ರಾಜಸ್ಥಾನ: ಮತ್ತೆ ಶುರು ಮೀಸಲು ಜಟಾಪಟಿ

7
ಹಿಂಸೆಗೆ ತಿರುಗಿದ ಗುಜ್ಜರ್‌ ಸಮುದಾಯದ ಪ್ರತಿಭಟನೆ: ಪೊಲೀಸ್‌ ವಾಹನಗಳಿಗೆ ಬೆಂಕಿ, ಗುಂಡು ಹಾರಾಟ

ರಾಜಸ್ಥಾನ: ಮತ್ತೆ ಶುರು ಮೀಸಲು ಜಟಾಪಟಿ

Published:
Updated:
Prajavani

ಜೈಪುರ: ಸರ್ಕಾರಿ ನೌಕರಿ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಶೇ 5ರಷ್ಟು ಮೀಸಲಾತಿಗಾಗಿ ಗುಜ್ಜರ್‌ ಸಮುದಾಯ ಮೂರು ದಿನಗಳಿಂದ ರಾಜಸ್ಥಾನದಲ್ಲಿ ನಡೆಸುತ್ತಿರುವ ಪ್ರತಿಭಟನೆ ಭಾನುವಾರ ಹಿಂಸೆಗೆ ತಿರುಗಿದೆ. ಧೋಲ್‌ಪುರ ಜಿಲ್ಲೆಯಲ್ಲಿ ಪ್ರತಿಭಟನಕಾರರು ಪೊಲೀಸರ ಮೂರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ದುಷ್ಕರ್ಮಿಗಳು ಗುಂಡು ಹಾರಾಟ ಕೂಡ ನಡೆಸಿದ್ದಾರೆ.

8–10 ವ್ಯಕ್ತಿಗಳು ಆಗ್ರಾ–ಮೊರೇನಾ ಹೆದ್ದಾರಿಯಲ್ಲಿ ಗುಂಡು ಹಾರಾಟ ನಡೆಸಿದ್ದಾರೆ. ಗುಂಡು ಹಾರಾಟಕ್ಕೆ ಮೊದಲು ಗುಜ್ಜರ್‌ ಪ್ರತಿಭಟನಕಾರರು ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದ್ದರು. ಕಲ್ಲು ತೂರಾಟವೂ ನಡೆದಿದೆ. ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಧೋಲ್‌ಪುರ ಎಸ್‌ಪಿ ಅಜಯ್‌ ಸಿಂಗ್‌ ತಿಳಿಸಿದ್ದಾರೆ. 

ಉದ್ರಿಕ್ತ ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಷೆಲ್‌ ಸಿಡಿಸಿದ್ದಾರೆ. ಕೆಲ ತಾಸಿನ ಬಳಿಕ ಹೆದ್ದಾರಿಯಲ್ಲಿ ಸಂಚಾರ ಸಹಜ ಸ್ಥಿತಿಗೆ ಬಂದಿದೆ. 

ಪ್ರತಿಭಟನೆಯಿಂದಾಗಿ ರೈಲು ಸಂಚಾರಕ್ಕೆ ಭಾರಿ ಅಡಚಣೆ ಉಂಟಾಗಿದೆ. ಮೂರು ದಿನಗಳಲ್ಲಿ 200ಕ್ಕೂ ಹೆಚ್ಚು ರೈಲುಗಳ ಸಂಚಾರ ಸ್ಥಗಿತಗೊಂಡಿವೆ. ರೈಲು ಹಳಿಗಳ ಮೇಲೆಯೇ ಗುಜ್ಜರ್‌ ಮತ್ತು ಇತರ ಸಮುದಾಯಗಳ ಜನರು ಧರಣಿ ನಡೆಸುತ್ತಿದ್ದಾರೆ. 

ಪ್ರತಿಭಟನಕಾರರ ಮನವೊಲಿಸಲು ಸರ್ಕಾರ ನಡೆಸಿದ ಪ್ರಯತ್ನ ಯಶಸ್ವಿಯಾಗಿಲ್ಲ. ಸಚಿವ ವಿಶ್ವೇಂದ್ರ ಸಿಂಗ್‌ ಮತ್ತು ಐಎಎಸ್‌ ಅಧಿಕಾರಿ ನೀರಜ್‌ ಕೆ. ಪವನ್‌ ಅವರು ಪ್ರತಿಭಟನಕಾರರ ನಾಯಕ ಕಿರೋರಿ ಸಿಂಗ್‌ ಬನ್ಸಾಲಾ ಅವರನ್ನು ಶನಿವಾರ ಭೇಟಿಯಾಗಿದ್ದರು. ಆದರೆ, ಪ್ರತಿಭಟನೆ ಕೈಬಿಡಲು ಮತ್ತು ಮಾತುಕತೆಗೆ ಅವರು ಒಪ್ಪಿಲ್ಲ. 

ಪ್ರತಿಭಟನೆ ಕೈಬಿಡುವಂತೆ ಗುಜ್ಜರ್‌ ಸಮುದಾಯಕ್ಕೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮನವಿ ಮಾಡಿದ್ದಾರೆ. ಈ ಸಮುದಾಯಗಳಿಗೆ ಮೀಸಲು ನೀಡುವುದಕ್ಕೆ ಬೇಕಾದ ಕೆಲಸವನ್ನು ರಾಜ್ಯ ಸರ್ಕಾರವು ಮಾಡಿದೆ. ಮೀಸಲು ನೀಡಬೇಕಿದ್ದರೆ ಸಂವಿಧಾನ ತಿದ್ದುಪಡಿ ಅಗತ್ಯ. ಹಾಗಾಗಿ, ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರನ್ನು ಈ ಸಮುದಾಯದ ಮುಖಂಡರು ಭೇಟಿಯಾಗಬೇಕು ಎಂದು ಅವರು ಹೇಳಿದ್ದಾರೆ. 

ಮತ್ತೇಕೆ ಪ್ರತಿಭಟನೆ?: ಗುಜ್ಜರ್‌ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಶೇ 5ರಷ್ಟು ಮೀಸಲಾತಿ ನೀಡಲು ಸರಣಿ ಪ್ರತಿಭಟನೆಗಳ ಬಳಿಕ 2017ರಲ್ಲಿ ಗುಜರಾತ್‌ ಸರ್ಕಾರ ಒಪ್ಪಿಕೊಂಡಿತ್ತು. ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ 21ರಿಂದ ಶೇ 26ಕ್ಕೆ ವಿಸ್ತರಿಸಲು ನಿರ್ಧರಿಸಿತ್ತು. 

ಈ ಸಮುದಾಯಗಳಿಗೆ ಒಬಿಸಿ (ಇತರ ಹಿಂದುಳಿದ ವರ್ಗಗಳು) ಅಡಿಯಲ್ಲಿ ಮೀಸಲಾತಿ ದೊರೆಯುತ್ತಿದೆ. ಜತೆಗೆ, ಅತ್ಯಂತ ಹಿಂದುಳಿದ ವರ್ಗಗಳು ಎಂಬ ವಿಭಾಗದಲ್ಲಿಯೂ ಶೇ 1ರಷ್ಟು ಮೀಸಲಾತಿ ದೊರೆಯುತ್ತಿದೆ. 

ವಿಧಾನಸಭೆಯ 2017ರ ಮುಂಗಾರು ಅಧಿವೇಶನದಲ್ಲಿ ಗುಜ್ಜರ್‌ ಮೀಸಲಾತಿ ಸಂಬಂಧ ಮಸೂದೆ ಮಂಡನೆಯಾಗಿತ್ತು. ಆದರೆ, ರಾಜಸ್ಥಾನ ಹೈಕೋರ್ಟ್‌ ಅದಕ್ಕೆ ತಡೆ ನೀಡಿದೆ. 

ಮೀಸಲಾತಿಗಾಗಿ ಸಮುದಾಯವು ಭಾರಿ ಪ್ರತಿಭಟನೆಗಳನ್ನು ನಡೆಸುತ್ತಲೇ ಬಂದಿದೆ. 2008ರಲ್ಲಿ ಅತ್ಯಂತ ಹಿಂಸಾತ್ಮಕ ಪ್ರತಿಭಟನೆ ನಡೆದಿತ್ತು. 70 ಜನರು ಪ್ರಾಣ ಕಳೆದುಕೊಂಡಿದ್ದರು. 

ಕಾಂಗ್ರೆಸ್‌–ಬಿಜೆಪಿ ಕೆಸರೆರಚಾಟ

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಗುಜ್ಜರ್‌ ಮೀಸಲು ವಿಚಾರವು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರವು ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಈಡೇರಿಸುವ ಬದಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಬಿಜೆಪಿ ಹೇಳಿದೆ. 

ರಾಜ್ಯ ಸರ್ಕಾರವು ತನ್ನ ಕೆಲಸ ಮಾಡಿದೆ. ಸಂವಿಧಾನ ತಿದ್ದುಪಡಿ ಕೆಲಸವನ್ನು ಕೇಂದ್ರ ಮಾಡಬೇಕು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !