‘ದುಃಖಕ್ಕೆ ಕೋ‍ಪವೇ ಮೂಲವಾಗಿದೆ...’

7

‘ದುಃಖಕ್ಕೆ ಕೋ‍ಪವೇ ಮೂಲವಾಗಿದೆ...’

Published:
Updated:

* ನಾನು ಗೃಹಿಣಿ. ದೂರಶಿಕ್ಷಣದ ಮೂಲಕ ಎಂಎಸ್‌ಡಬ್ಲ್ಯೂ ಮಾಡುತ್ತಿದ್ದೇನೆ. ನನಗೆ ಬೇಗ ಕೋಪ ಬರುತ್ತದೆ. ಎಷ್ಟೇ ನಿಯಂತ್ರಣ ಮಾಡಿಕೊಂಡರು ಕೋಪ ತಗ್ಗುವುದಿಲ್ಲ. ಮಕ್ಕಳ ಮೇಲೆ ರೇಗಾಡಿ ಬಿಡುತ್ತೇನೆ. ಆಮೇಲೆ ನನಗೆ ಬೇಸರವಾಗುತ್ತದೆ. ಇದನ್ನು ನಿಯಂತ್ರಿಸಲು ಏನು ಮಾಡಬೇಕು?
ರಾಜೇಶ್ವರಿ, ಊರು ಬೇಡ

ನೀವು ಕುಟುಂಬ ನಿರ್ವಹಣೆ ಹಾಗೂ ಮಕ್ಕಳನ್ನು ನೋಡಿಕೊಳ್ಳುವುದರ ಜೊತೆಗೆ ದೂರಶಿಕ್ಷಣದ ಮೂಲಕ ಎಂಎಸ್‌ಡಬ್ಲ್ಯೂ ಓದುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕೆಲವೊಮ್ಮೆ ಇವೆಲ್ಲವನ್ನೂ ಸರಿಯಾದ ರೀತಿಯಲ್ಲಿ ನಿರ್ವಹಿಸಲು ಕಷ್ಟವಾಗಬಹುದು. ಅದೇ ನಿಮ್ಮಲ್ಲಿನ ಹತಾಶೆ ಹಾಗೂ ಸಿಟ್ಟಿಗೆ ಕಾರಣವಾಗಿರಬಹುದು. ಒಂದು ವೇಳಾಪಟ್ಟಿಯನ್ನು ತಯಾರಿಸಿಕೊಳ್ಳಿ, ನಿಮ್ಮ ನಿತ್ಯದ ಕೆಲಸವನ್ನು ಅದರಲ್ಲಿ ಸೇರಿಸಿ. ಮಕ್ಕಳು ಇನ್ನು ಚಿಕ್ಕವರಾಗಿದ್ದು ನಿಮ್ಮ ಮೇಲೆ ಅವಲಂಬಿತರಾಗಿದ್ದರೆ, ನಿಮ್ಮ ಮೊದಲ ಪ್ರಾಶಸ್ತ್ಯ ಮಕ್ಕಳಿಗೆ ಸಮಯ ನೀಡುವುದಾಗಿರಲಿ. ನಿಮ್ಮ ಓದು ಹಾಗೂ ದಿನಚರಿ ಏಕಕಾಲದಲ್ಲಿ ಸಾಗಬೇಕು. ನೀವು ಓದಿಗೆಂದೇ ಒಂದಷ್ಟು ಸಮಯವನ್ನು ಇರಿಸಿಕೊಳ್ಳಿ. ಆ ವೇಳೆಯಲ್ಲಿ ಓದಿಗೆ ಯಾವುದೇ ಅಡೆತಡೆಗಳಾಗದಂತೆ ನೋಡಿಕೊಳ್ಳಿ – ಅದು ಒಂದು ಗಂಟೆಗಿಂತ ಕಡಿಮೆ ಇದ್ದರೂ ತೊಂದರೆಯಿಲ್ಲ. ನಿಮಗಾಗಿ ವೈಯಕ್ತಿಕ ವಿಷಯಗಳಿಗೆ ಸ್ವಲ್ಪ ಸಮಯವನ್ನು ಇರಿಸಿಕೊಳ್ಳಿ. ಆ ಸಮಯದಲ್ಲಿ ವ್ಯಾಯಾಮ ಮಾಡಿ ಹಾಗೂ ಸ್ನೇಹಿತರೊಂದಿಗೆ ಸಮಯವನ್ನು ಸಂತೋಷದಿಂದ ಕಳೆಯಿರಿ. ಇದು ನೀವು ಶಾಂತವಾಗಿರಲು ಹಾಗೂ ಮನಸ್ಸು ತಾಜಾವಾಗಿರಲು ಸಹಾಯ ಮಾಡುತ್ತದೆ. ನಂತರ ಕೆಲಸವನ್ನು ಮುಂದುವರೆಸಿ. ಜೀವನ ಈಗ ಹೇಗಿದೆಯೋ ಹಾಗೆಯೇ ಒಪ್ಪಿಕೊಳ್ಳಿ. ಆಗ ಎಲ್ಲವೂ ಸುಲಭವಾಗುತ್ತದೆ.

* ನಾನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿದ್ದೇನೆ. ನನಗೆ ಹೆಚ್ಚು ಹೊತ್ತು ಓದಿನ ಮೇಲೆ ಗಮನ ನೀಡಲು ಆಗುವುದಿಲ್ಲ. ಹೆಚ್ಚೆಂದರೆ 2 ಗಂಟೆ ಓದಬಹುದು. ಆಮೇಲೆ ನನ್ನಿಂದ ಒಂದು ಪುಟವನ್ನೂ ಓದಲು ಆಗುವುದಿಲ್ಲ. ಇದಕ್ಕೆ ಪರಿಹಾರ ತಿಳಿಸಿ.
ಜಗದೀಶ್, ತುಮಕೂರು

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಸುಲಭದ ಮಾತಲ್ಲ. ಸಂಪೂರ್ಣ ಸಮರ್ಪಣಾಭಾವ ಹಾಗೂ ಗಮನ ತುಂಬಾ ಮುಖ್ಯ. ನೆಪ ಮಾತ್ರಕ್ಕೆ ಪರೀಕ್ಷೆ ಬರೆಯುತ್ತೇನೆ, ಓದುತ್ತೇನೆ – ಎಂದರೆ ಅದು ಸಾಧ್ಯವಾಗುವುದಿಲ್ಲ. ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಕೋಚಿಂಗ್ ತೆಗೆದುಕೊಳ್ಳುವುದು ಉತ್ತಮ. ಇದು ನಿಮಗೆ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು ಮತ್ತು ಸಮಯವನ್ನು ಹೇಗೆ ಸಮರ್ಪಕವಾಗಿ ಬಳಸಬೇಕು ಎಂಬುದನ್ನು ತಿಳಿಸುತ್ತದೆ. ಒಮ್ಮೆ ನಿಮಗೆ ಓದಿನ ವಿಧಾನ ತಿಳಿದರೆ ಹೇಗೆ ಓದಬೇಕು ಹಾಗೂ ಎಷ್ಟು ಗಂಟೆಗಳ ಕಾಲ ಓದಬೇಕು ಎಂಬುದರ ಅರಿವಾಗುತ್ತದೆ. ನಿಮ್ಮ ಮನಸ್ಸನ್ನು ಈ ಅಭ್ಯಾಸಕ್ಕೆ ಸಿದ್ಧಗೊಳಿಸಿ. ಸಾಧಿಸಬೇಕು ಎಂದುಕೊಂಡಿರುವ ಗುರಿಯ ಮೇಲೆ ಗಮನವನ್ನು ಹರಿಸಿ. ಗಮನಶಕ್ತಿಯ ಹೆಚ್ಚಲು ಪ್ರತಿದಿನ ಅರ್ಧ ಗಂಟೆಗಳ ಕಾಲ ಧ್ಯಾನ ಮಾಡಿ. ಇದರಿಂದ ಓದಿನ ಮೇಲೆ ಗಮನ ಹರಿಸಲು ಸಹಾಯವಾಗುತ್ತದೆ. 

* ನನ್ನ ಮದುವೆ ಆಗಿ ಒಂದುವರೆ ವರ್ಷ ಆಗಿದೆ. ಮದುವೆಯ ನಂತರ ನನ್ನ ಗಂಡನ ಬ್ಯುಸಿನೆಸ್ ಸಂಪೂರ್ಣ ಲಾಸ್ ಆಗಿದೆ. ‘ನನ್ನ ಮೈಂಡ್ ಬ್ಲಾಕ್ ಆಗಿದೆ’ ಎಂದು ನನ್ನ ಗಂಡ ನನಗೆ ಮೇಸೆಜ್ ಮಾಡುತ್ತಾರೆ. ನನಗೆ ಸರಿಯಾಗಿ ಕರೆ ಮಾಡೋಲ್ಲ. ನನ್ನ ಬಗ್ಗೆ ಕಾಳಜಿ ಮಾಡುತ್ತಿಲ್ಲ. ನನಗೆ ಅವರನ್ನು ಹೇಗೆ ಒಲಿಸಿಕೊಳ್ಳಬೇಕು ತಿಳಿಯುತ್ತಿಲ್ಲ. ಆರ್ಥಿಕವಾಗಿ ನಮ್ಮ ಪರಿಸ್ಥಿತಿಯೂ ಚೆನ್ನಾಗಿಲ್ಲ. 
ಹೆಸರು, ಊರು ಬೇಡ

ನಿಮ್ಮ ಪ್ರಶ್ನೆಯಲ್ಲಿ ಸಂಪೂರ್ಣ ಸ್ಪಷ್ಟತೆ ಇಲ್ಲ. ಮದುವೆಯಾಗಿ ಈಗಾಗಲೇ ಒಂದೂವರೆ ವರ್ಷ ಕಳೆದಿದೆ ಎನ್ನುತ್ತಿದ್ದೀರಿ. ನೀವು ಹೇಳುವ ಪ್ರಕಾರ ನಿಮ್ಮ ಗಂಡ ನಿಮ್ಮೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ. ಅದೇನೆ ಇರಲಿ, ಮದುವೆಯ ವಿಷಯಕ್ಕೆ ಬಂದಾಗ ಗಂಡ–ಹೆಂಡಿರ ನಡುವೆ ಆರೋಗ್ಯಕರ ಸಂವಹನ ತುಂಬಾ ಮುಖ್ಯ. ನೀವಿಬ್ಬರೂ ಒಂದು ದಿನ ಔಟಿಂಗ್ ಹೋಗಿ, ಪರಸ್ಪರ ಮಾತನಾಡಿಕೊಳ್ಳಿ. ನಿಮ್ಮ ಗಂಡ ಯಾವ ವಿಷಯಕ್ಕೆ ತಲೆ ಕೆಡಿಸಿಕೊಂಡಿದ್ದಾರೆ ಎಂಬುದನ್ನು ಕೇಳಿ. ಜೊತೆಗೆ ವ್ಯವಹಾರದ ಮೇಲೆ ಗಮನ ನೀಡಲು ಯಾವ ಅಂಶ ಅಡ್ಡಿಪಡಿಸುತ್ತಿದೆ ಎಂಬುದನ್ನು ಕೇಳಿ ತಿಳಿದುಕೊಳ್ಳಿ. ನಿಮಗೆ ಅವರಿಂದ ಯಾವುದೇ ಸ್ಪಷ್ಟತೆ ಸಿಗದಿದ್ದರೆ ಮನೆಯ ಹಿರಿಯರ ಜೊತೆ ಮಾತನಾಡಲು ಪ್ರಯತ್ನಿಸಿ. ನಿಮ್ಮ ಗಂಡ ವ್ಯವಹಾರದಲ್ಲಿ ಸ್ಥಿರವಾಗಲೂ ಏನು ಮಾಡಬೇಕು, ಅದಕ್ಕೆ ನೀವು ಹೇಗೆ ಸ್ಪಂದಿಸಬೇಕು ಎಂಬುದನ್ನು ಕಂಡುಕೊಳ್ಳಿ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !