ಭಾನುವಾರ, ಆಗಸ್ಟ್ 25, 2019
28 °C
ಈಗಿನ ಸಾಂವಿಧಾನಿಕ ಬೆಳವಣಿಗೆಯು ಕಾಶ್ಮೀರದ ವಿಚಾರದಲ್ಲಿ ಆಶಾಭಾವ ಹೊಂದಲು ಅವಕಾಶ ಕಲ್ಪಿಸಿದೆ

ಕಾಶ್ಮೀರ ಸಮಸ್ಯೆ ಬಗೆಹರಿಸಿದ್ದೇವೆಯೇ?

Published:
Updated:

ಕಳೆದ ವಾರದವರೆಗೆ ಜಮ್ಮು ಮತ್ತು ಕಾಶ್ಮೀರವು ಭಾರತದ 29 ರಾಜ್ಯಗಳ ಪೈಕಿ ಒಂದಾಗಿತ್ತು. ಸಂವಿಧಾನದ 370ನೇ ವಿಧಿ ಇಲ್ಲವಾಗಿದ್ದಿದ್ದರೆ ಅದು ದೇಶದ ಇತರ ರಾಜ್ಯಗಳಂತೆಯೇ ಇರುತ್ತಿತ್ತು. ದೇಶದ ಸಂವಿಧಾನವು ಆ ರಾಜ್ಯಕ್ಕೆ ಎಷ್ಟರಮಟ್ಟಿಗೆ ಅನ್ವಯವಾಗುತ್ತದೆ ಎಂಬುದನ್ನು ರಾಷ್ಟ್ರಪತಿ ತೀರ್ಮಾನಿಸುತ್ತಾರೆ ಎಂದು ಈ ವಿಧಿ ಹೇಳಿತ್ತು. ಸಂವಿಧಾನವನ್ನು ಆ ರಾಜ್ಯದ ಮಟ್ಟಿಗೆ ರಾಷ್ಟ್ರಪತಿಯವರು ಬದಲಿಸಿ, ಬದಲಿಸಿದ ಸಂವಿಧಾನವನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರ ಅನ್ವಯಿಸಬಹುದು ಎಂದೂ ಈ ವಿಧಿ ಹೇಳಿತ್ತು. ರಾಷ್ಟ್ರಪತಿ ತಮ್ಮ ಅಧಿಕಾರ ಬಳಸಿ ಕಾಶ್ಮೀರ ಸರ್ಕಾರಕ್ಕೆ ಅನೇಕ ಸವಲತ್ತುಗಳನ್ನು ಕಲ್ಪಿಸಿದ್ದರು.

ಸಂವಿಧಾನದ 35(ಎ) ವಿಧಿಯು ಸಂವಿಧಾನದ ಆಶಯಕ್ಕೆ ವಿರುದ್ಧವಾದ ಕೆಲವು ಕಾನೂನುಗಳನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಜಾರಿಯಲ್ಲಿಡಲು ಅವಕಾಶ ಕೊಟ್ಟಿತ್ತು. ಜಮ್ಮು ಮತ್ತು ಕಾಶ್ಮೀರದ ಕಾಯಂ ನಿವಾಸಿಗಳು ಮಾತ್ರ ಆ ರಾಜ್ಯದಲ್ಲಿ ಸ್ಥಿರಾಸ್ತಿ ಖರೀದಿ ಮಾಡಬಹುದು, ಅವರು ಮಾತ್ರ ಅಲ್ಲಿ ಉದ್ಯೋಗ ಗಿಟ್ಟಿಸಬಹುದು ಎಂಬ ನಿಯಮಗಳನ್ನು ಇಲ್ಲಿ ಉದಾಹರಿಸಬಹುದು.

370ನೇ ವಿಧಿಯನ್ನು ಇರಿಸಿರುವ ಅಧ್ಯಾಯದ ಶೀರ್ಷಿಕೆಯಲ್ಲಿ ‘ತಾತ್ಕಾಲಿಕ, ಪರಿವರ್ತನೆಯ ಮತ್ತು ವಿಶೇಷ ಅವಕಾಶಗಳು’ ಎಂದು ಹೇಳಲಾಗಿದೆ. ಅಂದರೆ ಈ ವಿಧಿಯು ತಾತ್ಕಾಲಿಕ ಉದ್ದೇಶದ್ದು. 370ನೇ ವಿಧಿಯು ಸಂವಿಧಾನದಲ್ಲಿ ಅಳವಡಿಕೆಯಾದ 69 ವರ್ಷಗಳ ನಂತರ ರಾಷ್ಟ್ರಪತಿ, ಆ ವಿಧಿಯನ್ನು ಅಸಿಂಧುಗೊಳಿಸಿದ್ದಾರೆ. ಇದರ ಪರಿಣಾಮವಾಗಿ, ಈ ರಾಜ್ಯವು ನಮ್ಮ ಇತರೆಲ್ಲ ರಾಜ್ಯಗಳಂತೆಯೇ ಆಗಬಹುದಿತ್ತು. ಆದರೆ, ಸಂಸತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು. ಅಂತೂ, 370ನೇ ವಿಧಿಯು ಜೀವ ಕಳೆದುಕೊಂಡಿತು!

370ನೇ ವಿಧಿ ಹಾಗೂ ದೇಶದ ಇತರ ಕೆಲವು ರಾಜ್ಯಗಳಿಗೆ ಸಂವಿಧಾನದ ಕೆಲವು ಅಂಶಗಳಿಂದ ವಿನಾಯಿತಿ ನೀಡುವ 371ನೇ ವಿಧಿಯ ನಡುವೆ ವ್ಯತ್ಯಾಸ ಇಲ್ಲ ಎಂದು ಹಲವರು ಹೇಳಿದ್ದಾರೆ. ಆದರೆ, ವಾಸ್ತವ ಹಾಗಿಲ್ಲ. 371ನೇ ವಿಧಿಯು ಇತರ ರಾಜ್ಯಗಳಲ್ಲಿನ ಹಿಂದುಳಿದಿರುವಿಕೆಯನ್ನು ಗುರುತಿಸಿ, ಅಂತಹ ಹಿಂದುಳಿದಿರುವಿಕೆಗೆ ಪ್ರತಿಯಾಗಿ ರಕ್ಷಣೆ ಕಲ್ಪಿಸುತ್ತದೆ. ಆದರೆ, 370 ಹಾಗೂ 35(ಎ) ವಿಧಿಗಳು ಅಂತಹ ಹಿಂದುಳಿದಿರುವಿಕೆಯನ್ನು ಗುರುತಿಸುವುದಿಲ್ಲ; ವಿಶೇಷಾಧಿಕಾರ ನೀಡುತ್ತವೆ. ಈ ವಿಶೇಷಾಧಿಕಾರಗಳು ಸಮಾನತೆಯನ್ನು ಆಧರಿಸಿದ ನಮ್ಮ ಸಂವಿಧಾನಕ್ಕೆ ಪೂರಕವಾಗಿಲ್ಲ.

371ನೇ ವಿಧಿಯ ಅಡಿ ವಿಶೇಷ ಸವಲತ್ತುಗಳನ್ನು ಪಡೆದಿರುವ ನಾಗಾಲ್ಯಾಂಡ್ ಮತ್ತು ಮಿಜೋರಾಂ ಉದಾಹರಣೆ ಪರಿಶೀಲಿಸೋಣ. ನಾಗಾಲ್ಯಾಂಡ್‌ನ ಶೇಕಡ 90ರಷ್ಟು, ಮಿಜೋರಾಂನ ಶೇ 95ರಷ್ಟು ಜನ ಸಂಖ್ಯೆಯನ್ನು ‘ಪರಿಶಿಷ್ಟ ಪಂಗಡ’ ಎಂದು ವರ್ಗೀಕರಿಸಲಾಗಿದೆ. ನಮ್ಮ ಸಂವಿಧಾನವು ಪರಿಶಿಷ್ಟ ಪಂಗಡಗಳ ಜನರನ್ನು ಅತ್ಯಂತ ಹಿಂದುಳಿದವರು ಎಂದು ಪರಿಗಣಿಸುತ್ತದೆ. 371ನೇ ವಿಧಿಯು ನಾಗಾಲ್ಯಾಂಡ್‌ ಮತ್ತು ಮಿಜೋರಾಂ ರಾಜ್ಯಗಳ ಪರಂಪರಾಗತ ನಿಯಮಗಳು ಸೇರಿದಂತೆ ವಿವಿಧ ನಿಯಮಗಳ ವಿಚಾರದಲ್ಲಿ ಕೇಂದ್ರ ಸರ್ಕಾರವು ಆ ರಾಜ್ಯಗಳ ಅನುಮತಿ ಇಲ್ಲದೆ ಕಾನೂನಿನ ಮೂಲಕ ಹಸ್ತಕ್ಷೇಪ ನಡೆಸದಂತೆ ನೋಡಿಕೊಳ್ಳುತ್ತದೆ. 371ನೇ ವಿಧಿಯ ಅಡಿಯಲ್ಲಿ ನೀಡಿರುವ ಪ್ರತೀ ಸವಲತ್ತು ಕೂಡ 370ನೇ ವಿಧಿಯ ಅಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವು ಭಿನ್ನ ಎಂಬುದನ್ನು ಸ್ಪಷ್ಟವಾಗಿ ಗುರುತಿಸಬಹುದು.

ಸಂಸತ್ತಿನ ಅನುಮೋದನೆ ಪಡೆದ ‘ಜಮ್ಮು ಮತ್ತು ಕಾಶ್ಮೀರ (ಪುನರ್‌ವಿಂಗಡಣೆ) ಮಸೂದೆ– 2019’, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದೆ. ರಾಜ್ಯವನ್ನು ವಿಭಜಿಸಿ, ಕೇಂದ್ರಾಡಳಿತ ಪ್ರದೇಶ ಎಂದು ಗುರುತಿಸುವುದಕ್ಕೆ ಸಂವಿಧಾನದಲ್ಲಿ ಅವಕಾಶ ಇದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಇನ್ನು ಮುಂದೆ, ಹಿಂದೆ ಇದ್ದಂತಹ ರಾಜಕೀಯ ಗೊಂದಲಗಳು ಇರುವುದಿಲ್ಲ ಎಂದು ನಿರೀಕ್ಷಿಸಬಹುದು. ದೇಶದ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಂಶಪಾರಂಪರ್ಯದ ರಾಜಕೀಯ ಬೆಳೆದಿಲ್ಲದಿರುವುದನ್ನು ಆಧರಿಸಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಕೂಡ ಇನ್ನು ಮುಂದೆ ಅದು ನಡೆಯುವುದಿಲ್ಲ ಎನ್ನಬಹುದು.

ಕಾನೂನಿನ ದೃಷ್ಟಿಯಲ್ಲಿ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ದೆಹಲಿ ಮತ್ತು ಪುದುಚೇರಿ ಮಾದರಿಯಲ್ಲೇ ಇರಲಿದೆ. ಆಗ, ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಬಲ ಕೇಂದ್ರದ ‍ಪೂರ್ಣ ನಿಯಂತ್ರಣಕ್ಕೆ ಒಳಪಡಲಿರುವ ಕಾರಣ, ಕಾಶ್ಮೀರ ಪ್ರದೇಶದ ಮೇಲೆ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಹಿಡಿತ ದೊರೆಯಲಿದೆ.

ರಾಜಕೀಯವಾಗಿ ಭಾರತ ಪಡೆದ ಸ್ವಾತಂತ್ರ್ಯವನ್ನು ಬ್ರಿಟಿಷ್ ಸಂಸತ್ತು 1947ರ ಆಗಸ್ಟ್‌ 14ರಂದು ಜಾರಿಗೆ ತಂದ ‘ಭಾರತದ ಸ್ವಾತಂತ್ರ್ಯ ಕಾಯ್ದೆ– 1947’ರ ಅಡಿಯಲ್ಲಿಯೂ ಗ್ರಹಿಸಬೇಕಾಗುತ್ತದೆ. ಈ ಕಾಯ್ದೆಯ ಅಡಿ, ಅಲ್ಲಿಯವರೆಗೆ ಬ್ರಿಟಿಷರ ಆಡಳಿತದಲ್ಲಿದ್ದ ಭಾರತವನ್ನು ಎರಡಾಗಿ– ಭಾರತ ಮತ್ತು ಪಾಕಿಸ್ತಾನ– ವಿಭಜಿಸಬೇಕಿತ್ತು. ಆ ಸಂದರ್ಭದಲ್ಲಿ, ಬ್ರಿಟಿಷರ ಪರೋಕ್ಷ ನಿಯಂತ್ರಣದಲ್ಲಿ 562 ಸಂಸ್ಥಾನಗಳು ಇದ್ದವು. ಆ ಸಂಸ್ಥಾನಗಳು ಭಾರತದ ಜೊತೆ ಸೇರಿಕೊಳ್ಳಬೇಕೋ ಪಾಕಿಸ್ತಾನದ ಜೊತೆ ಸೇರಿಕೊಳ್ಳಬೇಕೋ ಸ್ವತಂತ್ರವಾಗಿ ಉಳಿಯಬೇಕೋ ಎಂಬುದನ್ನು ಸಂಸ್ಥಾನಗಳ ಪ್ರಮುಖರೇ ತೀರ್ಮಾನಿಸಲಿ ಎಂಬ ನಿರ್ಧಾರಕ್ಕೆ ಬ್ರಿಟಿಷರು ಬಂದರು.

ಭಾರತದ ಇಂದಿನ ವಿಸ್ತಾರಕ್ಕೆ ಹೋಲಿಸಿದರೆ, 1947ರ ಆಗಸ್ಟ್‌ 15ರ ಭಾರತವು ಅರ್ಧದಷ್ಟು ಮಾತ್ರವೇ ಇತ್ತು. ಇನ್ನರ್ಧ ಪ್ರದೇಶಗಳು ವಿವಿಧ ಸಂಸ್ಥಾನಗಳ ಆಳ್ವಿಕೆಯಲ್ಲಿದ್ದವು. 1947ರ ಅಕ್ಟೋಬರ್ 27ರಂದು ಕಾಶ್ಮೀರದ ಮಹಾರಾಜ, ಭಾರತದ ಜೊತೆ ವಿಲೀನ ಒಪ್ಪಂದಕ್ಕೆ ಸಹಿ ಹಾಕಿದರು. ಭಾರತದಲ್ಲಿ ವಿಲೀನಗೊಂಡ 500ಕ್ಕೂ ಹೆಚ್ಚಿನ ಸಂಸ್ಥಾನಗಳು ಸಹಿ ಮಾಡಿದ ಒಪ್ಪಂದದಂತೆಯೇ ಇದೂ ಇತ್ತು. ಆದರೆ, ಕಾಶ್ಮೀರದ ವಿಚಾರವಾಗಿ ಭಾರತ–ಪಾಕಿಸ್ತಾನದ ನಡುವೆ ಯುದ್ಧ ನಡೆದ ನಂತರ, ಎರಡೂ ದೇಶಗಳು ವಿಶ್ವಸಂಸ್ಥೆಯ ಮೇಲ್ವಿಚಾರಣೆಯಲ್ಲಿ 1949ರ ಜನವರಿ 1ರಂದು ಕದನ ವಿರಾಮಕ್ಕೆ ಸಹಿ ಹಾಕಿದವು. ಆ ದಿನ ಕಾಶ್ಮೀರದ ವಾಯವ್ಯ ಭಾಗದಲ್ಲಿ ಶೇಕಡ 37ರಷ್ಟು ಭೂಭಾಗ ಪಾಕಿಸ್ತಾನದ ವಶದಲ್ಲಿತ್ತು. ಆದರೆ, 1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂದಾಗ, ‘ವಿಲೀನ ಒಪ್ಪಂದ’ದಲ್ಲಿ ಉಲ್ಲೇಖಿಸಿದ ಕಾಶ್ಮೀರದ ಸಂಪೂರ್ಣ ನೆಲ ‘ಜಮ್ಮು ಮತ್ತು ಕಾಶ್ಮೀರ’ ಎಂಬ ಹೆಸರಿನಲ್ಲಿ ನಮ್ಮ ಸಂವಿಧಾನದಲ್ಲಿ ಜಾಗ ಪಡೆಯಿತು. ಕಳೆದ ವಾರದವರೆಗೆ, ಪಾಕಿಸ್ತಾನದ ವಶದಲ್ಲಿ ಇರುವ ಕಾಶ್ಮೀರ (ಪಿಒಕೆ) ಕೂಡ ನಮ್ಮ ಸಂವಿಧಾನದಲ್ಲಿ ‘ಜಮ್ಮು ಮತ್ತು ಕಾಶ್ಮೀರ ರಾಜ್ಯ’ ಎಂಬ ಉಲ್ಲೇಖ ಪಡೆದಿತ್ತು. ಇನ್ನು ಮುಂದೆ ಅದು, ‘ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ’ ಎಂಬ ಹೆಸರಿನಲ್ಲಿ ಗುರುತಿಸಿಕೊಳ್ಳಲಿದೆ. ಈ ಎಲ್ಲ ಕಾರಣಗಳಿಂದಾಗಿ:

ನಮ್ಮ ಸಂವಿಧಾನ ಕೊಟ್ಟಿರುವ ಅವಕಾಶದ ಅಡಿ ಕ್ರಮ ಕೈಗೊಂಡಿದ್ದಕ್ಕಾಗಿ ಯಾವುದೇ ಅಂತರ ರಾಷ್ಟ್ರೀಯ ಸಂಸ್ಥೆಯು ಭಾರತ ಸರ್ಕಾರ ಅಥವಾ ಸಂಸತ್ತಿನ ವಿರುದ್ಧ ನಿರ್ಧಾರ ತಳೆಯುವ ಸಾಧ್ಯತೆ ಇಲ್ಲ. ಅದೇ ರೀತಿ, ಈಗ ಕೈಗೊಂಡಿರುವ ಕ್ರಮವನ್ನು ವಿರೋಧಿಸುವವರಿಗೆ ಸುಪ್ರೀಂ ಕೋರ್ಟ್‌ ಸೇರಿದಂತೆ ಭಾರತದ ನ್ಯಾಯಾಲಯಗಳಲ್ಲಿ ಜಯ ಸಿಗುವುದು ಕಷ್ಟ. ಈಗ ನಡೆದಿರುವ ಹಠಾತ್ ಸಾಂವಿಧಾನಿಕ ಬೆಳವಣಿಗೆಗಳು ಕಾಶ್ಮೀರದ ವಿಚಾರದಲ್ಲಿ ಆಶಾಭಾವ ಹೊಂದಲು ಅವಕಾಶ ಕಲ್ಪಿಸಿಕೊಟ್ಟಿವೆ. ಕಾಶ್ಮೀರ ಕುರಿತ ಸಾಂವಿಧಾನಿಕ ಸಮಸ್ಯೆಯನ್ನು ನಾವು ಬಗೆಹರಿಸಿದ್ದೇವೆ ಎನ್ನಲು ಅಡ್ಡಿಯಿಲ್ಲ. ಆದರೆ, ತಳಮಟ್ಟದಲ್ಲಿನ ಸಮಸ್ಯೆ ಉಳಿದಿದೆ. ಸಾಂವಿಧಾನಿಕ ಸಮಸ್ಯೆ ಬಗೆಹರಿದಿರುವ ಕಾರಣ, ತಳಮಟ್ಟದಲ್ಲಿ ಕೂಡ ಸಮಸ್ಯೆ ಗಣನೀಯ ಸುಧಾರಣೆ ಕಾಣುತ್ತದೆ ಎಂದು ಭಾವಿಸಬಹುದು.

ಲೇಖಕ: ಸುಪ್ರೀಂ ಕೋರ್ಟ್‌ ವಕೀಲ

Post Comments (+)