ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ ರಫ್ತಿಗೆ ಉತ್ತೇಜನ ಅಗತ್ಯ

ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ
Last Updated 3 ಮಾರ್ಚ್ 2018, 8:21 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕೇಂದ್ರ ಸರ್ಕಾರ ತೊಗರಿ ರಫ್ತಿಗೆ ಉತ್ತೇಜನ ನೀಡಬೇಕು. ರಾಜ್ಯ ಸರ್ಕಾರ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮಾದರಿಯಲ್ಲಿ ತೊಗರಿ ಉತ್ಪಾದಕರ ಸಂಘವನ್ನು ಅಸ್ತಿತ್ವಕ್ಕೆ ತರಬೇಕು’ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಟಿ.ಎನ್.ಪ್ರಕಾಶ್ ಕಮ್ಮರಡಿ ಸಲಹೆ ನೀಡಿದರು.

ಆಳಂದ ತಾಲ್ಲೂಕು ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗ, ಕಲಬುರ್ಗಿಯ ಕೃಷಿ ವಿಜ್ಞಾನ ಕೇಂದ್ರ ಹಾಗೂ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ರೈತರ ಆದಾಯ ಮತ್ತು ಕಲ್ಯಾಣ ವೃದ್ಧಿಗೆ ಅಗತ್ಯವಾದ ಗ್ರಾಮೀಣ ನೈರ್ಮಲ್ಯ, ಮೂಲಭೂತ ಸೌಕರ್ಯ ಮತ್ತು ಸಾಮಾಜಿಕ ವಿಚಾರಗಳು’ ಕುರಿತ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಕರ್ನಾಟಕದಲ್ಲಿ ಈ ವರ್ಷ 1 ಕೋಟಿ ಕ್ವಿಂಟಲ್ ತೊಗರಿ ಬೆಳೆಯಲಾಗಿದೆ. ಕೇಂದ್ರ ಸರ್ಕಾರ 26 ಲಕ್ಷ ಕ್ವಿಂಟಲ್ ತೊಗರಿ ಖರೀದಿಗೆ ಪರವಾನಗಿ ನೀಡಿದೆ. ರಾಜ್ಯ ಸರ್ಕಾರ ಈಗಾಗಲೇ 26 ಲಕ್ಷ ತೊಗರಿ ಖರೀದಿಸಿದ್ದು, ಇನ್ನೂ ಸುಮಾರು 15 ಲಕ್ಷ ರೈತರ ತೊಗರಿ ಖರೀದಿಸಬೇಕಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಕೇಂದ್ರ ಸರ್ಕಾರ ರಫ್ತಿಗೆ ಸಂಬಂಧಿಸಿದಂತೆ ಸಮಗ್ರ ನೀತಿಯನ್ನು ಜಾರಿಗೆ ತರಬೇಕು. ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ ಪ್ರತಿ ಕುಟುಂಬಕ್ಕೆ 2ಕೆ.ಜಿ. ತೊಗರಿಬೇಳೆ ವಿತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ವಿಶ್ರಾಂತ ಕುಲಪತಿ ಪ್ರೊ.ಎಸ್‌.ಎ.ಪಾಟೀಲ ಮಾತನಾಡಿ, ‘ತೊಗರಿ ಮಾತ್ರ ಬೆಳೆದರೆ ಆದಾಯ ವೃದ್ಧಿಯಾಗುವುದಿಲ್ಲ. ತೊಗರಿ ಜತೆಗೆ ಹೈನುಗಾರಿಕೆ, ಕೋಳಿ, ಕುರಿ ಸಾಕಾಣಿಕೆ, ತರಕಾರಿ, ಹಣ್ಣು, ಹೂ ಬೆಳೆಯಬೇಕು. ವರ್ಷವಿಡೀ ಹೊಲದಲ್ಲೇ ಉಳಿದುಕೊಂಡು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಶಾಸಕ ಬಿ.ಆರ್.ಪಾಟೀಲ ಮಾತನಾಡಿ, ‘ಕೃಷಿಕರಿಗೆ ಲೆಕ್ಕಾಚಾರ ಬಹಳ ಮುಖ್ಯ. ರೈತರು ವರ್ಷದ ಆದಾಯ ಮತ್ತು ಖರ್ಚನ್ನು ಬರೆದಿಡಬೇಕು. ಅನವಶ್ಯಕ ಖರ್ಚುಗಳನ್ನು ಕಡಿಮೆ ಮಾಡಬೇಕು. ಅದ್ಧೂರಿ ಮದುವೆ, ನಿಶ್ಚಿತಾರ್ಥಕ್ಕಾಗಿ ಸಾಲ ಮಾಡುವುದನ್ನು ಬಿಡಬೇಕು’ ಎಂದು ಸಲಹೆ ನೀಡಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಎಂ.ಮಹೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ಸಮ ಕುಲಪತಿ ಪ್ರೊ.ಜಿ.ಆರ್.ನಾಯಕ್, ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ. ಎಸ್.ಕೆ.ಮೇಟಿ, ಬಸಪ್ಪ, ಕೃಷಿ ವಿಜ್ಞಾನಿ ಡಾ.ರಾಜು ತೆಗ್ಗೆಳ್ಳಿ ಹಾಗೂ ರೈತ ಪ್ರತಿನಿಧಿ ಗಿರಿಜಾಬಾಯಿ ಇದ್ದರು. ಸಿಯುಕೆ ಸಾಮಾಜಿಕ ಕಾರ್ಯ ವಿಭಾಗದ ಮುಖ್ಯಸ್ಥ ಡಾ. ಚನ್ನವೀರ ಆರ್.ಎಂ. ಕಾರ್ಯಕ್ರಮ ನಿರ್ವಹಿಸಿದರು.
**
ಕೇಂದ್ರ ಸರ್ಕಾರ 50 ಲಕ್ಷ ಕ್ವಿಂಟಲ್ ಬೇಳೆಕಾಳು ಆಮದು ಮಾಡಿಕೊಂಡು ತಪ್ಪು ಮಾಡಿದೆ. ರಾಜ್ಯದ ರೈತರ ಹಿತದೃಷ್ಟಿಯಿಂದ ತಕ್ಷಣ ಆಮದು ನಿಲ್ಲಿಸಬೇಕು.
– ಡಾ. ಟಿ.ಎನ್.ಪ್ರಕಾಶ್ ಕಮ್ಮರಡಿ, ಅಧ್ಯಕ್ಷ, ಕರ್ನಾಟಕ ಕೃಷಿ ಬೆಲೆ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT