ಕಸ್ಟಮ್ಸ್‌ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

ಶನಿವಾರ, ಏಪ್ರಿಲ್ 20, 2019
31 °C
ಲಂಚಕ್ಕಾಗಿ ನಗರದ ಉದ್ಯಮಿಗೆ ಕಿರುಕುಳದ ಆರೋಪ

ಕಸ್ಟಮ್ಸ್‌ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

Published:
Updated:

ಬೆಂಗಳೂರು: ಲಂಚಕ್ಕಾಗಿ ನಗರದ ಉದ್ಯಮಿಯೊಬ್ಬರಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಕಸ್ಟಮ್ಸ್ ವಿಭಾಗದ ಅಧಿಕಾರಿಗಳ ವಿರುದ್ಧ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಫ್‌ಐಆರ್‌ ದಾಖಲಿಸಿದೆ.

ಇಂದಿರಾ ನಗರದ ‘ನೆಕ್ಸ್ಟ್‌ ಜೆನ್ ಟೆಕ್ನಾಲಜೀಸ್‌’ ಮಾಲೀಕ ಎಂ. ಕೃಪಲಾನಿ ಎಂಬುವರು ಕಸ್ಟಮ್ಸ್‌ ಅಧಿಕಾರಿಗಳ ಕಿರುಕುಳದ ವಿರುದ್ಧ ಹೈಕೋರ್ಟ್‌ಗೆ ರಿಟ್ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಈ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿತ್ತು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಕೃಪಲಾನಿ 2017ರಲ್ಲಿ ವಿದೇಶದಿಂದ ಕೆಲವು ವಸ್ತುಗಳನ್ನು ಅಮದು ಮಾಡಿಕೊಂಡಿದ್ದರು.  ಅವುಗಳ ಬಿಡುಗಡೆಗೆ ಕಸ್ಟಮ್ಸ್ ಅಧಿಕಾರಿಗಳು ₹ 10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೆಲವು ನಕಲಿ ದಾಖಲೆ ಸೃಷ್ಟಿಸಿ ಉದ್ಯಮಿ ಮನೆ– ಕಚೇರಿಯನ್ನು ಶೋಧಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಭಾಗಿಯಾಗಿದ್ದು, ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನ ಆಗಲಿಲ್ಲ. ಇದರಿಂದಾಗಿ ಕೃಪಲಾನಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಲಂಚ ‍ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್‌ ಅಧಿಕಾರಿಗಳ ವಿರುದ್ಧ ದೂರು ದಾಖಲಾಗುತ್ತಿರುವ ಎರಡನೇ ಪ್ರಕರಣ ಇದು. ಕೆಲವು ದಿನಗಳ ಹಿಂದೆ ಇದೇ ವಿಮಾನ ನಿಲ್ದಾಣದ ಸೂಪರಿಂಟೆಂಡೆಂಟ್‌ ಡಿ. ಅಶೋಕ ₹20,120 ಗ್ರಾಂ ತೂಕದ ಚಿನ್ನದ ಕಳ್ಳಸಾಗಣೆಗೆ ಸಹಕರಿಸಲು ಟಂಟಂ ಚಂದ್ರಶೇಖರ್‌ ಮತ್ತು ವಿ.ಜೆ. ವಿಲ್ಸನ್‌ ಅವರಿಂದ ಪ್ರತಿ ಕೆ.ಜಿಗೆ ₹40 ಸಾವಿರದಿಂದ ₹60 ಸಾವಿರ ಲಂಚ ಪಡೆದ ಆರೋಪಕ್ಕೆ ಒಳಗಾಗಿದ್ದಾರೆ. ಅಲ್ಲದೆ, ಅಧಿಕಾರಿ ಪತ್ನಿ ಹಾಗೂ ಪುತ್ರಿ ಯೂರೋಪ್‌ ಪ್ರವಾಸಕ್ಕೆ ₹ 2.38 ಲಕ್ಷ ಪಡೆದಿದ್ದರು ಎನ್ನಲಾಗಿದೆ. ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಯ‌ಾರ ವಿರುದ್ಧ ದೂರು?
ಕಸ್ಟಮ್ಸ್‌ ಸೂಪರಿಂಟೆಂಡೆಂಟ್‌ಗಳಾದ ಲಿಂಗರಾಜು, ಪ್ರಮೋದ್ ಗುಲ್ವಾಡಿ, ಸೆಂತಮರೈ ಸೆಲ್ವಿ, ಸುನೀಲ್ ಕುಮಾರ್ ಸಿಂಗ್, ನಾರಾಯಣ, ಪಿ.ಜಿ ಶಣೈ, ಚೌಹಾಣ್, ವಿಶ್ವೇಶ್ವರ ಭಟ್, ಬಿ.ಎಂ ರಾಮಚಂದ್ರ, ದೇವಪ್ಪ ನಾಯಕ್, ನರಸಿಂಹಪ್ಪ ಹಾಗೂ ಇನ್ಸ್‌ಪೆಕ್ಟರ್‌ಗಳಾದ ಎಂ.ವಿ ಶ್ರೀನಿವಾಸ, ನಿರಂಜನ ಮೂರ್ತಿ, ಗುರುರಾಜ ನಾಯಕ್, ಕಸ್ತೂರಿ, ಎಸ್.ಎಸ್ ಲಕ್ಷ್ಮೀ, ನಾಸೀರುದ್ದೀನ್ ಮತ್ತು ಅಬ್ದುಲ್ ಅಜೀಜ್ ಅವರ ವಿರುದ್ಧ ದೂರು ದಾಖಲಾಗಿದೆ.

ಕಸ್ಟಮ್ಸ್‌ ಹೆಚ್ಚುವರಿ ಕಮಿಷನರ್‌ ಡಿ. ಅನಿಲ್, ಉಪ ಕಮಿಷನರ್‌ ಸುಜೀತ್ ಕುಮಾರ್, ಖಾಸಗಿ ವ್ಯಕ್ತಿಗಳಾದ ನಿತೇಶ, ಬಿ.ಎಸ್ ಸಂದೀಪ್, ಅಜಿತ್ ಕುಮಾರ್ ಮತ್ತು ಟಿ.ಎನ್ ನಾಗರಾಜ್, ಎಸ್. ಅರ್ಜುನ್‌, ಆರ್. ಶ್ರೀನಿವಾಸ್‌ ಅವರನ್ನೂ ದೂರಿನಲ್ಲಿ ಹೆಸರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !