ಬುಧವಾರ, ಜುಲೈ 6, 2022
22 °C

ಪ್ರಯಾಸದ ಪ್ರವಾಸ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆಗಾಲದಲ್ಲಿ ರಜೆ ಸವಿಯಲು ಸಹೋದ್ಯೋಗಿ ಮಿತ್ರರೊಂದಿಗೆ ಜೋಗ ನೋಡುವ ಯೋಜನೆ ಹಾಕಿಕೊಂಡಿದ್ದೆ. ಅಂದುಕೊಂಡಂತೆ 7 ಬೈಕ್‌ಗಳಲ್ಲಿ 14 ಜನರ ತಂಡ ಶಿವಮೊಗ್ಗದಿಂದ ಹೊರಟೆವು. ಕಲ್ಲತ್ತಗಿರಿ ಜಲಪಾತ ಮತ್ತು ಕೆಮ್ಮಣ್ಣುಗುಂಡಿಯನ್ನು ಬೈಕ್‌ನಲ್ಲಿ ಸುತ್ತುವುದು ನಮ್ಮ ಯೋಜನೆಯಾಗಿತ್ತು. ಮಾರ್ಗ ಮಧ್ಯದಲ್ಲಿ ಬರುವ ತರೀಕೆರೆಯ ಗೆಳೆಯನ ಮನೆಯಲ್ಲಿ ಬಿರಿಯಾನಿ ಮಾಡಿಸಿಕೊಂಡು ಕೊರೆಯುವ ಚಳಿ, ಜಿನುಗುವ ಮಳೆಯಲ್ಲಿ ಹೊರಟೆವು. ಕಲ್ಲತ್ತಗಿರಿ ಜಲಪಾತ ತಲುಪುವಷ್ಟರಲ್ಲಿ ಅರ್ಧ ದಿನವೇ ಕಳೆದುಹೋಗಿತ್ತು.

ಜಲಪಾತಕ್ಕೆ ಮೈಯೊಡ್ಡಿ ಹರ್ಷ ಪಡುತ್ತಿದ್ದಾಗ ನೀರಿನ ಬಂಡೆಯಲ್ಲಿ ನಮ್ಮ ಸಹ್ಯೋದ್ಯೋಗಿಯೊಬ್ಬರು ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದು ದಿಗಿಲು ಮೂಡಿಸಿತ್ತು. ಆದರೆ, ಅವರು ಸುರಕ್ಷಿತವಾಗಿ ನಮ್ಮ ಕಣ್ಮುಂದೆ ನಿಂತಾಗ ಆದ ಆನಂದ ಅಷ್ಟಿಷ್ಟಲ್ಲ. 

ಗೆಳೆಯನ ಮನೆಯಲ್ಲಿ ಕಟ್ಟಿಕೊಟ್ಟಿದ್ದ ಬಿರಿಯಾನಿ ವಾಸನೆಗೆ ಕೋತಿಗಳು ನಮ್ಮನ್ನು ಸುತ್ತುವರಿದುಬಿಟ್ಟಿದ್ದವು. ಹೇಗೋ ಮಧ್ಯಾಹ್ನದ ಊಟ ಮುಗಿಸಿ, ಕೆಮ್ಮಣ್ಣುಗುಂಡಿ ಕಡೆಗೆ ಹೊರಟಾಗ ಅಲ್ಲಿಯೂ ಮಳೆರಾಯನ ಆರ್ಭಟವಿತ್ತು.

ಸುರಿಯುವ ಮಳೆಯಲಿ ಗುಡ್ಡದ ದಾರಿಯ ಬೈಕ್ ಸವಾರಿ, ಅಕ್ಕಪಕ್ಕದಲ್ಲಿ ಇದ್ದ ಆಳವಾದ ಪ್ರಪಾತ ಎದೆ ನಡುಗಿಸುವಂತಿತ್ತು. ಕಷ್ಟಪಟ್ಟು ಬೆಟ್ಟದ ತುದಿ ತಲುಪಿದೆವು, ಮಂಜಿನಿಂದ ಆವೃತವಾಗಿದ್ದ ಆ ಪರಿಸರ ನಿಜಕ್ಕೂ ಅದ್ಭುತವಾಗಿತ್ತು. ಇದೊಂದು ಪ್ರಯಾಸದ ಪ್ರವಾಸವಾದರೂ ಮಳೆಗಾಲ ಬಂತೆಂದರೆ ಸಾಕು ಈ ಪ್ರವಾಸದ ಕ್ಷಣಗಳು ನೆನಪಗಾಗುತ್ತವೆ.
-ವಸಂತ ಕುಮಾರ್, ಆಲೂರು, ದಾವಣಗೆರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.