ಮಗನಲ್ಲ, ಮನೆ ಮಗಳು ಈಕೆ...

7

ಮಗನಲ್ಲ, ಮನೆ ಮಗಳು ಈಕೆ...

Published:
Updated:

‘ನಾನು ಮಗನಾಗಿ ಹುಟ್ಟಿದ ಮಗಳು. ಸಾಮಾಜಿಕ–ಆರ್ಥಿಕವಾಗಿ ಮಾತ್ರವಲ್ಲ, ಲಿಂಗಾಧಾರದಲ್ಲೂ ಶೋಷಿತಳು. ಬೀದಿಗೆ ಬಿದ್ದಾಗ ಭಿಕ್ಷಾಟನೆ–ಲೈಂಗಿಕ ಅಲ್ಪಸಂಖ್ಯಾತರ ಸಹವಾಸದ ಮೂಲಕ ಬದುಕು ಕಂಡುಕೊಂಡವಳು. ಆದರೆ, ಈ ಪಾಡು ಯಾರಿಗೂ ಬರಬಾರದು. ಅವರಿಗೆ, ಎಲ್ಲರಂತೆ ಕುಟುಂಬದ ಪ್ರೀತಿ ಹಾಗೂ ದುಡಿಯಲು ಕೆಲಸ ಸಿಗಬೇಕು. ಏಕೆಂದರೆ ನಾವೂ ಮನುಷ್ಯರು....’

ಕರ್ನಾಟಕ ಲಿಂಗತ್ವ ಅಲ್ಪಸಂಖ್ಯಾತರ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷತಾ ಕೆ.ಸಿ. ಒಡಲಾಳದ ನೋವು ಹಾಗೂ ಕನಸುಗಳನ್ನು ಹೇಳುವಾಗ ಕಣ್ತುಂಬಿ ಬಂದಿತ್ತು. ಆದರೆ, ಹಾವೇರಿ ಜಿಲ್ಲಾಡಳಿತವು ಈ ಬಾರಿ ಅವರಿಗೆ ‘ರಾಜ್ಯೋತ್ಸವ ಪುರಸ್ಕಾರ’ ನೀಡಿ ಸನ್ಮಾನಿಸಿದ್ದು, ಕಣ್ಣೀರಿನಲ್ಲಿ ಆನಂದ ಭಾಷ್ಪವೂ ತುಂಬಿತ್ತು.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ಬಡ ಕುಟುಂಬವೊಂದರಲ್ಲಿ ಮಗನಾಗಿ ಹುಟ್ಟಿದ ಬಾಲಕ ‘ಅಕ್ಷತಾ’ ಮೂರನೇ ತರಗತಿಯಲ್ಲಿದ್ದಾಗ ಅವರ ತಂದೆ ತೀರಿಕೊಂಡರು. ಆರು ಮಕ್ಕಳನ್ನು ಸಲಹುವುದೇ ಅಮ್ಮನಿಗೆ ಕಷ್ಟವಾಯಿತು. ತವರಿಗೆ ವಾಪಾಸ್ ಬಂದರು. ಸಣ್ಣ ಹೋಟೆಲ್ ಇಟ್ಟುಕೊಂಡು ಜೀವನ ನಿರ್ವಹಿಸಿದರು. ಬಾಲಕ ರಾಣೆಬೆನ್ನೂರಿನ ಶಿಕ್ಷಕರೊಬ್ಬರ ಮನೆಯಿಂದ ಶಾಲೆಗೆ ಹೋಗುತ್ತಿದ್ದ.

ಆದರೆ, ಮೂರನೇ ತರಗತಿಯಲ್ಲಿದ್ದಾಗಲೇ ಬಾಲಕನಿಗೆ ರಂಗೋಲಿ ಹಾಕುವುದು, ಹೆಣ್ಣು ಮಕ್ಕಳಂತೆ ಆಡುವುದು, ಲಂಗ–ದಾವಣಿ ತೊಡುವ ಆಸೆ ಶುರುವಾಯಿತು. ಇದನ್ನು ಕಂಡ ಇತರರು ಅಪಹಾಸ್ಯ ಮಾಡುತ್ತಿದ್ದರು. ಕೆಲವರಂತೂ, ಲೈಂಗಿಕವಾಗಿ ಬಳಸಲು ಯತ್ನಿಸಿದರು. ಈ ದೌರ್ಜನ್ಯದ ಬಗ್ಗೆ ಮನೆಯಲ್ಲಿ ಹೇಳಿಕೊಂಡಾಗಲೆಲ್ಲ, ‘ನೀನು ಸರಿಯಾಗಿದ್ದರೆ, ಅವರೂ ಸರಿಯಾಗಿರುತ್ತಾರೆ’ ಎಂಬ ಬೈಗಳು ಬಿಟ್ಟು ಬೇರೇನು ಸಿಗಲಿಲ್ಲ. ಬೆಳೆಯುತ್ತಲೇ ಪ್ರಕೃತಿದತ್ತವಾದ ಹೆಣ್ಣಿನ ನಡವಳಿಕೆಯನ್ನು ತಪ್ಪಿಸಿಕೊಳ್ಳಲು ಬಾಲಕನಿಗೂ ಸಾಧ್ಯವಾಗಲಿಲ್ಲ. ಎರಡು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದನು.

ಒಂದು ಬಾರಿ ಪ್ರಾಧ್ಯಾಪಕರೊಬ್ಬರು ‘ನೀನು ಹೆಣ್ಣೋ ಗಂಡೋ’ ಎಂದು ಅಪಹಾಸ್ಯ ಮಾಡಿದ್ದರಂತೆ. ಈ ನಡುವೆಯೇ ಮಗ ‘ಅಕ್ಷತಾ’ಗೆ ಮದುವೆ ಮಾಡಲು ಮನೆಯಲ್ಲಿ ಸಿದ್ಧತೆ ನಡೆಸಿದ್ದರು. ಆದರೆ, ಮಾನಸಿಕವಾಗಿ ಹೆಣ್ಣಾಗಿರುವ ಅವರಿಗೆ, ಹೆಣ್ಣು ಹೆಣ್ಣನ್ನು ವರಿಸಲು ಹೇಗೆ ಸಾಧ್ಯ? ಇನ್ನೊಂದು ಹೆಣ್ಣಿನ ಜೀವನ ಏಕೆ ಹಾಳು ಮಾಡಬೇಕು? ಎಂಬ ಆಲೋಚನೆಗಳು ಕಾಡಿದವು. ಮದುವೆ ನಿರಾಕರಿಸಿ, ಮನೆಯಿಂದ ಹೊರಬಿದ್ದರು.

ಹೀಗೆ, ಬೀದಿಗೆ ಬಂದ ಬಳಿಕ ಅಕ್ಷತಾರಿಗೆ ರಸ್ತೆ ಬದಿಯ ಬೀದಿ ದೀಪಗಳ ಕೆಳಗೆ ಸಿಕ್ಕಿದ್ದ ಕೆಲವು ಲಿಂಗತ್ವ ಅಲ್ಪಸಂಖ್ಯಾತರೇ ಆಸರೆಯಾದರು. ಅವರ ಜೊತೆ ಸೇರಿಕೊಂಡು ಮೂಗು ಚುಚ್ಚಿಕೊಳ್ಳುವ, ಸೀರೆ ಉಟ್ಟುಕೊಳ್ಳುವ ಆಸೆ ಈಡೇರಿಸಿ ಕೊಂಡರು. ಅವರ ಬಳಿ ದೇಹ ಬಿಟ್ಟರೆ ನಯಾ ಪೈಸೆ ಆಸ್ತಿಯೂ ಇರಲಿಲ್ಲ. ಭಿಕ್ಷಾಟನೆ ಹಾಗೂ ಲೈಂಗಿಕ ಕಾರ್ಯಕರ್ತೆಯರ ಸಹವಾಸ ಅನಿವಾರ್ಯವಾಯಿತು. ಆದರೂ, ಮನದೊಳಗಿನ ‘ಸ್ವಾಭಿಮಾನ’ ಮಾತ್ರ ಅವರನ್ನು ಎಚ್ಚರಿಸುತ್ತಲೇ ಇತ್ತು.

‘ನಾನು ಬದಲಾದರೂ, ನನ್ನನ್ನು ನೋಡುವ ಸಮಾಜ ಬದಲಾಗಬೇಕಲ್ಲ! ಸಾರ್ವಜನಿಕ ಶೌಚಾಲಯಕ್ಕೆ ಹೋದರೂ, ಆಚೆ– ಈಚೆ (ಪುರುಷ– ಮಹಿಳೆ) ಎಂದು ಅಲೆದಾಡಿಸಿದರು. ಮೂರೂವರೆ ತಿಂಗಳು ನನಗೆ ಯಾರೂ ಬಾಡಿಗೆ ಮನೆಯೇ ನೀಡಲಿಲ್ಲ. ಕಸಗುಡಿಸುವ ಕೆಲಸವನ್ನೂ ಕೊಡಲಿಲ್ಲ. ‘ನೀನು ಗಂಡೋ... ಹೆಣ್ಣೋ..’ ಎಂದು ಪ್ರಶ್ನಿಸಿದರು. ಆದರೆ, ನಾನು ಮನುಷ್ಯಳು ಎಂದು ಯಾರೂ ಗುರುತಿಸಲಿಲ್ಲ’ ಎಂದು ಆ ದಿನಗಳ ನೋವು ತೋಡಿಕೊಂಡರು.

‘ಇದು ನನ್ನೊಬ್ಬಳ ನೋವಲ್ಲ. ನನ್ನ ಕಣ್ಣೆದುರೇ ಇತರ ಲಿಂಗತ್ವ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಯಕರ್ತೆಯರು, ಮಾಜಿ ದೇವದಾಸಿಯ ಕುಟುಂಬದವರು, ಕೂಲಿಕಾರ್ಮಿಕ ಹೆಣ್ಣುಮಕ್ಕಳ ನೋವುಗಳನ್ನು ನೋಡಬೇಕಾಯಿತು’ ಎಂದು ನೋವು ತೋಡಿಕೊಂಡರು.

ಆದರೆ, ಅಕ್ಷತಾಗೆ ಕಾಲೇಜು ದಿನಗಳಿಂದಲೇ ಅಂಬೇಡ್ಕರ್ ಕುರಿತು ಒಲವಿತ್ತು. ಹೀಗಾಗಿ, ಹೋರಾಟ, ಸಂಘಟನೆ ಮತ್ತು ಶಿಕ್ಷಣವೇ ನನ್ನ ಅಸ್ತ್ರವಾಗಬೇಕು ಎಂದು ನಿರ್ಧರಿಸಿದರು. ‘ಸ್ವಾಭಿಮಾನ’ಕ್ಕಾಗಿ ಮತ್ತೆ ಬೀದಿಗಿಳಿದರು. ದಲಿತ ಸಂಘರ್ಷ ಸಮಿತಿಯು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಸ್ಥಾನ ನೀಡಿತು. ಹಾವೇರಿ ಜಿಲ್ಲಾ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಜಿಲ್ಲಾ ಸಂಚಾಲಕರಾದರು. ಸರ್ಕಾರೇತರ ಸಂಸ್ಥೆಗಳು, ಪ್ರಗತಿಪರರು, ಸಾಹಿತಿಗಳು ಬೆಂಬಲ ನೀಡಿದರು. ಸಂಜೀವಿನಿ ಲಿಂಗತ್ವ ಅಲ್ಪಸಂಖ್ಯಾತರ ಸಂಸ್ಥೆಯ ಅಧ್ಯಕ್ಷರೂ ಆಗಿದ್ದರು.

ಹೋರಾಟದ ಹಾದಿ...


2017ರಲ್ಲಿ ಹಾವೇರಿ ಜಿಲ್ಲಾ ಮಟ್ಟದಲ್ಲಿ ನಡೆದ ‘ಜನಮನ’
ಕಾರ್ಯಕ್ರಮದಲ್ಲಿ ವಿಚಾರ ಮಂಡಿಸುತ್ತಿರುವ ಅಕ್ಷತಾ

ಆ ಬಳಿಕ ಅಕ್ಷತಾ ಹಲವಾರು ಸಂಘಟನಾತ್ಮಕ ಚಟುವಟಿಕೆ, ಚರ್ಚೆ, ಸಭೆ, ಪ್ರತಿಭಟನೆ, ಹೋರಾಟಗಳಲ್ಲಿ ಪಾಲ್ಗೊಂಡರು. ವಿಜಯಾ ಬ್ಯಾಂಕ್‌ನ ತರಬೇತಿ ಕೇಂದ್ರದ ಮೂಲಕ 19 ಸದಸ್ಯರಿಗೆ ತರಬೇತಿ ಹಾಗೂ ಸ್ವ ಉದ್ಯೋಗಕ್ಕಾಗಿ ಸಾಲ ದೊರೆಯಿತು. ಕೇವಲ ಇಬ್ಬರು ಪಡೆಯುತ್ತಿದ್ದ ‘ಮೈತ್ರಿ’ ಸೌಲಭ್ಯವನ್ನು ಈಗ 65ಕ್ಕೂ ಹೆಚ್ಚು ಮಂದಿ ಪಡೆದುಕೊಂಡರು. 8 ಮಂದಿ ರಾಜೀವ್ ಗಾಂಧಿ ಆಶ್ರಯ ವಸತಿ ಯೋಜನೆಗೆ ಆಯ್ಕೆಯಾದರು. 130 ಕ್ಕೂ ಹೆಚ್ಚಿನ ಸದಸ್ಯರು ಮಹಿಳಾ ಅಭಿವೃದ್ಧಿ ನಿಗಮದಿಂದ ಸ್ವ ಉದ್ಯೋಗಕ್ಕೆ ಸಾಲ ಪಡೆದರು. ಅವರ ಸಂಘಟನೆಯಲ್ಲಿ ₹ 1 ಲಕ್ಷಕ್ಕೂ ಹೆಚ್ಚಿನ ನಿಧಿಯನ್ನು ಸಂಗ್ರಹಿಸಲಾಯಿತು. ಜಿಲ್ಲೆಯ 850 ಲಿಂಗತ್ವ ಅಲ್ಪಸಂಖ್ಯಾತರ ಪೈಕಿ 250 ಕ್ಕೂ ಹೆಚ್ಚಿನ ಸದಸ್ಯರು ಮುಖ್ಯವಾಹಿನಿಗೆ ಬಂದರು. ಲಿಂಗತ್ವ ಅಲ್ಪಸಂಖ್ಯಾತರ ಕುರಿತು ಹಲವಾರು ಚರ್ಚೆ, ಸಭೆ, ವಿಚಾರ ಸಂಕಿರಣಗಳು ನಡೆದವು. ಸಂಘಟನೆ ಮೂಲಕ ಹಲವಾರು ಯುವ ಲೈಂಗಿಕ ಅಲ್ಪಸಂಖ್ಯಾತರನ್ನು ಮತ್ತೆ ಕುಟುಂಬದೊಂದಿಗೆ ಸೇರಿಸಿದರು.

ಅಮೆರಿಕಾದ ಫೋರ್ಡ್ ಸಂಸ್ಥೆ ನಡೆಸಿದ ಅಧ್ಯಯನ, ಬಾಲಕಿಯೊಬ್ಬಳ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಬೃಹತ್ ಹೋರಾಟ, ಚೆನ್ನೈನಲ್ಲಿ ನಡೆದ ಲಿಂಗತ್ವ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಪಾಲ್ಗೊಂಡ ಅಕ್ಷತಾ, ಹಾವೇರಿ ಲಿಂಗತ್ವ ಅಲ್ಪಸಂಖ್ಯಾತರ ರಾಜ್ಯಮಟ್ಟದ ಸಮಾವೇಶ, ಸೇವಾ ಸೌಲಭ್ಯಗಳ ಕುರಿತು ಸಭೆಗಳು, ಏಡ್ಸ್ ವಿರೋಧಿ ಆಂದೋಲನ, ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಐಪಿಸಿ 377 ಸಂವಾದ ಸೇರಿದಂತೆ ಹತ್ತಾರು ಕಾರ್ಯಕ್ರಮಗಳಲ್ಲಿ ಸಕ್ರಿಯರಾದರು.

ಜೊತೆಯಲ್ಲಿಯೇ ಸಂವಿಧಾನ, ಸೌಹಾರ್ದತೆಯ ಹೋರಾಟದಲ್ಲೂ ಪಾಲ್ಗೊಂಡರು. ಈ ಹಾದಿಯಲ್ಲಿ ನೆರವಾದ ಜಿಲ್ಲಾ ಪಂಚಾಯ್ತಿ ಸಿಇಒ ಸಿ.ಟಿ. ಶಿಲ್ಪಾನಾಗ್ ಹಾಗೂ ಎಸ್ಪಿ ಕೆ.ಪರಶುರಾಂ ನೆರವನ್ನೂ ಅವರು ಸ್ಮರಿಸುತ್ತಾರೆ.

‘ನಾನು ಬೀದಿಯಲ್ಲಿ ಹೋಗುತ್ತಿದ್ದಾಗ ಹಂಗಿಸಿದವರು, ನಿಂದಿಸಿ ದವರು, ಕಲ್ಲೆಸೆದವರು, ಚಪ್ಪಾಳೆ ಹೊಡೆದು ಚಕ್ಕಾ ಎಂದು ಕರೆದವರು, ನೀ ಗಂಡೋ– ಹೆಣ್ಣೋ ಎಂದು ಪ್ರಶ್ನಿಸಿದವರು, ಕೈಯಾಡಿಸಲು ಯತ್ನಿಸಿದ ಸುಸಂಸ್ಕೃತ ಸೋಗಿನವರು, ಲೈಂಗಿಕ ದೌರ್ಜನ್ಯ ಎಸಗಲು ಬಂದವರೂ ಇದ್ದಾರೆ. ಈಗೆಲ್ಲರೂ ‘ಮೇಡಂ’ ಎನ್ನುತ್ತಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತರಿಗೊಂದು ಘನತೆ ಬರುತ್ತಿದೆಯಲ್ಲ. ನನ್ನ ಹೋರಾಟಕ್ಕೆ ಹೆಚ್ಚು ಇನ್ನೇನು ಬೇಕು? ಥ್ಯಾಂಕ್ಸ್ ಟು ಅಂಬೇಡ್ಕರ್. ನಾನು ಮಗನಲ್ಲ, ಮನೆ ಮಗಳು ಎಂದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !