ಬಿಯರ್‌ಗಾಗಿ ಕೊಂದಿದ್ದ ಸುಲಿಗೆಕೋರನಿಗೆ ಗುಂಡೇಟು

7

ಬಿಯರ್‌ಗಾಗಿ ಕೊಂದಿದ್ದ ಸುಲಿಗೆಕೋರನಿಗೆ ಗುಂಡೇಟು

Published:
Updated:
Deccan Herald

ಬೆಂಗಳೂರು: ಬಿಯರ್ ಬಾಟಲಿ ಕೊಡಲಿಲ್ಲವೆಂದು ಓಲಾ ಕ್ಯಾಬ್ ಚಾಲಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಕುಖ್ಯಾತ ಸುಲಿಗೆಕೋರ ಮುರಳೀಧರ್ ಅಲಿಯಾಸ್ ಮುರಳಿ ಎಂಬಾತನ ಕಾಲಿಗೆ ಬೈಯಪ್ಪನಹಳ್ಳಿ ಪೊಲೀಸರು ಗುಂಡು ಹೊಡೆದಿದ್ದಾರೆ.

ಅರಸೀಕೆರೆ ತಾಲ್ಲೂಕಿನ ಮೋಹನ್, ಡಿ.3ರ ರಾತ್ರಿ ನಾಗವಾರಪಾಳ್ಯ ಮುಖ್ಯರಸ್ತೆಯಲ್ಲಿ ಕ್ಯಾಬ್ ಚಾಲನೆ ಮಾಡಿಕೊಂಡು ಬರುತ್ತಿದ್ದರು. ಈ ವೇಳೆ ಮುರಳಿ ಗ್ಯಾಂಗ್ ವಾಹನ ಅಡ್ಡಗಟ್ಟಿ ಅವರನ್ನು ಕೊಲೆ ಮಾಡಿತ್ತು. ಸಿ.ಸಿ ಟಿ.ವಿ ಕ್ಯಾಮೆರಾದ ಸುಳಿವು ಆಧರಿಸಿ ಪೊಲೀಸರು ಮರುದಿನವೇ ಮುರಳಿ ಸಹಚರ ಪೀಟರ್ ಹಾಗೂ 17 ವರ್ಷದ ಹುಡುಗರಿಬ್ಬರನ್ನು ಬಂಧಿಸಿದ್ದರು.

‘ಗುರುವಾರ ಬೆಳಿಗ್ಗೆ 3.30ರ ಸುಮಾರಿಗೆ) ಕತ್ತಾಳಿಪಾಳ್ಯ ರಸ್ತೆ ತಿರುವಿನಲ್ಲಿ ಇನ್‌ಸ್ಪೆಕ್ಟರ್ ರಮೇಶ್‌ ಹಾಗೂ ಸಿಬ್ಬಂದಿ ವಾಹನ
ತಪಾಸಣೆ ಮಾಡುತ್ತಿದ್ದರು. ಈ ವೇಳೆ ಸ್ಕೂಟರ್‌ನಲ್ಲಿ ಬಂದ ಮುರಳಿ, ಪೊಲೀಸರನ್ನು ನೋಡಿ ವಾಹನ ತಿರುಗಿಸಲು ಮುಂದಾದಾಗ ಸಿಬ್ಬಂದಿ ಆತನನ್ನು ಸುತ್ತುವರಿದರು. ಈ ಹಂತದಲ್ಲಿ ಹೆಡ್‌ಕಾನ್‌ಸ್ಟೆಬಲ್‌ ವಿಜಯ್‌ಕುಮಾರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆತನ ಕಾಲಿಗೆ ಇನ್‌ಸ್ಪೆಕ್ಟರ್ ಗುಂಡು ಹೊಡೆದಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದರು. 

ಕುಖ್ಯಾತ ಪಾತಕಿ

ಜೋಗುಪಾಳ್ಯ ನಿವಾಸಿಯಾದ ಮುರಳಿ, ಸುಲಿಗೆ ಮಾಡುವ ಸಲುವಾಗಿಯೇ ಕೊಳೆಗೇರಿ ಹುಡುಗರನ್ನು ಸೇರಿಸಿಕೊಂಡು ಗ್ಯಾಂಗ್ ಕಟ್ಟಿದ್ದ. ರಾತ್ರಿ ವೇಳೆ ನಿರ್ಜನ ಪ್ರದೇಶದಲ್ಲಿ ವಾಹನ ಸವಾರರಿಗೆ ಚಾಕುವಿನಿಂದ ಬೆದರಿಸಿ ನಗ–ನಾಣ್ಯ, ಮೊಬೈಲ್ ಕಿತ್ತುಕೊಳ್ಳುವುದು ಈ ಗ್ಯಾಂಗ್‌ನ ಕೆಲಸವಾಗಿತ್ತು. ಹಲಸೂರು, ಜೀವನ್‌ಬಿಮಾನಗರ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ ಮುರಳಿ ವಿರುದ್ಧ 40ಕ್ಕೂ ಹೆಚ್ಚು ದರೋಡೆ ಪ್ರಕರಣಗಳು ದಾಖಲಾಗಿದ್ದವು.

ಮೋಹನ್ ಅವರು ಡಿ.3ರ ರಾತ್ರಿ ಸ್ನೇಹಿತ ಸಂದೀಪ್ ಜತೆ ನಾಗವಾರಪಾಳ್ಯದ ಬಾರ್‌ಗೆ ಹೋಗಿದ್ದರು. ಅಲ್ಲಿ ಪಾನಮತ್ತರಾದ ಬಳಿಕ, ಇನ್ನೊಂದು ಬಿಯರ್ ಬಾಟಲಿಯನ್ನು ಪಾರ್ಸಲ್ ತೆಗೆದುಕೊಂಡಿದ್ದರು. ಸ್ನೇಹಿತ ಅಲ್ಲಿಂದಲೇ ಮನೆಗೆ ತೆರಳಿದ್ದರಿಂದ ಮೋಹನ್ ಒಬ್ಬರೇ ಮನೆಗೆ ವಾಪಸಾಗುತ್ತಿದ್ದರು.

ಈ ವೇಳೆ ಸಹಚರರ ಜತೆ ಸೇರಿ ವಾಹನ ತಡೆದಿದ್ದ ಮುರಳಿ, ಕ್ಯಾಬ್‌ನಲ್ಲಿದ್ದ ಬಿಯರ್ ಬಾಟಲಿ ನೋಡಿ ಅದನ್ನು ಕೊಡುವಂತೆ ಕೇಳಿದ್ದ. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಚಾಕುವಿನಿಂದ ಇರಿದು ಬಿಯರ್ ತೆಗೆದುಕೊಂಡು ಹೋಗಿದ್ದ. ಇತರೆ ವಾಹನಗಳ ಸವಾರರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೋಹನ್ ಕೊನೆಯುಸಿರೆಳೆದಿದ್ದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !