ಮಂಗಳವಾರ, ಸೆಪ್ಟೆಂಬರ್ 17, 2019
21 °C
ಹೆಸರಿಗಷ್ಟೇ ಪ್ರತ್ಯೇಕ ತಾಲ್ಲೂಕು, ಕ್ರೀಡಾಕೂಟಕ್ಕೆ ಪರಿಗಣಿಸದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ಹನೂರು: ಈ ಬಾರಿಯೂ ಇಲ್ಲ ದಸರಾ ಕ್ರೀಡಾಕೂಟ

Published:
Updated:
Prajavani

ಹನೂರು: ಪ್ರತ್ಯೇಕ ತಾಲ್ಲೂಕು ರಚನೆಯಾದ ಬಳಿಕ ಮೊದಲ ಬಾರಿಗೆ ದಸರಾ ಕ್ರೀಡಾಕೂಟ ನಡೆಯಬಹುದೆಂಬ ತಾಲ್ಲೂಕಿನ ಜನತೆಯ ನಿರೀಕ್ಷೆ ಈ ಬಾರಿಯೂ ಹುಸಿಯಾಗಿದೆ.

ವಿಶಾಲವಾದ ಕೊಳ್ಳೇಗಾಲ ತಾಲ್ಲೂಕಿನ ನಂಟು ಕಳಚಿಕೊಂಡು 2018ರಲ್ಲಿ ಹನೂರು ನೂತನ ತಾಲ್ಲೂಕು ಆಗಿದ್ದರೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎರಡು ವರ್ಷ ಕಳೆದರೂ ಪ್ರತ್ಯೇಕ ತಾಲ್ಲೂಕು ಎಂದು ಪರಿಗಣಿಸಿಲ್ಲ. ಎಲ್ಲ ತಾಲ್ಲೂಕುಗಳಲ್ಲಿ ದಸರಾ ಕ್ರೀಡಾಕೂಟ ಕೆಲವೇ ದಿನಗಳಲ್ಲಿ ನಡೆಯಲಿದ್ದು, ತಾಲ್ಲೂಕಿನ ಕ್ರೀಡಾಳುಗಳು ಕೊಳ್ಳೇಗಾಲದಲ್ಲಿ ನಡೆಯುವ ಕೂಟದಲ್ಲೇ ಭಾಗವಹಿಸಬೇಕಿದೆ.

ಹೊಸ ತಾಲ್ಲೂಕು ಎಂದು ಘೋಷಣೆಯಾದ ವರ್ಷದಲ್ಲೇ ದಸರಾ ಕ್ರೀಡಾಕೂಟ ಆಯೋಜಿಸಲು ಸಾಧ್ಯವಿಲ್ಲ ಎಂಬ ನೆಪವೊಡ್ಡಿ ಕಳೆದ ವರ್ಷ ನಡೆದಿರಲಿಲ್ಲ. ಎರಡನೇ ವರ್ಷದಲ್ಲಾದರೂ ಕ್ರೀಡಾಕೂಟ ಆಯೋಜಿಸಬಹುದು ಎಂಬ ನಿರೀಕ್ಷೆಯಲ್ಲಿ ಕ್ರೀಡಾಪಟುಗಳಿದ್ದರು. ಆದರೆ, ಈ ಸಲವೂ ಅವರಿಗೆ ನಿರಾಸೆಯಾಗಿದೆ.

‘ಹನೂರು ತಾಲ್ಲೂಕು ಕೇಂದ್ರವಾಗಿದ್ದರೂ ಇಲ್ಲಿ ದಸರಾ ಕ್ರೀಡಾಕೂಟ ನಡೆಸಲು ಅಧಿಕಾರಿಗಳು ಆಸಕ್ತಿ ವಹಿಸಿಲ್ಲ. ಇಂದಿಗೂ ಹನೂರು ಕೊಳ್ಳೇಗಾಲ ತಾಲ್ಲೂಕಿನ ವ್ಯಾಪ್ತಿಗೆ ಒಳಪಟ್ಟಿದೆ ಎಂಬಂತೆ ಅಧಿಕಾರಿಗಳು ಬಿಂಬಿಸುತ್ತಿದ್ದಾರೆ’ ಎಂಬುದು ಸ್ಥಳೀಯರ ಆರೋಪ.

ಈಗ ಹನೂರಿನಲ್ಲಿ ಗ್ರೇಡ್‌–1 ತಹಶೀಲ್ದಾರ್‌ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲ್ಲೂಕು ಆಡಳಿತ ವತಿಯಿಂದ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯನ್ನು ಅಸ್ತಿತ್ವಕ್ಕೆ ತಂದು ತಹಶೀಲ್ದಾರ್ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಹಂತ ಹಂತವಾಗಿ ಎಲ್ಲ ಕಚೇರಿಗಳು ಹನೂರಿಗೆ ಸ್ಥಳಾಂತರಗೊಳ್ಳಲಿವೆ ಎಂದು ಶಾಸಕರೂ ಭರವಸೆ ನೀಡಿದ್ದಾರೆ. ಇಷ್ಟಾದರೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಹನೂರಿನಲ್ಲಿ ದಸರಾ ಕ್ರೀಡಾಕೂಟ ಆಯೋಜಿಸಿಲ್ಲ ಎಂದು ಅಸಮಾಧಾನವನ್ನು ಸ್ಥಳೀಯ ಕ್ರೀಡಾಸಕ್ತರು ವ್ಯಕ್ತಪಡಿಸುತ್ತಿದ್ದಾರೆ.

ಭೌಗೋಳಿಕವಾಗಿ ವಿಶಾಲವಾಗಿರುವ ತಾಲ್ಲೂಕಿನಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಕೊರತೆಯಿಲ್ಲ. ಗೋಪಿನಾಥಂ, ಹೂಗ್ಯಂ, ಮೀಣ್ಯಂ, ಪೊನ್ನಾಚಿ ಹಾಗೂ ಮಹದೇಶ್ವರ ಬೆಟ್ಟದ ಕ್ರೀಡಾಪಟುಗಳು ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕೆಂದರೆ ನೂರಾರು ಕೀ.ಮೀ ದೂರವಿರುವ ಕೊಳ್ಳೇಗಾಲಕ್ಕೆ ಬರಬೇಕಾದ ಅನಿವಾರ್ಯತೆ ಇದೆ. 

‘ಗ್ರಾಮೀಣ ಭಾಗದಿಂದಲೇ ಆವೃತ್ತವಾಗಿರುವುದರಿಂದ ಹನೂರಿನಲ್ಲಿ ದಸರಾ ಕ್ರೀಡಾಕೂಟ ಆಯೋಜಿಸಿದರೆ ಗ್ರಾಮೀಣ ಪ್ರತಿಭೆಗಳು ಹೊರಬರಲು ಸಾಧ್ಯವಾಗುತ್ತದೆ. ಅಲ್ಲದೆ, ಕ್ರೀಡಾಕೂಟದ ಬಗ್ಗೆ ಅರಿವೂ ಮೂಡುತ್ತದೆ. ತಾಲ್ಲೂಕು ರಚನೆಯಾಗಿ ಎರಡು ವರ್ಷ ಕಳೆದು ಸರ್ಕಾರದ ಎಲ್ಲ ಕಡತಗಳಲ್ಲೂ ಹನೂರು ತಾಲ್ಲೂಕು ಕೇಂದ್ರ ಎಂದು ಉಲ್ಲೇಖಿಸಲಾಗಿದೆ. ಹಲವು ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ಕ್ರೀಡಾಕೂಟಗಳೂ ಇಲ್ಲಿ ಜರುಗಿವೆ. ಇಲಾಖೆ ಇದನ್ನು ಮನಗಂಡು ಇಲ್ಲಿಯೂ ದಸರಾ ಕ್ರೀಡಾಕೂಟವನ್ನು ಆಯೋಜಿಸಬೇಕಿತ್ತು’ ಎಂದು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸಲಾವುದ್ದೀನ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಸರ್ಕಾರದ ಆದೇಶ ಇಲ್ಲ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಚೆಲುವಯ್ಯ ಅವರು, ‘ಹನೂರು ತಾಲ್ಲೂಕು ಕೇಂದ್ರದಲ್ಲಿ ದಸರಾ ಕ್ರೀಡಾಕೂಟ ಆಯೋಜಿಸುವ ಬಗ್ಗೆ ಸರ್ಕಾರದಿಂದ ಆದೇಶ ಬಂದಿಲ್ಲ. ಹಾಗಾಗಿ ಜಿಲ್ಲಾ ಪಂಚಾಯಿತಿ ಬಜೆಟ್ ಮಂಡಿಸುವ ವೇಳೆ, ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಮಾತ್ರ ಕ್ರೀಡಾಕೂಟ ನಡೆಸಲು ನಿರ್ಧರಿಸಲಾಗಿದೆ’ ಎಂದರು.

ಎಲ್ಲಿ, ಯಾವಾಗ ಕ್ರೀಡಾಕೂಟ?

ಇದೇ 13ರಂದು ಗುಂಡ್ಲುಪೇಟೆಯಲ್ಲಿ (ಡಿ.ದೇವರಾಜ ಅರಸು ತಾಲ್ಲೂಕು ಕ್ರೀಡಾಂಗಣ), 14ರಂದು ಯಳಂದೂರು (ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನ), 16ರಂದು ಚಾಮರಾಜನಗರ (ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣ) ಮತ್ತು 18ರಂದು ಕೊಳ್ಳೇಗಾಲದಲ್ಲಿ (ತಾಲ್ಲೂಕು ಕ್ರೀಡಾಂಗಣ ಮತ್ತು ಮಹದೇಶ್ವರ ಪ್ರಥಮದರ್ಜೆ ಕಾಲೇಜಿನ ಮೈದಾನದ) ದಸರಾ ಕ್ರೀಡಾಕೂಟಗಳು ನಡೆಯಲಿವೆ.

Post Comments (+)