ಹಸಿರು ನಿತ್ಯೋತ್ಸವದ ಮೂಗನೂರು ಶಾಲೆ

ಗುರುವಾರ , ಜೂನ್ 27, 2019
29 °C
ಶಾಲೆಗೆ ಗ್ರಾಮಸ್ಥರ ನೆರವಿನ ಮಹಾಪೂರ

ಹಸಿರು ನಿತ್ಯೋತ್ಸವದ ಮೂಗನೂರು ಶಾಲೆ

Published:
Updated:
Prajavani

ಹೈದ್ರಾಬಾದ್ ಕರ್ನಾಟಕ ಭಾಗದ ಪರಿಸರವೆಂದಾಕ್ಷಣ ನೆನಪಾಗುವುದು ರಣ ರಣ ಬಿರುಬಿಸಿಲು. ಆದರೆ, ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಮೂಗನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬನ್ನಿ. ಆ ಶಾಲೆಯ ಅಂಗಳದ ಹಸಿರು ಚಪ್ಪರ ನಿಮ್ಮನ್ನು ಸ್ವಾಗತಿಸುತ್ತದೆ. ಅಲ್ಲಿರುವ ಹೂ ಬಳ್ಳಿಗಳು, ಹಕ್ಕಿಗಳ ಇಂಚರ, ಹಸಿರು ಬಳ್ಳಿಗಳನ್ನೇ ಮರೆಯಾಗಿಸಿಕೊಂಡು ಕಣ್ಣಮುಚ್ಚಾಲೆ ಆಡುತ್ತಿರುವ ಶಾಲಾ ಮಕ್ಕಳು, ದುಂಬಿಗಳ ಝೇಂಕಾರ, ಹುಲ್ಲಿನ ಹಸಿರ ಹಾಸು, ಅಂಗಳದ ತುಂಬಾ ಮರಗಳು, ಅದರ ಮೇಲೆ ಪಕ್ಷಿಗಳ ಉಲಿವು, ಬಣ್ಣದ ಚಿಟ್ಟೆಗಳು.. ಹೀಗೆ ಒಂದು ಕ್ಷಣ ‘ಇದು ಸರ್ಕಾರಿ ಶಾಲೆಯೇ’ ಎಂದು ಅಚ್ಚರಿ ಮೂಡಿಸುತ್ತದೆ.

ಸರ್ಕಾರಿ ಶಾಲೆಯೊಂದು ಇಷ್ಟೆಲ್ಲ ‘ಹಸಿರು’ ತುಂಬಿಕೊಳ್ಳಲು ಕಾರಣ, ಇಲ್ಲಿನ ಶಿಕ್ಷಕರು ಪರಿಸರ ಪ್ರೇಮಿಗಳು. ಜತೆಗೆ, ಈ ಗ್ರಾಮದ ಗ್ರಾಮಸ್ಥರು. ಒಣ ಬೇಸಾಯದ ಜೀವನವಾದರೂ, ಈ ಶಾಲೆ ಅಭಿವೃದ್ಧಿಗೆ ಅವರು ಕೊಡುಗೈ ದೊರೆಗಳಾಗಿದ್ದಾರೆ. ಶಾಲೆಯ ಮುಖ್ಯಶಿಕ್ಷಕ ಕೆ.ಎಸ್.ಅಥಣಿ ಸೇರಿದಂತೆ ಎಲ್ಲ ಶಿಕ್ಷಕರೂ ಹಸಿರಿನ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಶಾಲೆಯ ಅಂದವನ್ನು ಹೆಚ್ಚಿಸಲು ಶಿಕ್ಷಕರೇ ಕೈ ಕೆಸರು ಮಾಡಿಕೊಂಡಿದ್ದಾರೆ. ತಮಗೆ ಇಷ್ಟವಾದ ಸಸಿಗಳನ್ನು ಹುಡುಕಾಡಿ ತಂದಿದ್ದಾರೆ. ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳು ಹೊರಗಿನಿಂದ ಮಣ್ಣು ತಂದು ಕುಂಡಗಳಿಗೆ ತುಂಬಿಸಿ, ಗಿಡ ನೆಟ್ಟಿದ್ದಾರೆ. ನೀರೆರೆದಿದ್ದಾರೆ. ಗ್ರಾಮದ ಹುಚ್ಚೀರಪ್ಪ ಕಮತರ ಎಂಬ ಅಂಗವಿಕಲ ಯುವಕನೊಬ್ಬ ಪ್ರತಿಫಲಾಪೇಕ್ಷೆ ಇಲ್ಲದೆ ಶಿಕ್ಷಕರಿಗಿತ ಹೆಚ್ಚು ಶ್ರಮವಹಿಸಿ ಗಿಡಮರಗಳನ್ನು ಮಕ್ಕಳಂತೆ ಜೋಪಾನ ಮಾಡುತ್ತಿದ್ದಾನೆ. ಶಾಲಾ ರಜೆಯ ಅವಧಿಯಲ್ಲಿ ಈ ಯುವಕನೇ ಶಾಲಾ ತೋಟಕ್ಕೆ ಕಾವಲುಗಾರ.

ವಿದ್ಯಾರ್ಥಿಗಳಿಗೆ ಪರಿಸರ ಪಾಠ
ಶಾಲೆಯ ಅಂಗಳದಷ್ಟೇ ವಿದ್ಯಾರ್ಥಿಗಳ ಮನಕ್ಕೂ ಶಿಕ್ಷಕರು ಹಸಿರು ಪ್ರೀತಿಯನ್ನು ಧಾರೆ ಎರೆದಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ವಿರಾಮದ ಸಮಯದಲ್ಲಿ ಹುಲ್ಲು ಹಾಸಿನ ಮೇಲೆ ಆಟ ಆಡುತ್ತಾರೆ, ಹೂಬಳ್ಳಿಗಳನ್ನು ತಮ್ಮದೇ ಭಾಷೆಯಿಂದ ಮಾತನಾಡಿಸುತ್ತಾರೆ. ಅಳಿಲು, ದುಂಬಿಗಳು ಬಂದು ಉಚಿತವಾಗಿ ಪರಿಸರ ಪಾಠ ಮಾಡಿ ಹೋಗುತ್ತಿವೆ.

ಗಿಡದಲ್ಲಿ ಹಣ್ಣುಗಳಾದಾಗ ಕಲರವದೊಂದಿಗೆ ಬರುವ ಗಿಳಿ ದಂಡು ಹಣ್ಣು ತಿನ್ನುವುದನ್ನು ಖುಷಿಯಿಂದ ನೋಡುವ ಮಕ್ಕಳು ತೃಪ್ತಿಪಟ್ಟುಕೊಳ್ಳುತ್ತಾರೆ. ‘ನಗರ ಶಾಲೆ, ಗ್ರಾಮೀಣ ಶಾಲೆ ಎಂಬ ತಾರತಮ್ಯಕ್ಕಿಂತ ಶಾಲೆಯನ್ನು ಪ್ರೀತಿಸಿ, ಶಿಕ್ಷಕರನ್ನು ಪ್ರೋತ್ಸಾಹಿಸುವ ಜನ ಇಲ್ಲಿದ್ದಾರೆ. ಮಕ್ಕಳ ಪ್ರತಿಭೆಯನ್ನು ಕಂಡು ಹಿಗ್ಗುತ್ತಾರೆ. ‘ನಮ್ಮ ಪ್ರಯತ್ನ ಬೆಂಬಲಿಸುವ ಗ್ರಾಮಸ್ಥರು, ಮಕ್ಕಳಿಗೆ ಪ್ರಿಯರಾಗಿ ಪಾಠ ಮಾಡುವ ಗುರುಬಳಗವಿದೆ. ಅದೇ ನಮಗೆ ಹೆಮ್ಮೆಯ ವಿಷಯ’ ಎಂದು ಮುಖ್ಯಶಿಕ್ಷಕ ಕೆ.ಎಸ್‌.ಅಥಣಿ ಹೆಮ್ಮೆಯಿಂದ ಹೇಳುತ್ತಾರೆ.

ಬದಲಾದ ಶಾಲಾ ಪರಿಸರ
ಶಾಲೆಯ ಬಾಹ್ಯ ಪರಿಸರವಷ್ಟೇ ಅಲ್ಲ, ಕೊಠಡಿಗಳು, ಪಾಠ, ಪ್ರಯೋಗಗಳಲ್ಲೂ ಮುಂದಿದೆ. ಶಾಲೆಯೊಳಗೆ ಕಾಲಿಟ್ಟರೆ ಶಿಕ್ಷಕರು ತಮ್ಮ ವಿಷಯಕ್ಕೆ ತಕ್ಕಂತೆ ತಯಾರಿಸಿರುವ ರಾಶಿ ರಾಶಿ ಪಾಠೋಪಕರಣಗಳು, ವಿಜ್ಞಾನ ಶಿಕ್ಷಕರು ತಯಾರಿಸಿರುವ ವಿವಿಧ ಸಾಧನಗಳ ಪ್ರದರ್ಶನವೇ ನಿಮ್ಮ ಕಣ್ಣೆದುರು ತೆರೆದುಕೊಳ್ಳುತ್ತದೆ.

ಕೆಲವು ಕೊಠಡಿಗಳಿಗೆ ಡಿಟಿಎಚ್ ರೇಡಿಯೊ ಸಂಪರ್ಕ ನೀಡಿದ್ದಾರೆ. ಮುಖ್ಯ ಶಿಕ್ಷಕರು ತಮ್ಮ ಕೋಣೆಯಲ್ಲಿ ಕುಳಿತೇ ಪ್ರತಿ ತರಗತಿಯಲ್ಲೂ ನಡೆಯುತ್ತಿರುವ ಬೋಧನೆ ನೋಡುತ್ತಾರೆ. ಸಾಲದ್ದಕ್ಕೆ ತಾವು ಅಲ್ಲಿಂದಲೇ ಶಿಕ್ಷಕರಿಗೆ ಅಥವಾ ಮಕ್ಕಳಿಗೆ ಧ್ವನಿ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಎಲ್‌ಸಿಡಿ ಮೂಲಕ ಪಾಠ, ಕಂಪ್ಯೂಟರ್ ಶಿಕ್ಷಣ, ದೂರದರ್ಶನ, ಶಾಲೆಯ ಸಭಾಂಗಣದಲ್ಲಿ ಕಾರ್ಯಕ್ರಮ ಹೀಗೆ ಎಲ್ಲವುಗಳಲ್ಲೂ ತಂತ್ರಜ್ಞಾನ ಇಲ್ಲಿ ಬಳಕೆಯಾಗುತ್ತಿದೆ. ಮಕ್ಕಳು ಎಲ್ಲವನ್ನೂ ಸದುಪಯೋಗ ಪಡಿಸಿಕೊಂಡಿದ್ದಾರೆ. ಹೀಗಾಗಿ ಪಠ್ಯ ಕಲಿಕೆಯ ಜತೆಗೆ ಹಾಡುತ್ತಾರೆ, ಕುಣಿಯುತ್ತಾರೆ, ಅರಳು ಹುರಿದಂತೆ ಮಾತನಾಡುತ್ತಾರೆ. ಇದಕ್ಕೆಲ್ಲ ಇಲ್ಲಿನ ಶಿಕ್ಷಕರ ಇಚ್ಚಾಶಕ್ತಿಯೇ ಕಾರಣ ಎಂದು ಗ್ರಾಮಸ್ಥರು ಅಭಿಮಾನದಿಂದ ಹೇಳುತ್ತಾರೆ.

ಗ್ರಾಮಸ್ಥರ ಪ್ರೀತಿ, ಕಾಳಜಿ
ಗ್ರಾಮಸ್ಥರು ಈ ಶಾಲೆಗೆ ಮೂರು ಎಕರೆ ಭೂಮಿ ದಾನ ನೀಡಿದ್ದಾರೆ. ಶಾಲೆಯ ಅರಣ್ಯ ಪೋಷಿಸುವ ಹುಚ್ಚೀರಪ್ಪ ಶಾಲೆಯಲ್ಲಿ ಕೊಳವೆಬಾವಿ ಕೊರೆಸಿದ್ದಾರೆ. ಅದೃಷ್ಟಕ್ಕೆ ಮೂರು ಇಂಚು ನೀರು ಬಂದಿದೆ. ಗ್ರಾಮ ಪಂಚಾಯಿತಿ ಕೊಳವೆ ಬಾವಿಗೆ ಉಚಿತವಾಗಿ ಮೋಟಾರ್, ಸ್ಟಾರ್ಟರ್, ವೈರಿಂಗ್ ಮಾಡಿಸಿಕೊಟ್ಟಿದ್ದಾರೆ. ಗಂಗಾ ಪೂಜೆಗೆ ಬಂದಿದ್ದ ಶಿವನಗೌಡ ಪಾಟೀಲ ಎಂಬುವವರು ಇಡೀ ಆವರಣದ ಮೂಲೆ ಮೂಲೆ ಮೂಲೆಗೆ ನೀರು ಹರಿಸಲು ಪೈಪ್‌ಲೈನ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಶಾಲಾ ಮಕ್ಕಳಿಗೆ ಸಮವಸ್ತ್ರ, ಹಾಲು ಕುಡಿಯಲು ಲೋಟ, ಬಿಸಿಯೂಟಕ್ಕೆ ತಟ್ಟೆ, ಧ್ವನಿವರ್ಧಕ ಯಂತ್ರ, ಎಲ್ಲ ಕೊಠಡಿಗಳಿಗೆ ಸೀಲಿಂಗ್ ಫ್ಯಾನ್, ಪೀಠೋಪಕರಣ, ರಂಗಮಂದಿರ... ಹೀಗೆ ಇವೆಲ್ಲವನ್ನು ಗ್ರಾಮಸ್ಥರು ತಮ್ಮೂರ ಶಾಲೆಗೆ ನೀಡಿದ ಉಡುಗೊರೆಯಾಗಿದೆ.

ನಮ್ಮೂರ ಶಾಲೆಗೆ ‘ಶಾಲಾ ಅಭಿವೃದ್ಧಿ ಸಮಿತಿ ಎಂಬ ರಾಜಕೀಯ ಬೇಡ’ ಎಂದು ತಿರಸ್ಕರಿಸಿ ಶಿಕ್ಷಣ ಇಲಾಖೆಗೆ ಗ್ರಾಮಸ್ಥರು ಪತ್ರಬರೆದಿದ್ದಾರೆ. ಶಾಲಾ ಅಭಿವೃದ್ಧಿಯನ್ನು ಕಂಡ ಸರ್ಕಾರ ಸ್ವಚ್ಛ ವಿದ್ಯಾಲಯ ಯೋಜನೆಯಲ್ಲಿ ಈ ಶಾಲೆಗೆ ₹ 1ಲಕ್ಷ ಅನುದಾನವನ್ನು ಕೊಡ ಮಾಡಿದೆ. ಈ ಶಾಲೆಯ ಗುಣಮಟ್ಟ ಆಧರಿಸಿ ತಾಲ್ಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಸಂದಿವೆ. 

ಗ್ರಾಮಸ್ಥರು ಸ್ವಲ್ಪ ಆಸಕ್ತಿವಹಿಸಿದರೆ, ಸರ್ಕಾರಿ ಶಾಲೆಯನ್ನು ಹೇಗೆ ‘ಸ್ಮಾರ್ಟ್‌’ ಆಗಿಸಬಹುದು ಎಂಬುದಕ್ಕೆ ಮೂಗನೂರು ಶಾಲೆ ಒಂದು ಉದಾಹರಣೆಯಾಗಿದೆ. 

ಪ್ರೌಢಶಾಲೆಗೆ ಪ್ರೇರೇಪಣೆ
ಐದು ವರ್ಷಗಳ ಹಿಂದೆ ಶಾಲೆ ಇಷ್ಟು ಸುಸಜ್ಜಿತವಾಗಿರಲಿಲ್ಲ. ಆಗ 1ನೇ ತರಗತಿಯಿಂದ 7ನೇ ತರಗತಿವರೆಗೆ ಮಕ್ಕಳ ಸಂಖ್ಯೆ 300 ದಾಟುತ್ತಿರಲಿಲ್ಲ. ಇದೇ ಊರಿನ ಮಕ್ಕಳು ಅಕ್ಕಪಕ್ಕದ ಖಾಸಗಿ ಶಾಲೆಗೆ ಹೋಗುತ್ತಿದ್ದರು. ಇಂಥ ಶಾಲೆಯನ್ನು ಬದಲಾಯಿಸಿದ್ದು ಶಿಕ್ಷಕರ ವೃಂದ.

ಅದಕ್ಕೆ ಬೆನ್ನುಲುಬಾಗಿ ನಿಂತಿದ್ದವರು ಗ್ರಾಮಸ್ಥರು. ಈಗ ಶಾಲೆಯಲ್ಲಿ 450ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗುರುತಿಸಿದ ಸರ್ಕಾರ, ಇದೇ ಊರಿಗೆ ಪ್ರೌಢಶಾಲೆಯನ್ನೂ ಮಂಜೂರು ಮಾಡಿತು. ಈಗ ಆ ಶಾಲೆಯೂ ನಡೆಯುತ್ತಿದೆ. ಈ ಪ್ರಾಥಮಿಕ ಶಾಲೆಯಲ್ಲಿ ಓದಿದ ಮಕ್ಕಳು ಪ್ರೌಢಶಾಲೆಯತ್ತ ಹೆಜ್ಜೆ ಹಾಕಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !