ಕೇಶ ವಿನ್ಯಾಸ ವ್ಯಕ್ತಿತ್ವದ ರೂಪಕ: ಕ್ಯಾಮೆಲ್ಲಾ ಹರೆಲ್‌

7

ಕೇಶ ವಿನ್ಯಾಸ ವ್ಯಕ್ತಿತ್ವದ ರೂಪಕ: ಕ್ಯಾಮೆಲ್ಲಾ ಹರೆಲ್‌

Published:
Updated:

* ಕೇಶವಿನ್ಯಾಸಕಿ ವೃತ್ತಿ ಆಯ್ದುಕೊಳ್ಳಲು ಕಾರಣ? 

ನಾನು ಫ್ಯಾಷನ್‌ ಪ್ರಿಯೆ. ಬಾಲ್ಯದಂದಲೇ ಫ್ಯಾಷನ್‌ ಕ್ಷೇತ್ರದ ಒಲವಿತ್ತು. ಇಲ್ಲಿನ ಹೊಸತನಗಳು ಸದಾ ನನ್ನನ್ನು ಆಕರ್ಷಿಸುತ್ತಿದ್ದವು. ನನ್ನೊಳಗಿದ್ದ ಫ್ಯಾಷನ್‌ ದೃಷ್ಟಿಕೋನ ಅಥವಾ ಒಳನೋಟವೇ ಈ ವೃತ್ತಿ ಆಯ್ಕೆಗೆ ಕಾರಣ. ಶಾಲೆಯಲ್ಲಿಯೂ ಕೇಶವಿನ್ಯಾಸ ಕಲಿಕೆಯ ಅವಕಾಶವಿತ್ತು. ಅ‌ಲ್ಲಿಂದಲೇ ಕಲಿಕೆಯ ಮೊದಲ ಹೆಜ್ಜೆ ಆರಂಭವಾಯಿತು. ನಂತರ ‘ಸಿಟಿ ಸಲೂನ್‌ ಆಫ್‌ ಲಂಡನ್‌’ನಲ್ಲಿ ತರಬೇತಿ ಪಡೆದು, ಪದವಿ ಪೂರೈಸಿದೆ. ಹೇರ್‌ ಕಲರಿಂಗ್‌ ನನ್ನ ಆಸಕ್ತಿಯ ಕ್ಷೇತ್ರ. ಇಂದಿಗೂ ಕಲರಿಂಗ್ ಕುರಿತ ಕಲಿಕಾ ಪ್ರಕ್ರಿಯೆ ಸಾಗಿದೆ. 

* ಯಶಸ್ವಿ ಕೇಶ ವಿನ್ಯಾಸಕಿಯಾಗಲು ಯಾವೆಲ್ಲ ಅಂಶಗಳು ಅಗತ್ಯ?

ಎಲ್ಲ ವೃತ್ತಿಗಳಂತೆ ಇಲ್ಲಿಯೂ ಕೆಲಸದಲ್ಲಿ ತಲ್ಲೀನತೆ, ಮಗ್ನತೆ ಅಗತ್ಯ. ಜೊತೆಗೆ ಹೊಸತನಗಳಿಗೆ ತೆರೆದುಕೊಳ್ಳುವ, ಒಗ್ಗಿಕೊಳ್ಳುವ ಮನಸ್ಥಿತಿ ಇರಬೇಕು. ಫ್ಯಾಷನ್‌ ಕ್ಷೇತ್ರವಾದ ಕಾರಣ ಇಲ್ಲಿ ನಿತ್ಯವೂ ಬದಲಾವಣೆ ಪರ್ವ. ಅಂತಹ ಪ್ರಯೋಗಗಳನ್ನು ಅನುಸರಿಸಬೇಕು. ಕೇಶ ವಿನ್ಯಾಸ ಮಾಡುವಾಗ ವೈದ್ಯರ ನೋಟ ಇದ್ದರೆ, ಗ್ರಾಹಕಿಯಾಗಿ ಆನಂದಿಸುವ ಮನಸ್ಥಿತಿಯೂ ಇರಬೇಕು. 

*  ಸದ್ಯ ವಿಶ್ವಮಟ್ಟದಲ್ಲಿ ಕೇಶ ವಿನ್ಯಾಸದ ಟ್ರೆಂಡ್‌ ಏನು? 

ವಿಶ್ವದಾದ್ಯಂತ ಒಂದೇ ಟ್ರೆಂಡ್‌ನ್ನು ಗುರುತಿಸುವುದು ಕಷ್ಟಸಾಧ್ಯ. ಭಾರತೀಯರ ಕಪ್ಪುವರ್ಣದ ಕೇಶರಾಶಿ ಬಯಸಿದರೆ, ಲಂಡನ್‌ನಲ್ಲಿ ಕೆಂಪು ಮಿಶ್ರಿತ ಬಿಳಿ ಬಣ್ಣವನ್ನು ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಉದ್ದನೆಯ ಕೇಶರಾಶಿಗಿಂತ ನುಣುಪಾದ ಹೆರಳು ಆಕರ್ಷಣೀಯ. ಈಗ ‘ಲೇಯರ್ಸ್‌ ಲುಕ್‌’ ಜನಪ್ರಿಯ. ಕೂದಲ ತುದಿಯಲ್ಲಿ ಮರೂನ್‌ ಹಾಗೂ ಗುಲಾಬಿ ಬಣ್ಣಗಳನ್ನು ಹಾಕುವ ಈ ಹೇರ್‌ ಸ್ಟೈಲ್‌ ಸೂರ್ಯ ರಶ್ಮಿ ತಾಕಿದಾಗ ಹೊಳೆಯುತ್ತದೆ. ಸುರುಳಿ, ಸುರುಳಿ ಎಳೆ,ಎಳೆಯಾಗಿರುವ ಈ ವಿನ್ಯಾಸ ಸದ್ಯ ಆಕರ್ಷಣೆಯ ಕೇಂದ್ರಬಿಂದು.

* ಕೇಶವಿನ್ಯಾಸದಲ್ಲಿನ ಬದಲಾವಣೆ ಯಾವುದನ್ನು ಆಧರಿಸಿರುತ್ತದೆ?

ಫ್ಯಾಷನ್‌ ಕ್ಷೇತ್ರದ ಬದಲಾವಣೆಗಳಿಗೆ ಇಂತಹದ್ದೆ ನಿರ್ದಿಷ್ಟ ಕಾರಣಗಳಿಲ್ಲ. ಕಾಲವೇ ಬದಲಾವಣೆಯ ರೂವಾರಿ. ಸೌಂದರ್ಯವನ್ನು ನೋಡುವ ಕಣ್ಣುಗಳು, ಅಸ್ವಾದಿಸುವ ಮನಸ್ಸುಗಳಲ್ಲಾಗುವ ಪ್ರತಿ ಬದಲಾವಣೆ ಇಲ್ಲಿ ಬಿಂಬಿತವಾಗುತ್ತದೆ. ಕ್ರಿಯಾಶೀಲ ಕೇಶ ವಿನ್ಯಾಸಕರು ಬದಲಾವಣೆಗೆ ಕಾರಣಕರ್ತರಾಗುತ್ತಾರೆ. ನೂತನ ಟ್ರೆಂಡ್‌ನ ಪ್ರವರ್ತಕರಾಗುತ್ತಾರೆ. 

* ವ್ಯಕ್ತಿತ್ವಕ್ಕೂ ಕೇಶವಿನ್ಯಾಸಕ್ಕೂ ಸಂಬಂಧವಿದೆಯೇ?

ಖಂಡಿತಾ ಸಂಬಂಧವಿದೆ. ವ್ಯಕ್ತಿತ್ವವನ್ನು ಜೀವನ ಶೈಲಿ ಎಂದು ವ್ಯಾಖ್ಯಾನಿಸಬಹುದು. ಕೇಶವಿನ್ಯಾಸಗಳ ಹೊಸ ಬದಲಾವಣೆಗಳನ್ನು ಅನುಸರಿಸುತ್ತಾರೆಯೇ ಅಥವಾ ಸಾಂಪ್ರದಾಯಿಕ ವಿನ್ಯಾಸಗಳ ಮೊರೆಹೋಗುತ್ತಾರೋ ಎನ್ನುವುದರ ಮೇಲೆ ಅವರ ಜೀವನ ಶೈಲಿಯನ್ನು ತಿಳಿದುಕೊಳ್ಳಬಹುದು. 

*  ಉತ್ತಮ ಕೇಶವಿನ್ಯಾಸ ಎಷ್ಟು ಮುಖ್ಯ?

ಕೇಶವಿನ್ಯಾಸ ಜೀವನದ ಅವಿಭಾಜ್ಯ ಭಾಗವಿದ್ದಂತೆ. ಆತ್ಮವಿಶ್ವಾಸದ ಪ್ರತೀಕವೂ ಹೌದು. ನನ್ನ ಕೇಶವಿನ್ಯಾಸ ಸುಂದರವಾಗಿದೆ ಅಥವಾ ಟ್ರೆಂಡಿಯಾಗಿದೆ ಎನ್ನುವ ವಿಶ್ವಾಸ ನನ್ನಲ್ಲಿದ್ದರೆ, ಕೀಳರಿಮೆ ಇರುವುದಿಲ್ಲ. ಇನ್ನೂ ನಿಮ್ಮ ವಿನ್ಯಾಸ ಚೆನ್ನಾಗಿದೆ ಎಂದು ಎಲ್ಲರೂ ಹೊಗಳುತ್ತಿದ್ದರೆ, ಅದು ನಮ್ಮನ್ನು ಖುಷಿಯಾಗಿರಿಸುತ್ತದೆ.

* ಸೆಲೆಬ್ರಿಟಿಗಳ ಕೇಶವಿನ್ಯಾಸದ ಸೀಕ್ರೆಟ್‌ ಏನು?

ಸೆಲೆಬ್ರಿಟಿಗಳ ಹೆರಳಿನ ವಿನ್ಯಾಸದಲ್ಲಿ ನೈಜತೆಗಿಂತ ಕೃತಕತೆಯೇ ಹೆಚ್ಚು. ಸೌಂದರ್ಯಕ್ಕಾಗಿ ರಾಸಾಯನಿಕಗಳು, ವಿವಿಧ ಚಿಕಿತ್ಸೆಗಳ ಮೊರೆಹೋಗುತ್ತಾರೆ. ವಿಶ್ವದ ಅತ್ಯುತ್ತಮ ಹೇರ್‌ಕೇರ್‌ ಬ್ರ್ಯಾಂಡ್‌ಗಳನ್ನು ಬಳಸುತ್ತಾರೆ. 

* ಕೂದಲ ಸೌಂದರ್ಯ ಕಾಪಾಡಿಕೊಳ್ಳಲು ನಿಮ್ಮ ಸಲಹೆ ಏನು?

ಯಾವುದೇ ವಿನ್ಯಾಸಕ್ಕೂ ಮೊದಲು ದಟ್ಟವಾದ ಕೇಶರಾಶಿ ಅಗತ್ಯ. ಕೂದಲು ಇದ್ದರೆ ಮಾತ್ರ ವಿವಿಧ ವಿನ್ಯಾಸ ಅಥವಾ ಬಣ್ಣಗಳನ್ನು ನಿರೀಕ್ಷಿಸಲು ಸಾಧ್ಯ. ಹಾಗಾಗಿ ಹೆಚ್ಚಿನ ಕಂಡೀಷನರ್ ಬಳಸದೆ, ಚಿಕಿತ್ಸೆಗಳ ಮೊರೆಹೋಗದೆ, ನೈಸರ್ಗಿಕ ವಿಧಾನದ ಮೂಲಕ ಕೂದಲನ್ನು ಕಾಪಾಡಿಕೊಳ್ಳಬೇಕು. ಕೂದಲ ಆರೈಕೆಗಾಗಿಯೇ ಸಮಯವನ್ನು ಮೀಸಲಿಡಬೇಕು. ತಮ್ಮ ಕೂದಲಿನ ಗುಣಗಳನ್ನು ಆಧರಿಸಿ ಅದಕ್ಕೆ ಹೊಂದಿಕೆಯಾಗುವ ಚಿಕಿತ್ಸಾ ವಿಧಾನಗಳನ್ನು ಅನುಸರಿಸುವುದು ಒಳಿತು. 

* ಒರಟು ಕೂದಲಿಗಿರುವ ಚಿಕಿತ್ಸಾ ವಿಧಾನಗಳಾವವು? 

ಸಹಜವಾಗಿಯೇ ಹಲವಾರು ಸ್ಟ್ರೈಟನಿಂಗ್ ಚಿಕಿತ್ಸೆಗಳಿವೆ, ರಾಸಾಯನಿಕಗಳನ್ನು ಬಳಸಿಯೂ ಸ್ಮೂತನಿಂಗ್‌ ಮಾಡಬಹುದು. ‘ಡೀಪ್‌ ಆಯಿಲ್ ಥೆರಪಿ’, ‘ಬ್ರೆಜಿಲಿಯನ್ ಆ್ಯಂಟಿ ಫ್ರೀಝ್‌’ ಚಿಕಿತ್ಸೆಗಳು ಸದ್ಯ ಜನಪ್ರಿಯ. 

* ಯಾವ ವಿಧದ ಕೇಶರಾಶಿ ಹೊಂದಿರುವವರಿಗೆ ಎಲ್ಲ ಬಗೆಯ ವಿನ್ಯಾಸಗಳು ಒಗ್ಗಿಕೊಳ್ಳುತ್ತವೆ?

ಸಹಜವಾಗಿಯೇ ನೀಳ ಕೇಶರಾಶಿಯವರಿಗೆ ಯಾವುದೇ ಬಗೆಯ ವಿನ್ಯಾಸವಾದರು ಹೊಂದಿಕೆಯಾಗುತ್ತದೆ. ರೇಷ್ಮೆಯಂತಹ ಕೂದಲಿಗೆ ವಿನ್ಯಾಸ ಮಾಡುವುದೂ ಖುಷಿ ನೀಡುತ್ತದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !