‘ಹಂಸಧ್ವನಿ’ಗೆ ಲೋಕಾಯುಕ್ತರ ರಕ್ಷಣೆ

ಬುಧವಾರ, ಏಪ್ರಿಲ್ 24, 2019
23 °C

‘ಹಂಸಧ್ವನಿ’ಗೆ ಲೋಕಾಯುಕ್ತರ ರಕ್ಷಣೆ

Published:
Updated:

ಬೆಂಗಳೂರು: ಇಂದಿರಾನಗರದ ವಾಕ್‌ ಹಾಗೂ ಶ್ರವಣ ದೋಷವುಳ್ಳ ಮಕ್ಕಳ ಸರ್ಕಾರಿ ಶಾಲೆಯ (ಹಂಸಧ್ವನಿ) ಆಸ್ತಿಯು ದುರುಪಯೋಗ ಆಗದಂತೆ, ಶಾಲೆಯಲ್ಲಿ ದಾಖಲಾತಿ ಹೆಚ್ಚಳ ಆಗುವಂತೆ ಸೂಕ್ತಕ್ರಮ ವಹಿಸಿ ಎಂದು ಲೋಕಾಯುಕ್ತ ಸಂಸ್ಥೆ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಸೂಚನೆ ನೀಡಿದೆ.

‘ಶಾಲೆಯನ್ನು ಉದ್ದೇಶಪೂರ್ವಕವಾಗಿ ಸಮರ್ಪಕ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ಸರ್ಕಾರವೇ ನಿರ್ಧರಿಸಿದಂತೆ ಹಂಸಧ್ವನಿಯನ್ನು ವಸತಿಶಾಲೆಯಾಗಿ ಮಾರ್ಪಡಿಸಿಲ್ಲ. ಇದರಿಂದ ದಾಖಲಾತಿ ಕುಸಿಯುತ್ತಿದೆ. ಶಾಲೆಯನ್ನು ಮುಚ್ಚುವ ತಯಾರಿಗಳು ನಡೆಯುತ್ತಿವೆ’ ಎಂದು ಸಾಮಾಜಿಕ ಕಾರ್ಯಕರ್ತ ಪ್ರಕಾಶ್‌ಗೌಡ ಎಂಬುವರು ಲೋಕಾಯುಕ್ತಕ್ಕೆ ಮಾರ್ಚ್‌ನಲ್ಲಿ ದೂರು ನೀಡಿದ್ದರು. 

ಈ ಕುರಿತು ಪೊಲೀಸರಿಂದ ವರದಿ ತರಿಸಿಕೊಂಡಿರುವ ಲೋಕಾಯುಕ್ತರು, ‘ಶಾಲೆ ಸ್ಥಾಪನೆಯ ಧ್ಯೇಯೋದ್ದೇಶಗಳು ಈಡೇರುವಂತೆ ಮೇಲ್ವಿಚಾರಣೆ ಮಾಡುತ್ತ, ಅದರ ರಕ್ಷಣೆ ಮತ್ತು ಅಭಿವೃದ್ಧಿಯ ಕಡೆ ಗಮನ ಹರಿಸಿ’ ಎಂದು ಆದೇಶಿಸಿದ್ದಾರೆ.

ಶಾಲಾಭಿವೃದ್ಧಿ, ರಕ್ಷಣೆ ಮತ್ತು ಸುಧಾರಣೆಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ನಾಲ್ಕು ವಾರಗಳಲ್ಲಿ ವಸ್ತುಸ್ಥಿತಿಯ ವರದಿ ಸಲ್ಲಿಸುವುದಾಗಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕ ಜಯವಿಭವ ಸ್ವಾಮಿ ಅವರು ಲೋಕಾಯುಕ್ತಕ್ಕೆ ತಿಳಿಸಿದ್ದಾರೆ.

‘ಶಾಲೆಯ ಆಸ್ತಿಗಳನ್ನು ದುರ್ಬಳಕೆ ಮಾಡಿಕೊಂಡು ಈ ಹಿಂದೆ ನಡೆದ ಅಕ್ರಮಗಳ ಕುರಿತು ಸಹ ವರದಿ ಸಲ್ಲಿಸಿ, ಅವುಗಳನ್ನು ಪರಿಹರಿಸಲು ತೆಗೆದುಕೊಂಡ ಕ್ರಮಗಳನ್ನು ತಿಳಿಸಿ’ ಎಂದು ಲೋಕಾಯುಕ್ತರು ಸೂಚಿಸಿದ್ದಾರೆ.

ಶಾಲೆಯ ಅಭಿವೃದ್ಧಿಯಡೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಾರ್ಯದರ್ಶಿಯ ಗಮನ ಸೆಳೆಯಲೆಂದು, ಅವರಿಗೆ ನೋಟಿಸ್‌ ನೀಡಲು ಸಹ ಇಚ್ಛಿಸುತ್ತೇನೆ. ಮುಂದಿನ ವಿಚಾರಣೆ ಒಳಗೆ (ಮೇ 8) ಶಾಲೆಗೆ ಭೇಟಿ ನೀಡಬೇಕೆಂಬ ಅರ್ಜಿದಾರರ ಮನವಿಯನ್ನು ಸಹ ಪರಿಶೀಲಿಸುತ್ತೇನೆ ಎಂದು ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಈ ಕುರಿತು ನಿರ್ದೇಶಕ ಜಯವಿಭವ ಸ್ವಾಮಿ ಅವರನ್ನು ಮಾತನಾಡಿಸಿದಾಗ,‘ಲೋಕಾಯುಕ್ತರ ಆದೇಶದ ಪ್ರತಿ ಸೋಮವಾರ ತಲುಪಿದೆ. ಸಮೀಕ್ಷೆ, ಸಭೆ ನಡೆಸಿ ಶಾಲೆಯ ಅಭಿವೃದ್ಧಿ ಕ್ರಮಗಳ ವರದಿಯನ್ನು ಲೋಕಾಯುಕ್ತರಿಗೆ ಸಲ್ಲಿಸುತ್ತೇವೆ. ಅದನ್ನೆಲ್ಲ ನಿಮಗೆ ಹೇಳಕ್ಕಾಗಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಹಂಸಧ್ವನಿ ಮುಚ್ಚಲು ತಯಾರಿ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ ಮಾರ್ಚ್‌ 8ರಂದು ವರದಿ ಪ್ರಕಟಿಸಿತ್ತು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !