ಅನೈರ್ಮಲ್ಯ ತಾಣ ಆದಿಜಾಂಬವ ಬಡಾವಣೆ

ಭಾನುವಾರ, ಮೇ 26, 2019
29 °C
ರಸ್ತೆ ಬದಿಗಳಲ್ಲಿ ಕಸದ ರಾಶಿ, ಅವೈಜ್ಞಾನಿಕ ಚರಂಡಿ ವ್ಯವಸ್ಥೆ

ಅನೈರ್ಮಲ್ಯ ತಾಣ ಆದಿಜಾಂಬವ ಬಡಾವಣೆ

Published:
Updated:
Prajavani

ಹನೂರು: ರಸ್ತೆಯ ಬದಿಗಳಲ್ಲಿ ಹರಡಿಕೊಂಡಿರುವ ಕಸದ ರಾಶಿ, ಹಳ್ಳಕೊಳ್ಳದಿಂದ ಕೂಡಿದ ಬಡಾವಣೆಯ ರಸ್ತೆಗಳು, ಅವೈಜ್ಞಾನಿಕ ಚರಂಡಿ ಪರಿಣಾಮ ಮಳೆ ಸುರಿದರೆ ಮನೆಗಳಿಗೆ ನುಗ್ಗುವ ನೀರು. ಇದು ತಾಲ್ಲೂಕಿನ ಶಾಗ್ಯ ಗ್ರಾಮದ ಆದಿಜಾಂಬವ ಬಡಾವಣೆಯ ದುಃಸ್ಥಿತಿ.

ಬಡಾವಣೆಯಲ್ಲಿ 80 ಮನೆಗಳಿವೆ. ಸುಮಾರು 400ಕ್ಕೂ ಹೆಚ್ಚು ಜನರು ವಾಸವಿದ್ದಾರೆ. ಅನೇಕ ತಿಂಗಳಿಂದ ಚರಂಡಿಯಲ್ಲಿ ತುಂಬಿರುವ ಹೂಳು ತೆಗೆಯದ ಪರಿಣಾಮ ಕಸಕಡ್ಡಿ ಪ್ಲಾಸ್ಟಿಕ್‌ನಿಂದ ಭರ್ತಿಯಾಗಿ ಸರಾಗವಾಗಿ ತ್ಯಾಜ್ಯ ನೀರು ಹರಿದು ಹೋಗದೆ ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಪರಿಣಾಮ ಬಡಾವಣೆಯ ನಿವಾಸಿಗಳು ರೋಗರುಜಿನ ಹರಡುವ ಭೀತಿಯಲ್ಲಿ ದಿನ ಕಳೆಯುತ್ತಿದ್ದಾರೆ.

ಪಾಚಿಗಟ್ಟಿದ ಮಿನಿತೊಂಬೆ: ಬಡಾವಣೆಯಲ್ಲಿ ಕುಡಿಯುವ ನೀರಿನ ಸರಬರಾಜಿಗಾಗಿ 4 ಮಿನಿ ತೊಂಬೆಗಳಿವೆ. ಹಲವು ವರ್ಷಗಳಿಂದ ಶುಚಿಗೊಳಿಸದೆ ಎಲ್ಲ ತೊಂಬೆಯ ಸುತ್ತಲೂ ಹಸಿರು ಬಣ್ಣದ ಪಾಚಿ ಕಟ್ಟಿದೆ. ಇದರಿಂದ ಕುಡಿಯುವ ನೀರು ಕೂಡ ಕಲುಷಿತಗೊಳುತ್ತಿದೆ ಎನ್ನುವುದು ನಿವಾಸಿಗಳ ದೂರು. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲೇ ಈ ಸ್ಥಿತಿಯಾದರೆ, ಇದರೊಳಗಿನ ಗ್ರಾಮಗಳು ಎಷ್ಟರಮಟ್ಟಿಗೆ ಮೂಲಸೌಲಭ್ಯದಿಂದ ಕೂಡಿರುತ್ತವೆ ಎನ್ನುವ ಪ್ರಶ್ನೆ ಮೂಡುತ್ತಿದೆ ಎನ್ನುತ್ತಾರೆ ನಿವಾಸಿಗಳು.

ಕಸದ ರಾಶಿ: ಶಾಗ್ಯ ಗ್ರಾಮದಿಂದ ಪುಷ್ಪಾಪುರಕ್ಕೆ ಹೋಗುವ ಡಾಂಬರ್ ರಸ್ತೆಯ ಬದಿಗಳಲ್ಲಿಯೇ ಎಲ್ಲೆಂದರಲ್ಲಿ ಕಸವನ್ನು ಬಿಸಾಡಿ ಕಸದ ರಾಶಿಯನ್ನೇ ನಿರ್ಮಿಸಿದ್ದಾರೆ. ಅನೇಕರು ರಸ್ತೆ ಬದಿಯಲ್ಲೇ ತಮ್ಮ ಜಾನುವಾರುಗಳ ಸಗಣಿಯ ರಾಶಿ ನಿರ್ಮಾಣ ಮಾಡಿದ್ದಾರೆ. ಕಳೆದ ಆರು ತಿಂಗಳಿಂದ ಕಸ ವಿಲೇವಾರಿ ಮಾಡದೆ, ರಸ್ತೆಯ ಬದಿಯ ಸುತ್ತಲೂ ಹರಡಿಕೊಂಡಿದೆ.

‘ರಸ್ತೆಯಲ್ಲಿನ ಕಸದ ಗುಡ್ಡೆಯನ್ನು ವಿಲೇವಾರಿ ಮಾಡಿ ಚರಂಡಿಯನ್ನು ಶುಚಿಗೊಳಿಸುವಂತೆ ಕಳೆದ ಆರು ತಿಂಗಳಿಂದಲೂ ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳಲ್ಲಿ ಸಾಕಷ್ಟು ಬಾರಿ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದೇನೆ. ಆದರೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇದಕ್ಕೆ ಸ್ಪಂದಿಸುತ್ತಿಲ್ಲ. ಮಳೆ ಬಂದರೆ ಚರಂಡಿ ನೀರು ತುಂಬಿ ಮನೆಗೆ ನುಗ್ಗುತ್ತದೆ. ಕೂಡಲೇ, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ’ ಎಂದು ಬಡಾವಣೆ ನಿವಾಸಿ ನಾಗರಾಜು ‘ಪ್ರಜಾವಾಣಿ’ಗೆ ಹೇಳಿದರು.

ಹಳ್ಳದಿಣ್ಣೆಗಳಿಂದ ಕೂಡಿದ ರಸ್ತೆ: ಬಡಾವಣೆಗಳಲ್ಲಿ ರಸ್ತೆ ಮಧ್ಯದಲ್ಲಿಯೇ ಹರಿಯುವ ಕೊಳಚೆ ನೀರಿನ ಪರಿಣಾಮ ಅಲ್ಲಲ್ಲಿ ಗುಂಡಿ ನಿರ್ಮಾಣವಾಗಿದೆ. ಹದಗೆಟ್ಟ ರಸ್ತೆಯಲ್ಲಿ ಮಕ್ಕಳು ಮತ್ತು ವೃದ್ಧರ ಸಂಚಾರ ದುಸ್ತರವಾಗಿದೆ. ವಾಹನ ಸವಾರರಿಗೆ ಗುಂಡಿ ತಪ್ಪಿಸಿ ಸಾಗುವುದು ಸವಾಲಾಗಿ ಮಾರ್ಪಟ್ಟಿದೆ. ಅನೇಕ ವರ್ಷ ಕಳೆದರೂ ಸಮರ್ಪಕ ರಸ್ತೆ ನಿರ್ಮಾಣವಾಗಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಯಾಕೆ ಅರ್ಥವಾಗುತ್ತಿಲ್ಲ ಎನ್ನುವುದೇ ತಿಳಿಯುತ್ತಿಲ್ಲ. ಸಂಬಂಧಪಟ್ಟ ಇಲಾಖೆ ರಸ್ತೆ ದುರಸ್ತಿಗೆ ಕ್ರಮ ವಹಿಸಬೇಕು ಎನ್ನುವುದು ನಿವಾಸಿ, ವಾಹನ ಸವಾರರ ಒತ್ತಾಯ.

ಮೂಲಸೌಲಭ್ಯ ಕಲ್ಪಿಸಿ: ವೈಜ್ಞಾನಿಕ ಚರಂಡಿ ನಿರ್ಮಾಣ, ರಸ್ತೆ ಬದಿಯ ತ್ಯಾಜ್ಯ ವಿಲೇವಾರಿ, ತೊಂಬೆಗಳ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಬಡಾವಣೆಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು ಎನ್ನುವುದು ನಿವಾಸಿಗಳ ಮನವಿ.

ನಿವಾಸಿಗಳಲ್ಲಿ ಅರಿವಿನ ಕೊರತೆ

ರಸ್ತೆ ಬದಿಗಳಲ್ಲಿ ಜಾನುವಾರುಗಳ ಸಗಣಿ ಹಾಗೂ ಇತರೆ ತ್ಯಾಜ್ಯಗಳನ್ನು ಎಸೆಯದಂತೆ ನಿವಾಸಿಗಳಿಗೆ ಅರಿವು ಮೂಡಬೇಕು. ಗ್ರಾಮ ಪಂಚಾಯಿತಿ ಅಲ್ಲಲ್ಲಿ ಕಸದ ತೊಟ್ಟಿಗಳನ್ನು ನಿರ್ಮಿಸಿ ಕಸ ತುಂಬಿದ ಬಳಿಕ ವಿಲೇವಾರಿಗೆ ಅಗತ್ಯ ಕ್ರಮ ವಹಿಸಬೇಕು. ಈ ಬಗ್ಗೆ ಬಡಾವಣೆಯ ನಿವಾಸಿಗಳಲ್ಲೂ ಅರಿವು ಮೂಡಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುಂದಾಗಬೇಕಿದೆ ಎನ್ನುವುದು ಕೆಲ ಜನರ ಅಭಿಪ್ರಾಯವಾಗಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !