ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೂ ಬೇಕಿತ್ತು ದ್ವಿಪಕ್ಷ ರಾಜಕೀಯ ವ್ಯವಸ್ಥೆ

Last Updated 25 ಮೇ 2018, 3:00 IST
ಅಕ್ಷರ ಗಾತ್ರ

ಪಶ್ಚಿಮದ ಹಲವು ಪ್ರಜಾಪ್ರಭುತ್ವಗಳಲ್ಲಿ ರಾಷ್ಟ್ರಮಟ್ಟದಲ್ಲಿ ಎರಡು ಪಕ್ಷಗಳು ಪರ್ಯಾಯವಾಗಿ ಅಧಿಕಾರಕ್ಕೆ ಬರುತ್ತವೆ. ಈ ಎರಡು ಪಕ್ಷಗಳಲ್ಲಿ ಒಂದು ಎಡ ಒಲವು ಉಳ್ಳದ್ದಾದರೆ ಮತ್ತೊಂದು ಬಲಕ್ಕೆ ವಾಲಿಕೊಂಡಿರುವುದಾಗಿರುತ್ತದೆ. ಅಮೆರಿಕದಲ್ಲಿ ರಿಪಬ್ಲಿಕನ್‌ ಮತ್ತು ಡೆಮಾಕ್ರಾಟ್‌ ಪಕ್ಷಗಳಿವೆ; ಬ್ರಿಟನ್‌ನಲ್ಲಿ ಕನ್ಸರ್ವೇಟಿವ್‌ ಪಾರ್ಟಿ ಮತ್ತು ಲೇಬರ್‌ ಪಾರ್ಟಿ, ಜರ್ಮನಿಯಲ್ಲಿ ಕ್ರಿಶ್ಚಿಯನ್‌ ಡೆಮಾಕ್ರಾಟ್‌ ಮತ್ತು ಸೋಷಿಯಲ್‌ ಡೆಮಾಕ್ರಾಟ್ಸ್‌. ಈ ಎಲ್ಲ ದೇಶಗಳಲ್ಲಿಯೂ ಎರಡು ಪಕ್ಷಗಳ ವ್ಯವಸ್ಥೆಯು ದೇಶಕ್ಕೆ ರಾಜಕೀಯ ಸ್ಥಿರತೆ ಮತ್ತು ದೃಢತೆಯನ್ನು ಕೊಟ್ಟಿದೆ. ಪ್ರಬಲವಾದ ವಿರೋಧ ಪಕ್ಷ, ಸರ್ಕಾರಕ್ಕೆ ಸದಾ ಇರುವ ಅಂಕುಶವಾಗಿದೆ.

ಆದರೆ, ಭಾರತ ಗಣರಾಜ್ಯವು ಯಾವತ್ತೂ ಸರಿಯಾದ ಎರಡು ಪಕ್ಷ ವ್ಯವಸ್ಥೆಯಾಗಿರಲೇ ಇಲ್ಲ. 1940ರ ದಶಕದಿಂದ 1970ರ ದಶಕದವರೆಗೆ ಕಾಂಗ್ರೆಸ್‌ ಮಾತ್ರ ರಾಷ್ಟ್ರೀಯ ಪಕ್ಷವಾಗಿತ್ತು. ದೇಶದಾದ್ಯಂತ ಕೆಲವು ಸಣ್ಣ ಪಕ್ಷಗಳು ಕಾಂಗ್ರೆಸ್‌ನ ವಿರುದ್ಧ ಇದ್ದವು. ಆದರೆ ರಾಷ್ಟ್ರ ಮಟ್ಟದಲ್ಲಿ ಬಲವಾದ ಸವಾಲು ಒಡ್ಡುವ ಸಾಮರ್ಥ್ಯ ಈ ಪಕ್ಷಗಳಿಗೆ ಇರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಮಾತ್ರ ಏಕೈಕ ರಾಷ್ಟ್ರೀಯ ಪಕ್ಷವಾಗಿದೆ. ಈಗಲೂ, ಕೆಲವು ರಾಜ್ಯಗಳಲ್ಲಿ ಸಣ್ಣ ಪಕ್ಷಗಳು ಬಿಜೆಪಿಯನ್ನು ಬಲವಾಗಿ ವಿರೋಧಿಸುತ್ತಿವೆ. ಆದರೆ, ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಸವಾಲು ಒಡ್ಡಲು ಅಥವಾ ಅದಕ್ಕೆ ಪರ್ಯಾಯವಾಗಲು ಬೇಕಾದ ಶಕ್ತಿಯನ್ನು ಯಾವ ಪಕ್ಷವೂ ಹೊಂದಿಲ್ಲ.

ಕಾಂಗ್ರೆಸ್‌ ಪ್ರಾಬಲ್ಯದ ಅವಧಿ ಮತ್ತು ಈಗಿನ ಬಿಜೆಪಿ ಪ್ರಾಬಲ್ಯದ ಅವಧಿಯ ನಡುವೆ ಮೈತ್ರಿಕೂಟ ಮತ್ತು ಅಲ್ಪಮತದ ಸರ್ಕಾರದ ಯುಗವಿತ್ತು. 1989ರಿಂದ 2014ರವರೆಗಿನ ಈ ಅವಧಿಯಲ್ಲಿನ ಕೇಂದ್ರ ಸರ್ಕಾರಗಳು ಬಹಳ ದುರ್ಬಲವಾಗಿದ್ದವು; ಪರಿಣಾಮಕಾರಿ ನೀತಿ ರೂಪಿಸುವಿಕೆ ಅಥವಾ ಅನುಷ್ಠಾನಕ್ಕೆ ಸಂಬಂಧಿಸಿ ಸ್ಥಾಪಿತ ಹಿತಾಸಕ್ತಿಗಳ ಹಿಡಿತಕ್ಕೆ ಪಕ್ಕಾಗುವ ದೌರ್ಬಲ್ಯದಿಂದ ಕೂಡಿದ್ದವು. ಇನ್ನೊಂದೆಡೆ, ಅಧಿಕಾರದಲ್ಲಿದ್ದ ಏಕ ಪಕ್ಷದ ಸರ್ಕಾರವು ಅತ್ಯಂತ ಪ್ರಬಲವಾಗಿ ದುರಹಂಕಾರ ರೂಢಿಸಿಕೊಂಡ ಮತ್ತು ಸರ್ವಾಧಿಕಾರ ಪ್ರದರ್ಶಿಸಿದ ನಿದರ್ಶನಗಳಿವೆ. ಇದು ಕೂಡ ಆಡಳಿತಕ್ಕೆ ಒಳ್ಳೆಯದೇನೂ ಅಲ್ಲ.

ಅಖಿಲ ಭಾರತ ಮಟ್ಟದಲ್ಲಿ ಎರಡು ಪಕ್ಷಗಳ ವ್ಯವಸ್ಥೆಯ ಪ್ರಯೋಜನಗಳನ್ನು ಗುರುತಿಸಿದವರಲ್ಲಿ ಮಹಾತ್ಮ ಗಾಂಧಿಯೂ ಒಬ್ಬರು. ಭಾರತ ಸರ್ಕಾರ ಕಾಯ್ದೆ ಅಡಿಯಲ್ಲಿ 1937ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ ಪಕ್ಷ ಸ್ಪಷ್ಟ ಗೆಲುವು ದಾಖಲಿಸಿತ್ತು. ಮದ್ರಾಸ್‍ನಲ್ಲಿ ಶೇ 74, ಬಿಹಾರದಲ್ಲಿ ಶೇ 65, ಮಧ್ಯ ಪ್ರಾಂತ್ಯದಲ್ಲಿ ಶೇ 62.5, ಒರಿಸ್ಸಾದಲ್ಲಿ ಶೇ 60, ಸಂಯುಕ್ತ ಪ್ರಾಂತ್ಯದಲ್ಲಿ ಶೇ 59 ಮತ್ತು ಬಾಂಬೆ ಪ್ರಾಂತ್ಯದಲ್ಲಿ ಶೇ 49ರಷ್ಟು ಸ್ಥಾನಗಳನ್ನು ಕಾಂಗ್ರೆಸ್‍ ಗೆದ್ದುಕೊಂಡಿತ್ತು. ವಿವಿಧ ಜಾತಿಗಳಿಗೆ ಸೇರಿದ ದೊಡ್ಡ ಜಮೀನ್ದಾರರ ನೇತೃತ್ವದ ಯೂನಿಯನಿಸ್ಟ್ ಪಕ್ಷವು ಪಂಜಾಬ್‍ನಲ್ಲಿ ಸ್ಪಷ್ಟ ಬಹುಮತ ಪಡೆದಿತ್ತು. ಇತರ ಪ್ರಾಂತ್ಯಗಳಲ್ಲಿ ಅತಂತ್ರ ಫಲಿತಾಂಶ ಬಂದಿದ್ದರಿಂದಾಗಿ ಯಾವ ಪಕ್ಷವೂ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸ್ಥಿತಿ ಇರಲಿಲ್ಲ. ಬ್ರಿಟಿಷ್‍ ಆಡಳಿತದ ಭಾರತವನ್ನು ಒಟ್ಟಾಗಿ ತೆಗೆದುಕೊಂಡರೆ ಕಾಂಗ್ರೆಸ್‍ 707 ಸ್ಥಾನಗಳಲ್ಲಿ ಗೆಲುವು ಪಡೆದಿತ್ತು. 106 ಸ್ಥಾನಗಳನ್ನು ಪಡೆದಿದ್ದ ಮುಸ್ಲಿಂ ಲೀಗ್‍ ಎರಡನೇ ಸ್ಥಾನದಲ್ಲಿತ್ತು.

1938 ಮತ್ತು 1939ರ ಅವಧಿಯಲ್ಲಿ, ಮುಸ್ಲಿಂ ಲೀಗ್‍ ನಾಯಕರಾಗಿದ್ದ ಮುಹಮ್ಮದ್ ಅಲಿ ಜಿನ್ನಾ ಅವರು ಕಾಂಗ್ರೆಸ್ ‍ಪ್ರಾಬಲ್ಯದ ವಿರುದ್ಧ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆಸಿದ್ದರು. ದಲಿತ ನಾಯಕ ಬಿ.ಆರ್. ಅಂಬೇಡ್ಕರ್, ದಕ್ಷಿಣ ಭಾರತದ ಬ್ರಾಹ್ಮಣೇತರ ನಾಯಕ ಇ.ವಿ. ರಾಮಸ್ವಾಮಿ ನಾಯ್ಕರ್ ಅವರನ್ನು ಜಿನ್ನಾ ಭೇಟಿಯಾಗಿದ್ದರು. ಹಿಂದೂ ಮಹಾಸಭಾದ ಅಧ್ಯಕ್ಷ ವಿ.ಡಿ. ಸಾವರ್ಕರ್ ಅವರ ಬೆಂಬಲವನ್ನೂ ಮುಸ್ಲಿಂ ಲೀಗ್‍ ಕೋರಿತ್ತು. ಈ ಬೆಳವಣಿಗೆಗಳು ಕಾಂಗ್ರೆಸ್‍ ಪಕ್ಷದ ಚಿಂತೆಗೆ ಕಾರಣವಾಗಿದ್ದವು ಎಂದು ಯಾರಾದರೂ ಭಾವಿಸಬಹುದು. ಆದರೆ, ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಜಿನ್ನಾ ಪ್ರಯತ್ನ ಸಂಪೂರ್ಣವಾಗಿ ಆರೋಗ್ಯಕರ ಎಂದು ಗಾಂಧಿ ಭಾವಿಸಿದ್ದರು. ತಮ್ಮ ವಾರಪತ್ರಿಕೆ ‘ಹರಿಜನ’ದಲ್ಲಿ ಗಾಂಧಿ ಹೀಗೆ ಬರೆದಿದ್ದರು: ‘ದೇಶದಲ್ಲಿ ಮುಖ್ಯವಾಗಿ ಎರಡು ಪಕ್ಷಗಳು ಇರುವುದಕ್ಕಿಂತ ಉತ್ತಮವಾದುದು ಯಾವುದೂ ಇಲ್ಲ- ಕಾಂಗ್ರೆಸ್‍ ಮತ್ತು ಕಾಂಗ್ರೆಸ್‍ ವಿರೋಧಿ ಪಕ್ಷ (ಕಾಂಗ್ರೆಸ್‌ ವಿರೋಧಿ ಪಕ್ಷ ಎಂಬ ಪದ ಬಳಕೆಯನ್ನು ಒಪ್ಪುವುದಾದರೆ). ಜಿನ್ನಾ ಸಾಹೇಬರು ‘ಅಲ್ಪಸಂಖ್ಯಾತ’ ಎಂಬ ಪದಕ್ಕೆ ಹೊಸ ‘ಅರ್ಥ’ ಕೊಟ್ಟಿದ್ದಾರೆ. ಕಾಂಗ್ರೆಸ್‍ನ ಬಹುಮತವು ಜಾತಿ ವ್ಯವಸ‍್ಥೆಯ ಹಿಂದೂಗಳು, ಜಾತಿ ವ್ಯವಸ್ಥೆಯ ಹೊರಗಿನ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು, ಪಾರ್ಸಿಗಳು ಮತ್ತು ಯಹೂದ್ಯರ ಸಂಯೋಜನೆಯಿಂದ ಸಾಧ್ಯವಾಗಿದೆ. ಹಾಗಾಗಿಯೇ ಇದು ನಿರ್ದಿಷ್ಟ ಅಭಿಮತವನ್ನು ಹೊಂದಿರುವ ಎಲ್ಲ ವರ್ಗಗಳಿಂದಾಗಿ ಸಾಧ್ಯವಾದ ಬಹುಮತ; ಆದ್ದರಿಂದ, ಇನ್ನೊಂದು ಅಭಿಮತವನ್ನು ಪ್ರತಿಪಾದಿಸುವ ಪ್ರಸ್ತಾವಿತ ಒಕ್ಕೂಟವು ಅಲ್ಪಸಂಖ್ಯಾತವಾಗುತ್ತದೆ. ತನ್ನನ್ನು ಮತದಾರರಿಗೆ ಮನವೊಲಿಕೆ ಮಾಡಿಕೊಡುವ ಮೂಲಕ ಗುಂಪು ಯಾವುದೇ ಸಂದರ್ಭದಲ್ಲಿ ಬಹುಸಂಖ್ಯಾತವಾಗಬಹುದು. ಪಕ್ಷಗಳ ಈ ಸಂಯೋಜನೆಯು ಅಪೇಕ್ಷಣೀಯವೇ ಆಗಿದೆ. ‘ಖೈದ್‍-ಎ—ಅಜಂ’ (ಶ್ರೇಷ್ಠ ನಾಯಕ) (ಜಿನ್ನಾ) ಅವರಿಗೆ ಈ ಸಂಯೋಜನೆಯನ್ನು ಒಗ್ಗಟ್ಟಾಗಿಸುವುದು ಸಾಧ್ಯವಾದರೆ ನಾನು ಮಾತ್ರವಲ್ಲ, ಇಡೀ ಭಾರತವೇ ಮೆಚ್ಚುಗೆಯಿಂದ ‘ಖೈದ್‍-ಎ—ಅಜಂ ಜಿನ್ನಾ ಚಿರಾಯುವಾಗಲಿ’ ಎಂದು ಘೋಷಣೆ ಕೂಗಲಿದೆ. ಜಿನ್ನಾ ಅವರು ಶಾಶ್ವತವಾದ ಮತ್ತು ಸಜೀವವಾದ ಒಗ್ಗಟ್ಟನ್ನು ರೂಪಿಸಬೇಕು, ಇದಕ್ಕಾಗಿ ಭಾರತ ಕಾತರವಾಗಿದೆ’.

ಈ ಬರಹದ ಪ್ರತಿಯನ್ನು ಜಿನ್ನಾ ಅವರಿಗೆ ಗಾಂಧೀಜಿ ಕಳುಹಿಸಿದ್ದರು. ಜತೆಗಿದ್ದ ಪತ್ರದಲ್ಲಿ ಅವರು ಜಿನ್ನಾರನ್ನು ಹೊಗಳಿದ್ದರು- ‘ಕಾಂಗ್ರೆಸ್‍ಗೆ ವಿರುದ್ಧ ಇರುವ ಎಲ್ಲ ಪಕ್ಷಗಳನ್ನು ಒಗ್ಗೂಡಿಸುವ ನಿಮ್ಮ ಯೋಜನೆಯಿಂದಾಗಿ ಇಡೀ ಚಳವಳಿಗೆ ಒಂದು ರಾಷ್ಟ್ರೀಯ ಸ್ವರೂಪ ಬರುತ್ತದೆ’ ಎಂದು ಗಾಂಧಿ ಬರೆದಿದ್ದರು. ‘ಇದರಲ್ಲಿ ನೀವು ಯಶಸ್ವಿಯಾದರೆ ಕೋಮುವಾದಿ ಪಿಶಾಚಿಯಿಂದ ದೇಶವನ್ನು ಬಿಡಿಸಿದಂತಾಗುತ್ತದೆ ಮತ್ತು ನನ್ನ ಅಭಿಪ್ರಾಯದಲ್ಲಿ ನೀವು ಮುಸ್ಲಿಮರು ಮತ್ತು ಇತರರ ನಾಯಕರಾಗಬೇಕಾಗುತ್ತದೆ. ಹಾಗಾದರೆ, ಮುಸ್ಲಿಮರು ಮಾತ್ರವಲ್ಲ, ಇತರ ಸಮುದಾಯಗಳು ಕೂಡ ನಿಮಗೆ ಋಣಿಯಾಗಿರುತ್ತವೆ. ನನ್ನ ವ್ಯಾಖ್ಯಾನ ಸರಿ ಇದೆ ಎಂದು ನಾನು ಭಾವಿಸಿದ್ದೇನೆ. ನನ್ನ ಯೋಚನೆ ತಪ್ಪಾಗಿದ್ದರೆ ದಯವಿಟ್ಟು ನನ್ನನ್ನು ನೀವು ತಿದ್ದಬೇಕು’ ಎಂದು ಗಾಂಧಿ ಹೇಳಿದ್ದರು.

ಸಂಖ್ಯಾ ರಾಜಕಾರಣಕ್ಕೆ ಗಮನ ಕೇಂದ್ರೀಕರಿಸಬೇಕೇ ಹೊರತು ಸಮುದಾಯ ರಾಜಕಾರಣಕ್ಕಲ್ಲ ಎಂಬುದರತ್ತ ಜಿನ್ನಾ ಅವರ ಗಮನ ಸೆಳೆಯಲು ಗಾಂಧೀಜಿ ಯತ್ನಿಸಿದ್ದರು. ಅವರ ಮನಸ್ಸಿನಲ್ಲಿ, ಅಧಿಕಾರಕ್ಕಾಗಿ ಎರಡು ಪಕ್ಷಗಳ ನಡುವೆ ಸ್ಪರ್ಧೆ ಇರುವ ಪಶ್ಚಿಮದ ದೇಶಗಳ ಪ್ರಜಾಪ್ರಭುತ್ವ ರಾಜಕಾರಣದ ಮಾದರಿ ಇತ್ತು. ಬ್ರಿಟನ್‍ನಲ್ಲಿ ಲೇಬರ್ ಮತ್ತು ಕನ್ಸರ್ವೇಟಿವ್‍ ಪಕ್ಷ ಅಥವಾ ಅಮೆರಿಕದ ಡೆಮಾಕ್ರಾಟ್‌ ಮತ್ತು ರಿಪಬ್ಲಿಕನ್‍ ಪಕ್ಷಗಳು ನೀತಿ ಹಾಗೂ ಸಿದ್ಧಾಂತದ ಆಧಾರದಲ್ಲಿ ರಚಿತವಾಗಿರುವ ರಾಜಕೀಯ ಪಕ್ಷಗಳೇ ಹೊರತು ಜಾತಿ ಅಥವಾ ಧರ್ಮದ ಆಧಾರದಲ್ಲಿ ಅಲ್ಲ.

ಕಾಂಗ್ರೆಸ್‌ ಯಾವುದೇ ಧಾರ್ಮಿಕ ಗುಂಪಿಗೆ ಸೀಮಿತವಾದ ಪಕ್ಷವಲ್ಲ ಎಂದೂ ಗಾಂಧಿ ಭಾವಿಸಿದ್ದರು. ಈ ಪಕ್ಷದಲ್ಲಿ ಮುಸ್ಲಿಂ, ಕ್ರೈಸ್ತ ಮತ್ತು ಹಿಂದೂ ಧರ್ಮಕ್ಕೆ ಸೇರಿದ ಸದಸ್ಯರಿದ್ದರು. ಮುಸ್ಲಿಂ, ಪಾರ್ಸಿ ಮಾತ್ರವಲ್ಲದೆ, ಹಿಂದೂ ಧರ್ಮಕ್ಕೆ ಸೇರಿದವರು ಕೂಡ ಪಕ್ಷದ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್‌ನಲ್ಲಿದ್ದ ಹಿಂದೂಗಳು ಕೂಡ ವಿವಿಧ ಜಾತಿಗಳಿಗೆ ಸೇರಿದವರಾಗಿದ್ದರು. ಬೇರೆ ಬೇರೆ ಹಿನ್ನೆಲೆಗಳಿಂದ ಬಂದ ಈ ಜನರು ಪಕ್ಷದ ಪ್ರಣಾಳಿಕೆಯಿಂದಾಗಿ ಒಂದಾಗಿದ್ದರು. 1920ರ ದಶಕದಲ್ಲಿ ಗಾಂಧೀಜಿ ಅವರು ಕಾಂಗ್ರೆಸ್‌ ಪಕ್ಷವನ್ನು ನಾಲ್ಕು ಕಾಲಿನ ಗಟ್ಟಿ ಮಂಚ ಎಂದು ಬಣ್ಣಿಸಿದ್ದರು– ಅವುಗಳೆಂದರೆ, ಅಂತರಧರ್ಮ ಸಾಮರಸ್ಯ, ಅಂತರಜಾತಿ ಸಮಾನತೆ, ಆರ್ಥಿಕ ಸ್ವಾವಲಂಬನೆ ಮತ್ತು ಅಹಿಂಸೆ.

ಕಾಂಗ್ರೆಸ್‌ಗೆ ವಿರೋಧವಾಗಿದ್ದ ಪಕ್ಷಗಳ ಸ್ಥೂಲ ಮೈತ್ರಿಕೂಟದ ರಚನೆಯನ್ನು ಗಾಂಧಿ ಸ್ವಾಗತಿಸಿದ್ದರು. ಜಿನ್ನಾ ಇದರಲ್ಲಿ ಯಶಸ್ವಿಯಾಗಿದ್ದಿದ್ದರೆ, ಧರ್ಮಾತೀತ ಅಥವಾ ವಿವಿಧ ಧರ್ಮಗಳ ಜನರು ಸೇರಿಕೊಂಡ ಮೈತ್ರಿಕೂಟ ರಚನೆಯಾಗುತ್ತಿತ್ತು. ಧರ್ಮಾತೀತ ಅಥವಾ ವಿವಿಧ ಧರ್ಮಗಳ ಜನರಿರುವ ಕಾಂಗ್ರೆಸ್‌ಗೆ ರಾಷ್ಟ್ರಮಟ್ಟದಲ್ಲಿ ಅದು ಸವಾಲಾಗಬಹುದಿತ್ತು ಅಥವಾ ಕಾಂಗ್ರೆಸ್ಸನ್ನು ಸೋಲಿಸಬಹುದಿತ್ತು. ಈ ಮೂಲಕ ಜಗತ್ತಿನ ಇತರ ಭಾಗಗಳಲ್ಲಿ ಇರುವಂತಹ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಹತ್ತಿರವಾದ ವ್ಯವಸ್ಥೆಯನ್ನು ಭಾರತದಲ್ಲಿ ಕಟ್ಟ
ಬಹುದಾಗಿತ್ತು.

ಒಳ್ಳೆಯ ಉದ್ದೇಶದಿಂದಲೇ ಗಾಂಧೀಜಿ ಈ ಸಲಹೆ ನೀಡಿದ್ದರು. ಆದರೆ ಜಿನ್ನಾ ಇದನ್ನು ಸಂಪೂರ್ಣವಾಗಿ ತಿರಸ್ಕರಿಸಿಬಿಟ್ಟರು. ಪಾರ್ಸಿ ಮತ್ತು ದಲಿತ ನಾಯಕರು ಹಾಗೂ ಕಾಂಗ್ರೆಸ್ಸೇತರ ಹಿಂದೂಗಳ ಜತೆಗಿನ ಮಾತುಕತೆಗೆ ‘ಭಿನ್ನ ನಿಲುವುಗಳ ಜನರು ಪ್ರತಿಕೂಲ ಪರಿಸ್ಥಿತಿಯಿಂದಾಗಿ ಒಂದಾಗಿರುವುದೇ’ ಆಂಶಿಕ ಕಾರಣ; ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರನ್ನು ಒಟ್ಟಾಗಿಸುವ ಹಿತಾಸಕ್ತಿ ಮತ್ತೊಂದು ಕಾರಣ ಎಂದು ಗಾಂಧೀಜಿಗೆ ಪ್ರತಿಕ್ರಿಯೆಯಾಗಿ ಜಿನ್ನಾ ಹೇಳಿದ್ದರು. ‘ಭಾರತ ಒಂದು ರಾಷ್ಟ್ರ ಅಥವಾ ದೇಶ ಅಲ್ಲ. ವಿವಿಧ ರಾಷ್ಟ್ರೀಯತೆಗಳನ್ನು ಒಳಗೊಂಡಿರುವ ಒಂದು ಉಪಖಂಡ; ಹಿಂದೂಗಳು ಮತ್ತು ಮುಸ್ಲಿಮರು ಎರಡು ಪ್ರತ್ಯೇಕವಾದ ಪ್ರಮುಖ ದೇಶಗಳು’ ಎಂಬ ನಿಲುವಿಗೇ ಜಿನ್ನಾ ಅಂಟಿಕೊಂಡರು.

ಜಿನ್ನಾ ಅವರನ್ನು ಮುಸ್ಲಿಂ ಸಮುದಾಯದ ನಾಯಕನಿಗಿಂತ ಹೆಚ್ಚಿನದಾಗಿ ನೋಡಲು ಗಾಂಧಿ ಬಯಸಿದ್ದರು. ಮತ್ತೊಂದೆಡೆ, ಗಾಂಧೀಜಿ ಅವರನ್ನು ಹಿಂದೂ ನಾಯಕನನ್ನಾಗಿ ಮಾತ್ರ ನೋಡಬೇಕು ಎಂದು ಜಿನ್ನಾ ಪಟ್ಟು ಹಿಡಿದಿದ್ದರು. ‘ಇತರ ಎಲ್ಲರಿಗಿಂತ ಹೆಚ್ಚಾಗಿ ನೀವು ಭಾರತದ ಹಿಂದೂಗಳ ವಿಶ್ವಾಸ ಗಳಿಸಿಕೊಂಡಿದ್ದೀರಿ. ಅವರಿಗೆ ಬೇಕಾದುದನ್ನು ಮಾಡಬೇಕಾದ ಸ್ಥಾನದಲ್ಲಿ ಇದ್ದೀರಿ. ನ್ಯಾಯಯುತವಾಗಿ ನಿಮಗೆ ಇರುವ ಪಾತ್ರ ಯಾವುದೋ ಅದನ್ನು ನಿರ್ವಹಿಸುವಂತೆ ಕೋರುವುದು ಮತ್ತು ಮರೀಚಿಕೆಯ ಬೆನ್ನು ಹತ್ತಿ ಹೋಗದಿರಿ ಎಂದು ಹೇಳುವುದು ಅತಿಯಾದ ನಿರೀಕ್ಷೆ ಮತ್ತು ಭರವಸೆಯಾದೀತೇ?’ ಎಂದು ಜಿನ್ನಾ ಕೇಳಿದ್ದರು. ಗಾಂಧೀಜಿ ಅವರು ಹಿಂದೂಗಳಿಗೆ ಮಾತ್ರ ನಾಯಕ ಎಂಬುದೇ ಜಿನ್ನಾ ಅವರ ಗಟ್ಟಿ ನಂಬಿಕೆಯಾಗಿತ್ತು; ಆ ನೆಲೆಯಲ್ಲಿಯೇ ಮುಸ್ಲಿಂ ನಾಯಕನಾಗಿರುವ ತಮ್ಮನ್ನು ಭೇಟಿಯಾಗಿ ಗಾಂಧೀಜಿ ಸಂಧಾನ ನಡೆಸಬೇಕು ಎಂದು ಜಿನ್ನಾ ಬಯಸಿದ್ದರು.

ಮುಸ್ಲಿಂ ಲೀಗ್‌ ಅನ್ನು ಧಾರ್ಮಿಕ ರಾಜಕಾರಣದಿಂದ ಬೇರ್ಪಡಿಸಿ, ಧಾರ್ಮಿಕವಲ್ಲದ ನೆಲೆಯಲ್ಲಿ ಕಾಂಗ್ರೆಸ್‌ಗೆ ವಿರೋಧ ಪಕ್ಷವಾಗಿ ಕಟ್ಟಬೇಕು ಎಂದು ಜಿನ್ನಾ ಅವರನ್ನು ಗಾಂಧೀಜಿ ಕೋರಿದ್ದರು. ಈ ಪ್ರಯತ್ನದಲ್ಲಿ ಅವರು ವಿಫಲರಾಗಿದ್ದು ಭಾರತಕ್ಕಾದ ನಷ್ಟ. ಗಾಂಧೀಜಿಯ ಸಲಹೆಯನ್ನು ಜಿನ್ನಾ ಕೇಳಿದ್ದಿದ್ದರೆ, ದೇಶ ವಿಭಜನೆಯನ್ನು ತಪ್ಪಿಸಬಹುದಾಗಿತ್ತು ಮಾತ್ರವಲ್ಲ, ಸ್ವತಂತ್ರ ಭಾರತಕ್ಕೆ ಎರಡು ಪಕ್ಷಗಳ ವ್ಯವಸ್ಥೆಯ ಅನುಕೂಲವೂ ದೊರೆಯುತ್ತಿತ್ತು. 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೇ ಎರಡು ಪಕ್ಷ ವ್ಯವಸ್ಥೆಯ ಕೊರತೆ ಭಾರತವನ್ನು ಕಾಡುತ್ತಿದೆ. ಅಖಿಲ ಭಾರತ ವ್ಯಾಪ್ತಿಯಲ್ಲಿ ಅಸ್ತಿತ್ವ ಇರುವ ಎರಡು ಪಕ್ಷಗಳ ವ್ಯವಸ್ಥೆ ಇದ್ದಿದ್ದರೆ, ಇವರೆಡೂ ಪಕ್ಷಗಳು ಪರ್ಯಾಯವಾಗಿ ಅಧಿಕಾರಕ್ಕೆ ಬರುತ್ತಿದ್ದವು; ಒಂದರ ಮೇಲೆ ಇನ್ನೊಂದರ ನಿಗಾ ಸದಾ ಇರುತ್ತಿತ್ತು. ಬಹುಶಃ, ಇದರಿಂದಾಗಿ ನಮ್ಮ ಪ್ರಜಾಪ‍್ರಭುತ್ವ ವ್ಯವಸ್ಥೆಯ ಅಪರಿಪೂರ್ಣತೆ ಇನ್ನಷ್ಟು ಕಡಿಮೆಯಾಗುತ್ತಿತ್ತು ಮತ್ತು ಆಡಳಿತದಲ್ಲಿ ಭ್ರಷ್ಟಾಚಾರವೂ ಕಮ್ಮಿಯಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT