ಭಾನುವಾರ, ನವೆಂಬರ್ 17, 2019
21 °C

ಜಿಮ್‌ ಬಿಟ್ಟ ಮೇಲೆ...ದೇಹದ ಆರೋಗ್ಯ

Published:
Updated:

ಹಲವು ತಿಂಗಳು ಜಿಮ್‌ನಲ್ಲಿ ದೇಹವನ್ನು ತಕ್ಕ ಮಟ್ಟಿಗೆ ಹುರಿಗಟ್ಟಿಸಿ ಫಿಟ್‌ ಆಗಿದ್ದವರು ಒಮ್ಮಿಂದೊಮ್ಮೆಲೇ ವ್ಯಾಯಾಮಕ್ಕೆ ಕೊನೆ ಹಾಡಿದರೆ ಸ್ಥೂಲಕಾಯಿಗಳಾಗುತ್ತಾರೆ!

ಇಂತಹದ್ದೊಂದು ನಂಬಿಕೆ ಹಲವರಲ್ಲಿದೆ. ‌ಈ ನಂಬಿಕೆಯಿಂದಲೇ ಜಿಮ್ ಸೇರಲು ಹಿಂಜರಿಯುತ್ತಾರೆ. ಇವರಲ್ಲಿ ಮಹಿಳೆಯರೇ ಹೆಚ್ಚು. ಜಿಮ್‌ ಬಿಟ್ಟ ನಂತರ ತೆಗೆದುಕೊಳ್ಳುವ ಆಹಾರ ಪ್ರಮಾಣ ದೇಹದ ತೂಕವನ್ನು ನಿರ್ಧರಿಸುತ್ತದೆ. ಆಹಾರ ಪ್ರಮಾಣ ಹೆಚ್ಚಿದ್ದು, ಜೊತೆಗೆ ವ್ಯಾಯಾಮವನ್ನು ಮಾಡದಿರುವುದರಿಂದ ಸಹಜವಾಗಿಯೇ ದೇಹದ ತೂಕ ಹೆಚ್ಚಾಗುತ್ತದೆ. 

‘ಜಿಮ್‌ನಲ್ಲಿ ದೇಹ ದಂಡಿಸುವುದು ತುಸು ಕಷ್ಟ ಎನಿಸಿ ಅಥವಾ ಮತ್ತಾವುದೋ ಕಾರಣದಿಂದ ಜಿಮ್‌ ಬಿಟ್ಟವರು ಆಹಾರ ಮತ್ತು ವ್ಯಾಯಾಮದಲ್ಲಿ ಸಮತೋಲನ ತಪ್ಪಿಸಲೇಬಾರದು. ಸರಳ ವ್ಯಾಯಾಮಗಳನ್ನು ಮಾಡುವತ್ತ ಗಮನ ಹರಿಸಿ ಫಿಟ್‌ನೆಸ್‌ ಕಾಯ್ದುಕೊಳ್ಳಬೇಕು’ ಎನ್ನುತ್ತಾರೆ ಬೆಂಗಳೂರಿನ ಎಸ್‌ಬಿಎಂ ಕಾಲೊನಿಯ ಫಿಟ್‌ನೆಸ್‌ ತರಬೇತುದಾರ ನಾಗಭೂಷಣ್‌. 

ಮಿತ ಆಹಾರ ಸೇವನೆ

ಸೇವಿಸಿದ ಆಹಾರ ಸರಿಯಾಗಿ ಜೀರ್ಣ ವಾಗಲು, ದೇಹವನ್ನು ಫಿಟ್‌ ಆಗಿ ಇರಿಸಲು ವ್ಯಾಯಾಮಗಳು ಸಹಕರಿಸುತ್ತವೆ. ಜಿಮ್‌ ತರ ಗತಿಗಳಿಗೆ ಹೋಗುತ್ತಿರುವಾಗ ದೇಹವನ್ನು ಚೆನ್ನಾಗಿ ದಂಡಿಸುತ್ತಿರುತ್ತೇವೆ. ಹೀಗಾಗಿ ಹೆಚ್ಚು ಹಸಿವು ಆಗುತ್ತದೆ. ಆ ಸಮಯದಲ್ಲಿ ಫಿಟ್‌ನೆಸ್‌ ತಜ್ಞರು ಸೂಚಿಸಿದ ಆಹಾರ ಪದ್ಧತಿಯನ್ನು ಅನು ಸರಿಸಬೇಕಾಗುತ್ತದೆ. ನಿಯಮಿತವಾಗಿ ನಮ್ಮ ಸ್ನಾಯುಗಳನ್ನು ಹುರಿಗಟ್ಟಿಸುವಷ್ಟು ಆಹಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಜಿಮ್‌ ಬಿಟ್ಟ ಮೇಲೆ ಆಹಾರದ ಪ್ರಮಾಣವನ್ನು ಸಾಧ್ಯವಾದಷ್ಟು ಮಿತಗೊಳಿಸಬೇಕು. ಹೀಗಾದಾಗ ತೂಕ ಹೆಚ್ಚಳ ತಪ್ಪಿಸಬಹುದು ಎಂದು ಅವರು ಹೇಳುತ್ತಾರೆ.

ಸರಳ ವ್ಯಾಯಾಮಾಭ್ಯಾಸ 

ಜಿಮ್‌ಗಳಿಗೆ ಹೋಗುವಾಗ ನಿಯ ಮಿತವಾಗಿ ವ್ಯಾಯಾಮ ಮಾಡುತ್ತೇವೆ. ಇದರಿಂದ ದೇಹ ಸಪೂರವಾಗುತ್ತದೆ. ಜಿಮ್‌ ಬಿಟ್ಟ ಮೇಲೆ ಸರಳ ವ್ಯಾಯಾಮಗಳನ್ನು ಮಾಡಬೇಕು. ಬೆಳಗ್ಗಿನ ಚುರುಕಿನ ನಡಿಗೆ ಮತ್ತು ಇಷ್ಟವಾದ ಒಂದು ಆಟವನ್ನು ಆಡಬೇಕು. ಈ ಮೂಲಕ ದೇಹ ಸದೃಢವಾಗಿರುವಂತೆ ನೋಡಿಕೊಳ್ಳಬೇಕು.

ಜಿಮ್‌ ಮಾಡುವಾಗ ಸ್ನಾಯುಗಳೆಲ್ಲ ಹುರಿಗಟ್ಟಿರುತ್ತವೆ. ಜಿಮ್‌ಗೆ ಹೋಗುವುದನ್ನು ನಿಲ್ಲಿಸಿದ ಮೇಲೆ ಸ್ನಾಯುಗಳು ಬಲ ಕಳೆದುಕೊಳ್ಳುತ್ತವೆ. ‍ಪ್ರೋಟಿನ್‌ಗಳು ಸ್ನಾಯುಗಳನ್ನು ತುಂಬಿಕೊಳ್ಳುತ್ತವೆ. ಬೊಜ್ಜು ಶೇಖರಗೊಂಡಂತೆ ದೇಹದ ತೂಕ ಹೆಚ್ಚುತ್ತಾ ಹೋಗುತ್ತದೆ. ಇದರಿಂದ ಮೂಳೆ ಸವೆತ, ಹೃದಯ ಸಂಬಂಧಿ ರೋಗಗಳು ಜೊತೆಯಲ್ಲಿಯೇ ಬರುತ್ತವೆ. 

ಜಿಮ್‌ಗೆ ಹೋಗುವುದನ್ನು ನಿಲ್ಲಿಸುವ ಮುನ್ನ ಎದುರಿಸಬೇಕಾದ ಸವಾಲುಗಳ ಬಗ್ಗೆಯೂ ಫಿಟೆನೆಸ್‌ಪ್ರಿಯರು ಯೋಚಿಸಬೇಕು. ಕನಿಷ್ಠ 6 ತಿಂಗಳಿಂದ  ಒಂದು ವರ್ಷ ಜಿಮ್‌ಗೆ ಹೋದವರು ತಕ್ಷಣವೇ ಜಿಮ್‌ ಬಿಡಬಾರದು. ಇದರಿಂದ ದೇಹದ ಮೇಲೆ ಆಗುವ ಪ್ರತಿಕೂಲ ಪರಿಣಾಮಗಳನ್ನು ತಪ್ಪಿಸಬಹುದು. ಸರಳ ವ್ಯಾಯಾಮಗಳನ್ನು ಮಾಡುವತ್ತ ಫಿಟ್‌ನೆಸ್‌ ಪ್ರಿಯರು ಮುಂದಾಗಬೇಕು. ‌

ಜಿಮ್‌ ಕೇಂದ್ರಗಳೇ ಆಗಿರಲಿ ಅಥವಾ ನಾವು ಆಡುವ ಯಾವುದೇ ಆಟವೇ ಆಗಿರಲಿ. ನಮ್ಮ ದೇಹದ ಮೇಲೆ ನಾವು ಇರಿಸಬೇಕಾದ ಪ್ರಜ್ಞೆಯನ್ನು, ಎಚ್ಚರವನ್ನು ಇವು ತಿಳಿಸಿಕೊಡುತ್ತವೆ. ದೇಹದ ಮೇಲೆ ಕಾಳಜಿಯನ್ನು ಇರಿಸಿಕೊಂಡವರಾರೂ ವ್ಯಾಯಾಮಗಳಿಂದ ವಿಮುಖರಾಗಲಾರರು. ಜಿಮ್‌ಗೆ ಸೇರುವ ಮುಂಚೆಯೇ ನಮ್ಮಲ್ಲಿ ಜಿಮ್‌ ಬಿಡುವ ಯೋಚನೆ ಸುಳಿದರೆ ಪರಿಪೂರ್ಣ ವ್ಯಾಯಾಮಾಭ್ಯಾಸ ಮಾಡಲು ಆಗುವುದಿಲ್ಲ. ಮುಂದೊಂದು ದಿನ ಜಿಮ್‌ ಬಿಟ್ಟು ದಪ್ಪಗಾದರೆ ಅದಕ್ಕೆ ನಾವೇ ಹೊಣೆ ಆಗಬೇಕಾಗುತ್ತದೆ ಎಂದು ತಿಳಿ ಹೇಳುತ್ತಾರೆ ತಜ್ಞರು.

ಇದನ್ನೂ ಓದಿ: ಮನೆಯಲ್ಲೇ ಜಿಮ್ ಹೀಗಿರಬೇಕು...

ಪ್ರತಿಕ್ರಿಯಿಸಿ (+)