ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟನ್‌ ಮಿಲ್‌ ಹಾಳು ಮಾಡಿದ್ದು ಕಾಂಗ್ರೆಸ್‌

ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣಾ ಪ್ರಚಾರ ವೇಳೆ ಯೋಗಿ ಆದಿತ್ಯನಾಥ್ ಟೀಕೆ
Last Updated 5 ಮೇ 2018, 11:06 IST
ಅಕ್ಷರ ಗಾತ್ರ

ದಾವಣಗೆರೆ: ಒಂದು ಕಾಲದ ‘ಮ್ಯಾಂಚೆಸ್ಟರ್‌ ಆಫ್‌ ಕರ್ನಾಟಕ’ವಾಗಿದ್ದ ದಾವಣಗೆರೆಯ ಹತ್ತಿ ಗಿರಣಿ ಉದ್ಯಮವನ್ನು ನಾಶ ಮಾಡಿದ್ದು ಕಾಂಗ್ರೆಸ್‌. ಇಂತಹ ದುರಾಡಳಿತವನ್ನು ಕೊನೆಗೊಳಿಸಿ, ಅಭಿವೃದ್ಧಿಗೆ ಬಿಜೆಪಿಯನ್ನು ಬೆಂಬಲಿಸಿ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮನವಿ ಮಾಡಿದರು.

ನಗರದ ಕಾಯಿಪೇಟೆಯ ಬಸವೇಶ್ವರ ದೇವಾಲಯದ ಮುಂಭಾಗದಲ್ಲಿ ಬಿಜೆಪಿ ಶುಕ್ರವಾರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರದ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಸಿದ್ದರಾಮಯ್ಯ ಸರ್ಕಾರದಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವಜನರು ಹತಾಶರಾಗಿದ್ದಾರೆ. ರಾಷ್ಟ್ರವಾದಿ ಕಾರ್ಯಕರ್ತರ ಕಗ್ಗೊಲೆಗಳು ನಡೆದಿವೆ. ಇಂತಹ ವಿಕಾಸ ವಿರೋಧಿ, ಧರ್ಮ ವಿರೋಧಿ ಸರ್ಕಾರವನ್ನು ತೊಲಗಿಸಬೇಕು ಎಂದು ಹೇಳಿದರು.

ಉತ್ತರಪ್ರದೇಶಕ್ಕೂ ಕರ್ನಾಟಕಕ್ಕೂ ವಿಶೇಷ ನಂಟಿದೆ. ಉತ್ತರಪ್ರದೇಶ ಶ್ರೀರಾಮನ ಜನ್ಮಭೂಮಿ. ಶ್ರೀರಾಮನ ಭಂಟ ಹನುಮನ ಜನ್ಮಭೂಮಿ ಕರ್ನಾಟಕ. ಇವರೆಡೂ ಸೇರಿದರೆ ರಾಮರಾಜ್ಯ ಆಗುತ್ತದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಆಡಳಿತ, ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ಸರ್ಕಾರ ಬಂದರೆ ವಿಕಾಸ ಉತ್ತುಂಗಕ್ಕೆ ಏರುವುದರಲ್ಲಿ ಅನುಮಾನ ಇಲ್ಲ ಎಂದು ಹೇಳಿದರು.

‘ಸಿದ್ದರಾಮಯ್ಯ ಕರ್ನಾಟಕದ ಆಡಳಿತವನ್ನು ಉತ್ತರಪ್ರದೇಶದ ಜತೆ ತುಲನೆ ಮಾಡುತ್ತಿದ್ದಾರೆ. ನಾನು ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿದೆ ಅಷ್ಟೇ. ನನ್ನ ರಾಜ್ಯದಲ್ಲಿ ರೈತರು ಸಂತೋಷದಿಂದ ಇದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲವನ್ನು ನಾನು ಮನ್ನಾ ಮಾಡಿದ್ದೇನೆ. ಇದು ಸಿದ್ದರಾಮಯ್ಯಗೆ ಏಕೆ ಸಾಧ್ಯವಾಗಿಲ್ಲ’ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಸರ್ಕಾರ ಎಐಸಿಸಿಯ ಎಟಿಎಂ ಆಗಿದೆ. ಭ್ರಷ್ಟಾಚಾರದ ಹೊಸ ಮಜಲುಗಳನ್ನು ಪರಿಚಯಿಸಿದೆ. ಭ್ರಷ್ಟಾಚಾರದಲ್ಲಿ ಕೀರ್ತಿ ಶಿಖರವನ್ನೇ ಸಂಪಾದಿಸಿದೆ ಎಂದು ವ್ಯಂಗ್ಯವಾಡಿದರು.

ಕರ್ನಾಟಕದ ಜನ ವಿಕಾಸವನ್ನು ಬಯಸುತ್ತಿದ್ದಾರೆ. ಅದಕ್ಕಾಗಿ ರಾಜ್ಯದಲ್ಲಿ ಬಿಜೆಪಿಯ ಅವಶ್ಯಕತೆ ಇದೆ ಎಂದು ಅವರು ಪ್ರತಿ‍ಪಾದಿಸಿದರು.

ಸಭೆಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಶವಂತರಾವ್‌ ಜಾಧವ್, ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಸ್‌.ಎ. ರವೀಂದ್ರನಾಥ್, ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್,  ಮುಖಂಡರಾದ ಜಯಪ್ರಕಾಶ್‌ ಅಂಬರ್‌ಕರ್‌, ರುದ್ರಮುನಿ ಸ್ವಾಮಿ, ಎನ್‌. ರಾಜಶೇಖರ್, ಗೌತಮ್‌ ಜೈನ್‌ ಅವರೂ ಉಪಸ್ಥಿತರಿದ್ದರು.

10 ನಿಮಿಷ ಭಾಷಣ

ಸಭೆ ಸಂಜೆ 6ಕ್ಕೆ ನಿಗದಿಯಾಗಿತ್ತು. ವೇದಿಕೆಗೆ 6.20ಕ್ಕೆ ಬಂದ ಆದಿತ್ಯನಾಥ್ ಮಾತನಾಡಿದ್ದು ಕೇವಲ 10 ನಿಮಿಷ. ಇದಕ್ಕೂ ಮೊದಲು ಒಂದೇ ಒಂದು ನಿಮಿಷದಲ್ಲಿ ಅವರನ್ನು ಮುಖಂಡರು ಸನ್ಮಾನಿಸಿದರು.

ಯೋಗಿ ಆದಿತ್ಯನಾಥ್‌ ವೇದಿಕೆಗೆ ಬರುತ್ತಿದ್ದಂತೆ ಅಭ್ಯರ್ಥಿಗಳಾದ ರವೀಂದ್ರನಾಥ್‌, ಯಶವಂತರಾವ್‌ ಜಾಧವ್‌ ಬಗ್ಗಿ ನಮಸ್ಕರಿಸಿದರು.

‘ಹುಬ್ಬಳ್ಳಿಯಲ್ಲಿ ಇನ್ನೊಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವುದರಿಂದ ಭಾಷಣ ಕಡಿಮೆ ಮಾಡುತ್ತಿದ್ದೇನೆ’ ಎಂದು ಆದಿತ್ಯನಾಥ್‌ ಸ್ಪಷ್ಟನೆ ನೀಡಿ ಹೊರಟರು.

ಜೈ ಶ್ರೀರಾಮ‌್, ಜೈ ಮೋದಿ...

ವೇದಿಕೆ ಮೇಲಿದ್ದ ಮುಖಂಡರು ಸೇರಿದ್ದ ಕಾರ್ಯಕರ್ತರಿಗೆ ‘ಜೈ ಶ್ರೀರಾಮ್‌’ ಎಂದಾಕ್ಷಣ ‘ಜೈ ಯೋಗಿ’ ಎಂದು ಹೇಳಬೇಕು ಎಂದು ಘೋಷಣೆ ಕೂಗಿದರು. ಆದರೆ, ಕಾರ್ಯಕರ್ತರು ‘ಜೈ ಶ್ರೀರಾಮ‌್, ಜೈ ಮೋದಿ’ ಎಂದೇ ಕೂಗುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT