ಶುಕ್ರವಾರ, ನವೆಂಬರ್ 15, 2019
20 °C
ಪ್ರತಾಪ್‌ ಬದಲು ತಂದೆ ನ್ಯಾಯಾಲಯಕ್ಕೆ ಹಾಜರು

ಗುಂಡ್ಲುಪೇಟೆ ಬೆತ್ತಲೆ ಪ್ರಕರಣ: ಜಾಮೀನು ಅರ್ಜಿ ಆದೇಶ 16ಕ್ಕೆ ಮುಂದೂಡಿಕೆ

Published:
Updated:
Prajavani

ಚಾಮರಾಜನಗರ: ಗುಂಡ್ಲುಪೇಟೆಯ ಕಬ್ಬೆಕಟ್ಟೆ ಶನೇಶ್ವರ ದೇವಸ್ಥಾನದಲ್ಲಿ ನಡೆದ ಬೆತ್ತಲೆ ಮೆರವಣಿಗೆ ಪ್ರಕರಣದ ಆರು ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಯ ಆದೇಶವನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಇದೇ 16ಕ್ಕೆ (ಮಂಗಳವಾರ) ಮುಂದೂಡಿದೆ. 

ಗುರುವಾರ ವಿಚಾರಣೆ ನಡೆಸಿದ್ದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ.ಬಸವರಾಜ ಅವರು, ಸಂತ್ರಸ್ತ ಎಸ್‌. ಪ್ರತಾಪ್‌ ಹಾಜರಾಗದೇ ಇದ್ದುದರಿಂದ ಆದೇಶವನ್ನು ಶುಕ್ರವಾರಕ್ಕೆ ಕಾಯ್ದಿರಿಸಿದ್ದರು.

ಪ್ರತಾಪ್‌ ತಂದೆ ಹಾಜರು: ಎಸ್‌.ಪ್ರತಾಪ್‌ ಅವರು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ, ಆರೋಗ್ಯ ಸರಿ ಇಲ್ಲ ಎಂಬ ಕಾರಣಕ್ಕೆ ಅವರ ತಂದೆ ಶಿವಯ್ಯ ಅವರು ನ್ಯಾಯಾಧೀಶರ ಮುಂದೆ ಹಾಜರಾದರು. ಜಾಮೀನು ಅರ್ಜಿಗೆ ಆಕ್ಷೇಪಣೆ ವ್ಯಕ್ತಪಡಿಸಿ ಪ್ರತಾಪ್‌ ಅವರು ನ್ಯಾಯಾಧೀಶರಿಗೆ ಬರೆದ ಅರ್ಜಿಯನ್ನು ಶಿವಯ್ಯ ಅವರು ಸಲ್ಲಿಸಿದರು.

ಆರೋಪಿಗಳ ಪರ ವಾದ ಮಂಡಿಸಿದ ವಕೀಲರಾದ ಶೃತಿ ಅವರು, ‘ರಾಘವಾಪುರದಲ್ಲಿ ಪ್ರತಾಪ್‌ ಅವರನ್ನು ದರೋಡೆ ಮಾಡಲಾಗಿತ್ತು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ದರೋಡೆ ಮಾಡಿದವರು ಸ್ಕೂಟರ್‌ ಅನ್ನೂ ತೆಗೆದುಕೊಂಡು ಹೋಗಬೇಕಿತ್ತಲ್ಲವೇ? ಆದರೆ, ಅವರ ಸ್ಕೂಟರ್‌, ಬಟ್ಟೆಗಳೆಲ್ಲ ಅಲ್ಲಿ ಸಿಕ್ಕಿದೆ. ದರೋಡೆ ನಡೆದಿರುವ ಬಗ್ಗೆ ಇದುವರೆಗೂ ಯಾರೂ ಪೊಲೀಸರಿಗೆ ದೂರು ನೀಡಿಲ್ಲ’ ಎಂದು ಹೇಳಿದರು. 

‘ಬಂಧಿತರಾದವರು ಈಗಾಗಲೇ ಒಂದು ತಿಂಗಳಿನಿಂದ ಜೈಲಿನಲ್ಲಿ ಇದ್ದಾರೆ. ಉದ್ದೇಶಪೂರ್ವಕವಾಗಿ ಈ ಘಟನೆ ನಡೆದಿಲ್ಲ. ಬಲವಂತವಾಗಿ ದೂರು ನೀಡಲಾಗಿದೆ. ಹಾಗಾಗಿ ಕಕ್ಷಿದಾರರಿಗೆ ಜಾಮೀನು ನೀಡಬೇಕು’ ಎಂದು ವಾದಿಸಿದರು. 

‘ಘಟನೆ ಉದ್ದೇಶ ಪೂರ್ವಕವಾಗಿ ನಡೆದಿದಿಯೋ ಇಲ್ಲವೋ, ಆದರೆ, ನಗ್ನವಾಗಿ ಮೆರವಣಿಗೆ ಮಾಡಲಾಗಿದೆ. ಅದನ್ನು ಸಾಮಾಜಿಕ ಜಾಲತಾಣಗಳಿಗೂ ಹರಿಬಿಡಲಾಗಿದೆ. ಇದನ್ನು ಯಾಕೆ ಮಾಡಬೇಕಿತ್ತು’ ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಲೋಲಾಕ್ಷಿ ಅವರು ಪ್ರಶ್ನಿಸಿದರು. 

‘ಘಟನೆ ನಡೆದ ದಿನ ನೀವು ಠಾಣೆಗೆ ಬಂದು, ಮಗನಿಗೆ ಮಾನಸಿಕ ಆರೋಗ್ಯ ಸರಿ ಇಲ್ಲ. ಪ್ರಕರಣ ದಾಖಲಿಸಬೇಡಿ. ಹಾನಿಗೀಡಾದ ಮೂರ್ತಿಗಳನ್ನು ಸರಿ ಮಾಡಿಸಿಕೊಡುತ್ತೇವೆ ಎಂದು ಮುಚ್ಚಳಿಕೆ ಬರೆದು ಕೊಟ್ಟಿದ್ದೀರಿ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ನೀಡಿರುವ ದೂರಿನಲ್ಲಿದೆಯಲ್ಲಾ’ ಎಂದು ನ್ಯಾಯಾಧೀಶ ಜಿ.ಬಸವರಾಜ ಅವರು ಶಿವಯ್ಯ ಅವರನ್ನು ಪ್ರಶ್ನಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಶಿವಯ್ಯ, ‘ಮೆತ್ತಲೆ ಮೆರವಣಿಗೆ ನಡೆಸಿರುವುದು, ಮರಕ್ಕೆ ಕಟ್ಟಿ ಹೊಡೆದಿದ್ದಾರೆ ಎಂಬುದೆಲ್ಲ ನನಗೆ ಗೊತ್ತಿರಲಿಲ್ಲ. ನನಗೆ ಫೋನ್‌ ಬಂದಿತ್ತು. ಠಾಣೆಗೆ ಹೋಗುವಾಗ ಪ್ರತಾಪ್‌ನನ್ನು ಕೈಗೆ ಹಗ್ಗ ಕಟ್ಟಿ ಕೂರಿಸಿದ್ದರು. ನಾನು ಯಾವುದೇ ಮುಚ್ಚಳಿಕೆ ಬರೆದು ಕೊಟ್ಟಿಲ್ಲ’ ಎಂದರು.

‘ಸಂತ್ರಸ್ತರ ಕುಟುಂಬದರವರು ಇದುವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಕೊಟ್ಟಿಲ್ಲ. ಈಗ ಆಕ್ಷೇಪಣೆ ಸಲ್ಲಿಸುತ್ತಿದ್ದಾರೆ’ ಎಂದು ಶ್ರುತಿ ಅವರು ನ್ಯಾಯಾಧೀಶರ ಗಮನ ಸೆಳೆದರು.

ಇದಕ್ಕೆ ಶಿವಯ್ಯ ಅವರು, ‘ನಾವು ವೈರಲ್‌ ಆಗಿದ್ದ ವಿಡಿಯೊವನ್ನು ತೋರಿಸಿ ದೂರು ನೀಡಲು ಹೋದರೆ ಪೊಲೀಸರು ಅದನ್ನು ಸ್ವೀಕರಿಸಲಿಲ್ಲ’ ಎಂದು ದೂರಿದರು.

ವಾದ, ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ಜಿ.ಬಸವರಾಜ ಅವರು 16ರಂದು ಆದೇಶ ನೀಡುವುದಾಗಿ ತಿಳಿಸಿದರು.

ಪ್ರತಿಕ್ರಿಯಿಸಿ (+)