7

ಯಶವಂತ್‌ ಸಾಧನೆ

Published:
Updated:

‘ಟಗರು’ ಸಿನಿಮಾದ ಟೀಸರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಒಂದು ಕಡೆ ಸ್ಕ್ರೀನ್‌ನಲ್ಲಿ ಡಾ. ರಾಜ್‌ಕುಮಾರ್‌ ಅವರು ಯೋಗ ಮಾಡುತ್ತಿರುವ ದೃಶ್ಯ ಮೂಡಿಬರುತ್ತಿದ್ದರೆ, ಮತ್ತೊಂದೆಡೆ ಬಾಲಕ ‘ಯೋಗ ಯಶವಂತ್‌’ ಅವರಂತೆಯೇ ಮಾಡುತ್ತಿದ್ದ. ಸಭಿಕರಿಗೆ ರಾಜ್‌ಕುಮಾರ್‌  ದೃಶ್ಯ ನೋಡುವುದೋ, ಬಾಲಕನ ನೈಜಭಂಗಿ ನೋಡುವುದೋ ಸಂದೇಹ. ಕಾರ್ಯಕ್ರಮ ಮುಗಿಯುತ್ತಿದ್ದಂತೆ  ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಬಂದು ಬಾಲಕನನ್ನು ಬಿಗಿದಪ್ಪಿದರು. 

ಈ ಬಾಲಕನೇ ಎಲೆಕ್ಟ್ರಾನಿಕ್‌ ಸಿಟಿಯ ಕೋಣಪ್ಪನ ಅಗ್ರಹಾರದ ಯಶವಂತ್‌. ಚಿಕ್ಕವಯಸ್ಸಿಗೇ ಯೋಗದಲ್ಲಿ ಸಾಧನೆ ಮಾಡಿ ‘ಯೋಗ ಯಶವಂತ್‌’ ಎಂದು ಗುರುತಿಸಿಕೊಂಡಿದ್ದಾನೆ. ಕಳೆದ ಎಂಟು ವರ್ಷಗಳಿಂದ ನಿರಂತರ ಯೋಗಾಭ್ಯಾಸದಲ್ಲಿ ತೊಡಗಿರುವ ಯಶವಂತ್‌ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾನೆ. ಇವನು ಖ್ಯಾತ ಯೋಗಪಟು ಪುರುಷೋತ್ತಮ ದೇರಾಜೆ ಶಿಷ್ಯ. ದೇರಾಜೆ ಅವರ ಸರಸ್ವತಿ ಯೋಗ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾನೆ.

‘ಯಶವಂತ್‌ ಚಿಕ್ಕವಯಸ್ಸಿನಲ್ಲಿ ತುಂಬ ತುಂಟ. ಹೈಪರ್‌ ಆ್ಯಕ್ಟೀವ್‌ ಮಗುವಾಗಿದ್ದು. ಅವನನ್ನು ಹಿಡಿಯೋಕೆ ಆಗುತ್ತಿರಲಿಲ್ಲ. ಹಾಗಾಗಿ ಅವನ ಗಮನವನ್ನು ಬೇರೆಡೆ ಸೆಳೆಯುವ ಕಾರಣಕ್ಕಾಗಿ ಅವನನ್ನು ಯಾವಾಗಲೂ ಬ್ಯುಸಿಯಾಗಿರುವಂತೆ ಮಾಡಲು ಕರ್ನಾಟಕ ಸಂಗೀತ ತರಗತಿಗೆ ಸೇರಿಸಿದೆ. ಆದರೆ ಅವನು ಬರುಬರುತ್ತಾ ಸಂಗೀತ ತರಗತಿ ಎಂದರೆ ಭಯಪಡುತ್ತಿದ್ದ. ಹಾಗಾಗಿ ಅವನಿಗೆ ಏನು ಇಷ್ಟವೋ ಅದನ್ನೇ ಮಾಡುವ ಎಂದು ನಿರ್ಧರಿಸಿ ಅವನ ಆಸಕ್ತಿ ಗಮನಿಸಿದೆ. ಅವನಿಗೆ ಆಟಗಳಲ್ಲಿ ಆಸಕ್ತಿ ಇತ್ತು. ಹಾಗಾಗಿ ಯೋಗ ಸೇರಿಸಿದೆ. ಅವನು ಆಸಕ್ತಿಯಿಂದ ಕಲಿಯಲು ಆರಂಭಿಸಿದ’ ಎಂದು ಅವನ ತಾಯಿ ಚೈತ್ರಾ ವಿವರಿಸುತ್ತಾರೆ. 

ಐದನೇ ವರ್ಷದಿಂದ ಯೋಗ ತರಬೇತಿ ಆರಂಭಿಸಿರುವ ಯಶವಂತ್‌ ಈಗ ಟ್ರಿಮ್ಮಿಸ್‌ ವರ್ಲ್ಡ್‌ ಸ್ಕೂಲ್‌ನಲ್ಲಿ ಏಳನೇ ತರಗತಿ ಓದುತ್ತಿದ್ದಾನೆ. ಈ ವಯಸ್ಸಿಗೆ ಅವನ ಸಾಧನೆ ಪಟ್ಟಿ ದೊಡ್ಡದಿದೆ. ಮನೆ ತುಂಬಾ ಪದಕ, ಪ್ರಶಸ್ತಿ, ಪ್ರಶಸ್ತಿ ಪ್ರಮಾಣಪತ್ರಗಳೇ ಇದಕ್ಕೆ ಸಾಕ್ಷಿ. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಾಗಿರುವ ಅವನು, 2017ರ ಯೋಗ ದಿನದಂದು ಚೀನಾದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ. ಈ ಸ್ಪರ್ಧೆಯಲ್ಲಿ ಜನರಲ್‌, ಆರ್ಟಿಸ್ಟಿಕ್‌ ಹಾಗೂ ರಿದಮಿಕ್‌ ಯೋಗ ವಿಭಾಗದಲ್ಲಿ ಮೂರು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದನು. ಕಳೆದ ಜನವರಿಯಲ್ಲಿ ಮಲೇಷ್ಯಾದಲ್ಲಿ 4 ‍ಪ್ರಶಸ್ತಿಗಳು ಹಾಗೂ ಮೇ 27ರಂದು ಥಾಯ್ಲೆಂಡ್‌ನಲ್ಲಿ ಜರುಗಿದ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಅಥ್ಲೆಟಿಕ್‌ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಆರ್ಟಿಸ್ಟಿಕ್‌ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದ ಗರಿಮೆ ಇವನದು. ಇದಲ್ಲದೇ ಪಾಂಡಿಚೇರಿ , ಕೇರಳ ಸೇರಿದಂತೆ ಅನೇಕ ಕಡೆಗಳಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾನೆ. 

ಯೋಗದ ಮೂಲಕ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದಾನೆ ಯಶವಂತ್‌. ಖಾಸಗಿ ಕಂಪೆನಿಗಳಲ್ಲಿ ಒಂದು ದಿನದ ಕಾರ್ಯಾಗಾರ ನಡೆಸಿ, ದಿನನಿತ್ಯದ  ಒತ್ತಡದಿಂದ ಹೊರಬರಲು ಅಲ್ಲಿನ ಸಿಬ್ಬಂದಿಗೆ ಸರಳ ಯೋಗಗಳು ಹಾಗೂ ಸೂರ್ಯ ನಮಸ್ಕಾರಗಳನ್ನು ಹೇಳಿಕೊಡುತ್ತಾನೆ. ವಾರಾಂತ್ಯಗಳಲ್ಲಿ ಕುಟುಂಬ ಸದಸ್ಯರ ಜೊತೆಗೂಡಿ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ರೋಗಿಗಳಿಗೆ ಧ್ಯಾನ ಹಾಗೂ ಯೋಗ, ಬೇಸಿಗೆ ರಜೆ ಸಮಯದಲ್ಲಿ ಸರ್ಕಾರಿ ಶಾಲೆಗಳು ಹಾಗೂ ಅಂಗನವಾಡಿ ಮಕ್ಕಳಿಗೆ ಯೋಗ ತರಗತಿಗಳನ್ನು ನಡೆಸುತ್ತಾನೆ. ಈಚೆಗೆ ಪರಪ್ಪನ ಅಗ್ರಹಾರದಲ್ಲೂ ಕೈದಿಗಳ ಮನಸ್ಸು ಪರಿವರ್ತನೆಗೆ ಯೋಗ ಕಾರ್ಯಾಗಾರದಲ್ಲಿ ಭಾಗವಹಿಸಿದ್ದನು. ಭಾರತರತ್ನ ಅಟಲ್‌ ಬಿಹಾರಿ ವಾಜಪೇಯಿ ಪ್ರಶಸ್ತಿ, ಮಿಸ್ಟರ್‌ ಟ್ಯಾಲೆಂಟ್‌ 2017 ಬೆಂಗಳೂರು ಪ್ರಶಸ್ತಿಗಳೂ ಯಶವಂತ್‌ಗೆ ಸಿಕ್ಕಿವೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆಯಬೇಕೆಂಬ ಮಹದಾಸೆ ಹೊಂದಿರುವ ಯಶವಂತ್‌ಗೆ ಭವಿಷ್ಯದಲ್ಲಿ ಎ. ಬಿ. ಡಿವಿಲಿಯರ್ಸ್‌ನಂತೆ ಕ್ರಿಕೆಟ್‌ ಆಟಗಾರನಾಗಬೇಕು ಎಂಬ ಕನಸಿದೆ. 

ಬರಹ ಇಷ್ಟವಾಯಿತೆ?

 • 9

  Happy
 • 4

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !