ಹಸಿರು ಮಾರ್ಗ: ಇನ್ನೂ ಸಿಕ್ಕಿಲ್ಲ 6 ಬೋಗಿ ಸೌಲಭ್ಯ

7
ನಮ್ಮ ಮೆಟ್ರೊ: ಪರೀಕ್ಷಾರ್ಥ ಸಂಚಾರ ಆರಂಭವಾಗಿ ಕಳೆಯಿತು ತಿಂಗಳು

ಹಸಿರು ಮಾರ್ಗ: ಇನ್ನೂ ಸಿಕ್ಕಿಲ್ಲ 6 ಬೋಗಿ ಸೌಲಭ್ಯ

Published:
Updated:

ಬೆಂಗಳೂರು: ‘ಆರು ಬೋಗಿಗಳ ಎರಡು ಮೆಟ್ರೊ ರೈಲುಗಳು ಡಿಸೆಂಬರ್‌ ತಿಂಗಳಿನಿಂದ ಸಂಚಾರ ಆರಂಭಿಸಲಿವೆ. ಇದರಲ್ಲಿ ಒಂದು ರೈಲನ್ನು ಉತ್ತರ–ದಕ್ಷಿಣ ಕಾರಿಡಾರ್‌ನಲ್ಲಿ (ಹಸಿರು ಮಾರ್ಗ) ಓಡಿಸಲಿದ್ದೇವೆ’

ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ಅವರು 2018ರ ನವೆಂಬರ್‌ 22ರಂದು ನೀಡಿದ್ದ ಹೇಳಿಕೆ ಇದು. ಇದಾಗಿ ತಿಂಗಳೆರಡು ಕಳೆದರೂ ಆರು ಬೋಗಿಯ ಹೊಸ ರೈಲುಗಳು ಪ್ರಯಾಣಿಕರ ಬಳಕೆಗೆ ಲಭಿಸಿಲ್ಲ. 

ಆರು ಬೋಗಿಯ ಎರಡು ರೈಲುಗಳು ತಿಂಗಳುಗಳಿಂದ ಪರೀಕ್ಷಾರ್ಥ ಸಂಚಾರ ನಡೆಸುತ್ತಲೇ ಇವೆ. ಅದರಲ್ಲಿ ಒಂದು ರೈಲನ್ನು ಹಸಿರು ಮಾರ್ಗದಲ್ಲಿ ಪ್ರಾಯೋಗಿಕವಾಗಿ ಓಡಿಸಲಾಗುತ್ತಿದೆ. ಆದರೆ, ಅದನ್ನು ಸಾರ್ವಜನಿಕ ಬಳಕೆಗೆ ಒದಗಿಸಲು ನಿಗಮ ಮೀನಮೇಷ ಎಣಿಸುತ್ತಿದೆ.

‘ನೇರಳೆ ಹಾಗೂ ಹಸಿರು ಮಾರ್ಗಗಳಲ್ಲಿ ಆರು ಬೋಗಿಗಳ ತಲಾ ಒಂದು ರೈಲು ಪರೀಕ್ಷಾರ್ಥ ಸಂಚಾರ ನಡೆಸುತ್ತಿದೆ. ಶೀಘ್ರದಲ್ಲೇ ಪ್ರಯಾಣಿಕರಿಗೂ ಈ ರೈಲುಗಳು ಲಭ್ಯ ಆಗಲಿವೆ’ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್‌.ಯಶವಂತ ಚೌಹಾಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಳಂಬ ಏಕೆ ಎಂಬ ಪ್ರಶ್ನೆಗೆ, ‘ಆದಷ್ಟು ಶೀಘ್ರವೇ ಈ ರೈಲುಗಳು ವಾಣಿಜ್ಯ ಸಂಚಾರ ಆರಂಭಿಸಲಿವೆ. ಸಾಧ್ಯವಾದರೆ ಜನವರಿ ತಿಂಗಳ ಅಂತ್ಯದೊಳಗೆ ಅವು ಪ್ರಯಾಣಿಕರಿಗೆ ಲಭ್ಯವಾಗುವಂತೆ  ನೋಡಿಕೊಳ್ಳುತ್ತೇವೆ’ ಎಂದರು.

ಹಸಿರು ಮಾರ್ಗಕ್ಕೆ (ಉತ್ತರ–ದಕ್ಷಿಣ ಕಾರಿಡಾರ್‌) ಹೋಲಿಸಿದರೆ ನೇರಳೆ ಮಾರ್ಗದಲ್ಲಿ (ಪೂರ್ವ–ಪಶ್ಚಿಮ ಕಾರಿಡಾರ್‌) ಪ್ರಯಾಣಿಕರ ಸಂಖ್ಯೆ ಜಾಸ್ತಿ. ಹಸಿರು ಮಾರ್ಗದಲ್ಲಿ ದಟ್ಟಣೆ ಅವಧಿಯಲ್ಲಿ (ಬೆಳಿಗ್ಗೆ 8.30ರಿಂದ 10.30 ಹಾಗೂ ಸಂಜೆ 4.30ರಿಂದ 6.30) ಒಂದು ಗಂಟೆಗೆ ಸರಾಸರಿ 10 ಸಾವಿರ ಮಂದಿ ಸಂಚರಿಸುತ್ತಾರೆ. ಆದರೆ, ನೇರಳೆ ಮಾರ್ಗದಲ್ಲಿ 19 ಸಾವಿರಕ್ಕೂ ಹೆಚ್ಚು ಮಂದಿ ಸಂಚರಿಸುತ್ತಾರೆ. ದಟ್ಟಣೆ ಅವಧಿಯಲ್ಲಿ ಹಸಿರು ಮಾರ್ಗದ ರೈಲುಗಳೂ ಪ್ರಯಾಣಿಕರಿಂದ ತುಂಬಿರುತ್ತವೆ.

‘ಹಸಿರು ಮಾರ್ಗದಲ್ಲೂ ಕೆಲವೊಮ್ಮೆ ರೈಲಿನ ಒಳಗೆ ಕಾಲಿಡಲೂ ಜಾಗ ಸಿಗದಷ್ಟು ದಟ್ಟಣೆ ಇರುತ್ತದೆ. ಈ ಮಾರ್ಗದಲ್ಲೂ 6 ಬೋಗಿಗಳ ರೈಲು ಸಂಚಾರ ಆರಂಭಿಸಿದರೆ ಪ್ರಯಾಣಿಕರಿಗೆ, ಅದರಲ್ಲೂ ನಿತ್ಯ ಕೆಲಸಕ್ಕೆ ಹೋಗುವವರಿಗೆ ಅನುಕೂಲವಾಗುತ್ತದೆ’ ಎಂದು ಮಹಾಲಕ್ಷ್ಮೀ ಬಡಾವಣೆಯ ಸುಧೀಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜಕಾರಣಿಗಳಿಗೆ ಕಾಯುತ್ತಿದೆಯೇ ಬಿಎಂಆರ್‌ಸಿಎಲ್‌?

ಆರು ಬೋಗಿಗಳ ಎರಡು ಹೊಸ ರೈಲುಗಳನ್ನು ಲೋಕಾರ್ಪಣೆ ಮಾಡಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರಿಗಾಗಿ ನಿಗಮವು ಕಾಯುತ್ತಿದೆ. ಹಾಗಾಗಿಯೇ ಅವುಗಳು ಸಾರ್ವಜನಿಕ ಬಳಕೆಗೆ ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

‘ಮೊದಲ ಬಾರಿ ಆರು ಬೋಗಿಯ ಮೆಟ್ರೊ ರೈಲು ಸಂಚಾರ ಆರಂಭಿಸುವಾಗ ಲೋಕಾರ್ಪಣೆ ಸಮಾರಂಭ ನಡೆಸುವುದರಲ್ಲಿ ತಪ್ಪಿಲ್ಲ. ಆದರೆ, ಪ್ರತಿ ಬಾರಿ ಇಂತಹ ಹೊಸ ರೈಲು ಸೇರ್ಪಡೆಯಾದಾಗಲೂ ಅದನ್ನು ಲೋಕಾರ್ಪಣೆಗೊಳಿಸಲು ಮುಖ್ಯಮಂತ್ರಿಗಾಗಿ ಕಾಯುವುದರಲ್ಲಿ ಅರ್ಥವಿಲ್ಲ’ ಎಂದು ಬಸವೇಶ್ವರನಗರದ ಅಭಿಷೇಕ್‌ ತಿಳಿಸಿದರು.

ಮುಖ್ಯಮಂತ್ರಿಯವರು ಆರು ಬೋಗಿಗಳ ಮೊದಲ ರೈಲನ್ನು 2018ರ ಜೂನ್‌ 22ರಂದು ಲೋಕಾರ್ಪಣೆ ಮಾಡಿದ್ದರು. ನಂತರ ಅಕ್ಟೋಬರ್‌ 4ರಂದು ಇನ್ನೊಂದು ಹಾಗೂ ನವೆಂಬರ್‌ 22ರಂದು ಮತ್ತೊಂದು ಆರು ಬೋಗಿಯ ರೈಲಿಗೆ ಚಾಲನೆ ನೀಡಿದ್ದರು.

ಕನ್ನಡ ನಾಡು–ನುಡಿಯ ಕಾಳಜಿ

ಮೆಟ್ರೊ ರೈಲುಗಳನ್ನು ಕನ್ನಡ ನಾಡು ನುಡಿಯನ್ನು ಪರಿಚಯಿಸುವ ಕಾರ್ಯವನ್ನು ನಿಗಮವು ಕೈಗೊಂಡಿದ್ದು, ಇದಕ್ಕೆ ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜ್ಞಾನಪೀಠ ಪ್ರಶಸ್ತಿ ವಿಜೇತ ಕರುನಾಡಿನ ಸಾಹಿತಿಗಳು, ಖ್ಯಾತ ಕ್ರೀಡಾಪಟುಗಳು, ವಿವಿಧ ಕ್ಷೇತ್ರಗಳ 
ಸಾಧಕರು, ರಾಜ್ಯದ ಪ್ರತಿ ಜಿಲ್ಲೆಯಲ್ಲಿರುವ ಪ್ರಸಿದ್ಧ ಯಾತ್ರಾಸ್ಥಳಗಳ ವಿವರವನ್ನು ಬೋಗಿಗಳಲ್ಲಿನ ಸೂಚನಾ ಪರದೆಯಲ್ಲಿ ಬಿತ್ತರಿಸಲಾಗುತ್ತಿದೆ.

‘ದೇಶ ವಿದೇಶಗಳಿಂದ ಬಂದವರೂ ಸೇರಿದಂತೆ ಲಕ್ಷಾಂತರ ಮಂದಿ ನಿತ್ಯ ಮೆಟ್ರೊಗಳಲ್ಲಿ ಪ್ರಯಾಣಿಸುತ್ತಾರೆ. ಅವರಿಗೆ ನಮ್ಮ ನಾಡು ನುಡಿಯ ಪರಿಚಯ ಮಾಡಿಕೊಡುವುದು ಉತ್ತಮ ಪ್ರಯತ್ನ. ಕನ್ನಡ ನಾಡಿನ ವಿಶೇಷತೆಗಳನ್ನು ನೋಡುವಾಗ ನಮ್ಮಲ್ಲೂ ಹೆಮ್ಮೆಯ ಭಾವ ಮೂಡುತ್ತದೆ’ ಎಂದು ಪ್ರಯಾಣಿಕ ರಾಘವೇಂದ್ರ ತಿಳಿಸಿದರು.

‘ನಮ್ಮಲ್ಲಿ  ಎಷ್ಟು ಜಿಲ್ಲೆಗಳಿವೆ ಎಂಬುದೇ ಅನೇಕರಿಗೆ ಗೊತ್ತಿಲ್ಲ. ಈ ಬಗ್ಗೆ  ಪರಿಚಯವಾಗಲಿ ಎಂಬ ಕಾರಣಕ್ಕೆ ನಾವು ಆಯಾ ಜಿಲ್ಲೆಗಳ ವಿಶೇಷತೆಗಳ ಕುರಿತ ವಿವರವನ್ನು ಸೂಚನಾ ಪರದೆಗಳಲ್ಲಿ ಬಿತ್ತರಿಸಲು ಆರಂಭಿಸಿದ್ದೇವೆ. ಇದಕ್ಕೆ ಉತ್ತಮ ಸ್ಪಂದನೆಯೂ ವ್ಯಕ್ತವಾಗಿದೆ’ ಎಂದು ನಿಗಮದ ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !