ಬುಧವಾರ, ನವೆಂಬರ್ 20, 2019
21 °C

ವಾಯುಮಾಲಿನ್ಯ ಇರಲಿ ಮುಂಜಾಗ್ರತೆ

Published:
Updated:

ವಾಯುಮಾಲಿನ್ಯಕ್ಕೆ ಇಡೀ ದೇಶವೇ ನಡುಗಿರುವುದು ಸುಳ್ಳಲ್ಲ. ಅದರಲ್ಲೂ ದೇಶದ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ಮನೆಯಿಂದ ಹೊರಗೆ ಕಾಲಿಡುವುದೇ ಕಷ್ಟವಾಗಿದೆ. ನಮ್ಮ ರಾಜ್ಯವೂ ವಾಯುಮಾಲಿನ್ಯಕ್ಕೆ ಹೊರತಾಗಿಲ್ಲ. ವಾಯುಮಾಲಿನ್ಯದಿಂದ ನಾವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ.  ಹಾಗಾದರೆ ಈ ವಾಯಮಾಲಿನ್ಯದ ಲಕ್ಷಣಗಳೇನು? ಇದರಿಂದ ಪಾರಾಗುವ ಉಪಾಯಗಳೇನು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ. 

ಕಣ್ಣಿನಲ್ಲಿ ನೀರು ಸುರಿಯುವುದು, ಕೆಮ್ಮು ಹಾಗೂ ಉಸಿರಾಟದಲ್ಲಿನ ತೊಂದರೆ ಇದು ಸಾಮಾನ್ಯವಾಗಿ ವಾಯುಮಾಲಿನ್ಯದಿಂದ ಕಾಣಿಸಿಕೊಳ್ಳುವ ಸಮಸ್ಯೆಗಳಾಗಿವೆ. ಹೃದಯ ಸಂಬಂಧಿ ಹಾಗೂ ಶ್ವಾಸಕೋಶದ ಕಾಯಿಲೆ ಇರುವವರು, ಗರ್ಭಿಣಿ ಮಹಿಳೆಯರು ಹಾಗೂ 14 ವರ್ಷದ ಕೆಳಗಿನ ಮಕ್ಕಳ ಮೇಲೆ ವಾಯುಮಾಲಿನ್ಯ ಹೆಚ್ಚು ಪರಿಣಾಮ ಬೀರುತ್ತದೆ. ಜೊತೆಗೆ ಇದು ಉಸಿರಾಟದ ಮೇಲೂ ಪರಿಣಾಮವನ್ನು ಬೀರುತ್ತವೆ.

ಎಕ್ಯೂಐ (ಏರ್ ಕ್ವಾಲಿಟಿ ಇಂಡೆಕ್ಸ್‌) ನ ಮಟ್ಟ ಅತಿಯಾಗಿದ್ದರೆ ಅಂತಹ ಸಮಯದಲ್ಲಿ ನೀವು ಮನೆಯ ಒಳಗೆ ಇರುವುದು ಉತ್ತಮ. ವಾಯುಮಾಲಿನ್ಯ ಹಾಗೂ ಪ್ರತಿದಿನದ ತಾಪಮಾನದ ನಡುವೆ ನೇರ ಸಂಬಂಧವಿದೆ. ಹಾಗಾಗಿ ಮಧ್ಯಾಹ್ನದ ಸಮಯದಲ್ಲಿ ಹೊರಗಡೆ ಕೆಲಸಕ್ಕೆ ಆದಷ್ಟು ಬ್ರೇಕ್ ನೀಡಿ. ಜೊತೆಗೆ ಅತೀ ಹೆಚ್ಚು ಟ್ರಾಫಿಕ್ ಇರುವ ರಸ್ತೆಯಲ್ಲಿ ತೆರಳುವುದಕ್ಕೆ ಕಡಿವಾಣ ಹಾಕಿ. ಅದರ ಬದಲು ಕಾರ್ ಪೂಲಿಂಗ್, ನಡೆದುಕೊಂಡು ಹೋಗುವುದು ಅಥವಾ ಬೈಕ್‌ನಲ್ಲಿ ತೆರಳುವುದು ಮಾಡಿ.

ನೀವು ಇರುವ ಪ್ರದೇಶದಲ್ಲಿ ವಾಯುಮಾಲಿನ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಾದರೆ ಬಾಯಿ ಹಾಗೂ ಮೂಗಿಗೆ ಕರವಸ್ತ್ರ, ಫೇಸ್‌ ಮಾಸ್ಕ್ ಅಥವಾ ಸ್ಕಾರ್ಫ್‌ ಬಳಸಿ ಕಲುಷಿತ ಗಾಳಿ ದೇಹಕ್ಕೆ ಸೇರದಂತೆ ನೋಡಿಕೊಳ್ಳಿ.

ಹೆಚ್ಚು ಹೆಚ್ಚು ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸಿ, ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶ ಅಧಿಕವಿದ್ದು ಇದು ನಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮನೆಯಲ್ಲಿ ಹವಾ ನಿಯಂತ್ರಣ ಸಾಧನವನ್ನು ಆಗಾಗ ಸ್ವಚ್ಛಗೊಳಿಸಿ, ಪ್ರತಿದಿನ ಮನೆಯನ್ನು ಗುಡಿಸುವುದು, ಒರೆಸುವುದು ಮಾಡಿ. ಏಕ್ಯೂಐ ಮಟ್ಟ ಕಡಿಮೆ ಇದ್ದಾಗ ಮನೆಯ ಕಿಟಕಿ ಬಾಗಿಲುಗಳನ್ನು ತೆರದು ಸ್ವಚ್ಛ ಗಾಳಿ ಒಳಗೆ ಬರಲು ಬಿಡಿ.

ಹೆಚ್ಚು ಹೆಚ್ಚು ಸಾರ್ವಜನಿಕ ಸಾರಿಗೆಯನ್ನು ಬಳಸಿ, ಕಾರ್ ಪೂಲಿಂಗ್ ವ್ಯವಸ್ಯೆ ಇದ್ದರೆ ಬಳಸಿಕೊಳ್ಳಿ. ಇದುವೇ ಇಂಧನ ಹೊರ ಸೂಸುವಿಕೆಯನ್ನು ಕಡಿಮೆಗೊಳಿಸಲು ಇಡುವ ಮೊದಲ ಹೆಜ್ಜೆಯಾಗಿದೆ. ಗ್ಯಾಸ್ ಚಾಲಿತ ವಾಹನಗಳ ಬದಲು ಎಲೆಕ್ಟ್ರಿಕಲ್ ವಾಹನಗಳನ್ನು ಹೆಚ್ಚು ಬಳಸಿ. 

ಪ್ರತಿಕ್ರಿಯಿಸಿ (+)