ಮಳೆ ಬಂದರೂ ಬಿತ್ತನೆಗೆ ರೈತರ ಹಿಂದೇಟು

7
ಹನೂರು: ಲೊಕ್ಕನಹಳ್ಳಿ ಹೋಬಳಿ ಬಿಟ್ಟು ಉಳಿದೆಡೆ ಜಮೀನು ಖಾಲಿ ಖಾಲಿ

ಮಳೆ ಬಂದರೂ ಬಿತ್ತನೆಗೆ ರೈತರ ಹಿಂದೇಟು

Published:
Updated:
Deccan Herald

ಹನೂರು: ತಾಲ್ಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟರೂ, ಹಿಂಗಾರು ಮಳೆ ಉತ್ತಮವಾಗಿ ಬೀಳುತ್ತಿದೆ. ಆದರೂ, ಈ ಭಾಗದಲ್ಲಿ ರೈತರು ಬೇಸಾಯಕ್ಕೆ ಹೆಚ್ಚು ಆಸಕ್ತಿ ತೋರಿಸಿಲ್ಲ. ಪರಿಣಾಮವಾಗಿ ಸಾವಿರಾರು ಹೆಕ್ಟೇರ್ ಕೃಷಿ ಜಮೀನು ಖಾಲಿಯಾಗಿ ಬಿದ್ದಿದೆ.

ರಾಮಾಪುರ, ಲೊಕ್ಕನಹಳ್ಳಿ, ಹಾಗೂ ಹನೂರು ಹೋಬಳಿಗಳಲ್ಲಿ ಮುಂಗಾರು ಮಳೆಯಾಶ್ರಿತ ಪ್ರದೇಶಗಳಲ್ಲಿ ಕಡಲೆಕಾಯಿ, ಮುಸುಕಿನ ಜೋಳ, ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಆದರೆ, ನಿಗದಿತ ಸಮಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಮುಂಗಾರು ಮಳೆ ಬೀಳದ ಕಾರಣ, ರೈತರು ಉಳುಮೆಗೆ ಮುಂದಾಗಿರಲಿಲ್ಲ. ಇನ್ನೂ ಕೆಲವು ಕಡೆಗಳಲ್ಲಿ ಉಳುಮೆ ಮಾಡಿದರೂ ಬಿತ್ತನೆ ಮಾಡಲು ಅವರು ಮನಸ್ಸು ಮಾಡಿರಲಿಲ್ಲ. ಕೆಲವು ದಿನಗಳಿಂದೀಚೆಗೆ ಹಿಂಗಾರು ಮಳೆ ತಾಲ್ಲೂಕಿನಾದ್ಯಂತ ಚೆನ್ನಾಗಿ ಬೀಳುತ್ತಿದೆ. ಆದರೂ, ಬಿತ್ತನೆಗೆ ಇನ್ನೂ ಅವರು ಮನಸ್ಸು ಮಾಡಿಲ್ಲ. ವಾರ್ಷಿಕ ಸರಾಸರಿ ಮಳೆ ಈ ಬಾರಿ ಆಗುವುದಿಲ್ಲವೇನೋ ಎಂಬ ಆತಂಕ ಅವರಲ್ಲಿದೆ.

ತಾಲ್ಲೂಕಿನಲ್ಲಿರುವ ಒಟ್ಟು 36 ಸಾವಿರ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದ ಪೈಕಿ ಲೊಕ್ಕನಹಳ್ಳಿ ಹೋಬಳಿ ಬಿಟ್ಟರೆ, ಇನ್ನುಳಿದ ಹೋಬಳಿಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆದಿಲ್ಲ. ಹಿಂಗಾರು ಮಳೆ ನಂಬಿ ಸಾಲ ಮಾಡಿ ಬೇಸಾಯಕ್ಕೆ ತೊಡಗಿಸಿದರೂ ಉತ್ತಮ ಇಳುವರಿ ಸಾಧ್ಯವಿಲ್ಲ ಎಂದು ತಿಳಿದು ಈ ಬಾರಿ ಬೇಸಾಯಕ್ಕೆ ಮುಂದಾಗಿಲ್ಲ ಎಂಬುದು ಕೃಷಿ ಅಧಿಕಾರಿಗಳ ಅಭಿಪ್ರಾಯ.

ಆದರೂ, ಕೆಲವು ಮಳೆಯಾಶ್ರಿತ ಪ್ರದೇಶಗಳಲ್ಲಿ ರೈತರು ಧೈರ್ಯ ಮಾಡಿ ರಾಗಿ ಬಿತ್ತನೆ ಮಾಡಿದ್ದಾರೆ. ಹನೂರು ಹೋಬಳಿಯ ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. 

ಕೃಷಿ ಇಲಾಖೆ ನೀಡಿರುವ ಅಂಕಿ–ಅಂಶಗಳ ಪ್ರಕಾರ, ಲೊಕ್ಕನಹಳ್ಳಿ ಹೋಬಳಿಯಲ್ಲಿ ಸುಮಾರು 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ, ಆಲೂಗೆಡ್ಡೆ, ಬೀಟ್‌ರೂಟ್‌, ಕ್ಯಾರೆಟ್‌ ಮುಂತಾದ ಬೆಳೆಗಳನ್ನು ಬೆಳೆಯಲಾಗಿದೆ. ಪ್ರತಿ ಬಾರಿಯೂ ಈ ಭಾಗದಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆ ಹೆಚ್ಚಿನ ‍ಪ್ರಮಾಣದಲ್ಲಿ ಬೀಳುತ್ತದೆ. ಹಾಗಾಗಿ ಇಲ್ಲಿನ ರೈತರು ಧೈರ್ಯವಾಗಿ ಬೇಸಾಯ ಮಾಡುತ್ತಾರೆ.

ಅರಣ್ಯದಂಚಿನ ಪ್ರದೇಶಗಳಲ್ಲಿ ಬಿತ್ತನೆ

ರಾಮಾಪುರ ಹೋಬಳಿಯ ಮಾರ್ಟಳ್ಳಿ, ಮಹದೇಶ್ವರ ಬೆಟ್ಟ ಮುಂತಾದ ಕಡೆಗಳಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಈ ಭಾಗದ ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೇಸಾಯ ಮಾಡಲಾಗಿದೆ. ಉತ್ತಮ ಮಳೆಯಾಗುವುದೆಂಬ ನಂಬಿಕೆಯಿಂದ ಅರಣ್ಯದಂಚಿನಲ್ಲಿ ಕೆಲ ರೈತರು ಧೈರ್ಯವಾಗಿ ರಾಗಿ ಹಾಗೂ ಜೋಳ ಬೆಳೆಯಲು ಮುಂದಾದರೆ, ಇನ್ನು ಕೆಲ ರೈತರು ವನ್ಯಪ್ರಾಣಿಗಳ ಹಾವಳಿಗೆ ಹೆದರಿ ಬೇಸಾಯವನ್ನೇ ಮಾಡದೇ ಕೈಚೆಲ್ಲಿ ಕುಳಿತಿದ್ದಾರೆ. ಆದರೂ, ಕಾವೇರಿ ವನ್ಯಧಾಮದ ಅರಣ್ಯದಂಚಿನಲ್ಲಿನ ರೈತರು ಭರವಸೆಯಿಂದ ಸುಮಾರು 50 ಎಕರೆ ಪ್ರದೇಶದಲ್ಲಿ ಕಡಲೆಕಾಯಿ ಬಿತ್ತನೆ ಮಾಡಿದ್ದಾರೆ.

ರೈತರು ಧೃತಿಗೆಡಬೇಕಾಗಿಲ್ಲ

ಈ ಬಾರಿ ಮುಂಗಾರು ಮಳೆ ಕ್ಷೀಣಿಸಿದರೂ ಹಿಂಗಾರು ಮಳೆ ಉತ್ತಮವಾಗಿ ಬಿದ್ದಿದೆ. ರೈತರು ಧೃತಿಗೆಡಬಾರದು. ತಮ್ಮ ಜಮೀನುಗಳನ್ನು ಖಾಲಿ ಬಿಡದೆ ರಾಗಿ ಹಾಗೂ ಹುರುಳಿ ಬೆಳೆ ಬೆಳೆಯಬಹುದು. ನೀರಾವರಿ ಜಮೀನುಗಳ ಮಾಲೀಕರು ಧೃಢೀಕರಣ ಪತ್ರ ನೀಡಿದರೆ ಅವಶ್ಯಕವಾದ ಬಿತ್ತನೆ ಬೀಜ ವಿತರಿಸಲಾಗುವುದು ಎಂದು ಕೊಳ್ಳೇಗಾಲದ ತಾಂತ್ರಿಕ ಕೃಷಿ ಅಧಿಕಾರಿ ಮನೋಹರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

**

ಅಂಕಿ ಅಂಶ

36,000 ಹೆಕ್ಟೇರ್‌: ಹನೂರು ತಾಲ್ಲೂಕಿನಲ್ಲಿರುವ ಮಳೆಯಾಶ್ರಿತ ಕೃಷಿ ಭೂಮಿ

18,000 ಹೆಕ್ಟೇರ್‌: ಬಿತ್ತನೆ ಮಾಡಿರುವ ಪ್ರದೇಶದ ವಿಸ್ತೀರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !