ಹಸಿರುಳಿಸಲು ಮರಗಣತಿಯ ಹಾದಿ

7
ಯುನೈಟೆಡ್‌ ಬೆಂಗಳೂರು ಸಂಘಟನೆ ಆಶ್ರಯದಲ್ಲಿ ಅಭಿಯಾನ

ಹಸಿರುಳಿಸಲು ಮರಗಣತಿಯ ಹಾದಿ

Published:
Updated:
Deccan Herald

ಬೆಂಗಳೂರು: ಬೃಹತ್‌ ಮರಗಳು ನಗರದ ಶ್ವಾಸಕೋಶ. ಅವುಗಳನ್ನು ನಾಶಪಡಿಸದಿರಿ... ಇದು ಇಂದಿರಾನಗರದ ಬಿಡಿಎ ಕಾಂಪ್ಲೆಕ್ಸ್‌ ಬಳಿ ಶುಕ್ರವಾರ ಯುನೈಟೆಡ್‌ ಬೆಂಗಳೂರು ಸಂಘಟನೆ ಆಶ್ರಯದಲ್ಲಿ ನಡೆದ ಮರಗಣತಿಯ ಸಂದರ್ಭ ಕೇಳಿಬಂದ ಧ್ವನಿ. 

ಸಂಘಟನೆ ಮುಖಂಡರು, ಸ್ಥಳೀಯರು, ಪುಟ್ಟ ಮಕ್ಕಳು ಎಲ್ಲರೂ ಒಂದೆಡೆ ಸೇರಿದ್ದರು. ಸದ್ಯ ಇರುವ ಸಂಕೀರ್ಣದ ಪ್ರದೇಶದಲ್ಲಿ ಮರಗಳನ್ನು ತೆರವು ಮಾಡಿ ದೊಡ್ಡ ವಾಣಿಜ್ಯ ಸಂಕೀರ್ಣ ಕಟ್ಟಲು ಬಿಡಿಎ ಯೋಜನೆ ರೂಪಿಸಿದೆ. ಇದರ ವಿರುದ್ಧ ಯುನೈಟೆಡ್‌ ಬೆಂಗಳೂರು ಸಂಘಟನೆ ಆಕ್ರೋಶ ಹೊರಹಾಕಿದೆ. 

ಯಾವೆಲ್ಲಾ ಮರಗಳಿವೆ?: ‘ರೈನ್‌ ಟ್ರೀ, ಸಿಲ್ವರ್‌ ಓಕ್, ಅರಳಿ, ಆಲ, ಬಸವನಪಾದ, ಚೆರ್ರಿ, ಸಂಪಿಗೆ, ಸೀಬೆ, ನೆಲ್ಲಿಕಾಯಿ, ನಿಂಬೆ, ಸೀತಾಫಲ ಮರಗಳು ಇಲ್ಲಿವೆ. ಸ್ಥಳೀಯರ ಪಾಲಿಗೆ ಇದೊಂದು ಉದ್ಯಾನದಂತೆ. ವಾಣಿಜ್ಯ ಸಂಕೀರ್ಣ ತಲೆ ಎತ್ತಿದರೆ ಇಷ್ಟೂ ಮರಗಳಿಗೆ ಕುತ್ತು ಖಚಿತ’ ಎಂದು ಹಿರಿಯರು ಮಕ್ಕಳಿಗೆ ತಿಳಿಹೇಳಿದರು. 

‘ಹಾಲಿ ಇರುವ ವಾಣಿಜ್ಯ ಸಂಕೀರ್ಣದ ಉತ್ತರ ದಿಕ್ಕಿನಲ್ಲಿ ಸುಮಾರು 75 ಮೀಟರ್‌ ಅಂತರದಲ್ಲಿ ಭಿನ್ನಮಂಗಲ ಕೆರೆ ಇದೆ. 25 ಮೀಟರ್‌ ಅಂತರ
ದಲ್ಲಿ ರಾಜಕಾಲುವೆ ಇದೆ. ಕೆರೆ, ಕಾಲುವೆಯ ಮೀಸಲು ಪ್ರದೇಶಗಳಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ನಡೆಸುವಂತಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶ ಇದೆ. ವೃಕ್ಷ ಸಂಕುಲ, ಹಸಿರು ಪರಿಸರದ ಉಳಿವಿಗಾಗಿ ಮರಗಣತಿ ಹೆಸರಿನಲ್ಲಿ ಹೋರಾಟ ಆರಂಭಿಸಿದ್ದೇವೆ. ಇಲ್ಲಿನ ಜೀವ ವೈವಿಧ್ಯ ಉಳಿಯಬೇಕು. ಹಕ್ಕಿಗಳ ಕಲರವ ಕೇಳಬೇಕು. ಶುದ್ಧಗಾಳಿ ಸಿಗಬೇಕು. ಈ ನಿಟ್ಟಿನಲ್ಲಿ ಹೋರಾಟ ಸಾಗಿದೆ’ ಎಂದು ಯುನೈಟೆಡ್‌ ಬೆಂಗಳೂರು ಸದಸ್ಯರು ಹೇಳಿದರು. 

150 ಜನ ಶುಕ್ರವಾರ ನಡೆದ ಸಮೀಕ್ಷೆಯಲ್ಲಿ ಭಾಗವಹಿಸಿದರು. ಸುಮಾರು ನೂರು ಮರಗಳು, ಅವುಗಳ ವಿಶೇಷವನ್ನು ಗುರುತಿಸಿದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ಮರಗಣತಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್‌ಆ್ಯಪ್‌ನಲ್ಲಿ ಮರಗಣತಿ ಚಿತ್ರಗಳು, ಗಣ್ಯರು ಬೆಂಬಲ ಸೂಚಿಸಿದ ಸಂದೇಶಗಳು ಹರಿದಾಡಿವೆ. ಇಲ್ಲಿ ವಾಣಿಜ್ಯ ಸಂಕೀರ್ಣದ ಬದಲು ಉದ್ಯಾನ ನಿರ್ಮಿಸುವಂತೆ ಒತ್ತಾಯವೂ ಕೇಳಿಬಂದಿದೆ.

ಸಂಸದ ರಾಜೀವ ಚಂದ್ರಶೇಖರ್ ಸಹ ಬೆಂಬಲ ಸೂಚಿಸಿದ್ದಾರೆ. ವೃಕ್ಷ ರಕ್ಷಣೆ ಅಭಿಯಾನ ಎರಡು ಹಂತಗಳಲ್ಲಿ ನಡೆಯಲಿದೆ. ಇಂದು ವಾಣಿಜ್ಯ ಸಂಕೀರ್ಣದ ಉತ್ತರ ಭಾಗದಿಂದ ಆರಂಭವಾಗಿದೆ. ಉಳಿದ ಗಣತಿ ಇನ್ನೂ ಒಂದೆರಡು ದಿನಗಳಲ್ಲಿ ನಡೆಯಲಿದೆ. ಮರಗಳ ಸುತ್ತಳತೆ ಶಿರೋಭಾಗದ ಅಳತೆ, ಜಾತಿ, ವರ್ಷಗಳನ್ನು ಗಣತಿ ವೇಳೆ ಗುರುತಿಸಲಾಗಿದೆ ಎಂದು ಸಂಘಟನೆಯ ಮುಖಂಡ, ಪ್ರಾಜೆಕ್ಟ್‌ ವೃಕ್ಷದ ಸಂಸ್ಥಾಪಕ ವಿಜಯ್‌ ನಿಶಾಂತ್‌ ಹೇಳಿದರು.

ಆ.22ರಂದು ಈ ಸಮೀಕ್ಷೆಯ ವರದಿಯನ್ನು ಪ್ರಕಟಿಸಲಾಗುವುದು. ಸಾರ್ವಜನಿಕರಿಗೆ ಲಭ್ಯವಾಗುವಂತೆ ಜಾಲತಾಣದಲ್ಲಿಯೂ ಪ್ರಕಟಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.  ವಾಣಿಜ್ಯ ಸಂಕೀರ್ಣ ನಿರ್ಮಾಣ ಯೋಜನೆ ಇನ್ನೂ ಶೈಶವಾವಸ್ಥೆಯಲ್ಲಿದೆ. ಈ ಹಂತದಲ್ಲಿ ಏನನ್ನೂ ಹೇಳಲಾಗದು ಎಂದು ವಾಣಿಜ್ಯ ಸಂಕೀರ್ಣದ ಉಸ್ತುವಾರಿ, ಕಾರ್ಯಪಾಲಕ ಎಂಜಿನಿಯರ್‌ ದಯಾನಂದ್‌ ಪ್ರತಿಕ್ರಿಯಿಸಿದರು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !