ಬರ‍್ಕೊಳ್ಳೋರ ಬವಣೆ

ಬುಧವಾರ, ಏಪ್ರಿಲ್ 24, 2019
27 °C

ಬರ‍್ಕೊಳ್ಳೋರ ಬವಣೆ

Published:
Updated:
Prajavani

ಪ್ರತಿದಿನ ತಡವಾಗಿ ಬರುತ್ತಿದ್ದ ನಮ್ಮ ಮನೆ ಕೆಲಸದ ನಿಂಗಿ ಬೆಳಿಗ್ಗೆ ಏಳು ಗಂಟೆಗೇ ಕರೆಗಂಟೆ ಒತ್ತಿದಳು. ಏನೇ ಇವತ್ತು ಸೂರ್ಯ ಯಾವ ದಿಕ್ಕಿನಲ್ಲಿ ಹುಟ್ಟಿದ್ದಾನೆ ಎನ್ನುತ್ತಿದ್ದಂತೆಯೇ ‘ನಮ್ಮ ಮನೆ ಹತ್ತಿರದ ಪಾರ್ಕ್‌ನಲ್ಲಿ ಯಾರೋ ಭಾಷಣ ಮಾಡಕ್ಕೆ ಬರ‍್ತಾರಂತೆ. ಎಲ್ಲಾ ಬೇಗ ಬಂದು ಕೂತ್ಕೊಳ್ಳಿ ಅಂದವ್ರೇ. ಊಟಾನೂ ಅಲ್ಲೇ ಕೊಡ್ತಾರಂತೆ. ನಮ್ಮದು ಏನಾರಾ ಕಷ್ಟ ಇದ್ರೂ ಹೇಳ್ಕೋಬೋದಂತೆ ಅಮ್ಮಾವ್ರೇ’ ಎನ್ನುತ್ತಾ ಕೆಲಸದ ಕಡೆಗೆ ಕೈ ಚುರುಕು ಮಾಡಿದಳು. ಹೇಗೂ ನಿಂಗಿಯ ಕೆಲಸ ಬೇಗ ಮುಗಿಯುತ್ತದೆ. ನಾನೂ ಹೋಗಿ ಏಕೆ ಭಾಷಣ ಕೇಳಬಾರದು ಎಂದು ಯೋಚಿಸಿ ಪಕ್ಕದ ಮನೆಯವರನ್ನು ಜೊತೆಗೆ ಹೊರಡಿಸಿಕೊಂಡು ಪಾರ್ಕ್ ಕಡೆ ಹೊರಟೆ.

ನಾವು ಅಲ್ಲಿಗೆ ತಲುಪುವುದಕ್ಕೂ ರಾಜಕೀಯ ಧುರೀಣರ ಭಾಷಣ ಮುಗಿಯುವುದಕ್ಕೂ ಸರಿ ಹೋಯಿತು. ನಂತರ ಅವರು ‘ನಿಮ್ಮ ಬಡಾವಣೆಯಲ್ಲಿ ನೀರು, ಲೈಟು, ಕಸ, ನಿಮಗೆ ಏನೇ ತೊಂದರೆ ಇದ್ದರೂ ಹೇಳಿ, ನಾವು ಬಗೆಹರಿಸುತ್ತೇವೆ’ ಎಂದರು. ಇವರ ಅಕ್ಕ‍ಪಕ್ಕ ಗೂಂಡಾಗಳಂತೆ ಕಾಣುತ್ತಿದ್ದ ಇಬ್ಬರು ನಿಂತಿದ್ದರು. ಕೈನಲ್ಲಿ ಪೆನ್ನು ಹಾಳೆ. ಯಾರೋ ಎದ್ದು ನಿಂತು ಮೂರು ದಿನಕ್ಕೊಮ್ಮೆ ಬರುವ ಕಾವೇರಿ ನೀರಿನ ಬಗ್ಗೆ ತಿಳಿಸಿದರು. ಮಹಾಶಯರು ಪಕ್ಕಕ್ಕೆ ತಿರುಗಿ ‘ಸರಿ ಬರ್‍ಕೋ’ ಎಂದರು. ಮತ್ತೊಬ್ಬರು ಆಗಾಗ್ಗೆ ಯಾವ ಸೂಚನೆಯೂ ಇಲ್ಲದೆ ಕೈಕೊಡುವ ಕರೆಂಟ್ ಬಗ್ಗೆ... ‘ಸರಿ ಬರ್‍ಕೋ’. ಆಯಿತು ಮತ್ತೆ ಕಸದ ಗಾಡಿ, ಬೀದಿ ಕಸ, ನಾಯಿಕಾಟ ಹೀಗೆ ಒಬ್ಬೊಬ್ಬರ ಸಮಸ್ಯೆಗೂ  ‘ಸರಿ ಬರ್‍ಕೋ’ ಎನ್ನುತ್ತಾ ಒಣ ಆಶ್ವಾಸನೆ ನೀಡಿ ಕಾರನ್ನೇರಿದರು. ಬಹುಶಃ ಮುಂದಿನ  ‘ಸರಿ ಬರ್‍ಕೋ’ ಕಾರ್ಯಕ್ರಮಕ್ಕಿರಬಹುದು.

ನಾನು ಈ  ‘ಸರಿ ಬರ್‍ಕೋ’ ಪದವನ್ನೇ ತಲೆಯಲ್ಲಿ ತುಂಬಿಕೊಂಡು ಹೆಜ್ಜೆ ಇಡುತ್ತಿದ್ದಾಗ ನಮ್ಮೂರಿನ ನಾನು ಓದಿದ ಸರ್ಕಾರಿ ಶಾಲೆಯ ನೆನಪಾಯಿತು. ಚುನಾವಣಾ ಪಟ್ಟಿ ತಯಾರಿಸಲು ಸರ್ಕಾರಿ ಶಾಲೆಯ ಮೇಡಂ ಒಂದಿಬ್ಬರು ಮನೆ ಮನೆಗೆ ಬರುತ್ತಿದ್ದರು. ಚುನಾವಣಾ ಪಟ್ಟಿ ತಯಾರಿಸಲು ಸಹಾಯ ಕೋರಿ. ಅಮ್ಮ ಅವರನ್ನು ವಿಶ್ವಾಸದಿಂದ ಒಳಕರೆದು ಅವರು ಕೇಳಿದ ಪ್ರಶ್ನೆಗಳಿಗೆಲ್ಲಾ  ‘ಸರಿ ಬರ್‍ಕೋ’ ಎನ್ನುತ್ತಾ ಗೋತ್ರ, ನಕ್ಷತ್ರ ಬಿಟ್ಟು ಉಳಿದೆಲ್ಲ ಪ್ರಶ್ನೆ ಕೇಳುತ್ತಿದ್ದವರಿಗೆ ಸರಿಯಾಗಿ ಉತ್ತರ ಹೇಳಿ, ಪಾಪ, ಹುಡುಗಿಯರು ಎಂದು ಅವರಿಗೆ ಕಾಪಿಯನ್ನೋ, ಪಾನಕವನ್ನೋ ಕೊಟ್ಟು ಕಳುಹಿಸುತ್ತಿದ್ದುದು ನೆನಪಿಗೆ ಬಂತು.

ನಾನು ಮಾಧ್ಯಮಿಕ ಶಾಲೆಯಲ್ಲಿದ್ದಾಗ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪಾಠ ಮುಗಿದ ನಂತರ ಉಕ್ತ ಲೇಖನ (Dictation) ಹೇಳುತ್ತಿದ್ದರು. ಸ್ಲೇಟಿನಲ್ಲಿ ಹತ್ತು ಪದಗಳು ಮಾತ್ರ. ನಾವು ನಾಲ್ಕೈದು ಗೆಳತಿಯರ ಗುಂಪಿನಲ್ಲಿ ಹತ್ತೂ ಪದಗಳೂ ಸರಿಯಾಗಿ ಬರೆಯುತ್ತಿದ್ದೆವು ಹಾಗೆ ಸರಿಯಾದಾಗ ಮೇಡಂ ನಮಗೆ ತಿದ್ದಲು ಬೇರೆಯವರ ಐದು ಸ್ಕೇಟುಗಳನ್ನು ಕೊಡುತ್ತಿದ್ದರು. ಹಾಗಾಗಿ, ಭಾಷಾ ತರಗತಿಗಳಲ್ಲಿ ಮೇಡಂ ಬಂದ ತಕ್ಷಣ ಕೂಗುತ್ತಿದ್ದರು ‘ಡಿಕ್ಟೇಷನ್’ ಎನ್ನುವ ಪದ.  ‘ಸರಿ ಬರ್‍ಕೋ’ ಎಂದರಂತೂ ಖುಷಿಯೋ ಖುಷಿ.

ಒಮ್ಮೆ ರಜಾದಲ್ಲಿ ಅಕ್ಕನ ಮನೆಗೆ ಹೋಗಿದ್ದೆ. ಅವಳು ತಿಂಗಳ ಸಾಮಾನಿನ ಪಟ್ಟಿಯನ್ನು ಮಾವನವರ ಕೈಗಿಡುತ್ತಾ ಮಾಮೂಲಿ ಅಂಗಡಿಗೆ ಕೊಟ್ಟು ಬನ್ನಿ ಎಂದಳು. ಅವರು ಚೀಟಿಯನ್ನು ಮನೆಯಲ್ಲೇ ಮರೆತಿರಬೇಕು. ಅಂಗಡಿಗೆ ಹೋದಾಗ ಚೀಟಿ ಇಲ್ಲ. ಅಂಗಡಿಯವನು ‘ಪರವಾಗಿಲ್ಲಾ ಸಾರ್, ಪ್ರತಿ ತಿಂಗಳೂ ತರ್‍ತೀರಲ್ಲಾ, ನನಗೂ ನೆನಪಿರುತ್ತದೆ. ನೀವು ಹೇಳಿ’ ಎಂದನಂತೆ  ‘ಸರಿ ಬರ್‍ಕೋ’ ಎನ್ನುತ್ತಾ ಬೇಕಾದ್ದು, ಬೇಡವಾದ್ದು ಎಲ್ಲಾ ಹೇಳಿದ್ದಾರೆ. ಮನೆಗೆ ಸಾಮಾನು ಬಂದಾಗ ತೂಕ, ಅಳತೆಯಲ್ಲೂ ಸಾಕಷ್ಟು ವ್ಯತ್ಯಾಸ ಇಬ್ಬರೂ ಸಾಮಾನು ವಿಂಗಡಿಸಿ ಬೇಡವಾದದ್ದನ್ನೆಲ್ಲಾ ಹಿಂತಿರುಗಿಸುವಲ್ಲಿ ಸಾಕು, ಬೇಕಾಯಿತು.

ವಿಶ್ರಾಂತಿ ಜೀವನ ಅನುಭವಿಸುತ್ತಿರುವ ನಮ್ಮವರು ಸುತ್ತಮುತ್ತ ಎಲ್ಲೇ ಯಾವುದೇ ಕಾರ್ಯಕ್ರಮವಿದ್ದರೂ ತಪ್ಪದೇ ಹಾಜರಾಗುತ್ತಾರೆ. ಕಾರ್ಯಕ್ರಮದ ಆಸಕ್ತಿಗಿಂತ ತಮ್ಮಂತೆಯೇ ವಿಶ್ರಾಂತಿ ಜೀವನ ನಡೆಸುತ್ತಿರುವವರು ಹರಟೆಗೆ ಸಿಗುತ್ತಾರೆ ಎಂಬುದು ಅವರ ಉದ್ದೇಶ.

ಬೆಳಗಿನ ಉಹಾಹಾರ ಮುಗಿಸಿ ಹೊರಟಾಗ ಚುನಾವಣಾ ಸಮಯ ಆದುದರಿಂದ ಇದು ಮತ್ತೊಂದು  ‘ಸರಿ ಬರ್‍ಕೋ’ ಕಾರ್ಯಕ್ರಮ ಹೋಗಿ ಬರಲಿ ಎಂದುಕೊಂಡೆ. ಆದರೆ ಬಿಸಿಲಿನಲ್ಲಿ ‘ಉಸ್ಸಪ್ಪಾ’ ಎನ್ನುತ್ತಾ ಮಧ್ಯಾಹ್ನ ಒಂದು ಗಂಟೆಗೆ ಮನೆಗೆ ಬಂದಾಗ ಆಯ್ತೇನ್ರೀ ನಿಮ್ಮ  ‘ಸರಿ ಬರ್‍ಕೋ’ ಕಾರ್ಯಕ್ರಮ ಎಂದೆ. ‘ಅಯ್ಯೋ ಇದು  ‘ಸರಿ ಬರ್‍ಕೋ’ ಅಲ್ಲ ಕಣೇ, ಅಲ್ಲೊಂದು ಡಬ್ಬ ಇಟ್ಟಿದ್ದರು. ನಾವು ನಮ್ಮ ಸಮಸ್ಯೇನಾ ಬರೆದು ಅದರಲ್ಲಿ ಹಾಕಬೇಕು. ಅದಕ್ಕೊಂದು ನಂಬರ್ ಕೊಟ್ಟರು. ನನ್ನ ನಂಬರ್ ಮೂವತ್ತೈದು. ಇನ್ನೂ ಹದಿನೈದನೇ ನಂಬರ್‌ನಲ್ಲಿದ್ದರು. ಹೊಟ್ಟೆ ಚುರುಗುಟ್ಟುತ್ತಿತ್ತು. ಬಿಸಿಲು ಎದ್ದು ಬಂದೆ ’ಎಂದಾಗ ಹಾಗಾದರೆ ಇದು  ‘ಸರಿ ಬರೆದು ಹಾಕಿ’ ಎಂದು ನಾನೇ ತಿದ್ದಿಕೊಂಡೆ.

ನಾನು ನಿವೃತ್ತ ಉಪಾಧ್ಯಾಯಿನಿ ಎಂದು ಅಕ್ಕಪ‍ಕ್ಕದ ಬೀದಿ ಮಕ್ಕಳಿಗೆಲ್ಲಾ ಗೊತ್ತಾಗಿದೆ. ಒಮ್ಮೆ ಪಕ್ಕದ ಮನೆಯ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಹುಡುಗಿ ಆಂಟೀ ರಾಜ್ಯೋತ್ಸವದ ಬಗ್ಗೆ ಏನಾದರೂ ಹೇಳಿ ಆಂಟಿ. ನಾಳೆ ಭಾಷಣ ಮಾಡಬೇಕು ಎಂದಾಗ  ‘ಸರಿ ಬರ್‍ಕೋ’ ಎನ್ನುತ್ತಾ ‘ಕರ್ನಾಟಕ ಎಂದು ಪ್ರಾರಂಭ ಮಾಡಿದ ಕೂಡಲೇ ಮೊದಲನೇ ‘ನ’ ನೋ ಎರಡನೆ ‘ನ’ ನೋ  ಆಂಟೀ ಎಂದಾಗ ತಿದ್ದಿ  ‘ಸರಿ ಬರ್‍ಕೋ’ ಎನ್ನುತ್ತಾ ‘ರಾಜ್ಯೋತ್ಸವ’ ಎಂದು ಪ್ರಾರಂಭಿಸಿದಾಗ ‘ಜ’ಕ್ಕೆ ಯಾವತ್ತೋ ‘ಯ’ಗೆ ‘ಜ’ ಒತ್ತೋ ಆಂಟಿ ಎಂದು ಕೇಳಿದಾಗ ನನ್ನ ಟ್ಯೂಬ್‌ಲೈಟ್ ಕೆಲಸ ಮಾಡಿತು. ಇದೆಲ್ಲಾ ಇಂಗ್ಲಿಷ್ ಶಾಲೆಗಳಲ್ಲಿ ಕನ್ನಡ ಕಲಿಸುವ ವಿಧಾನವೆಂದು, ಸರಿ ಬರೆದಿಟ್ಟಿರುತ್ತೇನೆ. ಆಮೇಲೆ ಬಾ ಎಂದು ಕಳುಹಿಸಿದೆ.

ನನಗೂ  ‘ಸರಿ ಬರ್‍ಕೋ’ ಪದಕ್ಕೂ ಅವಿನಾಭಾವ ಸಂಬಂಧವಿದ್ದರೂ ಯಾರು ಏನೇ ಕೇಳಿದರೂ  ‘ಸರಿ ಬರ್‍ಕೋ’ ಎನ್ನುವುದನ್ನು ನಿಲ್ಲಿಸಿ ‘ಬರೆದಿಟ್ಟಿರುತ್ತೇನೆ’ ಆಮೇಲೆ ಬನ್ನಿ ಎನ್ನುತ್ತೇನೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !