ಸಾವಯವ ಕೃಷಿಯಲ್ಲಿ ದ್ರಾಕ್ಷಿ ಬಂಪರ್‌..!

ಶನಿವಾರ, ಮಾರ್ಚ್ 23, 2019
22 °C
ಪಾಳೇಕರ ಪದ್ಧತಿ ಅಳವಡಿಕೆ; ರಾಸಾಯನಿಕ ಬಳಸದ ಪದವೀಧರನ ಕೃಷಿ

ಸಾವಯವ ಕೃಷಿಯಲ್ಲಿ ದ್ರಾಕ್ಷಿ ಬಂಪರ್‌..!

Published:
Updated:
Prajavani

ಸಿಂದಗಿ: ಪಟ್ಟಣದಿಂದ ಹಳೆಯ ಚಾಂದಕವಠೆ ರಸ್ತೆಯಲ್ಲಿ ಎರಡೂವರೆ ಕಿ.ಮೀ. ದೂರ ಸಂಚರಿಸಿದರೆ, ಬರಡು ಭೂಮಿಯ ಮಧ್ಯೆ ಕಂಗೊಳಿಸುವ ಹಸಿರು ವನವೊಂದಿದೆ. ಈ ಎಂಟು ಎಕರೆ ಜಮೀನಿನಲ್ಲಿ ಇದೀಗ ದ್ರಾಕ್ಷಿ ಗೊಂಚಲುಗಳೇ ತೂಗುತ್ತಿವೆ...

ಪದವಿ ಪಡೆದುಕೊಂಡ ಬಳಿಕ, ಅಕ್ಬರ್‌ ಬಾದಶಾ ಖತೀಬ ಇಷ್ಟಪಟ್ಟು ಆಯ್ಕೆ ಮಾಡಿಕೊಂಡ ಕ್ಷೇತ್ರವಿದು. ಇದೀಗ ಸಮೃದ್ಧಿಯ ಫಸಲು, ಆದಾಯ, ನೆಮ್ಮದಿಯ ಬದುಕು ಇವರದ್ದಾಗಿದೆ.

ಎಂಟು ಎಕರೆಯೂ ಸಂಪೂರ್ಣ ಸವಳು–ಜವಳು ಭೂಮಿಯಾಗಿತ್ತು. ಇಲ್ಲಿ ಕೃಷಿ ಕೈಗೊಂಡಾಗ ಅಪಹಾಸ್ಯ ಮಾಡಿದವರೇ ಎಲ್ಲರೂ. ಕೃಷಿ ಮೇಳ, ರೈತ ತರಬೇತಿ ಶಿಬಿರಗಳು ನಡೆದಲ್ಲಿಗೆ ಹೋಗಿ ಕೃಷಿ ಜ್ಞಾನ ಪಡೆದರು ಖತೀಬ. ಆರಂಭದಲ್ಲಿ ದಾಳಿಂಬೆಗೆ ಕೈ ಹಾಕಿದರು. ಕ್ಯಾರ ರೋಗದಿಂದ ಬೆಳೆ ನಾಶವಾಯ್ತು. ಹಾನಿಯೂ ಕೈ ಸುಟ್ಟಿತು. ನಂತರ ದ್ರಾಕ್ಷಿಗೆ ಒಲವು ನೀಡಿದರು.

ಪಾಳೇಕರರ ಸಾವಯವ ಪದ್ಧತಿಯಲ್ಲಿ ದ್ರಾಕ್ಷಿ ಬೆಳೆಯಲು ನಿರ್ಧರಿಸಿದರು. ನಾಲ್ಕೈದು ವರ್ಷ ಇದಕ್ಕಾಗಿ ಅವಿರತವಾಗಿ ಶ್ರಮಿಸಿದರು. ನೀರಿನ ಕೊರತೆ ಆಗದಂತೆ ನಾಲ್ಕು ಕೊಳವೆಬಾವಿ ಕೊರೆಸಿದ್ದಾರೆ. ಒಂದು ತೆರೆದ ಬಾವಿ ತೋಡಿಸಿದ್ದಾರೆ. ಏತನ್ಮಧ್ಯೆ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಯಿಂದ ಪೈಪ್‌ಲೈನ್ ಸಹ ಮಾಡಿಕೊಂಡಿದ್ದಾರೆ. ಜಮೀನು ಸುತ್ತಲೂ ಹಳ್ಳವಿದ್ದು, ನೀರಿನ ಸಂಗ್ರಹಕ್ಕಾಗಿ ಚೆಕ್‌ಡ್ಯಾಂ ನಿರ್ಮಿಸಿಕೊಂಡಿದ್ದಾರೆ. ಹೆಚ್ಚಾಗುವ ಹಳ್ಳದ ನೀರು ಹರಿದು ಹೋಗುವ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾರೆ.

ಸಾವಯವ ಗೊಬ್ಬರಕ್ಕಾಗಿ ಬೇರೆ ಕಬ್ಬಿನ ತೋಟಗಳಿಂದ ಸಾಕಷ್ಟು ಕಬ್ಬಿನ ರವದಿ ಸಂಗ್ರಹಿಸಿ, ದ್ರಾಕ್ಷಿ ಬೆಳೆಗೆ ಹಾಕಲಾಗಿದೆ. ಅದಕ್ಕೆ ಹನಿ ನೀರಾವರಿ ಅಳವಡಿಸಿ, ನಾಲ್ಕು ದಿನಕ್ಕೊಮ್ಮೆ ನೀರು ಬಿಡಲಾಗುತ್ತದೆ. ರವದಿಯಿಂದ ಮಣ್ಣು ತೇವಾಗುತ್ತದೆ. ಜತೆಗೆ ಎರೆ ಹುಳಗಳು ಉತ್ಪತ್ತಿಯಾಗುತ್ತವೆ. ಇದರಿಂದ ಶೇ 80ರಷ್ಟು ನೀರಿನ ಉಳಿತಾಯವಾಗುತ್ತದೆ ಎನ್ನುತ್ತಾರೆ ರೈತ ಖತೀಬ.

ವಿದ್ಯುತ್‌ ಅಭಾವ ತಪ್ಪಿಸಲು ₹ 4 ಲಕ್ಷ ವೆಚ್ಚದಲ್ಲಿ 10 ಎಚ್.ಪಿ. ಸಾಮರ್ಥ್ಯದ ಸೋಲಾರ್ ವಿದ್ಯುತ್ ಅಳವಡಿಸಿಕೊಂಡಿದ್ದಾರೆ. ಸಾವಯವ ಗೊಬ್ಬರಕ್ಕಾಗಿ ದನ-ಕರು, ಕುರಿ ಸಾಕಿದ್ದಾರೆ. ಗಂಜಲ–ಹೆಂಡಿ ಸಾವಯವ ಗಂಜಲು ಘಟಕದಲ್ಲಿ ಸಂಗ್ರಹವಾಗುವಂತೆ ವ್ಯವಸ್ಥೆ ಮಾಡಿದ್ದು, ಇದನ್ನು ದ್ರಾಕ್ಷಿ ಬೆಳೆಗೆ ಹರಿಸುತ್ತಾರೆ.

ಒಂದು ಹನಿ ರಾಸಾಯನಿಕ ಬಳಸದೆ, ಸಂಪೂರ್ಣ ಶುದ್ಧವಾದ ಜವಾರಿ ದ್ರಾಕ್ಷಿಗೆ ಮಹಾರಾಷ್ಟ್ರದಲ್ಲಿ ಭಾರಿ ಬೇಡಿಕೆಯಿದೆ. ತಾಸಗಾಂವದಲ್ಲಿ ಇದನ್ನು ಸಂಗ್ರಹಿಸುತ್ತಾರೆ. ಯೋಗ್ಯ ದರ ಬಂದಾಗ ಸಾಂಗಲಿ ಮಾರ್ಕೆಟ್‌ನಲ್ಲಿ ಮಾರಾಟ ಮಾಡುತ್ತಾರೆ.

‘ಟನ್ ಒಣದ್ರಾಕ್ಷಿಗೆ ಸರಾಸರಿ ₹ 2 ಲಕ್ಷದಂತೆ 30 ಟನ್ ದ್ರಾಕ್ಷಿ ಮಾರಾಟ ಮಾಡುವೆ. ಪ್ರತಿ ವರ್ಷ ₹ 10 ಲಕ್ಷ ಖರ್ಚು. ₹ 50 ಲಕ್ಷ ಆದಾಯ ಸಿಗಲಿದೆ. ದ್ರಾಕ್ಷಿ ವಾಣಿಜ್ಯ ಬೆಳೆ. ಹಣ ಹಾಕಿ ತೆಗೆಯುವುದು, ಇನ್ನಷ್ಟು ಜಮೀನು ಇದ್ದರೆ, ವರ್ಷಕ್ಕೆ ಆರಾಮಾಗಿ ₹ 1 ಕೋಟಿ ಆದಾಯ ತೆಗೆಯಬಹುದು’ ಎಂದು ರೈತ ಅಕ್ಬರ್‌ ಬಾದಶಾ ಖತೀಬ ತಮ್ಮ ಕೃಷಿ ಯಶೋಗಾಥೆ ತಿಳಿಸಿದರು. ಸಂಪರ್ಕ ಸಂಖ್ಯೆ-9972693435

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !