ಶುಕ್ರವಾರ, ಸೆಪ್ಟೆಂಬರ್ 20, 2019
29 °C
ದ್ರಾಕ್ಷಿ ತಿನ್ನಲೇಬೇಕು ಎಂದರೇ ಮುಂದಿನ ವರ್ಷದವರೆಗೂ ಕಾಯಲೇಬೇಕು; ಪಡಗಳು ಖಾಲಿ ಖಾಲಿ...

ಹಸಿ ದ್ರಾಕ್ಷಿಯ ಹಂಗಾಮಿಗೆ ತೆರೆ; ಭರ್ಜರಿ ವಹಿವಾಟು..!

Published:
Updated:
Prajavani

ವಿಜಯಪುರ: ಮೂರು ತಿಂಗಳಿನಿಂದ ಭರ್ಜರಿ ವಹಿವಾಟು ನಡೆದಿದ್ದ ಹಸಿ ದ್ರಾಕ್ಷಿ ಹಣ್ಣಿನ ಹಂಗಾಮು ಕ್ಷೀಣಿಸಿದೆ. ಇನ್ನೊಂದೆರೆಡು ವಾರ, ಕೆಲವೆಡೆ ಮಾತ್ರ ದ್ರಾಕ್ಷಿ ಹಣ್ಣು ಸಿಗಲಿದೆ. ನಂತರ ದ್ರಾಕ್ಷಿ ತಿನ್ನಬೇಕು ಎಂದು ಹುಡುಕಾಡಿದರೂ ಎಲ್ಲೂ ದೊರಕದು. ಮುಂದಿನ ವರ್ಷದವರೆಗೂ ಕಾಯಲೇಬೇಕಾದ ಅನಿವಾರ್ಯ ಸೃಷ್ಟಿಯಾಗಲಿದೆ.

ನಗರದ ಹಣ್ಣಿನ ಮಾರುಕಟ್ಟೆಯಲ್ಲಿ ದ್ರಾಕ್ಷಿ ಕಣ್ಮರೆಯಾಗುತ್ತಿದೆ. ರಸ್ತೆ ಬದಿಯಿಡಿ ಮಾವು ಆವರಿಸಿದೆ. ಅಪರೂಪ ಎಂಬಂತೆ ಅಲ್ಲಲ್ಲೇ ದ್ರಾಕ್ಷಿ ಗೊಂಚಲು ಕಾಣುತ್ತಿದ್ದು, ದ್ರಾಕ್ಷಿ ಪ್ರಿಯರು ಹುಡುಕಾಡಿ ಖರೀದಿ ನಡೆಸಿದ್ದಾರೆ.

ಮಾರುಕಟ್ಟೆಗೆ ದ್ರಾಕ್ಷಿ ಆವಕವಾಗುವುದು ಬಹುತೇಕ ಪ್ರಮಾಣದಲ್ಲಿ ತಗ್ಗಿದ್ದರಿಂದ ಧಾರಣೆಯಲ್ಲೂ ಕೊಂಚ ಏರಿಕೆಯಾಗಿದೆ. ಕಪ್ಪು ದ್ರಾಕ್ಷಿ ಸಂಪೂರ್ಣ ಕಣ್ಮರೆಯಾಗಿದ್ದು, ಹಸಿರು ದ್ರಾಕ್ಷಿಯಷ್ಟೇ ಲಭ್ಯವಿದೆ. 98% ಪಡಗಳು ಖಾಲಿ ಖಾಲಿ... ಉಳಿದ ಒಂದೆರೆಡು ಪಡಗಳ ಹಣ್ಣಷ್ಟೇ ಮಾರುಕಟ್ಟೆಗೆ ಆವಕವಾಗುತ್ತಿದೆ.

ಸ್ಥಳೀಯ ಬೇಡಿಕೆಗೆ ಇದು ಸರಿಯಾಗುವುದರಿಂದ ಜಿಲ್ಲೆಯಿಂದ ಹೊರ ರಾಜ್ಯ, ಜಿಲ್ಲೆಗಳಿಗೆ ಇದೀಗ ದ್ರಾಕ್ಷಿ ರಫ್ತಾಗುತ್ತಿಲ್ಲ. ವಿದೇಶಕ್ಕೂ ರಫ್ತಾಗುವುದು ಮುಗಿದಿದೆ.

ಕೆ.ಜಿ.ಗೆ ₹ 50

‘ಪ್ರಸ್ತುತ ಮಾರುಕಟ್ಟೆಯಲ್ಲಿ ಹಸಿರು ದ್ರಾಕ್ಷಿ ಒಂದು ಕೆ.ಜಿ.ಗೆ ₹ 50ರಂತೆ ಮಾರಾಟವಾಗುತ್ತಿದೆ. ಕಪ್ಪು ದ್ರಾಕ್ಷಿ ಧಾರಣೆ ₹ 60 ಇದ್ದರೂ ಬೇಡಿಕೆಯಷ್ಟು ಉತ್ಪನ್ನ ಮಾರುಕಟ್ಟೆಯಲ್ಲಿಲ್ಲ. ಗ್ರಾಹಕರು ಖರೀದಿಸಲು ಮುಂದಾದರೂ ಸಿಗುತ್ತಿಲ್ಲ’ ಎಂದು ವಿಜಯಪುರದ ಹಣ್ಣಿನ ವ್ಯಾಪಾರಿ ಅಜರುದ್ಧೀನ್‌ ಬಾಗವಾನ ತಿಳಿಸಿದರು.

‘ಹೊರಗಿನಿಂದ ದ್ರಾಕ್ಷಿ ಮಾರುಕಟ್ಟೆಗೆ ಬರುತ್ತಿಲ್ಲ. ಸ್ಥಳೀಯ ದ್ರಾಕ್ಷಿಯೇ ಕೊಂಚ ಪ್ರಮಾಣದಲ್ಲಿ ಬರುತ್ತಿದೆ. ಎಂಟು ದಿನ ಕಳೆದರೇ ಇಡೀ ಮಾರುಕಟ್ಟೆ ಸುತ್ತಿದರೂ ದ್ರಾಕ್ಷಿ ಸಿಗಲ್ಲ. ಫೆಬ್ರುವರಿಯಲ್ಲಿ ಆರಂಭಗೊಂಡ ಹಂಗಾಮು ಮೇ ನಲ್ಲಿ ಪೂರ್ಣಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.

‘ಹಿಂದಿನ ವರ್ಷದುದ್ದಕ್ಕೂ ಧಾರಣೆ ಹಸಿರು ದ್ರಾಕ್ಷಿ ಕೆ.ಜಿ.ಗೆ ₹ 30ರಿಂದ ₹ 40, ಕಪ್ಪು ದ್ರಾಕ್ಷಿ ₹ 40ರಿಂದ ₹ 60ರ ತನಕವೂ ವಹಿವಾಟು ನಡೆದಿತ್ತು. ಈ ಬಾರಿ ಹಸಿರು ದ್ರಾಕ್ಷಿ ₹ 40ರಿಂದ ₹ 50, ಕಪ್ಪು ದ್ರಾಕ್ಷಿ ₹ 50ರಿಂದ ₹ 60ರ ಧಾರಣೆಯಲ್ಲಿ ಮಾರಾಟವಾಗಿದ್ದು, ಕೆ.ಜಿ.ಗೆ ₹ 10 ಹೆಚ್ಚಿತ್ತು.

ಇದರಿಂದ ಬೆಳೆಗಾರರು, ಮಾರಾಟಗಾರರಿಗೆ ಚಲೋ ಲಾಭವಾಯ್ತು. ಗ್ರಾಹಕರಿಗೆ ಕೊಂಚ ಹೊರೆ ಹೆಚ್ಚಿತು. ಆದರೂ ಜನರು ಬೇಸಿಗೆಯ ಆರಂಭದ ದಿನಗಳಲ್ಲಿ ದ್ರಾಕ್ಷಿಯನ್ನು ಮುಗಿಬಿದ್ದು ಖರೀದಿಸಿ, ಸವಿದರು’ ಎಂದು ಅಜರುದ್ಧೀನ್‌ ಹೇಳಿದರು.

ಮಣೂಕಕ್ಕೆ ಬೆಳೆಗಾರರ ಒಲವು..!

‘ಈ ಹಿಂದಿನ ವರ್ಷಗಳಲ್ಲಿ ಒಣದ್ರಾಕ್ಷಿ (ಮಣೂಕ) ಧಾರಣೆ ತೀವ್ರ ಕುಸಿತಕ್ಕೀಡಾಗುತ್ತಿದ್ದರಿಂದ ಬಹುತೇಕ ಬೆಳೆಗಾರರು ತಮ್ಮ ಬೆಳೆಯಲ್ಲಿ ಒಂದು ಪಾಲನ್ನು ಹಸಿ ದ್ರಾಕ್ಷಿಯ ಮಾರಾಟಕ್ಕೆ ಮೀಸಲಿಡುತ್ತಿದ್ದರು. ಇದರಿಂದ ಕೊಂಚ ಲಾಭ ಪಡೆಯುತ್ತಿದ್ದರು.

ಆದರೆ ಈ ಬಾರಿ ದ್ರಾಕ್ಷಿ ಹಂಗಾಮು ಆರಂಭಕ್ಕೂ ಮುನ್ನಾ ದಿನಗಳಿಂದ ಮಣೂಕದ ಧಾರಣೆ ಸ್ಥಿರವಾಗಿದ್ದು, ಹೆಚ್ಚಿನವರು ಎಲ್ಲವನ್ನೂ ಮಣೂಕ ಮಾಡಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಹಸಿ ದ್ರಾಕ್ಷಿಯ ಧಾರಣೆ ಕೊಂಚ ಹೆಚ್ಚಿದ್ದು, ಮಾರಾಟವೂ ಬಿರುಸಾಗಿತ್ತು. ಹಸಿ ದ್ರಾಕ್ಷಿಯನ್ನೇ ಮಾರಿದ ಬೆಳೆಗಾರರಿಗೂ ಹೆಚ್ಚಿನ ಲಾಭ ದೊರಕಿದೆ’ ಎನ್ನುತ್ತಾರೆ ಬಬಲೇಶ್ವರ ತಾಲ್ಲೂಕಿನ ಉಪ್ಪಲದಿನ್ನಿಯ ದ್ರಾಕ್ಷಿ ಬೆಳೆಗಾರ ಸೋಮನಾಥ ಬಿರಾದಾರ.

Post Comments (+)