ಆಡಿನ ಹಾಲಿನಲ್ಲಿ ಆರೋಗ್ಯದ ಹಾಡು...

7

ಆಡಿನ ಹಾಲಿನಲ್ಲಿ ಆರೋಗ್ಯದ ಹಾಡು...

Published:
Updated:

ಐನೂರು ವರ್ಷಗಳ ಹಿಂದೆ ಕಾಶ್ಮೀರದ ರಾಜನೊಬ್ಬ ಒಂದು ನಿಘಂಟನ್ನು ಬರೆದ. ಆತನ ಹೆಸರು ನರಹರಿ ಪಂಡಿತ. ನಾನಾ ಸಸ್ಯ, ಪ್ರಾಣಿ, ಖನಿಜಗಳ ಮಹತ್ವವನ್ನು ಪರಿಚಯಿಸುವ ಈ ಗ್ರಂಥಕ್ಕೆ ‘ರಾಜ ನಿಘಂಟು’ ಎಂದೂ ಹೆಸರಿದೆ. ಆಡಿನ ಹಾಲನ್ನು ಕುಡಿದರೆ ಯಾವ ಕಾಯಿಲೆಯೂ ಬರದು – ಎಂಬ ಅಪರೂಪದ ಮಾಹಿತಿ ಈ ಗ್ರಂಥದಲ್ಲಿದೆ. ನರಹರಿ ಪಂಡಿತನು ದೊಡ್ಡ ದೇಹದ ಮತ್ತು ಕಿರಿ ಕಾಯದ ಆಡುಗಳು – ಎರಡು ಬಗೆಯನ್ನು ವಿವರಿಸಿದ್ದಾನೆ. ಅಂದೂ ಅಂತಹ ಆಡಿನ ಜಾತಿಗಳ ಸಾಕಾಣಿಕೆ ಇತ್ತು. ಕೊಂಬಿನ ಟಗರು ಎಂಬ ಮತ್ತೊಂದು ಬಗೆಯ ಆಡು ಮತ್ತು ಅದರ ಹಾಲು ಮತ್ತು ಅದರ ಉತ್ಪನ್ನಗಳನ್ನು ಕೂಡ ಈ ಕೃತಿ ಉಲ್ಲೇಖಿಸಿದೆ. ಆಡಿನ ಹಾಲಿನ ಪ್ರಶಂಸೆಯನ್ನು ಪ್ರಪ್ರಥಮವಾಗಿ ದಾಖಲಿಸದಾತ, ಜಗತ್ತಿನ ಆದಿಮ ಶಸ್ತ್ರವೈದ್ಯ ಸುಶ್ರುತ. ಆಡಿನ ಹಾಲು ಬಲವನ್ನೂ ಪುಷ್ಟಿಯನ್ನೂ ಕೊಡುತ್ತದೆ. ಈ ಹಾಲು ಪಚನವಾಗಲು ಏನೂ ಕಷ್ಟ ಇಲ್ಲ. ಅದು ಲಘುವಾಗಿದೆ. ಆಡಿನ ದೇಹ ಕಿರಿದು; ಸದಾ ಅದು ಚಟುವಟಿಯಲ್ಲಿರುವುದರಿಂದ ಅದರ ಹಾಲು ಬೇಗನೆ ಪಚನವಾಗುತ್ತದೆ. ಹಸುವಿನ ಮತ್ತು ಎಮ್ಮೆಹಾಲಿನ ಜೀರ್ಣ ಪ್ರಕ್ರಿಯೆ ಆಡಿನದ್ದಕ್ಕಿಂತ ತುಸು ನಿಧಾನ. ಹುಟ್ಟಿದ ಮಗುವಿಗೆ ತಾಯಿಹಾಲು ಸಿಗದೆ ಹೋದರೆ ಅದರ ಕೊರತೆಯನ್ನು ನೀಗಲು ಹಸು ಅಥವಾ ಆಡಿನ ಹಾಲನ್ನು ಕೊಡುವ ಸಂಪ್ರದಾಯ ಹಿಂದಿನಿಂದ ಕಾಲದಿಂದಲೂ ಇತ್ತು. ‘ಕಾಶ್ಯಪಸಂಹಿತೆ’ ಎಂಬ ಎರಡೂವರೆ ಸಾವಿರ ವರ್ಷ ಪೂರ್ವದ ‘ಪೀಡಿಯಾಟ್ರಿಕ್ಸ್’ (ಬಾಲರೋಗ) ಗ್ರಂಥದಲ್ಲಿ ಇಂತಹ ಸಂಪ್ರದಾಯದ ಉಲ್ಲೇಖ ಇದೆ. ಅಷ್ಟೊಂದು ವ್ಯಾಪಕ ಬಳಕೆ ಇದ್ದ ಆಡಿನ ಹಾಲಿನ ಮಹತ್ವವನ್ನು ಮನಗಂಡ ಸರಳ ಜೀವನದ ಹರಿಕಾರ ಮಹಾತ್ಮ ಗಾಂಧೀಜಿಯವರು ಆಡಿನ ಹಾಲಿಗೆ ಹೆಚ್ಚುಗಾರಿಕೆಯನ್ನು ಪರಿಚಯಿಸಿದರು. ಕೇವಲ ಬೋಧನೆ ಮಾತ್ರ ಅಲ್ಲ, ಸ್ವತಃ ತಾವೇ ಅದನ್ನು ಬಳಸುತ್ತಿದ್ದರು.

ವಿಶೇಷತಃ ಕ್ಷಯರೋಗ, ಕೃಶಕಾಯದವರಿಗೆ ಆಡಿನ ಹಾಲಿನ ಸೇವನೆಯ ಪಥ್ಯವು ಆಯುರ್ವೇದ ಸಂಹಿತೆಗಳಲ್ಲಿದೆ. ಅದು ಹೊಟ್ಟೆಯ ಹಸಿವೆ ಹೆಚ್ಚಿಸಲು ಉಪಕಾರಿ. ದ್ರವ ಮಲ, ಪದೇ ಪದೇ ಭೇದಿ ಇದ್ದವರಿಗೂ ಹಿತಕಾರಿ. ಕೆಮ್ಮು–ದಮ್ಮು ಇದ್ದರೆ ಹಸುವಿನ ಹಾಲು ಕಫ ಹೆಚ್ಚಿಸುವ ಪ್ರಮೇಯ ಇದೆ. ಆದರೆ ಆಡಿನ ಹಾಲಿನದು ಲಘು ಗುಣ; ಬೇಗನೆ ಪಚನವಾಗುತ್ತದೆ. ಕೆಮ್ಮು, ಕಫ, ಉಬ್ಬಸವಿದ್ದರೂ ಕೆಡುಕನ್ನು ಉಂಟುಮಾಡದು. ಮೂಗು, ಬಾಯಿಯ ರಕ್ತಸ್ರಾವ, ಅತಿಯಾದ ಕೆಂಪುಮುಟ್ಟು ತೊಂದರೆಯನ್ನು ಪರಿಹರಿಸಲು ಆಡಿನ ಹಾಲು ಉತ್ತಮ ಎಂಬ ಮಾಹಿತಿ ಚರಕ, ಸುಶ್ರುತಸಂಹಿತೆಯ ಒಮ್ಮತದ ಅಭಿಪ್ರಾಯ. ಆಡಿನ ಹಾಲಿನಿಂದ ತಯಾರಿಸಿದ ಮೊಸರನ್ನು ತಿಂದರೆ ಕಣ್ಣಿನ ಶಕ್ತಿ ಹೆಚ್ಚುತ್ತದೆ ಎಂಬ ಮಾಹಿತಿ ಧನ್ವಂತರಿ ನಿಘಂಟುವಿನದು. ಈ ಮೊಸರು ಮೂಲವ್ಯಾಧಿ ಕಾಯಿಲೆಗೆ ಮದ್ದು ಎನ್ನುತ್ತಾನೆ ಸುಶ್ರುತ. ಆಡಿನ ತುಪ್ಪಕ್ಕೆ ಇಷ್ಟೆಲ್ಲ ಗುಣಗಳ ಜೊತೆಗೆ ದೇಹಬಲವನ್ನೂ ಕಣ್ಣಿನ ಶಕ್ತಿಯನ್ನೂ ಹೆಚ್ಚಿಸುವ ಗುಣವಿದೆ. ಆದರೆ ಇಂದು ಸಾಕಾಣಿಕೆಯ ಪ್ರಮಾಣ ಕಡಿಮೆ ಆಗುತ್ತಿದೆ. ಅದು ಕೇವಲ ಮಾಂಸಕ್ಕೆ ಮಾತ್ರ ಒದಗುವ ಪ್ರಾಣಿ ಎಂಬ ಅಪಖ್ಯಾತಿಯೂ ಇದೆ. ಆದರೆ ಗಾಂಧೀಜಿ ಎಂದೂ ಅಂತಹ ಹಿಂಸೆಗೆ ಒತ್ತು ನೀಡುತ್ತಿರಲಿಲ್ಲ. ಆಡಿನ ಹಾಲು ಮತ್ತು ಅದರ ಉತ್ಪನ್ನಗಳಿಗೆ ಪ್ರಚಾರ ನೀಡುತ್ತಿದ್ದರು.

ಇಂದು ವಿಜ್ಞಾನಿಗಳ ಪ್ರಕಾರ ಆಡಿನ ಹಾಲಿನ ಉತ್ತಮ ಗುಣಗಳ ಬಗ್ಗೆ ಕೊಂಚ ಗಮನ ಹರಿಸೋಣ. ಒಂದು ಲೋಟದಷ್ಟು ಆಡಿನ ಹಾಲಿನಲ್ಲಿ 168 ಕ್ಯಾಲರಿ ಶಕ್ತಿ ಲಭ್ಯ. ಅದರ ಕೊಬ್ಬಿನಂಶ ಶೇ 33, ಅಂದರೆ ಸುಮಾರು 6.5ಗ್ರಾಂನಷ್ಟಿರುತ್ತದೆ. ಕಾರ್ಬೋಹೈಡ್ರೇಟ್ ಶೇ 11 ಅಂದರೆ 4ಗ್ರಾಂನಷ್ಟಿದೆ. ಸೋಡಿಯಂ ಅಂಶ ಸುಮಾರು 12 ಮಿಲಿಗ್ರಾಂ. ಸಕ್ಕರೆ ಕೂಡ 12 ಗ್ರಾಂನಷ್ಟು ಲಭ್ಯ. ಕ್ಯಾಲ್ಸಿಯಂ,(327,ಮಿ.ಗ್ರಾಂ.), ಪೊಟ್ಯಾಶಿಯ,(348 ಮಿ.ಗ್ರಾಂ.) ಮ್ಯಾಗ್ನೀಸಿಯಂ, ರಂಜಕ(271ಮಿ.ಗ್ರಾಂ), ತಾಮ್ರ(0.1 ಮಿ.ಗ್ರಾಂ.) ಮತ್ತು ಸತುವಿನಂಶ(0.7ಮಿ.ಗ್ರಾಂ.) – ಇದು ಆಡಿನ ಹಾಲಿನ ಘಟಕಗಳು. ಅನ್ನಾಂಗಗಳ ಪೈಕಿ ಎ.(483 ಐ.ಯು.), ಬಿ2.(3. ಮಿ.ಗ್ರಾಂ.)ಸಿ(3 ಮಿ.ಗ್ರಾಂ.) ಹಾಗೂ ಡಿ(29 ಐ.ಯು.) ಅಂಶಗಳು ಆಡಿನ ಹಾಲಿನ ಘಟಕಗಳು. ಆಧುನಿಕ ಆಹಾರ ವಿಜ್ಞಾನಿಗಳು ಸಹ ಈ ಐದು ಕಾರಣಗಳಿಂದಾಗಿ ಆಡಿನ ಹಾಲನ್ನು ಹಸುವಿನದಕ್ಕಿಂತ ಮಿಗಿಲು ಎನ್ನುತ್ತಾರೆ.

ಮೊದಲನೆಯ ಕಾರಣ ಇದು ಹೆಚ್ಚು ಬೇಗ ಪಚನವಾಗುತ್ತದೆ. ಕರುಳಿನಲ್ಲಿ ಯಾವುದೇ ತೊಂದರೆಗಳಿಲ್ಲದೆ ದೇಹದೊಳಗೆ ರವಾನೆಯಾಗುತ್ತದೆ. ಒಂದಿನಿತೂ ಒಗ್ಗದಿಕೆಯಾಗದ ಸಸಾರಜನಕಗಳು ಆಡಿನ ಹಾಲಿನ ವಿಶೇಷ. ಕೊಲೆಸ್ಟಿರಾಲ್ ಅಂಶ ನಗಣ್ಯವಿರುವ ಆಡಿನ ಹಾಲು ಬೇಗ ವಿಲಯನಶೀಲ ಕೊಬ್ಬು ಮತ್ತು ಕ್ಯಾಲ್ಸಿಯಂಗಳನ್ನು ಹೊಂದಿದೆ. ದೇಹದ ಚರ್ಮದ ಆರೋಗ್ಯ ಕಾಪಾಡಲು ಆಡಿನ ಹಾಲಿನ ಬಳಕೆ ಹೆಚ್ಚು ಯೋಗ್ಯ. ಕಬ್ಬಿಣದಂಶದಂತಹ ಅಪರೂಪದ ಖನಿಜಾಂಶ ದೇಹ ಸೇರುವಿಕೆಯು ಕೂಡ ಬಹಳ ಸುರಳೀತ. ಹಾಗಾಗಿ ಆಡಿನ ಹಾಲಿನ ಬಳಕೆಗೆ ಹೆಚ್ಚು ಒತ್ತು ಕೊಡಲು ಆಧುನಿಕ ಆಹಾರತಜ್ಞರು ಕರೆ ನೀಡುತ್ತಾರೆ. ಇಷ್ಟೆಲ್ಲ ಸಂಗತಿಗಳು ಆಡಿನ ಹಾಲಿನ ಪ್ರಶಂಸೆಗೆ ಮೀಸಲಾದರೂ ಆಡಿನ ಹಾಲಿನ ಬಳಕೆ ಕಡಿಮೆ. ಆದರೆ ಹಸುವಿನ ಹಾಲೇ ಕುಡಿಯದೆ ಕೇವಲ ಡೈರಿಗೆ ಮಾರುವ ಕೃಷಿಕರು ಆಡು ಸಾಕಿದರೂ ಅದರ ಹಾಲನ್ನು ಪ್ರತ್ಯೇಕಿಸದೆ ಡೈರಿಗೆ ಹಾಕುವ ಸಂದರ್ಭಗಳೇ ಅಧಿಕ. ಇನ್ನು ಮುಂದಾದದರೂ ಆಡಿನ ಹಾಲಿನ ಬಳಕೆಯ ಮಡಿವಂತಿಗೆ ಅಳಿದು ರೋಗರುಜಿನ ತಡೆಯಬಲ್ಲ ಇಂತಹ ಅಮೃತಸೇವನೆಗೆ ಗ್ರಾಮೀಣ ಜನತೆ ಮುಂದಾಗಲಿ. ಹೊಸ ಪೀಳಿಗೆಯ ನಗರವಾಸಿಗಳಿಗೂ ಆಡಿನ ಹಾಲು ದೊರಕುವಂತಾಗಲಿ. 
***
ಆಡಿನ ಹಾಲಿನ ಅನೇಕ ಗುಣಗಳನ್ನು ಆಯುರ್ವೇದ ಸಂಹಿತೆಗಳು ಹಾಡಿ ಹೊಗಳಿವೆ. ಹಸುವಿಗಿಂತ ಕಡಿಮೆ ವೆಚ್ಚದಲ್ಲಿ ಸಾಕಬಹುದಾದ ಆಡಿನ ಬಗ್ಗೆ ಗಾಂಧೀಜಿಯವರಿಗೆ ಅಪರಿಮಿತ ಪ್ರೀತಿ. ಗಾಂಧೀಜಿಯವರು ಲಂಡನ್‍ಗೆ ತೆರಳುವ ಒಂದು ಸಂದರ್ಭ. ಆಗ ಅವರು ತಮ್ಮ ಪ್ರಯಾಣದ ಸಂಗಾತಿಯಾಗಿ ವಿಶೇಷ ಪರವಾನಗಿ ಪಡೆದು ಹಡಗಿನಲ್ಲಿ ಆಡನ್ನೊಂದನ್ನು ಒಯ್ದಿದ್ದರು. ‘ನಿರ್ಮಲ’ ಎಂಬ ಹೆಸರಿನ ಆ ಬಿಳಿಯ ಆಡು, ಗಾಂಧೀಜಿ ಸಂಗಡ ಸಾಗರವನ್ನು ದಾಟಿದ್ದನ್ನು 1931ರ ನವೆಂಬರ್ 2ರ ‘ಟೈಂ’ ದಿನಪತ್ರಿಕೆ ವರದಿ ಮಾಡಿತ್ತು. ಪ್ರಕೃತಿ ಚಿಕಿತ್ಸೆಯನ್ನಷ್ಟೆ ಹೆಚ್ಚು ಪೋಷಿಸುತ್ತಿದ್ದ ಗಾಂಧೀಜಿಯವರು ಆಡಿನ ಹಾಲಿನ ಅನೇಕ ಗುಣಗಳನ್ನು ಸ್ವತಃ ಮನಗಂಡಿದ್ದರು. ಅವರ ಸರಳ ಆಹಾರದಲ್ಲಿ ಆಡಿನ ಹಾಲಿಗೆ ಹೆಚ್ಚು ಪ್ರಾಶಸ್ತ್ಯ ಇತ್ತು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !