ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐ ಹೇಟ್‌ ಶ್ರೀದೇವಿ’ ಎಂದ ರಾಮ್‌ಗೋಪಾಲ್‌ ವರ್ಮ

Last Updated 3 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನನಗೆ ನಿರಂತರವಾಗಿ ಕನಸು ಕಾಣುವ ಅಭ್ಯಾಸವಿದೆ. ನಿದ್ದೆಯಿಂದೆದ್ದ ಪ್ರತಿಸಲ ನಾನು ನನ್ನ ಮೊಬೈಲನ್ನು ಚೆಕ್‌ ಮಾಡಿಕೊಳ್ಳುತ್ತೇನೆ. ಇದ್ದಕ್ಕಿದ್ದಂತೆ ‘ಶ್ರೀದೇವಿ ಇನ್ನಿಲ್ಲ’ ಎಂಬ ಮೆಸೇಜ್‌ ನೋಡಿದೆ. ಇದು ಕೆಟ್ಟ ಕನಸೋ ಅಥವಾ ತಮಾಷೆಗಾಗಿ ಯಾರೋ ಕಳಿಸಿರಬಹುದೆಂದು ಭಾವಿಸಿ ಮತ್ತೆ ನಿದ್ರೆಗೆ ಜಾರಿದೆ. ಒಂದು ತಾಸಿನ ನಂತರ ಎದ್ದು ಮತ್ತೆ ಮೊಬೈಲನ್ನು ನೋಡಿಕೊಂಡಾಗ ಹೌಹಾರಿದೆ. ಸುಮಾರು 50 ಮೆಸೇಜುಗಳು ನನಗಾಗಿ ಕಾಯುತ್ತಿದ್ದವು.

ಅದು ನಾನು ವಿಜಯವಾಡದಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದ ದಿನಗಳು. ‘ಪದಹಾರೇಳ್ಳ ವಯಸ್ಸು’ ಸಿನಿಮಾದಲ್ಲಿ ಮೊತ್ತಮೊದಲು ಶ್ರೀದೇವಿಯನ್ನು ನೋಡಿದ್ದೆ. ಆಕೆಯ ಸೌಂದರ್ಯಕ್ಕೆ ಮಾರುಹೋದೆ. ಆಕೆ ನಿಜವಾಗಿಯೂ ಮನುಷ್ಯಳಲ್ಲವೆಂದೂ, ಮನುಷ್ಯ ರೂಪದಲ್ಲಿ ಧರೆಗಿಳಿದು ಬಂದ ದೇವತೆಯೆಂದೂ ಭಾವಿಸಿದ್ದೆ. ದೇವರು ಅತ್ಯಂತ ಸಂತಸದ ಘಳಿಗೆಯಲ್ಲಿ ಮಾನವ ಜಾತಿಗೆ ವಿಶೇಷ ಉಡುಗೊರೆ ತೊಡಬೇಕೆಂದು ಬಯಸಿ ಶ್ರೀದೇವಿಯನ್ನು ಸೃಷ್ಟಿಸಿದ್ದಾನೆಂದು ಅನಿಸಿತು.

ಶ್ರೀದೇವಿಯೊಂದಿಗೆ ನನ್ನ ಪ್ರಯಾಣ ನಾನು ‘ಶಿವ’ ಸಿನಿಮಾದ ಸಿದ್ಧತೆಯಲ್ಲಿದ್ದಾಗ ಶುರುವಾಯ್ತು. ಚೆನ್ನೈನಲ್ಲಿ ನಟ ನಾಗಾರ್ಜುನರ ಕಚೇರಿಗೆ ನಾನು ಯಾವಾಗಲೂ ಕಾಲ್ನಡಿಗೆಯಲ್ಲೇ ಹೋಗುತ್ತಿದ್ದೆ. ಪಕ್ಕದ ಬೀದಿಯಲ್ಲಿ ಶ್ರೀದೇವಿಯ ಮನೆಯಿತ್ತು. ನಾನು ಪ್ರತಿಸಲ ಆಕೆಯ ಮನೆಯ ಮುಂದಿನಿಂದ ಹೆಜ್ಜೆ ಹಾಕುತ್ತಿದ್ದೆ. ಒಮ್ಮೆಯಾದರೂ ಆಕೆಯ ದರ್ಶನ ಪ‍ಡೆಯಬೇಕೆಂಬ ಮಹದಾಸೆ ನನ್ನದಾಗಿತ್ತು. ಆ ಮೇಲೆ ‘ಶಿವ’ ಸಿನಿಮಾ ಬಿಡುಗಡೆಯಾಯಿತು. ಸೂಪರ್‌ ಹಿಟ್‌ ಆಯ್ತು. ಒಮ್ಮೆ ಒಬ್ಬ ನಿರ್ಮಾಪಕರು ನನ್ನ ಬಳಿ ಬಂದು ‘ಶ್ರೀದೇವಿಯೊಂದಿಗೆ ಸಿನಿಮಾ ಮಾಡೋ ಆಸೆ ಇದೆಯಾ?’ ಎಂದರು. ‘ನಿಮಗೇನಾದರೂ ಹುಚ್ಚು ಹಿಡಿದಿದೆಯಾ? ಆಕೆಯನ್ನು ನೋಡಿದರೆ ನಾನು ಹುಚ್ಚನಾಗುತ್ತೇನೆ’ ಎಂದೆ. ಅವರು ಶ್ರೀದೇವಿಯೊಂದಿಗೆ ಭೇಟಿ ಏರ್ಪಾಟು ಮಾಡಿದರು. ನಾವೆಲ್ಲ ಶ್ರೀದೇವಿಯ ಮನೆಗೆ ಹೋಗುವಷ್ಟರಲ್ಲಿ ಮುಸ್ಸಂಜೆಯಾಗಿತ್ತು. ಮನೆಯಲ್ಲಿ ವಿದ್ಯುತ್ ಬೇರೆ ಕೈಕೊಟ್ಟಿತ್ತು. ನಾನು ಮೊಂಬತ್ತಿ ಬೆಳಕಿನಲ್ಲಿ ವರಾಂಡದಲ್ಲಿ ಕೂತಿದ್ದೆ. ಸ್ವಲ್ಪ ಹೊತ್ತಿಗೆ ಶ್ರೀದೇವಿ ಬಂದರು. ನನ್ನೊಂದಿಗೆ ಕೆಲಸ ಮಾಡಲು ಇಷ್ಟವೆಂದು ಹೇಳಿದರು. ಮೊಂಬತ್ತಿಯ ಬೆಳಕಿನಲ್ಲಿ ನನ್ನೆದುರು ಕುಳಿತಿದ್ದ ಆ ಅದ್ಭುತ ಸೌಂದರ್ಯ ರಾಶಿಯ ದೃಶ್ಯ ಇಂದಿಗೂ ನನ್ನ ಮನಸ್ಸಿನಲ್ಲಿ ವಿಶೇಷ ಕಲಾಕೃತಿಯಂತೆ ನನ್ನ ಮನದಲ್ಲಿ ಅಚ್ಚೊತ್ತಿದಂತಿದೆ.

ನಿಜ ಹೇಳಬೇಕೆಂದರೆ ನನ್ನ ‘ಕ್ಷಣ ಕ್ಷಣಂ‘ ಸಿನಿಮಾ ಶ್ರೀದೇವಿಗೆ ಬರೆದ ಸೆಲ್ಯುಲಾಯಿಡ್‌ ಪ್ರೇಮಪತ್ರ. ಆಕೆಯ ರೂಪವನ್ನು ನನ್ನ ಮಿದುಳಿನಲ್ಲಿ, ನನ್ನ ಹೃದಯದಲ್ಲಿ ಪೂರ್ತಿಯಾಗಿ ತುಂಬಿಕೊಂಡು ‘ಕ್ಷಣ ಕ್ಷಣಂ’ ಸ್ಕ್ರಿಪ್ಟ್‌ ಬರೆಯಲು ಕುಳಿತೆ. ಸಿನಿಮಾ ಶುರು ಆದಾಗಿನಿಂದ ಆಕೆಯ ಸೌಂದರ್ಯ, ಆಕರ್ಷಣೆ ಮಾತ್ರವಲ್ಲ ಆಕೆಯ ವ್ಯಕ್ತಿತ್ವ, ನಡತೆ ನನ್ನನ್ನು ವಿಚಿತ್ರ ರೀತಿಯಲ್ಲಿ ಬೆರಗುಗೊಳಿಸಿದ್ದವು.

ಆಕೆ ತನ್ನ ಸುತ್ತಲೂ ಯಾರಿಗೂ ಕಾಣಿಸದ ಹಾಗೆ ಗೋಡೆಯೊಂದನ್ನು ನಿರ್ಮಿಸಿಕೊಂಡಿದ್ದರು. ಅದರೊಳಕ್ಕೆ ಯಾರಿಗೂ ಪ್ರವೇಶವಿರಲಿಲ್ಲ. ಆಕೆಯ ಸರಳತೆಯನ್ನು ನಟನೆಯ ಅರ್ಪಣಾ ಭಾವವನ್ನು ನೋಡುತ್ತಿದ್ದರೆ ಆಕೆಯ ಜನಪ್ರಿಯತೆ ಮತ್ತು ಸ್ಟಾರ್‌ಡಮ್‌ ಅನ್ನು ನಂಬಲು ಕಷ್ಟವಾಗುತ್ತದೆ. ಆ ದಿನ ‘ಕ್ಷಣ ಕ್ಷಣಂ’ ಸಿನಿಮಾದ ಕ್ಲೈಮ್ಯಾಕ್ಸ್‌ ಅನ್ನು ನಂದ್ಯಾಲದಲ್ಲಿ ಶೂಟ್‌ ಮಾಡುತ್ತಿದ್ದೆವು. ಶ್ರೀದೇವಿ ಬಂದಿರುವ ಸುದ್ದಿ ಊರಲ್ಲಿ ಹಬ್ಬುತ್ತಿದ್ದಂತೆಯೇ ಇಡೀ ನಂದ್ಯಾಲದಲ್ಲಿ ದೊಡ್ಡ ಸಂಚಲನ ಉಂಟಾಯಿತು. ಸಾವಿರಾರು ಜನ ಆಕೆಯ ಕಾರಿನ ಹಿಂದೆ ಓಡಿ ಬರುತ್ತಿದ್ದರೆ ಮುಗಿಲೆತ್ತರದ ದೂಳನ್ನು ನೋಡಿದರೆ ಗೊತ್ತಾಗುತ್ತಿತ್ತು ಆಕೆಯ ಜನಪ್ರಿಯತೆ.

ಶ್ರೀದೇವಿ ದೇವರು ಸೃಷ್ಟಿಸಿದ ಒಂದು ಮಹಾನ್‌ ಅದ್ಭುತ. ಸಾವಿರ ವರ್ಷಗಳಿಗೊಮ್ಮೆ ಇಂತಹ ಕಲಾಕೃತಿಗಳನ್ನು ದೇವರು ಸೃಷ್ಟಿಸುತ್ತಾನೆ. ಆಕೆ ಇಲ್ಲವೆನ್ನುವ ಸಂಗತಿ ನನಗೆ ನಂಬಲಾಗುತ್ತಿಲ್ಲ. ನಾನಿನ್ನೂ ಕೆಟ್ಟ ಕನಸೊಂದನ್ನು ಕಾಣುತ್ತಿದ್ದೇನೆಂಬ ನಂಬಿಕೆಯಲ್ಲಿದ್ದೇನೆ. ಆದರೆ ಅದು ಸುಳ್ಳೆಂದು ನನಗೆ ಗೊತ್ತು.

ನಾನೀಗ ಶ್ರೀದೇವಿಯನ್ನು ದ್ವೇಷಿಸುತ್ತೇನೆ. ಐ ಹೇಟ್‌ ಶ್ರೀದೇವಿ. ಆಕೆ ಕೂಡಾ ಕೊನೆಗೆ ತಾನೊಬ್ಬ ಕೇವಲ ಮನುಷ್ಯಳೆಂದು ನಾನು ಗ್ರಹಿಸುವಂತೆ ಮಾಡಿದ್ದಕ್ಕಾಗಿ ಆಕೆಯ ಹೃದಯ ಬಡಿತ ಕೂಡಾ ಕೇವಲ ಬದುಕಲು ಮಾತ್ರ ಇತ್ತೆಂದೂ, ಆಕೆಗೆ ಉಳಿದೆಲ್ಲರಂತೆ ನಿಂತು ಹೋಗುವ ಹೃದಯ ಇದ್ದದ್ದಕ್ಕೆ, ಆಕೆಯ ಸಾವಿನ ಕುರಿತ ಸಂದೇಶಗಳನ್ನು ನೋಡಲೆಂದೇ ನನ್ನನ್ನು ಬದುಕಿಸಿರುವ ದೇವರನ್ನು ನಾನು ದ್ವೇಷಿಸುತ್ತೇನೆ. ಮತ್ತು ಮರಣಿಸಿದ್ದಕ್ಕೂ ನಾನು ಶ್ರೀದೇವಿಯನ್ನು ದ್ವೇಷಿಸುತ್ತಿದ್ದೇನೆ.

ಶ್ರೀದೇವಿ... ನೀನು ಎಲ್ಲಿದ್ದರೂ ನಾನು ನಿನ್ನನ್ನು ಪ್ರೀತಿಸುತ್ತೇನೆ. ನಾನು ಎಂದೆಂದಿಗೂ ಪ್ರೀತಿಸುತ್ತಲೇ ಇರುತ್ತೇನೆ.

–ರಾಮ್‌ಗೋಪಾಲ್‌ ವರ್ಮ

***

ಕನ್ನಡದಲ್ಲಿ ಶ್ರೀದೇವಿ

ಕನ್ನಡದಲ್ಲಿ ಶ್ರೀದೇವಿ ನಟಿಸಿದ ಮೊದಲ ಚಿತ್ರ ‘ಭಕ್ತ ಕುಂಬಾರ’. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದಲ್ಲಿ 1974 ರಲ್ಲಿ ತೆರೆ ಕಂಡ ಈ ಚಿತ್ರದಲ್ಲಿ ಡಾ. ರಾಜರ ಮತ್ತು ಲೀಲಾವತಿ ಮುಖ್ಯ ತಾರಾಗಣದಲ್ಲಿದ್ದರು. ಚಿತ್ರದಲ್ಲಿ ‘ಮುಕ್ತಾಬಾಯಿ’ ಪಾತ್ರದಲ್ಲಿ ಬಾಲನಟಿಯಾಗಿ ಶ್ರೀದೇವಿ ನಟಿಸಿದ್ದರು. ಶ್ರೀದೇವಿಗೆ ಬಾಲನಟಿಯಾಗಿ ಇದು 5ನೇ ಚಿತ್ರ. ನಂತರ ಈ ಚಿತ್ರವನ್ನು ವಿ. ಮಧುಸೂದನರಾವ್‌ ನಿರ್ದೇಶನದಲ್ಲಿ ಅಕ್ಕಿನೇನಿ ಪ್ರಧಾನ ಪಾತ್ರದಲ್ಲಿ ‘ಚಕ್ರಧಾರಿ’ ಹೆಸರಿಂದ ತೆಲುಗುಗೆ ರಿಮೇಕ್‌ ಮಾಡಲಾಯಿತು. ಬೆನ್ನಲ್ಲೇ ‘ಬಾಲ ಭರತ, ಸಂಪೂರ್ಣ ರಾಮಾಯಣ ಹಾಗೂ ಯಶೋದ ಕೃಷ್ಣ’ಗಳಂತಹ ಪೌರಾಣಿಕ ಚಿತ್ರಗಳು ತೆರೆ ಕಂಡಿದ್ದವು. 1975 ರಲ್ಲಿ ಎ.ವಿ. ಶೇಷಗಿರಿರಾವ್‌ ನಿರ್ದೇಶನದಲ್ಲಿ ‘ಹೆಣ್ಣು ಸಂಸಾರದ ಕಣ್ಣಿ’ ಚಿತ್ರದಲ್ಲಿ ಶ್ರೀನಾಥ್, ಮಂಜುಳಾರೊಂದಿಗೆ ಕಥಾ ನಾಯಕಿಯಾಗಿ ಶ್ರೀದೇವಿ ನಟಿಸಿದ್ದರು. ನಂತರ: 1978ರಲ್ಲಿ ಎಸ್‌.ಪಿ. ಮುತ್ತುರಾಮನ್‌ ನಿರ್ದೇಶನದಲ್ಲಿ ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತೆರೆಕಂಡ ‘ಪ್ರಿಯಾ’ ಸಿನಿಮಾದಲ್ಲಿ ಶ್ರೀದೇವಿಯೊಂದಿಗೆ ಅಂಬರೀಶ್‌ ಮತ್ತು ರಜನಿ ನಟಿಸಿದ್ದರು. ಈ ಚಿತ್ರದ ‘ಪ್ರಿಯಾ’ ಪಾತ್ರ ಶ್ರೀದೇವಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿತ್ತು.

ಅತಿಲೋಕ ಸುಂದರಿ

ಈ ಪದ ಶ್ರೀದೇವಿಗೆ ಹೊರತಾಗಿ ಬೇರೆ ಯಾರಿಗೂ ಅನ್ವಯಿಸುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿದ್ದವರು ಶ್ರೀದೇವಿ. ಅವರ ವೈಶಿಷ್ಟ್ಯವೆಂದರೆ ಆಕೆ ಯಾವ ನಟರೊಂದಿಗೆ ನಟಿಸಿದರೂ ಅದು ಪರ್ಫೆಕ್ಟ್‌ ಜೋಡಿ ಎನಿಸಿಕೊಳ್ಳುತ್ತದೆ ಮತ್ತು  ಹಿಟ್‌ ಪೇರ್‌ ಆಗುತ್ತದೆ. ಒಂದು ಕಾಲದ ಸೂಪರ್‌ ಜೋಡಿ ಎನಿಸಿಕೊಂಡಿದ್ದ ಶ್ರೀದೇವಿ–ಅಕ್ಕಿನೇನಿ, ನಂತರದ ದಿನಗಳಲ್ಲಿ ನಾಗಾರ್ಜುನರೊಂದಿಗೆ ‘ಗೋವಿಂದಾ ಗೋವಿಂದಾ’ ಹಾಗೂ ವೆಂಕಟೇಶ್‌ ಜೊತೆ ‘ಕ್ಷಣ ಕ್ಷಣಂ’ ಸಿನಿಮಾಗಳಲ್ಲೂ ಅದ್ಭುತ ಜೋಡಿಯಾಗಿ ಪ್ರೇಕ್ಷಕನನ್ನು ಮಂತ್ರಮುಗ್ಧಗೊಳಿಸಿದ್ದರು. ಚಿರಂಜೀವಿಯೊಂದಿಗೆ ನಟಿಸಿದ್ದ ‘ಜಗದೇಕ ವೀರುಡು ಅತಿಲೋಕ ಸುಂದರಿ’ ಸಿನಿಮಾವಂತೂ ಇಡೀ ದಕ್ಷಿಣ ಭಾರತ ಪ್ರೇಕ್ಷಕರನ್ನು ಸಮೂಹ ಸನ್ನಿಗೆ ಒಳಪಡಿಸಿತ್ತು. ಇತ್ತ ತಮಿಳಿನಲ್ಲಿ ರಜನಿ ಮತ್ತು ಕಮಲ್‌ರೊಂದಿಗೆ ಮಾತ್ರವಲ್ಲದೇ ಎಂ.ಜಿ.ಆರ್‌., ಶಿವಾಜಿ ಗಣೇಶನ್‌ ಮತ್ತು ಶಿವಕುಮಾರ್‌ರಂಥ ಹಳೆಯ ಘಟಾನುಘಟಿಗಳೊಂದಿಗೆ ಕೂಡಾ ಜೋಡಿಯಾಗಿ ನಟಿಸಿದ್ದರು. ‘ಕವರಿಮಾನ್‌’, ‘ಪಟ್ಟಾ ಕತ್ತಿ ಭೈರವನ್‌’, ‘ಬಾಬು’ಗಳಂಥ ಸಿನಿಮಾಗಳಲ್ಲಿ ನಟಿಸಿ ಯಶಸ್ವಿ ಎನಿಸಿಕೊಂಡಿದ್ದಳು.

1977–83ರ ಸಮಯದಲ್ಲಿ ಕಮಲ್‌ ಮತ್ತು ಶ್ರೀದೇವಿ ತಮಿಳು ಚಿತ್ರರಂಗದ ಅತ್ಯಂತ ಯಶಸ್ವಿ ಜೋಡಿಯೆಂದು ಖ್ಯಾತಿಪಡೆದಿತ್ತು. ‘ಸೊಲ್ವ ಸೋವನ್‌’ ಚಿತ್ರದೊಂದಿಗೆ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದ ಶ್ರೀದೇವಿ ನಂತರ ‘ಹಿಮ್ಮತ್‌ ವಾಲಾ’ ಚಿತ್ರದಿಂದ ಹಿಂದಿ ಚಿತ್ರರಂಗದ ಅನಭಿಷಕ್ತ ಸಾಮ್ರಾಜ್ಞಿಯಾದಳು. ನಂತರ ಬಂದ ಮಿಸ್ಟರ್‌ ಇಂಡಿಯಾ, ಕರ್ಮ, ಖುದಾಗವಾ ಸಿನಿಮಾಗಳಿಂದ ಒಂದೊಂದೇ ಖ್ಯಾತಿಯ ಮೆಟ್ಟಲೇರಿದಳು. ಗ್ರಾಫ್‌ ಮುಗಿಲು ಮುಟ್ಟಿತ್ತು. ಜಿತೇಂದ್ರ–ಶ್ರೀದೇವಿ ಬಾಲಿವುಡ್‌ನ ಅತ್ಯಂತ ಯಶಸ್ವಿ ಜೋಡಿಯೆಂದು ಹೆಸರುವಾಸಿಯಾಗಲು ಹೆಚ್ಚು ದಿನ ಬೇಕಾಗಲಿಲ್ಲ.

‘ಪ್ರಿಯಾ, ಜಾನಿ, ಧರ್ಮಯುದ್ಧಂ, ಅಡುತ್ತ ವಾರಿಸ್‌, ಪೊಕ್ಕಿರಿ ರಾಜಾ ಇತ್ಯಾದಿ 23 ಚಿತ್ರಗಳಲ್ಲಿ ರಜನಿಯೊಂದಿಗೆ ನಾಯಕಿಯಾಗಿ ಶ್ರೀದೇವಿ ನಟಿಸಿದ್ದಳು. ಕಮಲ್‌ ಜೊತೆ 22 ಚಿತ್ರಗಳಲ್ಲಿ ನಟಿಸಿದ್ದರು. ಅವುಗಳಲ್ಲಿ ‘ಸಿಗಪ್ಪು ರೋಜಾಗಳ್‌’, ‘ಕಲ್ಯಾಣ ರಾಮನ್‌’, ‘ತಾಯಿಲ್ಲಾಮ್‌ ನಾನಿಲ್ಲೆ’, ‘ಶಂಕರ್‌ಲಾಲ್‌’, ‘ಗುರು’, ‘ವಾಳ್ವೆ ಮಾಯಂ’, ಮೊದಲಾದವು ಹೆಸರಾಂತ ಚಿತ್ರಗಳು. ಬಾಲೂ ಮಹೇಂದ್ರ ನಿರ್ದೇಶನದ ಮ್ಯಾಗ್ನಮ್‌ ಓಪಸ್‌ ಚಿತ್ರ ‘ಮೂನ್ರಾ ಪಿರೈ’ (ತೆಲುಗಿನಲ್ಲಿ ‘ವಸಂತ ಕೋಕಿಲ’, ಹಿಂದಿ ಅವತರಣಿಕೆ ‘ಪದ್ಮಾ’) ಶ್ರೀದೇವಿಗೆ ಅತ್ಯಂತ ಹೆಸರು, ಖ್ಯಾತಿ ತಂದು ಕೊಟ್ಟ ಸಿನಿಮಾ. ಸಾಕಷ್ಟು ಪ್ರಶಸ್ತಿಗಳನ್ನು ಈ ಚಿತ್ರ ಬಾಚಿಕೊಂಡಿತ್ತು. ಬುದ್ಧಿಮಾಂದ್ಯ ಹುಡುಗಿಯ ಪಾತ್ರದಲ್ಲಿ ಶ್ರೀದೇವಿಯ ಅಮೋಘ ಅಭಿನಯ ಇಡೀ ದೇಶವನ್ನೇ ಮೋಡಿಗೊಳಿಸಿತ್ತು. ಕ್ಲೈಮಾಕ್ಸ್‌ ದೃಶ್ಯಗಳಲ್ಲಂತೂ ಕಮಲ್‌ ಮತ್ತು ಶ್ರೀದೇವಿ ಜಿದ್ದಿಗೆ ಬಿದ್ದವರಂತೆ ನಟಿಸಿದ್ದರು.

1976 ರಂದು ಪೂರ್ಣಪ್ರಮಾಣದ ನಾಯಕಿಯಾಗಿ ತಮಿಳು ತೆರೆ ಪ್ರವೇಶಿಸಿದ್ದ ಶ್ರೀದೇವಿ ಆಮೇಲೆ ತಿರುಗಿ ನೋಡಬೇಕಾದ ಪ್ರಮೇಯವೇ ಬರಲಿಲ್ಲ. 1986 ರಲ್ಲಿ ರಜನಿಯೊಂದಿಗೆ ‘ನಾನ್‌ ಅಡಿಮೈ ಇಲ್ಲೆ’ ಶ್ರೀದೇವಿ ನಟಿಸಿದ್ದ ಕೊನೆಯ ಚಿತ್ರ. ಬಾಲಿವುಡ್‌ ಚಿತ್ರರಂಗದಲ್ಲಿ ಪೂರ್ತಿಯಾಗಿ ತೊಡಗಿಸಿಕೊಂಡ ನಂತರ ಖ್ಯಾತ ನಿರ್ದೇಶಕ ಬೋನಿ ಕಪೂರ್‌ರೊಂದಿಗೆ ವಿವಾಹದ ನಂತರ 2012ರಲ್ಲಿ ‘ಇಂಗ್ಲಿಷ್‌–ವಿಂಗ್ಲಿಷ್‌’ ತಮಿಳು ಅವತರಣಿಕೆಯ ಮೂಲಕ ಮತ್ತೊಮ್ಮೆ ತಮಿಳು ಪ್ರೇಕ್ಷಕರ ಮನಸೂರೆಗೊಂಡಿದ್ದರು. ಅದಾದನಂತರ 2015ರಲ್ಲಿ ವಿಜಯ್‌ ನಟಿಸಿದ ‘ಪುಲಿ’ ಚಿತ್ರದಲ್ಲೂ ಶ್ರೀದೇವಿ ರಾಜಕುಮಾರಿಯಾಗಿ ನಟಿಸಿದ್ದರೂ ಕಾರಣಾಂತರದಿಂದ ಚಿತ್ರ ಅಷ್ಟೇನೂ ಯಶಸ್ಸು ಕಾಣಲೇ ಇಲ್ಲ. ಸಿನಿಮಾದ ಅವರ ನಟನೆಗೆ ಸಾಕಷ್ಟು ಪ್ರಶಂಸೆಗಳು ದೊರೆತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT