ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಶ್ಚಾತ್ಯ ಜ್ಞಾನಮೀಮಾಂಸೆ

ಅಕ್ಷರ ಗಾತ್ರ

ತತ್ತ್ವಶಾಸ್ತ್ರವನ್ನು, ಅದರಲ್ಲೂ ಪ್ರಧಾನವಾಗಿ ಪಾಶ್ಚಾತ್ಯ ತತ್ತ್ವಶಾಸ್ತ್ರವನ್ನು ಅಧ್ಯಯನ ಮಾಡಬೇಕಾದರೆ ಹಲವು ಪಾರಿಭಾಷಿಕಪದಗಳನ್ನು ಕೇಳುತ್ತಿರುತ್ತೇವೆ: ‘ಎಂಪಿರಿಸಿಸಂ’, ‘ರ‍್ಯಾಷನಲಿಸಂ’ – ಇಂಥವು. ಇವೆಲ್ಲವೂ ಜ್ಞಾನವನ್ನು ವಿವರಿಸುವಂಥ ಸಿದ್ಧಾಂತಗಳು. ಇವುಗಳ ಪರಿಚಯ ಇಲ್ಲದಿದ್ದರೆ ಪಾಶ್ಚಾತ್ಯ ತತ್ತ್ವಜ್ಞಾನದ ವಿಷಯವನ್ನು ತಿಳಿಯಲು ಸಾಧ್ಯವಾಗದು. ಇಂಥ ಜ್ಞಾನಮೀಮಾಂಸೆಯ ಹಲವು ಸಿದ್ಧಾಂತಗಳನ್ನು ತಿಳಿಯುವುದು ಎಂದರೆ ಅದೊಂದು ರೀತಿಯಲ್ಲಿ ಪಾಶ್ಚಾತ್ಯ ತತ್ತ್ವಜ್ಞಾನದ ಇತಿಹಾಸವನ್ನು ತಿಳಿದಂತೆಯೇ ಹೌದು ಎನ್ನಬಹುದು. ಜ್ಞಾನಮೀಮಾಂಸೆಯ ವಿವರಗಳು ಪಾಶ್ಚಾತ್ಯ ತತ್ತ್ವಶಾಸ್ತ್ರಲೋಕದಲ್ಲಿ ಹೇಗೆ ಬೆಳೆದುಬಂದವು ಎನ್ನುವುದನ್ನು ಜಿ. ಹನುಮಂತರಾವ್‌ ಅವರು ಸಂಗ್ರಹವಾಗಿ ಕಟ್ಟಿಕೊಟ್ಟಿದ್ದಾರೆ:

‘ಪಾಶ್ಚಾತ್ಯರಲ್ಲಿ ಪ್ರಾಚೀನರಾದ ಗ್ರೀಕರ ತತ್ತ್ವದಲ್ಲಿ ಜ್ಞಾನಮೀಮಾಂಸೆಗೆ ಪ್ರಾಧಾನ್ಯವಿರಲಿಲ್ಲ. ಪ್ರಕೃತಿಯ ವಿಚಾರದಲ್ಲೇ ಅವರ ಆಸಕ್ತಿ ಕೇಂದ್ರಿತವಾಗಿತ್ತು. ಆದ್ದರಿಂದ ಅವರಲ್ಲಿ ಜ್ಞಾನಮೀಮಾಂಸೆ ತತ್ತ್ವಶಾಸ್ತ್ರಕ್ಕೆ ಅಧೀನವಾಗಿ, ಪ್ರಾಸಂಗಿಕವಾಗಿ ಬರುತ್ತದೆ. ಸಾಕ್ರೆಟೀಸ್‌, ಪ್ಲೇಟೊ ಮತ್ತು ಅರಿಸ್ಟಾಟಲ್‌ ಜ್ಞಾನವಿಚಾರಕ್ಕೆ ಹೆಚ್ಚು ಗಮನ ಕೊಡುತ್ತಾರೆ. ಪ್ಲೇಟೊ ಸಾಮಾನ್ಯ ವಿಚಾರಕ್ಕೆ ವಿಶೇಷ ಗಮನ ಕೊಟ್ಟಿರುತ್ತಾರೆ. ಅರಿಸ್ಟಾಟಲ್‌ ಪಾಶ್ಚಾತ್ಯತರ್ಕದ ಜನಕ. ಅವನು ಅನುಮಾನಕ್ರಿಯೆಯನ್ನು ರೂಪಿಸಿದ. ಮಧ್ಯಯುಗದಲ್ಲಿ ಪಾಶ್ಚಾತ್ಯ ತಾತ್ವಿಕರ ಆಸಕ್ತಿ ಈಶ್ವರನ ವಿಚಾರದಲ್ಲಿ ಕೇಂದ್ರಿತವಾಗಿತ್ತು. ಅವರಿಗೆ ಬೈಬಲ್‌ಗ್ರಂಥ ಈಶ್ವರನ ತಿಳಿವಿಗೆ ಮುಖ್ಯ ಆಧಾರ. ಬೈಬಲ್ಲಿನ ಹೇಳಿಕೆಗಳಿಗೆ ತರ್ಕ ಅಧೀನ. ಆದ್ದರಿಂದ ಜ್ಞಾನಮೀಮಾಂಸೆಗೆ ಅಂದಿನ ಪ್ರಾಧಾನ್ಯವಿರಲಿಲ್ಲ. ಡೇಕಾರ್ಟನಿಂದ ಪ್ರಾರಂಭವಾದ ಆಧುನಿಕ ಪಾಶ್ಚಾತ್ಯ ತತ್ತ್ವವಿವೇಚನೆ ಜ್ಞಾನಮೀಮಾಂಸೆಯಿಂದ ಪ್ರಾರಂಭವಾಯಿತು. ಇವನೂ ಇವನ ಅನುಯಾಯಿಗಳಾದ ಸ್ಪಿನೋಜ ಮತ್ತು ಲೈಬ್ನೀಟ್ಸ್‌ ಇಂದ್ರಿಯಗಳಿಗಿಂತ ವಿಚಾರಬುದ್ಧಿಯೇ (ರೀಸನ್‌) ಜ್ಞಾನಕ್ಕೆ ಪ್ರಧಾನ ಆಧಾರವೆಂದು ಭಾವಿಸಿದರು. ಅವರ ಅನಂತರ ಬಂದ ಲಾಕ್‌, ಬಾರ್ಕ್ಲೀ, ಹ್ಯೂಮ್‌ – ಇವರು ವಿಚಾರಬುದ್ಧಿವಾದಕ್ಕೆ ಪ್ರತಿಯಾಗಿ ಜ್ಞಾನಕ್ಕೆ ಇಂದ್ರಿಯಾನುಭವವೇ ಮೂಲಾಧಾರವೆಂದು ವಾದಿಸಿದರು. ಅವರ ಅನಂತರ ಬಂದ ಕಾಂಟ್‌ ಮತ್ತು ಹೆಗಲ್‌ ಒಂದು ರೀತಿಯಲ್ಲಿ ವೈಚಾರಿಕ ಬುದ್ಧಿಪ್ರಧಾನವಾದಿಗಳೇ. ಆದರೂ ಅವರ ವಾದ ಇಂದ್ರಿಯಾನುಭವ ವಾದವಾಗಿದ್ದು ವಿಚಾರಬುದ್ಧಿವಾದಗಳಿಗಿಂತ ಭಿನ್ನವೆನಿಸಿವೆ. ಅವರು ಇಂದ್ರಿಯಾನುಭವವನ್ನೂ ವೈಚಾರಿಕ ಬುದ್ಧಿಭಾವನೆಗಳನ್ನೂ ಸಮನ್ವಯಗೊಳಿಸಿ ‘ಐಡಿಯಲಿಸಂ’ ಎಂಬ ಹೊಸ ವಾದವನ್ನು ಬೆಳೆಸಿದರು. ಅನಂತರ ಈ ಶತಮಾನದಲ್ಲಿ ಪ್ರಸಿದ್ಧನಾದ ಬರ್ಗ್‌ಸನ್‌ ಎಂಬ ಫ್ರೆಂಚ್‌ ತಾತ್ವಿಕ ಇಂದ್ರಿಯಾನುಭವ, ವಿಚಾರ, ಬುದ್ಧಿ ಇವುಗಳಿಗಿಂತ ಅಭಿನ್ನವಾದ ವಿಷಯಗಳನ್ನು ಒಳಹೊಕ್ಕು ತಿಳಿಯುವ ಆರ್ಷಚೇತನದಿಂದ ಮಾತ್ರ ಯಥಾರ್ಥಜ್ಞಾನ ಸಾಧ್ಯವೆಂದು ವಾದಿಸಿದ. ಈ ಆರ್ಷಚೇತನವನ್ನು ಅವನು ‘ಇನ್‌ಟ್ಯೂಷನ್‌’ ಎಂದು ಕರೆದಿರುತ್ತಾನೆ. ಸುಮಾರು ಅದೇ ಕಾಲದಲ್ಲಿ ಅಮೆರಿಕದಲ್ಲಿ ವಿಲಿಯಮ್‌ ಜೇಮ್ಸ್‌ ಮತ್ತು ಜಾನ್‌ ಡ್ಯೂಯಿ ಎಂಬುವವರು ಪ್ರಾಗ್ಮ್ಯಾಟಿಸಮ್‌ ಎಂಬ ಹೊಸ ವಾದವನ್ನು ಪ್ರಾರಂಭಿಸಿದರು.

ಆಧಾರ: ‘ಜಿ. ಹನುಮಂತರಾವ್‌ ಅವರ ಆಯ್ದ ಲೇಖನಗಳು’
ಸಂ.: ದೇಜಗೌ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT