ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿನ್ನದ ಹುಡುಗ’ ವಿಕಾಸ್‌ ವಿದಾಯ

Last Updated 31 ಮೇ 2018, 5:14 IST
ಅಕ್ಷರ ಗಾತ್ರ

ನವದೆಹಲಿ: ಕಾಮನ್‌ವೆಲ್ತ್‌ ಕ್ರೀಡಾಕೂಟದ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತದ ಏಕೈಕ ಅಥ್ಲೀಟ್‌ ಎಂಬ ಹಿರಿಮೆ ಹೊಂದಿದ್ದ ಕರ್ನಾಟಕದ ವಿಕಾಸ್ ಗೌಡ ಅವರು 15 ವರ್ಷಗಳ ಕ್ರೀಡಾ ಬದುಕಿಗೆ ಬುಧವಾರ ವಿದಾಯ ಹೇಳಿದ್ದಾರೆ.

ವಿಕಾಸ್‌ ಅವರು ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ಗೆ (ಎಎಫ್‌ಐ) ಪತ್ರ ಬರೆದು ನಿವೃತ್ತಿಯ ನಿರ್ಧಾರ ತಿಳಿಸಿದ್ದಾರೆ. ಈ ವಿಷಯವನ್ನು ಎಎಫ್ಐ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದೆ.

ಜುಲೈ 5ಕ್ಕೆ 35ನೇ ವಸಂತಕ್ಕೆ ಕಾಲಿಡಲಿರುವ ಮೈಸೂರಿನ ವಿಕಾಸ್‌ ಅವರು ಹೋದ ವರ್ಷ ಭುವನೇಶ್ವರದಲ್ಲಿ ನಡೆದಿದ್ದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಅನಂತರ ಗಾಯದ ಕಾರಣ ಪ್ರಮುಖ ಟೂರ್ನಿಗಳಿಂದ ಹಿಂದೆ ಸರಿದಿದ್ದರು. ಮುಂಬರುವ ಏಷ್ಯನ್‌ ಕ್ರೀಡಾಕೂಟದಲ್ಲಿ ವಿಕಾಸ್‌ ಭಾಗವಹಿಸುತ್ತಾರೆ ಎಂದು ಹೇಳಲಾಗಿತ್ತು.

ವಿಕಾಸ್‌ 2012ರಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಅವರು 66.28 ಮೀಟರ್ಸ್‌ ದೂರ ಡಿಸ್ಕಸ್‌ ಎಸೆದು ಈ ಸಾಧನೆ ಮಾಡಿದ್ದರು.

2004, 2008, 2012 ಮತ್ತು 2016ರಲ್ಲಿ ನಡೆದಿದ್ದ ಒಲಿಂಪಿಕ್ಸ್‌ ಕೂಟಗಳಲ್ಲಿ ಭಾಗವಹಿಸಿದ್ದರು. 2012ರ ಲಂಡನ್‌ ಕೂಟದಲ್ಲಿ ಫೈನಲ್‌ ಪ್ರವೇಶಿಸಿ ದಾಖಲೆ ಬರೆದಿದ್ದರು.

ಶಾಟ್‌ಪಟ್‌ ಸ್ಪರ್ಧಿಯಾಗಿ ಕ್ರೀಡಾ ಬದುಕು ಆರಂಭಿಸಿದ ವಿಕಾಸ್‌, 2006ರಲ್ಲಿ ಅಟ್ಲಾಂಟದಲ್ಲಿ ನಡೆದಿದ್ದ ಕೂಟದಲ್ಲಿ 19.62 ಮೀಟರ್ಸ್‌ ದೂರ ಕಬ್ಬಿಣದ ಗುಂಡು ಎಸೆದಿದ್ದರು. ನಂತರ ಡಿಸ್ಕಸ್‌ ಥ್ರೋನಲ್ಲಿ ತೊಡಗಿಕೊಂಡಿದ್ದ ಅವರು ಅಂತರರಾಷ್ಟ್ರೀಯ ಕೂಟಗಳಲ್ಲಿ ಹಲವು ಪದಕಗಳನ್ನು ಗೆದ್ದು ಅಥ್ಲೆಟಿಕ್ಸ್‌ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಅಚ್ಚೊತ್ತಿದ್ದರು.

ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಿಗೆ ಗೈರಾಗುವ ಅಥ್ಲೀಟ್‌ಗಳಿಗೆ ಪ್ರಮುಖ ಕೂಟಗಳಲ್ಲಿ ಭಾಗವಹಿಸಲು ಅನುಮತಿ ನೀಡುವುದಿಲ್ಲ ಎಂದು ಎಎಫ್‌ಐ ಇತ್ತೀಚೆಗೆ ಕಟ್ಟುನಿಟ್ಟಿನ ನಿಯಮ ರೂಪಿಸಿತ್ತು. ಹೀಗಾಗಿ ಅಮೆರಿಕದಲ್ಲಿ ನೆಲೆಸಿರುವ ವಿಕಾಸ್‌ಗೆ ಈ ಬಾರಿಯ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರಲಿಲ್ಲ. 

‘ವಿದಾಯ ಹೇಳುವುದು ಎಷ್ಟು ಕಷ್ಟ ಎಂಬುದು ಈಗ ಅರಿವಾಗಿದೆ. ಇದು ಆತುರದ ನಿರ್ಧಾರವಲ್ಲ. ಈ ಸಂಬಂಧ ಹಲವರ ಸಲಹೆ ‍ಪಡೆದಿದ್ದೇನೆ. ಸಾಕಷ್ಟು ಬಾರಿ ಯೋಚಿಸಿದ್ದೇನೆ. 15 ವರ್ಷಗಳ ಕಾಲ ಅಥ್ಲೆಟಿಕ್ಸ್‌ನಲ್ಲಿ ತೊಡಗಿಕೊಂಡಿದ್ದೇನೆ. ಇನ್ನು ಮುಂದೆ ಯಾವ ಕೂಟದಲ್ಲೂ ಭಾಗವಹಿಸುವುದು ಬೇಡ ಅನಿಸಿದೆ. ಹೀಗಾಗಿ ಕಠಿಣ ತೀರ್ಮಾನಕ್ಕೆ ಬಂದಿದ್ದೇನೆ’ ಎಂದು ವಿಕಾಸ್‌ ನುಡಿದಿದ್ದಾರೆ.

‘ಭಾರತ ಕಂಡ ಶ್ರೇಷ್ಠ ಅಥ್ಲೀಟ್‌ಗಳಲ್ಲಿ ವಿಕಾಸ್‌ ಕೂಡ ಒಬ್ಬರು. ಕ್ರೀಡೆಯ ಬಗ್ಗೆ ವಿಕಾಸ್‌ ಹೊಂದಿದ್ದ ಬದ್ಧತೆಗೆ ಅವರು ಗೆದ್ದ ಪದಕಗಳು ಸಾಕ್ಷಿಯಾಗಿವೆ. ಅವರ ಮುಂದಿನ ಜೀವನ ಸುಖಕರವಾಗಿರಲಿ’ ಎಂದು ಭಾರತ ಅಥ್ಲೆಟಿಕ್ಸ್‌ ಫರೆಡರೇಷನ್‌ನ ಅಧ್ಯಕ್ಷ ಆದಿಲ್‌ ಸುಮರಿವಾಲಾ ಹಾರೈಸಿದ್ದಾರೆ.

ನಿವೃತ್ತಿಗೆ ಸೂಕ್ತ ಸಮಯ: ವಿಕಾಸ್‌ ಗೌಡ
‘ನಿವೃತ್ತಿಗೆ ಇದು ಸೂಕ್ತ ಸಮಯ. ಮತ್ತೆ ನನ್ನ ಹಳೆಯ ಸಾಮರ್ಥ್ಯಕ್ಕೆ ಮರಳಲು ಸಾಕಷ್ಟು ಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಇನ್ನು ನನ್ನ ದೇಹ ದಂಡಿಸುವುದರಲ್ಲಿ ಅರ್ಥವಿಲ್ಲ ಎಂದೆನಿಸಿದೆ’ ಎಂದು ವಿಕಾಸ್‌ ಗೌಡ ಹೇಳಿದರು.

ನಿವೃತ್ತಿಯ ಘೋಷಣೆ ನಂತರ ‘ಪ್ರಜಾವಾಣಿ’ಯೊಂದಿಗೆ ಅವರು ಮಾತನಾಡಿದರು.  ‘2012ರ ಲಂಡನ್‌ ಒಲಿಂಪಿಕ್ಸ್‌ ಹಾಗೂ 2014ರ ಕಾಮನ್‌ವೆಲ್ತ್‌ ಕ್ರೀಡಾಕೂಟಗಳು ಅವಿಸ್ಮರಣೀಯ’ ಎಂದು ಅವರು ನೆನಪಿಸಿಕೊಂಡಿದ್ದಾರೆ.

ಮೈಸೂರಿನ ಪ್ರತಿಭೆ
ವಿಕಾಸ್‌ ಅವರು 1983 ಜುಲೈ 5ರಂದು ಮೈಸೂರಿನಲ್ಲಿ ಜನಿಸಿದರು. ಅವರ ತಾಯಿ ವಿಜಯಲಕ್ಷ್ಮಿ, ತಂದೆ ಶಿವೇ ಗೌಡ.

ಶಿವೇ ಗೌಡ ಅವರೂ ಅಥ್ಲೀಟ್‌ ಆಗಿದ್ದರು. 1988ರ ಒಲಿಂಪಿಕ್ಸ್‌ ವೇಳೆ ಅವರು ಭಾರತ ಟ್ರ್ಯಾಕ್‌ ತಂಡದ ಕೋಚ್‌ ಆಗಿಯೂ ಕೆಲಸ ಮಾಡಿದ್ದರು.

ವಿಕಾಸ್‌, ಆರು ವರ್ಷದವರಾಗಿದ್ದಾಗ ಅವರ ಕುಟುಂಬ ಅಮೆರಿಕದ ಮೇರಿಲ್ಯಾಂಡ್‌ಗೆ ಹೋಗಿ ನೆಲೆಸಿತು. ಫೆಡೆರಿಕ್‌ನಲ್ಲಿ ಬಾಲ್ಯ ಕಳೆದ ಅವರು ಚಾಪೆಲ್ ಹಿಲ್‌ನ ಯೂನಿವರ್ಸಿಟಿ ಆಫ್‌ ನಾರ್ಥ್‌ ಕ್ಯಾರೋಲಿನಾದಲ್ಲಿ ವ್ಯಾಸಂಗ ಮಾಡಿದ್ದಾರೆ.

ವಿಕಾಸ್‌ ಅವರು 2014ರ ಕಾಮನ್‌ವೆಲ್ತ್‌ ಕೂಟದಲ್ಲಿ 63.64 ಮೀಟರ್ಸ್‌ ದೂರ ಡಿಸ್ಕಸ್‌ ಎಸೆದು ಚಿನ್ನ ಗೆದ್ದಿದ್ದರು. ಈ ಮೂಲಕ ಕಾಮ್‌ವೆಲ್ತ್‌ ಕೂಟದ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಜಯಿಸಿದ ಭಾರತದ ಎರಡನೇ ಅಥ್ಲೀಟ್‌ ಎಂಬ ಹಿರಿಮೆಗೆ ಭಾಜನರಾಗಿದ್ದರು. ಮಿಲ್ಖಾ ಸಿಂಗ್‌ ಅವರು ಮೊದಲು ಈ ಸಾಧನೆ ಮಾಡಿದ್ದರು.

*
ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು ಹೆಮ್ಮೆಯ ವಿಷಯ. ಇನ್ನು ಮುಂದೆ ಅದು ಸಾಧ್ಯವಿಲ್ಲ ಎಂಬುದನ್ನು ನೆನಪಿಸಿಕೊಂಡರೆ ಕಣ್ಣುಗಳು ತುಂಬಿ ಬರುತ್ತವೆ.
–ವಿಕಾಸ್‌ ಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT