ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿದ್ರೆ ಎಂಬ ಆರೋಗ್ಯ ಸೂತ್ರ

Last Updated 22 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಆಹಾರನಿದ್ರೆಗಳು ಎಲ್ಲ ಜೀವಿಗಳಿಗೂ ಜೀವನಾವಶ್ಯಕತೆಯಾಗಿದೆ. ಮಗುವಿನಿಂದ ಹಿಡಿದು ಮುದುಕರವರೆಗೂ ನಿದ್ರೆ ಸರಿ ಇಲ್ಲದಿದ್ದರೆ ಶರೀರ–ಮನಸ್ಸುಗಳು ಉತ್ಸಾಹವನ್ನು ಕಳೆದುಕೊಳ್ಳುತ್ತವೆ.

ನಿದ್ರೆಯಿಂದ ಎದ್ದಾಗ ಶಾರೀರಿಕವಾಗಿಯಾಗಲೀ ಮಾನಸಿಕವಾಗಿಯಾಗಲೀ ಯಾವುದೇ ರೀತಿಯ ಇರಿಸು ಮುರುಸು ಇರದೆ ಮೈ ಕೈ ಹಗುರವಾಗಿದ್ದು, ಮನಸ್ಸು ಉತ್ಸಾಹದಿಂದ ಕೂಡಿದ್ದರೆ ಅದು ಸುಖವಾದ ನಿದ್ರೆ. ಸುಖವಾಗಿ ನಿದ್ರಿಸುವವನು ಆರೋಗ್ಯ ಪೂರ್ಣವಾದ ದೀರ್ಘಾಯುಷ್ಯವನ್ನು ಹೊಂದುತ್ತಾನೆ. ನಿದ್ರೆ ಬಾರದೆ ಇರೋದು ಅಥವಾ ಅತಿಯಾಗಿ ನಿದ್ರೆ ಬರೋದು ಎರಡೂ ಅನಾರೋಗ್ಯದ ಲಕ್ಷಣಗಳೇ. ಅಷ್ಟೇ ಅಲ್ಲದೇ, ಯಾವುದೇ ಅನಾರೋಗ್ಯವಿಲ್ಲದೆ ಹಗಲುನಿದ್ರೆ ಮಾಡುವುದು ಅನೇಕ ಥೈರಾಯ್ಡ್ ಮುಂತಾದ ಹಾರ್ಮೋನ್ ವ್ಯತ್ಯಾಸದಿಂದ ಬರುವ ಹಲವಾರು ರೋಗಗಳಿಗೆ ಆಹ್ವಾನ ಕೊಟ್ಟಂತೆ.

ಸುಖನಿದ್ರೆ ಬರಲು ಏನು ಮಾಡಬೇಕು?

ವ್ಯಾಯಾಮ, ದೇಹಶ್ರಮ, ಸಮಯಕ್ಕೆ ಸರಿಯಾದ ಆಹಾರ, ನೆಮ್ಮದಿಯಿಂದ ಕೂಡಿರುವ ಮನಸ್ಸು ಸುಖನಿದ್ರೆಯ ಸುಲಭ ಸೂತ್ರಗಳು. ‘ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ರೆ ಬರುತ್ತದೆ’ ಎನ್ನುವ ಗಾದೆ ಸಂಪೂರ್ಣ ಸತ್ಯ.

ಬೆಳಗ್ಗೆ ಸೂರ್ಯೋದಯಕ್ಕಿಂತ ಮೊದಲೇ ಏಳುವುದು ರಾತ್ರಿ ಸುಖನಿದ್ರೆಗೆ ಕಾರಣವಾದರೆ, ಬೆವರು ಬರುವವರೆಗೂ ವ್ಯಾಯಾಮ ಮಾಡುವುದು,ವಿಪರೀತ ಶಾರೀರಿಕ ಶ್ರಮ ಇರುವವರು ನಿತ್ಯವೂ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ಹಚ್ಚಿ ಸ್ನಾನ ಮಾಡುವುದು ವಾರಕ್ಕೊಮ್ಮೆ ಹರಳೆಣ್ಣೆ ಹಚ್ಚಿ ಹದ ಬಿಸಿನೀರಿನಲ್ಲಿ ಸ್ನಾನ ಮಾಡುವುದು, ಎಣ್ಣೆ ಹಚ್ಚಿಕೊಂಡು ಮೈಯನ್ನು ಹದವಾಗಿ ಒತ್ತಿಸಿಕೊಳ್ಳುವುದು, ಸಕಾಲದಲ್ಲಿ ಸರಿಯಾದ ಪ್ರಮಾಣದಲ್ಲಿ ಆಹಾರಸೇವನೆ – ಇವೆಲ್ಲವೂ ನಿದ್ರಾಜನಕಗಳೇ.

ದುಡಿದು ದಣಿದ ದೇಹಕ್ಕೆ ನವಚೈತನ್ಯವನ್ನು ತುಂಬುತ್ತದೆ ನಿದ್ರೆ. ಆದರೆ ವಿಪರೀತ ದಣಿವಾದಾಗ ಕೆಲವೊಮ್ಮೆ ನಿದ್ರೆ ಬಾರದಿರಲೂಬಹುದು. ವಿಪರೀತ ಚಿಂತೆ ಇದ್ದಾಗಲೂ ನಿದ್ರೆ ಬರುವುದಿಲ್ಲ. ಅಂತಹ ಸಮಯದಲ್ಲಿ ಅಂಗಾಲಿಗೆ ಕೊಬ್ಬರಿಯೆಣ್ಣೆ ಅಥವಾ ತುಪ್ಪವನ್ನು ಹಚ್ಚಿ ಚೆನ್ನಾಗಿ ಬಿಸಿ ಬರುವವರೆಗೂ ತಿಕ್ಕಿ ಅಥವಾ ಉಜ್ಜಿಕೊಂಡು ನಂತರ ಕಾಲನ್ನು ಸುಮಾರು 10 ನಿಮಿಷದವರೆಗೂ ಹದವಾದ ಬಿಸಿನೀರಿನಲ್ಲಿ ಪಾದವನ್ನು ಮುಳುಗಿಸಿಟ್ಟುಕೊಂಡು, ನಂತರ ಕಾಲನ್ನು ಒರೆಸಿಕೊಂಡು ತಕ್ಷಣ ಕಾಲಿನ ಮೇಲೆ ಹೊದೆದುಕೊಂಡು (ಕಾಲು ತಣ್ಣಗಾಗದಂತೆ ನೋಡಿಕೊಳ್ಳಬೇಕು) ಮಲಗಬೇಕು. ಹೀಗೆ ಮಾಡುವುದರಿಂದ ಪಾದದಿಂದ ತಲೆಯವರೆಗಿನ ರಕ್ತಪರಿಚಲನೆಯು ಸುಗಮವಾಗಿ ಸುಖವಾದ ನಿದ್ರೆಯು ಬರುತ್ತದೆ. ಎಷ್ಟೊ ವರ್ಷಗಳಿಂದ ನಿದ್ರೆ ಸರಿಯಾಗಿ ಬರುವುದಿಲ್ಲ ಎನ್ನುವವರಿಗೂ ಕೂಡ ಸುಖನಿದ್ರೆಯನ್ನು ಕೊಟ್ಟಿದೆ ಈ ಉಪಾಯ.

ರಾತ್ರಿ ಹೊತ್ತು ಬೇಗನೆ ಎಂದರೆ ಸುಮಾರು 7.30ರಿಂದ 8 ಗಂಟೆಯ ಒಳಗೆ ಆಹಾರವನ್ನು ಸೇವಿಸುವುದು, ಮಜ್ಜಿಗೆ ಅಥವಾ ಮೊಸರಿನ ಬದಲು ಹಾಲನ್ನು ಸೇವಿಸುವುದು ಸುಖ ನಿದ್ರೆ ಬರಲು ಕಾರಣವಾಗುತ್ತದೆ. ಆದರೆ ಹಾಲಿನ ಜೊತೆ ಉಪ್ಪು, ಉಪ್ಪಿನಕಾಯಿ ಅಥವಾ ಹುಳಿ, ಉಪ್ಪು, ಖಾರ ಹಾಕಿ ತಯಾರಿಸಿರುವ ಸಾರು, ಸಾಂಬಾರು ಸೇರಿಸಿ ತಿನ್ನುವುದು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಮಧುಮೇಹ, ರಕ್ತದ ಒತ್ತಡ ಹೆಚ್ಚಾಗುವುದು, ಚರ್ಮಕ್ಕೆ ಸಂಬಂಧಪಟ್ಟ ತೊಂದರೆಗಳಿಗೆ ಬುನಾದಿಯಾಗುತ್ತದೆ.

ಖಾಲಿ ಹಾಲು ಅಥವಾ ಹಾಲನ್ನ ಅಥವಾ ಸಕ್ಕರೆ ಅಥವಾ ಶುದ್ಧ ಬೆಲ್ಲ ಸೇರಿಸಿ ತಿನ್ನಬಹುದು. ಇದೂ ಸಹ ನಿದ್ರಾಜನಕ ಆಹಾರವೇ.

ಮಲಗುವ ಮೊದಲು ಸುಮಾರು ಹತ್ತರಿಂದ ಹದಿನೈದು ನಿಮಿಷ ಯಾವುದೇ ಇತರ ಚಿಂತನೆಗಳನ್ನು ನಡೆಸದೆ, ಮೊಬೈಲ್, ಟಿ.ವಿ. ಇವುಗಳನ್ನು ನೋಡದೆ ಏಕಚಿತ್ತದಿಂದ ಧ್ಯಾನ ಮಾಡಿ ಮಲಗುವುದರಿಂದ ಮನಸ್ಸು ಶಾಂತಸ್ಥಿತಿಗೆ ಬಂದು ಸುಖನಿದ್ರೆ ಬರುತ್ತದೆ.

ಹಗಲು ನಿದ್ರಿಸಬಹುದೇ?

ರಾತ್ರಿ ನಿದ್ರೆ ಬರುವುದಿಲ್ಲವೆಂದು ಕೆಲವರು ಹಗಲು ನಿದ್ರಿಸುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಆದರೆ ಇದು ಆರೋಗ್ಯಕರ ಅಭ್ಯಾಸವಲ್ಲ. ಮುದುಕರು, ಮಕ್ಕಳು, ಗರ್ಭಿಣಿಯರು ಅಥವಾ ಅನಾರೋಗ್ಯದಿಂದ ಬಳಲುತ್ತಿರುವವರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು, ಶ್ರಮಜೀವಿಗಳು ಸುಮಾರು ಮುಕ್ಕಾಲರಿಂದ ಒಂದು ಗಂಟೆ ಕಾಲ ಹಗಲು ಎಂದರೆ ಮಧ್ಯಾಹ್ನದ ಹೊತ್ತಿನಲ್ಲಿ ನಿದ್ರೆ ಮಾಡಬಹುದು. ರಾತ್ರಿ ನಿದ್ರೆ ಕೆಟ್ಟಿದ್ದರೆ, ರಾತ್ರಿನಿದ್ರೆಯ ಅರ್ಧಭಾಗ ನಿದ್ರೆ ಎಂದರೆ ರಾತ್ರಿ 6 ಗಂಟೆಯ ನಿದ್ರೆಗೆ ಹಗಲಿನ 3 ಗಂಟೆ ಸುಖನಿದ್ರೆಯು ಸಮವಾಗುತ್ತದೆ. ಇನ್ನು ಕಫಸಂಬಂಧಿ ರೋಗದಿಂದ, ಕೆಮ್ಮು, ನೆಗಡಿ, ದಮ್ಮು ತಲೆಭಾರ ಮುಂತಾದ ರೋಗಗಳಿಂದ ಬಳಲುತ್ತಿರುವವರು ಹಗಲುನಿದ್ರೆ ಮಾಡುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತವೆ. ಅಂತಹವರು ಕುಳಿತುಕೊಂಡು, ತೂಕಡಿಸಿ ನಿದ್ರೆ ಮಾಡುವುದು ಒಳಿತು.

ಸಕಾಲದಲ್ಲಿ ಮಲಗಿ ಸಕಾಲದಲ್ಲಿ ಎದ್ದು ಆರೋಗ್ಯವನ್ನು ಕಾಪಾಡಿಕೊಳ್ಳೋಣ.

ಹಗಲುನಿದ್ರೆ ಬೇಡ

ಏನೂ ಕೆಲಸವಿಲ್ಲ ಎಂದೋ, ಭಾನುವಾರ ಎಂದೋ ಹಗಲು ಹೆಚ್ಚು ನಿದ್ರೆ ಮಾಡುವುದರಿಂದ, ಮೈಕೈ ನೋವು, ಉತ್ಸಾಹಹಾನಿ, ತೂಕ ಹೆಚ್ಚಾಗುವುದು, ಬಾಯಿರುಚಿ ಹಾಳಾಗುವುದು, ಊಟ ಸೇರದಿರುವುದು, ರಕ್ತಹೀನತೆ, ಕೆಲಸ ಮಾಡದಿದ್ದರೂ ಸುಸ್ತಾಗುವುದು, ಅಜೀರ್ಣ, ಆಲಸ್ಯ, ಕಣ್ಣುರಿ, ಮಾನಸಿಕ ಚಂಚಲತೆ – ಹೀಗೆ ಅನೇಕ ತೊಂದರೆಗಳು ಉಂಟಾಗುತ್ತದೆ. ಅಲ್ಲದೆ, ಅನೇಕ ಬಾರಿ ಇದಕ್ಕೆ ಕೊಟ್ಟ ಚಿಕಿತ್ಸೆಯು ಸಂಪೂರ್ಣ ಫಲಕಾರಿಯಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT