ಬುಧವಾರ, ನವೆಂಬರ್ 20, 2019
21 °C
ವೇತನ ಪರಿಷ್ಕರಣೆಗೆ ಒತ್ತಾಯ

ಕೆಲಸ ಬಹಿಷ್ಕರಿಸಿ ಎ‌ಚ್‌ಎಎಲ್‌ ಸಿಬ್ಬಂದಿ ಮುಷ್ಕರ

Published:
Updated:

ಬೆಂಗಳೂರು: ವೇತನ ಪರಿಷ್ಕರಣೆ ಸಂಬಂಧ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್‌ಎಎಲ್) ಆಡಳಿತ ಮಂಡಳಿ ಹಾಗೂ ಉದ್ಯೋಗಿಗಳ ನಡುವೆ 11 ಬಾರಿ ನಡೆದಿದ್ದ ಮಾತುಕತೆ ವಿಫಲವಾಗಿದ್ದು, ಸೋಮವಾರದಿಂದಲೇ ಕೆಲಸ ಬಹಿಷ್ಕರಿಸಿ ಬಹುತೇಕ ಉದ್ಯೋಗಿಗಳು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ನಗರದಲ್ಲಿರುವ ಎಚ್‌ಎಎಲ್‌ ಕೇಂದ್ರ ಕಚೇರಿ ಎದುರು ಕುಳಿತಿದ್ದ ಉದ್ಯೋಗಿಗಳು, ತಮ್ಮ ಬೇಡಿಕೆ ಈಡೇರಿಸುವವರೆಗೂ ಮುಷ್ಕರ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು. ಮುಂಜಾಗ್ರತಾ ಕ್ರಮವಾಗಿ ಕಚೇರಿಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.

‘ದೇಶ ಕಾಯುತ್ತಿರುವ ರಕ್ಷಣಾ ಇಲಾಖೆಗೇ ರಕ್ಷಣೆ ನೀಡುವ ಕೆಲಸ ನಮ್ಮದು. ಆದರೆ, ನಾವೆಲ್ಲರೂ ಇಂದು ವೇತನ ಪರಿಷ್ಕರಣೆ
ಗಾಗಿ ಮುಷ್ಕರ ಆರಂಭಿಸಬೇಕಾದ ಸ್ಥಿತಿ ಬಂದಿದೆ. ಇದಕ್ಕೆ ಆಡಳಿತ ಮಂಡಳಿಯ ವರ್ತನೆಯೇ ಕಾರಣ’ ಎಂದು ಎಚ್‌ಎಎಲ್‌ ಯೂನಿಯನ್‌ನ ಅಖಿಲ ಭಾರತ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಸೂರ್ಯದೇವ್ ಚಂದ್ರಶೇಖರ್ ಹೇಳಿದರು.

‘ಅಧಿಕಾರಿ ವರ್ಗಕ್ಕೆ ಈಗಾಗಲೇ ಶೇ 35ರಷ್ಟು ವೇತನ ಪರಿಷ್ಕರಣೆ ಮಾಡಿ, ವೇತನವನ್ನೂ ಬಿಡುಗಡೆ ಮಾಡಲಾಗಿದೆ. ಆದರೆ, ಕಾರ್ಮಿಕ ವರ್ಗದವರ ವೇತನ ಪರಿಷ್ಕರಣೆಗೆ ಆಡಳಿತ ಹಿಂದೇಟು ಹಾಕುತ್ತಿದೆ. ವೇತನ ಪರಿಷ್ಕರಣೆ, ಬಡ್ತಿ ಸೇರಿ ಹಲವು ಬೇಡಿಕೆಗಳ ಈಡೇರಿಕೆಗಾಗಿ 2016ರಿಂದಲೇ ಉದ್ಯೋಗಿಗಳು ಮತ್ತು ಆಡಳಿತ ಮಂಡಳಿ ನಡುವೆ ಮಾತುಕತೆ ನಡೆಯುತ್ತಿದೆ. 2017ರ ಜನವರಿ 1ರಿಂದಲೇ ಪರಿಷ್ಕೃತ ವೇತನ ನೀಡುವಂತೆ ಉದ್ಯೋಗಿಗಳು ಒತ್ತಾಯಿಸುತ್ತಿದ್ದಾರೆ. ಯಾವುದೇ ರೀತಿಯಲ್ಲೂ ಸ್ಪಂದನೆ ಸಿಗುತ್ತಿಲ್ಲ’ ಎಂದರು.

‘ಕಂಪನಿಯು ಈ ವರ್ಷ 20 ಸಾವಿರ ಕೋಟಿ ವ್ಯವಹಾರ ನಡೆಸಿದ್ದು, ಮೂರೂವರೆ ಸಾವಿರ ಕೋಟಿ ಲಾಭವಾಗಿರುವ ಬಗ್ಗೆ ಹಣಕಾಸು ವಿಭಾಗದ ಅಧಿಕಾರಿಗಳೇ ಹೇಳಿದ್ದಾರೆ. ಅಷ್ಟಾದರೂ ಕಂಪನಿ ನಷ್ಟದಲ್ಲಿರುವುದಾಗಿ ಆಡಳಿತ ಮಂಡಳಿ ಸುಳ್ಳು ಮಾಹಿತಿ ನೀಡುತ್ತಿದೆ’ ಎಂದು ದೂರಿದರು.

‘ಕೇಂದ್ರ ಸರ್ಕಾರವೇ ಮಧ್ಯಪ್ರವೇಶಿಸಿ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು. ಅಲ್ಲಿಯವೆಗೂ ನಮ್ಮ ಮುಷ್ಕರ ಮುಂದುವರಿಯಲಿದೆ’ ಎಂದು ತಿಳಿಸಿದರು. 

ನಿಯಮಬಾಹಿರ ಮುಷ್ಕರ: ಆಡಳಿತ ಮಂಡಳಿ
‘ಉತ್ತಮ ರೀತಿಯಲ್ಲಿ ವೇತನ ಪರಿಷ್ಕರಣೆ ಮಾಡುವುದಾಗಿ ಭರವಸೆ ನೀಡಿದರೂ ಉದ್ಯೋಗಿಗಳು ನಿಯಮಬಾಹಿರವಾಗಿ ಮುಷ್ಕರ ಆರಂಭಿಸಿದ್ದಾರೆ’ ಎಂದು ಆಡಳಿತ ಮಂಡಳಿ ಹೇಳಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಆಡಳಿತ ಮಂಡಳಿ, ‘ರಕ್ಷಣಾ ಕ್ಷೇತ್ರದ ಸೇವೆಗಾಗಿ ನಿರ್ಮಿಸಲಾದ ಕಂಪನಿಯ ಘನತೆಗೆ ಮುಷ್ಕರದ ಮೂಲಕ ಧಕ್ಕೆ ತರಲಾಗುತ್ತಿದೆ’ ಎಂದಿದೆ. 

ಪ್ರತಿಕ್ರಿಯಿಸಿ (+)