ಕಾಡುವ ಸೋಮಾರಿತನ

7

ಕಾಡುವ ಸೋಮಾರಿತನ

Published:
Updated:
Prajavani

ನಾನು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದೇನೆ. ನನಗೆ ಓದಿರೋದು ನೆನಪಿನಲ್ಲಿ ಉಳಿಯುವುದಿಲ್ಲ. ಯಾವುದೇ ಕೆಲಸ ಮಾಡಲು ಹೋದರೂ ಸೋಮಾರಿತನ ಕಾಡುತ್ತದೆ. ನಾಳೆ ಮಾಡಿದರೆ ಆಯ್ತು ಎಂದುಕೊಳ್ಳುತ್ತೇನೆ. ಇದಕ್ಕೆ ಕಾರಣ ಏನು?

ಹೆಸರು, ಊರು ಬೇಡ

ನೀವು ಮಾಡುವ ಯಾವುದೇ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡದಿರಲು ಅಲಸ್ಯವೂ ಒಂದು ಕಾರಣವಿರಬಹುದು. ಮತ್ತು ಅದಕ್ಕೆ ದೈಹಿಕ ವ್ಯಾಯಾಮದ ಕೊರತೆ ಹಾಗೂ ಸಮತೋಲಿತವಲ್ಲದ ಆಹಾರಕ್ರಮವೂ ಕಾರಣವಿರಬಹುದು. ಇದರಿಂದ ಗಮನಶಕ್ತಿಯು ಕುಂಠಿತವಾಗುತ್ತದೆ. ಜೊತೆಗೆ ಓದಿದ್ದು ನೆನಪಿನಲ್ಲಿ ಉಳಿಯದಿರಬಹುದು. ನೀವು ಓದಿರುವುದನ್ನು ಬರೆದು ಅಭ್ಯಾಸ ಮಾಡಿ. ಈ ಕ್ರಮ ಓದಿದ್ದು ನೆನಪಿನಲ್ಲಿ ಉಳಿಯಲು ಸಹಾಯ ಮಾಡುತ್ತದೆ. ಓದುವ ಸಮಯದಲ್ಲಿ ಎಲೆಕ್ಟ್ರಾನಿಕ್ಸ್‌ ಉಪಕರಣಗಳಿಂದ ದೂರವಿರಿ. ಅವುಗಳು ಮನಸ್ಸು ಚಂಚಲಗೊಳ್ಳುವಂತೆ ಮಾಡುತ್ತವೆ. ಅದೂ ನಿಮ್ಮ ಗಮನ ಕಡಿಮೆಯಾಗಲು ಒಂದು ಕಾರಣವಿರಬಹುದು. ಹಾಗಾಗಿ ನಿಮ್ಮ ಆಹಾರಕ್ರಮ, ವ್ಯಾಯಾಮ ಹಾಗೂ ಓದಿನ ಕ್ರಮವನ್ನು ಪರಿಶೀಲಿಸಿ. ಪ್ರತಿದಿನ ಅರ್ಧಗಂಟೆ ಧ್ಯಾನ ಮಾಡುವುದರಿಂದ ನಿಮ್ಮ ಗಮನಶಕ್ತಿ ಹೆಚ್ಚುತ್ತದೆ.  

ನನಗೆ 56 ವರ್ಷ. ನನ್ನಲ್ಲಿ ಅನೇಕ ಸಮಸ್ಯೆಗಳಿವೆ. ಖಿನ್ನತೆ, ಭಯ ಜಾಸ್ತಿ. ಅದರಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ನನ್ನ ಸಮಸ್ಯೆಗಳನ್ನು ಬೇರೆಯವರ ಬಳಿ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರ ಏನು?

ಶಿವು, ಬೆಂಗಳೂರು

ನಿವೃತ್ತಿ ಜೀವನಕ್ಕೆ ಹತ್ತಿರವಿರುವಾಗ ಇಂತಹ ಭಾವನೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಅಭದ್ರತೆಯು ಭಯಕ್ಕೆ ಒಂದು ಕಾರಣವಿರಬಹುದು. ಅದರಿಂದ ನೀವು ಖಿನ್ನತೆಗೆ ಒಳಗಾಗಿರಬಹುದು. ನಾನು ಹೇಳಲು ಬಯಸುವುದೇನೆಂದರೆ ನೀವು ಒಬ್ಬ ಉತ್ತಮ ಕೌನ್ಸೆಲರ್‌ ಅನ್ನು ನೋಡುವುದು ಒಳ್ಳೆಯದು. ಬೆಂಗಳೂರಿನ ಆಸುಪಾಸು ‘ಸಮಾಧಾನ’, ‘ಸ್ನೇಹ’ದಂತಹ ಉಚಿತವಾಗಿ ಆಪ್ತಸಮಾಲೋಚನೆ ನೀಡುವ ಸೆಂಟರ್‌ಗಳಿವೆ. ಅವುಗಳಿಂದ ನಿಮಗೆ ಸಹಾಯವಾಗಬಹುದು.

ನನಗೆ ಯಾವುದರ ಮೇಲೂ ಆಸಕ್ತಿ ಇಲ್ಲ. ಯಾವಾಗಲೂ ಫೋನ್ ಬಳಸುತ್ತೇನೆ. ಬೇರೆ ಕೆಲಸ ಮಾಡಲು ಮನಸ್ಸೇ ಬರುವುದಿಲ್ಲ. ನಾನು ಇಷ್ಟಪಡುತ್ತಿರುವ ಹುಡುಗ ನನಗೆ ಮೋಸ ಮಾಡುತ್ತಿದ್ದಾನೆ. ಅವನು ಮೆಸೇಜ್‌, ಕಾಲ್ ಮಾಡಿದರೆ ನನಗೆ ಬೇರೆಯವರ ಮೇಲೆ ಕೋಪ ಬರುತ್ತದೆ. ಯಾರಾದರೂ ಏನಾದರೂ ತಮಾಷೆ ಮಾಡಿದರೆ ಕೋಪ ಬರುತ್ತದೆ. ಒಬ್ಬಳೇ ಇರಬೇಕು ಅನ್ನಿಸುತ್ತದೆ. ಒಮ್ಮೊಮ್ಮೆ ಸಾಯೋ ಯೋಚನೆ ಬರುತ್ತದೆ.

ಹೆಸರು, ಊರು ಬೇಡ

ನೀವು ಓದುತ್ತಿದ್ದೀರಾ, ಕೆಲಸದಲ್ಲಿದ್ದೀರಾ, ಸುಮ್ಮನೆ ಮನೆಯಲ್ಲಿ ಇದ್ದೀರಾ ಎಂಬುದನ್ನು ಇಲ್ಲಿ ತಿಳಿಸಿಲ್ಲ. ಜೀವನ ಎನ್ನುವುದು ಕೇವಲ ಬಾಯ್‌ಫ್ರೆಂಡ್ ಹಾಗೂ ಮೊಬೈಲ್ ಮೇಲೆ ನಿಂತಿಲ್ಲ. ನಿಮ್ಮ ಸುತ್ತಲಿನ ಪ್ರಪಂಚವನ್ನು ನೋಡಿ. ಇಂತಹ ಎಳೆ ವಯಸ್ಸಿನಲ್ಲಿ ಸದಾ ಉತ್ಸಾಹದಿಂದ ಕ್ರಿಯಾಶೀಲರಾಗಿರಬೇಕು. ಒಂದು ಗುರಿಯನ್ನು ಇರಿಸಿಕೊಂಡು ಅದರ ಮೇಲೆ ಗಮನವಿರಿಸಿ ಕೆಲಸ ಮಾಡಿ. ಇಲ್ಲಿ ನಿಮಗೆ ಯಾರೂ ಸಹಾಯ ಮಾಡಲು ಸಾಧ್ಯವಿಲ್ಲ, ನೀವೇ ನಿಮಗೆ ಸಹಾಯ ಮಾಡಿಕೊಳ್ಳಬೇಕು. ನಿಮಗೆ ಮುಖ್ಯ ಎನ್ನಿಸುವ ಕೆಲಸಗಳ ಪ್ರಾಶಸ್ತ್ಯವನ್ನು ಗುರುತಿಸಿಕೊಳ್ಳಿ ಮತ್ತು ಅದರ ಮೇಲೆ ಕೆಲಸ ಮಾಡಿ. ಮದುವೆ ಹಾಗೂ ಪ್ರೀತಿಯೇ ನಿಮ್ಮ ಅಂತಿಮ ಗುರಿಯಾದರೆ ಮನೆಯ ಹಿರಿಯರ ಜೊತೆ ಮಾತನಾಡಿ ಅದನ್ನು ಸಾಕಾರಗೊಳ್ಳುವಂತೆ ಮಾಡಿ. ಅದಿಲ್ಲದಿದ್ದರೆ ನಿಮ್ಮ ಕನಸಿನ ಗುರಿಯ ಮೇಲೆ ಗಮನ ಹರಿಸಿ. ಅದನ್ನು ಸಾಧಿಸುವ ಮೂಲಕ ನಿಮ್ಮ ಮೇಲೆ ನೀವು ಹೆಮ್ಮೆಪಡಿ. ನಿಮ್ಮಿಂದ ಫೋನ್ ಅನ್ನು ದೂರವಿರಿಸಲು ಕಠಿಣ ಪ್ರಯತ್ನ ಮಾಡಿ. ಅದನ್ನು ಕೇವಲ ಅವಶ್ಯಕ ಕರೆಗಳಿಗಷ್ಟೇ ಸಿಮೀತವಾಗಿರಿಸಿಕೊಳ್ಳಿ. ನಿಮ್ಮಿಂದಷ್ಟೇ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ, ಬೇರೆಯವರಿಂದ ಅಲ್ಲ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !