‘ಪಶ್ಚಾತ್ತಾಪ ಕಾಡುತ್ತಿದೆ...’

7
ಏನಾದ್ರೂ ಕೇಳ್ಬೋದು

‘ಪಶ್ಚಾತ್ತಾಪ ಕಾಡುತ್ತಿದೆ...’

Published:
Updated:

1. ನಾನು ಎರಡು ವರ್ಷದ ಹಿಂದೆ ಒಬ್ಬ ಹುಡುಗಿಯನ್ನು ಪ್ರೀತಿಸಿದ್ದೆ. ಅವಳನ್ನು ಮದುವೆಯಾಗುವ ಸಲುವಾಗಿ ಅವಳ ಬಳಿ ಅನೇಕ ಸುಳ್ಳುಗಳನ್ನು ಹೇಳಿ ನಂಬಿಕೆ ದ್ರೋಹ ಮಾಡಿದ್ದೇನೆ. ಇದೆಲ್ಲಾ ಅವಳಿಗೆ ತಿಳಿದು ನನ್ನಿಂದ ದೂರಾದಳು. ಅವಳ ಮನಸ್ಸಿನಲ್ಲಿ ನಾನು ಕೆಟ್ಟವನೆನಿಸಿಕೊಂಡಿದ್ದೇನೆ. ಈಗ ಸದಾ ನನ್ನ ತಲೆಯಲ್ಲಿ ನಾನು ಕೆಟ್ಟವನು, ನಂಬಿಕೆ ದ್ರೋಹಿ, ಮೋಸಗಾರ ಎಂಬುದೆಲ್ಲಾ ಕೊರೆಯುತ್ತಿರುತ್ತದೆ. ಮಾಡುವ ಪ್ರತಿ ಕೆಲಸದಲ್ಲೂ ಇದು ನನ್ನನ್ನು ಕಾಡುವಂತೆ ಮಾಡುತ್ತಿದೆ. ಇದರಿಂದ ಜೀವನದಲ್ಲಿ ಬೇಸತ್ತು ಒಂಟಿಯಾಗಿ ತಿರುಗಾಡುತ್ತಿದ್ದೇನೆ. ನಾನು ಒಳ್ಳೆಯ ಹುಡುಗ ಎನ್ನಿಸಿಕೊಳ್ಳಲು ಏನು ಮಾಡಬೇಕು?
–ಹೆಸರು, ಊರು ಬೇಡ

ಉತ್ತರ: ಪಶ್ಚಾತ್ತಾಪ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಯಾವುದೋ ಒಂದು ಘಟ್ಟದಲ್ಲಿ ಕಾಣಿಸಿಕೊಳ್ಳುವ ಮನುಷ್ಯ ಸಹಜ ಭಾವನೆ. ಅದೇನೆ ಇರಲಿ, ಅನೇಕರಲ್ಲಿ ತೀವ್ರ ಪಶ್ಚಾತ್ತಾಪ ಹಾಗೂ ಅವಮಾನದ ಭಾವನೆಗಳು ಅತಿಯಾದ ಯಾತನೆಯನ್ನು ಉಂಟುಮಾಡುತ್ತದೆ. ಪಶ್ಚಾತ್ತಾಪ ಎನ್ನುವುದು ಒಳ್ಳೆಯ ಭಾವನೆಯೇ ಮತ್ತು ಇದು ನಾವು ಬೆಳೆಯಲು ಸಹಾಯ ಮಾಡುತ್ತದೆ. ‌‌‌

ಪಶ್ಚಾತ್ತಾಪದಿಂದ ನಮ್ಮ ವರ್ತನೆ ಸರಿಯಿಲ್ಲ ಹಾಗೂ ಅದರಿಂದ ಇನ್ನೊಬ್ಬರಿಗೆ ನೋವಾಗುತ್ತದೆ ಎಂಬುದರ ಅರಿವಾಗುತ್ತದೆ. ಇನ್ನೊಬ್ಬರಿಗೆ ಬೇಸರ ಮಾಡಿ, ಆಮೇಲೆ ಪಶ್ಚಾತ್ತಾಪ ಕಾಣಿಸಿಕೊಂಡರೆ ಅಥವಾ ಇನ್ನೊಬ್ಬರ ಮೇಲಿನ ನಕಾರಾತ್ಮಕ ಭಾವನೆ ಸರಿ ಹೊಂದಬೇಕು ಎಂದರೆ ನಾವೇ ನಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು ಎಂಬುದನ್ನು ಮನಸ್ಸು ಸೂಚಿಸುತ್ತಿರುತ್ತದೆ. ನೀವು ನಿಮ್ಮ ಹುಡುಗಿಯನ್ನು ಇಂಪ್ರೆಸ್ ಮಾಡುವ ಸಲುವಾಗಿಯೋ ಅಥವಾ ಅವರನ್ನು ಕಳೆದುಕೊಳ್ಳುವ ಭಯದಿಂದಲೋ ದೀರ್ಘ ಕಾಲದಿಂದ ಸುಳ್ಳು ಹೇಳಿಕೊಂಡು ಬಂದಿರಬಹುದು. ಅನೇಕ ದಿನಗಳಿಂದ ನೀವು ಹೇಳಿಕೊಂಡು ಬಂದ ಸುಳ್ಳು ಆಕೆ ನಿಮ್ಮ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ. ಈಗ ನಿಮಗೆ ನಿಮ್ಮ ತಪ್ಪಿನ ಅರಿವಾಗಿದೆ ಮತ್ತು ನೀವು ಆ ಪಶ್ಚಾತ್ತಾಪದಿಂದ ಹೊರ ಬರಲು ಪ್ರಯತ್ನಿಸುತ್ತಿದ್ದೀರಿ. ಮೊದಲು ನೀವು ಅರ್ಥ ಮಾಡಿಕೊಳ್ಳಬೇಕಾಗಿದ್ದು ಏನೆಂದರೆ ಕಳೆದ ಹೋದ ಸಮಯವನ್ನು ನಿಮ್ಮಿಂದ ಬದಲಾಯಿಸಲು ಸಾಧ್ಯವಿಲ್ಲ ಎಂಬುದನ್ನು. ಹಾಗಾಗಿ, ಸಮಯ ಕಳೆದಂತೆ ನೀವು ಬದಲಾಗಿ ಮತ್ತು ನಿಮ್ಮ ವರ್ತನೆಯಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ತಿದ್ದುಪಡಿ ಮಾಡಿಕೊಳ್ಳಿ. ಪಶ್ಚಾತ್ತಾಪದ ಬೇಗೆಯಲ್ಲೇ ಬೇಯುತ್ತಿರಬೇಡಿ. ಆದಷ್ಟು ಬೇಗ ಆ ಭಾವನೆಯಿಂದ ಹೊರ ಬಂದರೆ ಬೇರೆ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬಹುದು. ಭೂತಕಾಲದ ದಿನಗಳ ಬಗ್ಗೆ ಯೋಚಿಸುತ್ತಾ ಕೂರುವ ಬದಲು ನಿಮ್ಮನ್ನು ನೀವು ಕ್ಷಮಿಸಿಕೊಂಡು ಮುಂದೆ ಸಾಗಿ.  ಈ ರೀತಿಯ ತಪ್ಪುಗಳನ್ನು ಮತ್ತೆ ಮಾಡುವುದಿಲ್ಲ ಎಂದು ದೃಢನಿರ್ಧಾರ ಮಾಡಿ.

 2. ನನಗೆ 29 ವರ್ಷ. ನಾನೀಗ ಗರ್ಭಿಣಿ. ನನ್ನ ಮನಃಸ್ಥಿತಿ ಸರಿ ಇಲ್ಲ. ನಾನು ಮಾನಸಿಕ ಒತ್ತಡಕ್ಕೆ ಸಿಲುಕಿದ್ದೇನೆ. ಮನಸ್ಸಿನಲ್ಲಿ ಏನೇನೋ ವಿಚಾರಗಳು ಬರುತ್ತವೆ. ರಾತ್ರಿಯೆಲ್ಲಾ ಯೋಚನೆಗಳೇ ತಲೆಯಲ್ಲಿ ಮುತ್ತುತ್ತಿರುತ್ತವೆ. ಇದರಿಂದ ನಿದ್ದೆ ಮಾಡಲು ಆಗುತ್ತಿಲ್ಲ; ಬೆಳಿಗ್ಗೆ ಬೇಗ ಎಚ್ಚರವಾಗುವುದೂ ಇಲ್ಲ. ಆ ಯೋಚನೆಗಳನೆಲ್ಲಾ ನಿರ್ಲಕ್ಷ್ಯ ಮಾಡಲು ಪ್ರಯತ್ನ ಮಾಡುತ್ತೇನೆ. ಯಾರದರೂ, ಏನಾದರೂ ಹೇಳಿದರೆ ಅದನ್ನೇ ಮನಸ್ಸಿಗೆ ಹಚ್ಚಿಕೊಳ್ಳುತ್ತೇನೆ. ದಿನಪೂರ್ತಿ ಅಳುತ್ತಲೇ ಇರುತ್ತೇನೆ. ಇದೆಲ್ಲಾ ಕಾರಣವೇನು? ಪರಿಹಾರ ತಿಳಿಸಿ.
–ಹೆಸರು, ಊರು ಬೇಡ

ಉತ್ತರ: ಗರ್ಭಧಾರಣೆ ಹಾಗೂ ಮಾತೃತ್ವ – ಈ ಎರಡು ಕೂಡ ಹೆಣ್ಣಿನ ಹಾರ್ಮೋನ್‌ಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುವ ಹಂತಗಳು. ಪ್ರತಿ ಗರ್ಭಿಣಿಯಲ್ಲೂ ಬೇರೆ ಬೇರೆ ರೀತಿಯ ಭಾವನೆಗಳಿರುತ್ತವೆ. ಈ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿ ಮೂಡುವ ಭಿನ್ನ ರೀತಿಯ ಆಲೋಚನೆಗಳು ನಿಮ್ಮಲ್ಲಿ ಆತಂಕವನ್ನು ಉಂಟುಮಾಡಬಹುದು. ಈಗ ನೀವು ಅದೇ ಆತಂಕವನ್ನು ಎದುರಿಸುತ್ತಿರಬಹುದು. ನೀವು ಇದರ ಬಗ್ಗೆ ಆತ್ಮೀಯರು ಎನ್ನಿಸುವವರ ಜೊತೆ ಮಾತನಾಡಿ. ನಿಮ್ಮ ಮನಸ್ಸಿಗೆ ಇಷ್ಟವಾಗುವ ಕೆಲಸಗಳನ್ನು ಮಾಡುತ್ತಿರಿ. ಯಾವಾಗಲೂ ಮಲಗಬೇಡಿ. ಸರಿಯಾದ ಆಹಾರ ನಿಯಮವನ್ನು ಪಾಲಿಸಿ. ನಿಮ್ಮ ಹೊಟ್ಟೆಯಲ್ಲಿರುವ ಮಗುವಿನ ಮೇಲೆ ನಿಮ್ಮ ಗಮನವಿರಲಿ. ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ನೀವು ಅಧ್ಯಾತ್ಮದ ಬಗ್ಗೆ ಒಲವು ಹೊಂದಿರುವವರಾದರೆ ಆ ವಿಯಷದಲ್ಲಿ ಓದಲು ಅನೇಕ ಒಳ್ಳೆಯ ಪುಸ್ತಕಗಳಿವೆ. ಪ್ರತಿದಿನ ಭಜನೆ ಹಾಗೂ ಪ್ರಾರ್ಥನೆ ಮಾಡುವುದರಿಂದ ನಿಮಗೆ ತುಂಬಾನೇ ಸಹಾಯವಾಗುತ್ತದೆ. ಗರ್ಭಿಣಿ ಎನ್ನುವುದು ಹೆಣ್ಣಿನ ಜೀವನದ ಒಂದು ಸುಂದರ ಹಂತ, ಅದನ್ನು ಅನುಭವಿಸಿ.

3. ನಾನು ದಿನಪತ್ರಿಕೆಗಳ ಏಜೆನ್ಸಿಯನ್ನು ನಡೆಸುತ್ತಿದ್ದೇನೆ. ಸ್ನಾತಕೋತ್ತರ ಪದವಿಯನ್ನು ಮುಗಿಸಿದ್ದೇನೆ. ಸರ್ಕಾರಿ ನೌಕರಿಗೆ ಸೇರಬೇಕು ಎನ್ನುವುದು ನನ್ನ ಆಸೆ. ಎಂದುಕೊಂಡಿದ್ದೇನೆ. ಆದರೆ ಏಜೆನ್ಸಿಯ ಕೆಲಸದ ನಡುವೆ ಓದಲು ಆಗುತ್ತಿಲ್ಲ. ಓದಬೇಕು ಎಂದುಕೊಂಡರೂ ಮನಸ್ಸು ಕೇಂದ್ರಿಕೃತಗೊಳ್ಳುತ್ತಿಲ್ಲ. ಓದಲು ಕುಳಿತರೆ ನಾನಾ ವಿಚಾರಗಳು ಮೂಡುತ್ತವೆ. ಭವಿಷ್ಯದ ಜೀವನದ ಬಗ್ಗೆ ಋಣಾತ್ಮಕ ಯೋಚನೆಗಳೇ ಬರುತ್ತವೆ. 
–ಮೆಹಬೂಬ, ನವಲಗುಂದ

ನೀವು ಕೆಲಸ ಮಾಡಿಕೊಂಡು ಓದುತ್ತಿರುವುದು ಶ್ಲಾಘನೀಯ. ಪರೀಕ್ಷೆಯ ಸಮಯದಲ್ಲಿ ನಿಮ್ಮ ಏಜೆನ್ಸಿಯನ್ನು ಮನೆಯಲ್ಲಿ ಬೇರೆ ಯಾರಿಗಾದರೂ ನಡೆಸಲು ಹೇಳಿ. ಆಗ ನೀವು ಸಂಪೂರ್ಣವಾಗಿ ಪರೀಕ್ಷೆಯ ಮೇಲೆ ಗಮನವನ್ನು ನೀಡಬಹುದು. ಇದು ನಿಮ್ಮಿಂದ ಸಾಧ್ಯವಾಗದಿದ್ದರೆ ಒಂದು ವೇಳಾಪಟ್ಟಿಯನ್ನು ರಚಿಸಿಕೊಂಡು ಅದರ ಪ್ರಕಾರ ನಿಮ್ಮ ಕೆಲಸದ ನಡುವೆ ಬಿಡುವಿನ ಸಮಯವನ್ನು ಪರಿಶೀಲಿಸಿಕೊಳ್ಳಬೇಕು ಮತ್ತು ಆ ಸಮಯದಲ್ಲಿ ಅಭ್ಯಾಸ ಮಾಡಬೇಕು. ಇದಕ್ಕಾಗಿ ನಿಮ್ಮ ಗಮನ ಓದಿನ ಮೇಲೆ ಇರಬೇಕು. ನಕಾರಾತ್ಮಕ ಯೋಚನೆಗಳನ್ನು ನಿರ್ಲಕ್ಷ್ಯ ಮಾಡಿ; ಅದರ ಬಗ್ಗೆ ಹೆಚ್ಚಿಗೆ ಯೋಚಿಸಬೇಡಿ. ಪ್ರತಿನಿತ್ಯವೂ ಪ್ರಯತ್ನ ಮಾಡಿದಾಗ ಮಾತ್ರ ನೀವು ಯಶಸ್ಸನ್ನು ಕಾಣಲು ಸಾಧ್ಯ. ನಿರಾಶರಾಗದಿರಿ.  

ಏನಾದ್ರೂ ಕೇಳ್ಬೋದು
ಕೌಟುಂಬಿಕ ಸಮಸ್ಯೆ, ವೈಯಕ್ತಿಕ ಹಾಗೂ ಮಾನಸಿಕ ಸಮಸ್ಯೆಗಳ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ.  ನಿಮ್ಮ ಪ್ರಶ್ನೆಗಳಿಗೆ ಆಪ್ತ ಸಮಾಲೋಚಕಿ ಸುನೀತಾ ರಾವ್ ಉತ್ತರಿಸಲಿದ್ದಾರೆ. 
ಇಮೇಲ್ ವಿಳಾಸ: bhoomika@prajavani.co.in ವಾಟ್ಸ್ಯಾಪ್: 9482006746

*

–ಸುನೀತಾ ರಾವ್‌

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !