ಉದ್ಯಮಿಗಳಲ್ಲಿ ಸಂತೃಪ್ತ ಭಾವ; ಭರ್ಜರಿ ವಹಿವಾಟು..!

7
ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ತೆರೆ ಇಂದು

ಉದ್ಯಮಿಗಳಲ್ಲಿ ಸಂತೃಪ್ತ ಭಾವ; ಭರ್ಜರಿ ವಹಿವಾಟು..!

Published:
Updated:
Deccan Herald

ವಿಜಯಪುರ: ಹದಿನೈದು ದಿನಗಳಿಂದ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಜನಜಾತ್ರೆ. ಮುಂಜಾನೆಯಿಂದ ರಾತ್ರಿವರೆಗೂ ಬಿಡುವಿಲ್ಲದ ವಹಿವಾಟು. ಮುಸ್ಸಂಜೆ ವೇಳೆ ಕಿಕ್ಕಿರಿದ ಜನಸಂದಣಿ.

ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಖಾದಿ ಮತ್ತು ಗ್ರಾಮೋದ್ಯೋಗ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಆಯೋಜನೆಗೊಂಡಿರುವ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ–2018ರಲ್ಲಿನ ಚಿತ್ರಣವಿದು.

ಮಾರಾಟ ಮೇಳದಲ್ಲಿ ಈ ಬಾರಿ ರಾಜ್ಯದ ವಿವಿಧೆಡೆಯ ಖಾದಿ ಗ್ರಾಮೋದ್ಯೋಗ ಸಂಘಗಳ ಮಳಿಗೆಗಳ ಜತೆಗೆ, ರೇಷ್ಮೆ ಉದ್ಯಮ ಹಾಗೂ ಹೊರ ರಾಜ್ಯದ ಖಾದಿ ಮಳಿಗೆಗಳು ತಮ್ಮ ಉತ್ಪನ್ನ ಮಾರಾಟಕ್ಕೆ ಮುಂದಾಗಿದ್ದು ವಿಶೇಷ.

ಪ್ರದರ್ಶನದಲ್ಲಿದ್ದ ಉತ್ಪನ್ನಗಳು: ಅರಳೆ, ರೇಷ್ಮೆ, ಉಣ್ಣೆ ಖಾದಿ ಮತ್ತು ಪಾಲಿವಸ್ತ್ರ ಬಟ್ಟೆಗಳು ಹಾಗೂ ಸಿದ್ಧ ಉಡುಪುಗಳು. ಆಕರ್ಷಕ ರೇಷ್ಮೆ ಸೀರೆಗಳು. ಕಸೂತಿ ಸೀರೆಗಳು, ಖಾದಿ ಜಮಾಖಾನೆಗಳು, ಬೆಡ್‌ಶೀಟ್‌ (ಚಾದರ), ಖಾದಿ ಟವೆಲ್, ಜ್ಯಾಕೇಟ್‌, ಬಳ್ಳಾರಿ ಕಾಟನ್‌ ಜೀನ್ಸ್‌. ರೆಡಿಮೇಡ್‌ ಶರ್ಟ್, ಖಾದಿ ಶರ್ಟ್‌.

ಚಪ್ಪಲಿ, ಶೂ, ಬೆಲ್ಟ್‌, ಪಾಕೆಟ್‌, ವ್ಯಾನಿಟಿ ಬ್ಯಾಗ್ ಸೇರಿದಂತೆ ಇತ್ಯಾದಿ ಚರ್ಮದ ವಸ್ತುಗಳು. ನಾರಿನ ಮತ್ತು ವಸ್ತುಗಳಿಂದ ತಯಾರಿಸಿದ ಗೃಹಲಂಕಾರ ವಸ್ತುಗಳು, ಆಯುರ್ವೇದಿಕ್ ಉತ್ಪನ್ನಗಳು, ನೈಸರ್ಗಿಕವಾದ ಜೇನುತುಪ್ಪ, ಸಾಂಬಾರ ಪದಾರ್ಥಗಳು, ಉತ್ತರ ಕರ್ನಾಟಕದ ರೊಟ್ಟಿ, ಶೇಂಗಾ ಚಟ್ನಿಪುಡಿ, ಸಿಹಿ ತಿನಿಸು.

ಕರಕುಶಲ ವಸ್ತುಗಳು, ಕಾಶ್ಮೀರಿ ಶಾಲುಗಳು, ಚನ್ನಪಟ್ಟಣದ ಆಟಿಕೆ ಗೊಂಬೆಗಳು, ಇಳಕಲ್‌ ಸೀರೆ ಸೇರಿದಂತೆ ತರಹೇವಾರಿ ಉತ್ಪನ್ನಗಳು ಮೇಳದಲ್ಲಿ ಗ್ರಾಹಕರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದವು. ಮುಕ್ತ ಮಾರುಕಟ್ಟೆಯಲ್ಲಿನ ಬೆಲೆಗಿಂತ ಕಡಿಮೆ ಧಾರಣೆಗೆ ದೊರೆತಿದ್ದು ಮೇಳದ ವಿಶೇಷ.

ಮಾರಾಟಗಾರರಲ್ಲಿ ಖುಷಿ: ‘ರಾಜ್ಯದ ವಿವಿಧೆಡೆ ನಡೆಯುವ ಖಾದಿ ಮಾರಾಟ ಮೇಳಕ್ಕೆ ಹೋಗುತ್ತೇವೆ. ವಿಜಯಪುರದಲ್ಲಿ ಪ್ರತಿ ವರ್ಷ ನಡೆಯುವ ಮೇಳ ನಮಗೆ ಅಚ್ಚುಮೆಚ್ಚು. ಇಲ್ಲಿ ನಮ್ಮ ಕಾಯಂ ಗಿರಾಕಿಗಳಿದ್ದಾರೆ. ಮೇಳ ಆರಂಭವಾಯ್ತು ಎಂದೊಡನೆ ಯಾರೂ ಅವರಿಗೆ ಹೇಳೋದೇ ಬೇಡ. ಹುಡುಕಿಕೊಂಡು ನಮ್ಮ ಮಳಿಗೆಗೆ ಅವರೇ ಬರುತ್ತಾರೆ’ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕರಿಯಪ್ಪಲ್ಲಿ ಗ್ರಾಮದ ಟಿಎನ್‌ಆರ್ ಸಿಲ್ಕ್‌ ಖಾದಿ ಇಂಡಸ್ಟ್ರಿಸ್‌ನ ಶಶಿಕುಮಾರ್ ತಿಳಿಸಿದರು.

‘ವಿಜಯಪುರದ ಗ್ರಾಹಕರ ಜತೆ ನಮಗೆ ಅವಿನಾಭಾವ ಸಂಬಂಧವಿದೆ. ಪ್ರತಿ ವರ್ಷ ಸಿದ್ಧೇಶ್ವರ ಜಾತ್ರೆ, ಸಂಕ್ರಾಂತಿ ಸಂದರ್ಭ ಮೇಳ ನಡೆಯುತ್ತಿತ್ತು. ಆಗ ಜಾತ್ರೆ, ಹಬ್ಬದ ಮೂರು ದಿನ ಇಲ್ಲಿನವರು ಮನೆಯಿಂದ ಊಟ ತಂದು ಕೊಡುವುದನ್ನು ಮರೆಯಲಾಗಲ್ಲ. ದಕ್ಷಿಣ ಕರ್ನಾಟಕದ ಕೆಲವರು ಇಲ್ಲಿದ್ದಾರೆ. ಅವರು ಸಹ ನಮ್ಮ ಕಾಯಂ ಗಿರಾಕಿಗಳು. ಒಬ್ಬೊಬ್ಬರು ಒಂದೊಂದು ದಿನ ಮುದ್ದೆ ಊಟವನ್ನು ತಂದು ಕೊಡ್ತ್ವಾರೆ’ ಎಂದು ಹೇಳಿದರು.

‘ನಿತ್ಯ ನಮ್ಮ ಮಳಿಗೆಯಲ್ಲಿ ಕನಿಷ್ಠ ₹ 1ರಿಂದ ₹ 1.5 ಲಕ್ಷ ವಹಿವಾಟು ನಡೆದಿದೆ. ಪ್ರತಿ ಬಾರಿಯೂ ಇದೇ ವ್ಯಾಪಾರ ನಡೆಯಲಿದೆ. ಸಿದ್ಧೇಶ್ವರ ಜಾತ್ರೆ ಸಂದರ್ಭವೂ ಮತ್ತೊಮ್ಮೆ ಮೇಳ ನಡೆಸುವುದಾಗಿ ಖಾದಿ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಆಗಲೂ ಬರುತ್ತೇವೆ’ ಎಂದು ಶಶಿಕುಮಾರ್ ಹೇಳಿದರು.

ಕಾಶ್ಮೀರಿ ಶಾಲು..!

ಮೇಳದಲ್ಲಿ ಕಾಶ್ಮೀರಿ ಶಾಲು, ಡ್ರೆಸ್‌ ಮೆಟಿರಿಯಲ್‌ ಸಹ ಗ್ರಾಹಕರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿವೆ. ₹ 1500ರಿಂದ ₹ 30000 ಮೌಲ್ಯದ ಕಾಶ್ಮೀರಿ ಶಾಲುಗಳು ಕಾಶ್ಮೀರದ ನಾಲ್ಕು ಮಳಿಗೆಗಳಲ್ಲಿ ಲಭ್ಯವಿವೆ.

‘ಖಾದಿ ಮಂಡಳಿಯ ಆಹ್ವಾನದ ಮೇರೆಗೆ ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೇವೆ. ನಮ್ಮ ನಿರೀಕ್ಷೆಗೂ ಮೀರಿದ ವಹಿವಾಟು ನಡೆದಿದೆ. ಕಾಶ್ಮೀರಿ ಶಾಲುಗಳಿಗೆ ಸಾಕಷ್ಟು ಬೇಡಿಕೆಯಿದೆ. ನಿತ್ಯ ₹ 1 ಲಕ್ಷದವರೆಗೂ ವ್ಯಾಪಾರ ಮಾಡಿದ್ದೇವೆ’ ಎಂದು ಕಾಶ್ಮೀರದ ವ್ಯಾಪಾರಿ ತಸದುಕ್ ತಿಳಿಸಿದರು.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯಳನಡು ಗ್ರಾಮದ ಸುಜಾತ ಮೇಳದಲ್ಲಿ ಗಮನ ಸೆಳೆದ ಮಹಿಳೆ. ದಕ್ಷಿಣ ಕರ್ನಾಟಕದವರಾಗಿದ್ದರೂ; ಉತ್ತರ ಕರ್ನಾಟಕದ ಚಟ್ನಿ ಪುಡಿಗಳು, ಮಸಾಲೆ ಪದಾರ್ಥಗಳ ಮಳಿಗೆ ತೆರೆದು ಭರ್ಜರಿ ವಹಿವಾಟು ನಡೆಸಿದ್ದಾರೆ.

‘ಆರು ವರ್ಷದಿಂದ ಕಾಯಂ ವಿಜಯಪುರದ ಮೇಳಕ್ಕೆ ಬರುತ್ತಿರುವೆ. 22 ತಿನಿಸುಗಳಿವೆ. ಗ್ರಾಹಕರಿಂದ ಒಳ್ಳೆಯ ಸ್ಪಂದನೆ ಸಿಕ್ಕಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !