ್ನು ರಚಿಸಿದವನ (ಕೋಣನ?) ಬುದ್ಧಿಗೇನನ್ನೋಣ?  ಗದ್ದೆ ಹೂಡುವಾಗಲೋ, ಗಾಡಿ ಎಳೆಯುವಾಗಲೋ ಕೋಣಕ್ಕೆ ಕೋಣ, ಎತ್ತಿಗೆ ಎತ್ತನ್ನೇ ಜೊತೆ ಮಾಡುತ್ತಾರೆಯೇ ವಿನಾ ಎತ್ತಿಗೆ ಕೋಣನನ್ನು ಜೊತೆ ಮಾಡುವುದನ್ನು ಎಲ್ಲಾದರೂ ಕಂಡು-ಕೇಳಿದ್ದೀರಾ? ಅನುಕೂಲವಿಲ್ಲದ ಬಡವನೋ ಅಥವಾ ಹೇಗೋ ಕೆಲಸವಾದರಾಯಿತೆನ್ನುವ  ಯಾವುದಾದರೂ ಅಡ್ನಾಡಿಯೋ ಹೀಗೆ ಇಜ್ಜೋಡಿ ಮಾಡಬಹುದಷ್ಟೆ. ಅಷ್ಟಕ್ಕೂ ಜೀವನದ ಗಾಡಿಯನ್ನು ಎಳೆದು ಕೆರೆ-ಹೊಂಡಗಳಲ್ಲಿ ಮುಗ್ಗರಿಸದಂತೆ ಸಂಭಾಳಿಸಿ, ಸುರಕ್ಷಿತವಾಗಿ ಕೊನೆಮುಟ್ಟಿಸುವುದು ಎತ್ತಿನ ಜೋಡಿಯೇ  ಎಂದು ನಮ್ಮ ಹಿರಿಯರು ಹೇಳಿದ್ದಾರೆಯೇ ಹೊರತು ಎತ್ತು-ಕೋಣನ ಜೋಡಿ ಎಂದಿಲ್ಲವಲ್ಲ? ಇನ್ನು,  ಕೆಲಸ ಬಾರದ ಅಯೋಗ್ಯನನ್ನು ಎಮ್ಮೆ ಕಾಯಲೂ ಲಾಯಕ್ಕಿಲ್ಲದವನೆಂದು ಹಗುರವಾಗಿ ಮಾತನಾಡುವ  ಮೊದಲು ಸ್ವಲ್ಪ ಯೋಚಿಸಿ..ಎಮ್ಮೆ ಕಾಯುವುದೆಂದರೇನು ಅಷ್ಟು ಸುಲಭದ ಕೆಲಸ ಎಂದುಕೊಂಡಿರಾ? ಎಮ್ಮೆ ಕಾಯುವ ಕಷ್ಟ ಆ ಶ್ರೀ ಕೃಷ್ಣ ಪರಮಾತ್ಮನಿಗೂ ಗೊತ್ತಿರಲಿಕ್ಕಿಲ್ಲ. ಯಾಕೆಂದರೆ ಅವನು ಕಾಯುತ್ತಿದ್ದುದು ಗೋವುಗಳನ್ನು, ಎಮ್ಮೆಗಳನ್ನಲ್ಲ. ಕಾಯುವವರ ಕಣ್ಣುತಪ್ಪಿಸಿ ಹಸಿರು ಭತ್ತದ ಗದ್ದೆಗೆ ನುಗ್ಗಿದವೆಂದರೆ ಸೃಷ್ಟಿಯ ಸಕಲ ಚರಾಚರಗಳನ್ನು ಪೊರೆದು ಕಾಯುವ ಆ ಜಗತ್ಪಾಲಕ ಭಗವಂತನೇ ಬಂದರೂ ತಲೆ ಎತ್ತದ ಧಾರ್ಷ್ಟ್ಯ ಅವುಗಳದು.

ನನಗೊಂದು ಅನುಮಾನ..ವಿವೇಚನೆ ಇಲ್ಲದವನನ್ನು, ಅವಿವೇಕಿಯನ್ನು ಕೋಣನ ಬುದ್ಧಿಯವನೆಂತಲೋ, ಇತರರ ನೋವಿಗೆ ಮಿಡಿಯದ ಸಂವೇದನಾಹೀನನನ್ನು ಎಮ್ಮೆ ಚರ್ಮದವರೆಂತಲೋ ಹಿಯಾಳಿಸುತ್ತೇವಲ್ಲ ಈ ವಿಷಯವೇನಾದರೂ ನಮ್ಮ ಮಹಿಷಕುಲಕ್ಕೆ ಗೊತ್ತಾದರೆ, ಇದ್ದರೂ-ಸತ್ತರೂ ಸಾವಿರ-ಸಾವಿರ ಬೆಲೆಬಾಳುವ ತಮ್ಮನ್ನು ಮೂರುಕಾಸಿನ ಯೋಗ್ಯತೆಯೂ ಇಲ್ಲದ  ಹುಲುಮಾನವನಿಗೆ ಹೋಲಿಸುವುದನ್ನು ಕಂಡು ಇದು ತಮ್ಮ ಕುಲಕ್ಕೇ ಅವಮಾನವೆಂದು ಮುನಿಸಿಕೊಂಡು ದಂಗೆ ಎದ್ದರೆ ಹಾಲು-ಮಜ್ಜಿಗೆ ಇಲ್ಲದ ಬದುಕನ್ನು ಕಲ್ಪಿಸಲೂ ಸಾಧ್ಯವಿಲ್ಲದ ನಮ್ಮ ಗತಿಯೇನು?

ಹಾವಿನ ದ್ವೇಷದ ಬಗ್ಗೆ ಕೇಳಿರುತ್ತೀರಿ..ಹಾಗೇ ಕೋಣನ ಕೋಪದ ಪರಿಯನ್ನೂ ಕೇಳಿ..ಚಿಕ್ಕಂದಿನಲ್ಲಿ ನಮಗೆ ಶಾಲೆಗೆ ರಜವೆಂದರೆ ಅದಕ್ಕೆ ಪರ್ಯಾಯ ಪದ ಅಜ್ಜನ ಮನೆಯೇ..ಅದಿರುವುದು ಮಲೆನಾಡಿನ ಮೂಲೆಯೊಂದರ ಹಳ್ಳಿಯಲ್ಲಿ. ಸುತ್ತಮುತ್ತಲೂ ತೆನೆ ತುಂಬಿ ತೂಗುವ ಭತ್ತದ ಗದ್ದೆ, ಅಡಿಕೆ,ಯಾಲಕ್ಕಿ, ಕಾಳುಮೆಣಸು, ಬಾಳೆ, ತೆಂಗಿನ ತೋಟ.  ಮಾವು, ಹಲಸು, ಮುರುಗಲು, ಉಪ್ಪಾಗೆ, ಗೇರು,  ಸಂಪಿಗೆ, ನುರುಕಲು, ಬಿಕ್ಕೆ, ಸಳ್ಳೆ, ಇಳ್ಳಿ, ಪೇರಲ ಇನ್ನ್ಯಾವ್ಯಾವುದೋ ಹೆಸರೂ ಗೊತ್ತಿಲ್ಲದ, ಈಗ ಮರೆತ, ಹಣ್ಣಿನ ಗಿಡ-ಮರಗಳ ಬೀಡು. ಅಲ್ಲಿಂದ ಮುಂದಕ್ಕೆ ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಗುಡ್ಡ-ಬೆಟ್ಟ..ಆಕಾಶದೆತ್ತರ ಬೆಳೆದ ವೃಕ್ಷಗಳಿಂದ ತುಂಬಿದ ಸೊಂಪಾದ ಕಾಡು..ನಡುಬೇಸಿಗೆಯಲ್ಲೂ ಕಂಬಳಿ ಹೊದ್ದು ಮಲಗಬೇಕೆನಿಸುವಂಥ ತಂಪು..ತಂಪು..ಭೂಲೋಕದ ಸ್ವರ್ಗ..

ಅಜ್ಜ-ಅಜ್ಜಿ,ಸೋದರತ್ತೆ-ಮಾವಂದಿರು,ಅವರ ಮಕ್ಕಳು ತುಂಬಿದ ಕೂಡು ಕುಟುಂಬ. ರಜೆಯಲ್ಲಿ ನಾವು, ದೊಡ್ಡಮ್ಮ,ಚಿಕ್ಕಮ್ಮ, ಅವರ ಮಕ್ಕಳೆಲ್ಲ ಸೇರಿ ಬೀಟೆ ಮರದ ಕಂಬಗಳ ಹನ್ನೆರಡಂಕಣದ ಎರಡಂತಸ್ತಿನ  ವಿಶಾಲವಾದ ಮನೆ ತುಂಬಿ ತುಳುಕುತ್ತಿತ್ತು. ಆಗಿನ್ನೂ ಬಸ್ಸು-ರೈಲುಗಳಾದಿ ಸಾರ್ವಜನಿಕ ಸಂಪರ್ಕ ಸಾಧನಗಳು ಹೆಚ್ಚಿಲ್ಲದ ಕಾಲವಾಗಿದ್ದರಿಂದ ರಜೆ ಬಂತೆಂದರೆ ಸೋದರಮಾವನೇ ಜೀಪು ತಂದು ನಮ್ಮನ್ನೆಲ್ಲ ಕರೆದೊಯ್ಯುತ್ತಿದ್ದ. ಮುಂದೆ ರಜೆ ಮುಗಿಯುವವರೆಗೂ ನಾವೆಲ್ಲ ಅಕ್ಷರಶ: ಬಾಲವಿಲ್ಲದ  ಮಂಗಗಳು. ಆದರೂ ಕೆಲವು ವಿಚಾರಗಳಲ್ಲಿ ಅಜ್ಜ-ಮಾವಂದಿರು ತುಂಬಾ ಕಟ್ಟು-ನಿಟ್ಟು. ಬೆಳಿಗ್ಗೆ ಏಳರ ಒಳಗೆ ತಿಂಡಿಯಾಗಬೇಕು, ಮಧ್ಯಾಹ್ನ ಹನ್ನೆರಡು ಅನ್ನುವಷ್ಟರಲ್ಲಿ ಊಟ..ಊಟ ಮುಗಿಸಿ ಜಗಲಿಕಟ್ಟೆಯ ಮೇಲೆ ಕುಳಿತು ಚದುರಂಗವೋ ಚನ್ನೆಮಣೆಯೋ ಆಡುತ್ತಿದ್ದ ನಮ್ಮ ಬಳಿ ಬಂದ ಸೋದರಮಾವ ತಮ್ಮ ಬಲಗೈ ಎತ್ತಿ ಎರಡು ಬೆರಳು ತೋರುತ್ತಾ ದೊಡ್ಡದಾಗಿ ಕಣ್ಣುಬಿಟ್ಟರೆಂದರೆ ಅದರರ್ಥ ಈಗಿನ ವಿಕ್ಟರಿ ಎಂದಲ್ಲ.. ಎರಡು ಗಂಟೆಯ ತನಕ ಯಾರಾದಾರೂ ಗಲಾಟೆಮಾಡುವುದಿರಲಿ ಗಟ್ಟಿಯಾಗಿ ಉಸಿರಾಡಿದರೂ ಜೋಕೆ ಎಂದು. ಅದು ಅವರ ಮಧ್ಯಾಹ್ನದ ನಿದ್ದೆಯ ಸಮಯ. ನಿಜ ಹೇಳಬೇಕೆಂದರೆ ನಾವು ಕಾಯುತ್ತಿದ್ದುದೂ ಅದನ್ನೇ. ದೊಡ್ಡವರೆಲ್ಲ ನಿದ್ದೆ ಮಾಡುತ್ತಿರುವ ಆ ಎರಡು ತಾಸಿನ ಅವಧಿ ನಮಗೆಲ್ಲ ಗುಡ್ಡ-ಬೆಟ್ಟಹತ್ತಿ, ಹೊಳೆ-ಹಳ್ಳಗಳಲ್ಲಿ ನೀರಾಡಿ, ಲಂಗು-ಲಗಾಮಿಲ್ಲದೇ ಕುಣಿಯುವ ಅಮೃತ ಘಳಿಗೆ. ಮಳೆಗಾಲ ಶುರುವಾಗುವ ಸ್ವಲ್ಪ ಮೊದಲು ಸೋದರಮಾವ ಗದ್ದೆ ಹೂಡಲೆಂದು ಎತ್ತುಗಳ ಜೋಡಿಯೊಂದನ್ನು ತಂದಿದ್ದರು. ಹತ್ತಿಯಂತೆ ಬೆಳ್ಳಗಿದ್ದ ಎತ್ತು ಬೆಳ್ಳ ಸ್ವಭಾವದಲ್ಲಿ ತುಸು ಒರಟ. ಸ್ವಲ್ಪ ಬೂದು ಬಣ್ಣದ ಎತ್ತು ಬೂದ ತುಂಬ ಸೂಕ್ಷ್ಮ.. ಅವುಗಳ ಲಾಲನೆ-ಪಾಲನೆ ಎಲ್ಲ ಆಳುಮಗ ಶಿವಪ್ಪನದು. ಹೂಟಿಕೆಲಸ ಬೇಗ ಮುಗಿಸಲೆಂದು ಮಾವ ಸ್ವಲ್ಪದಿನಗಳಲ್ಲೇ ಕೋಣಗಳ ಜೋಡಿಯೊಂದನ್ನು ತಂದರು. ಅದರಲ್ಲೊಂದು ಕರಿಕೋಣ. ಕೋಣವೆಂದರೆ ಕೋಣವಷ್ಟೆ.. ಅದರಲ್ಲಿ ಕರಿ-ಬಿಳಿ ಏನು ಬಂತು ಎಂದಿರಾ?  ಜೊತೆಗಿರುವ ತಿಳಿಗಪ್ಪು ಬಣ್ಣದ ಕೋಣನ ಮುಂದೆ ಈ ಕರಿಕೋ ಣನ ಕಡುಗಪ್ಪು ಬಣ್ಣ ಕಣ್ಣಿಗೆ ರಾಚುತ್ತಿತ್ತು.  ಶಿವಪ್ಪನ ಮಗ ನರಸಿಂಹನ ಆರೈಕೆಯಲ್ಲಿ ಸೊಂಪಾಗಿ ಮೈಗೆಲ್ಲ ಎಣ್ಣೆ ಬಳಿಸಿಕೊಂಡಂತೆ ಮಿರಮಿರ ಮಿಂಚುತ್ತಿತ್ತು. ಇಲ್ಲೂಅಷ್ಟೇ ..ಎರಡೂ ಕೋಣಗಳು ಸ್ವಭಾವದಲ್ಲಿ ತದ್ವಿರುಧ್ಧ. ಕರಿ ಕೋಣ ಮಹಾ ಕೋಪಿಷ್ಟ. ನರಸಿಂಹನ ಹೊರತಾಗಿ ಇನ್ನ್ಯಾರೂ ಅದರ ಸನಿಹ ಸುಳಿಯುವಂತಿಲ್ಲ. ನನಗಾಗ ಹತ್ತೋ-ಹನ್ನೊಂದೋ ವಯಸ್ಸು.  ಮಧ್ಯಾಹ್ನ  ಊಟಮುಗಿಸಿ ಕೋಣಗಳೆರಡನ್ನು ಮೈತೊಳೆಸಲೆಂದು ಹೊಳೆಯ ಕಡೆ ಹೊಡೆದುಕೊಂಡು  ಹೋಗುತ್ತಿದ್ದ ನರಸಿಂಹ ಎಷ್ಟು ಬೇಡವೆಂದರೂ ಕೇಳದೇ ನಾವು ಮಕ್ಕಳೆಲ್ಲ  ಅವನೊಂದಿಗೆ ಹೊರಟೆವು. ಗಲಾಟೆ ಮಾಡದೇ ಮನೆಯಲ್ಲಿರುವುದೆಂತು? ನಮ್ಮ ಗಲಾಟೆ ಹಿರಿಯರ ನಿದ್ದೆ ಕೆಡಿಸಿ ಅವರ ಕೋಪಕ್ಕೆ ಪಾತ್ರರಾಗುವುದಕ್ಕಿಂತ ಇದು ನಮಗೆ ಏಕಮಾತ್ರ  ಮತ್ತು ತುಂಬಾ ಪ್ರಿಯವಾದ  ಕಾರ್ಯವಾಗಿತ್ತು.

ಮನೆಯಿಂದ  ಫರ್ಲಾಂಗ ದೂರದಲ್ಲಿ ಹರಿಯುತ್ತಿದ್ದ ಹೊಳೆಯಲ್ಲಿ ನರಸಿಂಹ ಕೋಣಗಳ ಮೈ ತೊಳೆಸುತ್ತಿದ್ದ. ಅಲ್ಲೇ ಸ್ವಲ್ಪ ಕೆಳಗೆ  ಮಂಡಿಮಟ್ಟ ನೀರಿನಲ್ಲಿ ನಾವೆಲ್ಲ ಆಟವಾಡುತ್ತಿದ್ದೆವು. ಅದೇನಾಯಿತೋ.. ಬಿಳಿಹುಲ್ಲಿನಲ್ಲಿ ಮೈತಿಕ್ಕುತ್ತಿದ್ದ ನರಸಿಂಹನ ಕರೆಯನ್ನೂ ಧಿಕ್ಕರಿಸಿ ಕರಿಕೋಣ ಅರ್ಧಸ್ನಾನಕ್ಕೇ ಹೊಳೆಯಿಂದೆದ್ದು ಮನೆಯ ಕಡೆಗೆ ಹೊರಟುಬಿಟ್ಟಿತು. ಕೆಳಗಡೆ ತಗ್ಗಿನಲ್ಲಿ ಹರಿವ ನೀರಿನಲ್ಲಿ ಎಲ್ಲರೊಂದಿಗೆ ಆಟವಾಡುತ್ತಿದ್ದ ನಾನು ಕಿತ್ತೂರು ರಾಣಿ ಚೆನ್ನಮ್ಮ ಖಡ್ಗಹಿರಿದು ಬಂದಂತೆ ಅಲ್ಲೇ ಬಿದ್ದಿದ್ದ ಸಪೂರ ಕಡ್ಡಿಯೊಂದನ್ನು ಕೈಯಲ್ಲಿ ಹಿಡಿದು ಎದೆಯುಬ್ಬಿಸಿಕೊಂಡು ಬರುತ್ತಿದ್ದ ಕರಿಕೋಣನಿಗೆ ತೋರಿಸಿ  “ಹೇಯ್..” ಅಂದೆ ಅಷ್ಟೆ.. ಚೋಟುದ್ದದ ಸಣಕಲು ಹುಡುಗಿ ತನ್ನ ಮುಂದೆ ನಿಂತು ಕಡ್ಡಿತೋರುವುದೇ.. ಕರಿಕೋಣನ ಅಭಿಮಾನಕ್ಕೆ ಚುಚ್ಚಿದಂತಾಗಿರಬೇಕು..ತಲೆ ಬಾಗಿಸಿಕೊಂಡು ಕೊಂಬು ಮುಂದೆ ಮಾಡಿ ರೋಷಾವೇಶದಿಂದ ಅಟ್ಟಿಸಿಕೊಂಡು ಬರತೊಡಗಿತು.  “ಹೇ..” ಎಂದು ಕೂಗುತ್ತಾ ನನ್ನ ರಕ್ಷಣೆಗೆ ಹೊಳೆಯಿಂದ ಮೊದಲೆದ್ದು ಬಂದವನು ನರಸಿಂಹ. ಏಕೆಂದರೆ ಮುಂದಾಗಬಹುದಾಗಿದ್ದ ಅನಾಹುತಕ್ಕೆ  ಮನೆಯಲ್ಲಿ ದೊಡ್ಡವರಿಂದ  ನಮ್ಮನ್ನು ಹೊಳೆಗೆ ಕರೆದುಕೊಂಡು ಹೋದದ್ದೇಕೆಂದು  ಮೊದಲು ಬೈಸಿಕೊಳ್ಳುವವನು ಅವನೇ. ಭಯ ಗಾಬರಿಯಿಂದ ದಿಕ್ಕೇತೋಚದಂತಾದ ನಾನು ಉಸಿರು ಕಟ್ಟಿಕೊಂಡು ಸತ್ತೆನೋ ಕೆಟ್ಟೆನೋ ಎಂದು ಓಡತೊಡಗಿದೆ. ನನ್ನ ಹಿಂದೆ ರೌದ್ರಾವತಾರ ತಾಳಿ ಹ್ಯಾಂಕ್..ಹ್ಯಾಂಕ್ ಎನ್ನುತ್ತ ಕೊಂಬೆನ್ನುವ ಕತ್ತಿ ಹಿರಿದು ಬರುತ್ತಿರುವ ಕರಿಕೋಣ..ಅದರ ಹಿಂದೆ ಅರ್ಧ ಬಿಚ್ಚಿ ಕಾಲಿಗೆ ತೊಡರುತ್ತಿರುವ ಪಂಚೆಯನ್ನು ಕಿತ್ತು ಕೈಯಲ್ಲಿ ಹಿಡಿದು ತುಂಡು ಲಂಗೋಟಿಯಲ್ಲೇ “ ಹೇ..ಹೇ..” ಎಂದು ಕಂಗಾಲಾಗಿ ಕೂಗುತ್ತಾ ಅರೆನಗ್ನ ನರಸಿಂಹ.. ಅವನ ಹಿಂದೆ “ ಹೋ..” ಎಂದು ಅರಚುತ್ತಾ ಹತ್ತೋ ಹದಿನೈದೋ ಮಕ್ಕಳು.. ತನ್ನ ಹಿಂದೆ ಕೇಳಿಬರುತ್ತಿದ್ದ ಅರಚಾಟಕ್ಕೆ ಕರಿಕೋಣನ ಕೋಪ ರೋಷ ಉಕ್ಕೇರಿ ಇನ್ನಷ್ಟು ಜೋರಾಗಿ ಬೆನ್ನಟ್ಟಿ ಬರತೊಡಗಿತು. ನನ್ನ ಎರಡು ಕಾಲಿನ ಓಟ ಕರಿಕೋಣನ ನಾಲ್ಕು ಕಾಲಿನ ಓಟಕ್ಕೆ ಸಾಟಿಯೇ? ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಕೋಣ ತನ್ನ ಎರಡೂ ಕೊಂಬುಗಳಿಂದ ನನ್ನನ್ನುಎತ್ತಿ ರಸ್ತೆಯ ಬಲಪಕ್ಕದ ಗೇರುಮರದ ಬುಡಕ್ಕೆಸೆದು ಎಡಬದಿಯ ಗುಡ್ಡವನ್ನೇರಿ ಓಡಿಹೋಯಿತು. ಈಗಾದರೆ ಎಂಟೋ ಹತ್ತೋ ಹೊಲಿಗೆ ಬೀಳಬಹುದಾಗಿದ್ದ, ಕೋಣನ ಕೊಂಬು ತಾಗಿ ಸೀಳಿ ರಕ್ತ ಸುರಿಯುತ್ತಿದ್ದ ತೊಡೆಯ ಗಾಯದೊಂದಿಗೆ ,ಸಂಗಡಿಗರ ಭುಜದ ಆಸರೆಯಲ್ಲಿ ಕುಂಟುತ್ತಾ ಮನೆಗೆ ಬರುತ್ತಿದ್ದ ನನ್ನ ಮತ್ತು ನಮ್ಮೆಲ್ಲರ ಚಿಂತೆ, ಮನೆಯಲ್ಲಿ ದೊಡ್ಡವರ ಕಣ್ಣು ತಪ್ಪಿಸಿ ನನ್ನ ಗಾಯಕ್ಕೆ ಹೇಗೆ ಉಪಚಾರ ಮಾಡುವುದು ಎಂಬುದಾಗಿತ್ತು. ಎಲ್ಲರೂ ಹೇಗೋ ಕೊಟ್ಟಿಗೆಯ ಪಕ್ಕದಲ್ಲಿರುವ ಪಣತದ ಮನೆ ಸೇರಿಕೊಂಡೆವು.  ಆಗೆಲ್ಲ ನೋವೆಂದರೆ ಅಯೋಡೆಕ್ಸ್..ಗಾಯವೆಂದರೆ ಪೆನ್ಸಿಲಿನ್  ಅಷ್ಟೆ.. ಮಾವನ ಮಗಳು ಮೆಲ್ಲಗೆ  ಮಹಡಿಗೆ ಹೋಗಿ ಒಂದಿಷ್ಟು  ಹತ್ತಿ, ಹರಿದ ಬಟ್ಟೆ ಮತ್ತೆ ಪೆನ್ಸಿಲಿನ್ ಮುಲಾಮಿನ ಟ್ಯೂಬ್ ತಂದಳು. ಮೊಳಕಾಲಿಗಿಂತ ಚೂರು ಮೇಲೇ ಇರುವ ನನ್ನ ಮೋಟಂಗಿಯಿಂದ ಗಾಯದ ಪಟ್ಟಿ ಮುಚ್ಚಿಡುವುದು ಅಸಾಧ್ಯವೆಂದರಿವಾದಮೇಲೆ ನಮ್ಮೆಲ್ಲರಿಗಿಂತ ವಯಸ್ಸಿನಲ್ಲೂ, ಎತ್ತರದಲ್ಲೂ ಸ್ವಲ್ಪ ದೊಡ್ಡವಳಾದ  ಹಿರಿಮಾವನ ಮಗಳ ಲಂಗವನ್ನು ಕಾಲುಪೂರ ಮುಚ್ಚುವಂತೆ  ತೊಟ್ಟುಕೊಂಡೆ.. ಮುಂದೆ ಗಾಯ ಗುಣವಾಗುವವರೆಗೂ ವಾರಗಟ್ಟಲೇ ಸ್ನಾನ ಮಾಡದೇ, ಹೆಚ್ಚು ನಡೆದಾಡದೇ ಏನೇನು ಪಾಡು ಪಟ್ಟೆನೆಂದು ಬರೆದರೆ ಅದೇ ಇನ್ನೊಂದು ಪ್ರಬಂಧವಾದೀತು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !