ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಲವೇ? ಕ್ಷೇಮವೇ?

Last Updated 8 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಕುಶಲವೇ? ಕ್ಷೇಮವೇ? ಹೀಗೆ ಯಾರನ್ನಾದರೂ ಕಂಡೊಡನೆ ಅವರನ್ನೂ ಅವರ ಕುಟುಂಬದವರನ್ನೂ ಸೇರಿಸಿ ಕುಶಲಪ್ರಶ್ನೆ ಕೇಳುವುದು ವಾಡಿಕೆ.

ಕುಶಲ ಎಂದರೆ ಆರೋಗ್ಯ ಎಂದರ್ಥ. ಕ್ಷೇಮ ಎಂದರೆ ಕಾಪಾಡಿಕೊಳ್ಳು, ಉಳಿಸಿಕೊಳ್ಳು ಎಂದರ್ಥ. ಆರೋಗ್ಯವನ್ನು ಕಾಪಾಡಿಕೊಂಡಿದ್ದೀರೋ ಎಂದು ಕೇಳುವುದನ್ನು ಕುಶಲವೇ ಎನ್ನುತ್ತೇವೆ.

ನಮ್ಮ ದೇಹದ ಎಲ್ಲ ಅಂಗಾಂಗಗಳು ಪೂರಕವಾಗಿ ಕೆಲಸಮಾಡುತ್ತಾ ದೇಹ, ಇಂದ್ರಿಯ ಮನಸ್ಸುಗಳ ಅಯವ್ಯಯವನ್ನು ಸರಿಯಾಗಿ ಕಾಪಾಡಿಕೊಂಡು ತೂಗಿಸಿಕೊಂಡು ಹೋಗುವುದೇ ಆರೋಗ್ಯ; ಅದೇ ಕುಶಲ. ಈ ಬಾಂಧವ್ಯವನ್ನು ಉಳಿಸಿಕೊಂಡು ಹೋಗುವುದೇ ಆಯುಸ್ಸು. ಅದೇ ಕ್ಷೇಮ. ಕ್ಷೇಮವಾಗಿದ್ದರೆ ಪುರುಷಾರ್ಥ ಸಾಧನೆ.

ಹಾಗಾದರೆ ಕ್ಷೇಮವಾಗಿರಲು ನಾವೇನು ಮಾಡಬೇಕು?
ಹುಟ್ಟಿನಿಂದ ಸಾಮಾನ್ಯವಾಗಿ ಎಲ್ಲರೂ ಆರೋಗ್ಯವಾಗಿಯೇ ಹುಟ್ಟುವುದು. ಈ ಆರೋಗ್ಯವನ್ನು ಕಾಪಾಡುವುದು, ನಮ್ಮ ಜೀವನದ ಉದ್ದೇಶ. ಯಾವುದೇ ವಸ್ತುವಾದರೂ ಅದನ್ನು ಗಳಿಸುವುದು, ವರ್ಧಿಸುವುದು, ಕಾಪಾಡುವುದು. ಇವು ಮೂರೂ ಇದ್ದರೆ ಆ ವಸ್ತುವು ಶಾಶ್ವತವಾಗಿ ಉಳಿಯುತ್ತದೆ. ಇದರಲ್ಲಿ ಯಾವುದೊಂದು ವ್ಯತ್ಯಾಸವಾದರೂ ಆ ವಸ್ತುವಿನ ನಾಶ ಖಚಿತ. ಹಾಗೆಯೇ ಹುಟ್ಟಿನಿಂದ ಬಂದ ಆರೋಗ್ಯವನ್ನು ಉಳಿಸಿ ವರ್ಧಿಸಿ ಕೊಳ್ಳುವ ಉಪಾಯಗಳನ್ನು ನಾವು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ಇದಕ್ಕೆ ಮೊದಲನೆಯ ಹೆಜ್ಜೆ ನಮ್ಮ ದಿನಚರಿಯನ್ನು ಸರಿಯಾಗಿ ಪಾಲಿಸುವುದು.

ದಿನಚರಿ ಹೇಗಿರಬೇಕು?
ಸಮಯದಲ್ಲಿ ಏಳುವುದು. ಎಂದರೆ ಸೂರ್ಯೋದಯಕ್ಕಿಂತ ಮೊದಲು ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು. ಇದು ಪ್ರಾಣವನ್ನು ಪ್ರಚೋದಿಸುವ ಕಾಲ. ಪ್ರಾಣಸ್ಥಾನವಾದ ಶಿರಸ್ಸು, ಇಂದ್ರಿಯಗಳು, ಶಿರದಲ್ಲಿರುವ ಮೆದುಳು, ಅದರ ಅಂಗಾಂಗಳಿಗೆ ಸರಿಯಾದ ಪ್ರಾಣಶಕ್ತಿ ಲಭ್ಯವಾಗುವುದರಿಂದ ಆರೋಗ್ಯವು ಸುಲಭಸಾಧ್ಯ. ಇದು ಮೊದಲ ಹೆಜ್ಜೆ.

ಏಳುವಾಗ ಹಿಂದಿನ ದಿನ ಸೇವಿಸಿದ ಆಹಾರವು ಜೀರ್ಣವಾಗಿ ಮೈ ಹಗುರವಾಗಿದೆಯೇ ಎಂದು ಗಮನಿಸುವುದು ಮೊದಲ ಕರ್ತವ್ಯ. ಜೀರ್ಣವಾಗಿದ್ದರೆ ಎದ್ದ ಕೂಡಲೆ ಮಲಮೂತ್ರಗಳ ಪ್ರವೃತ್ತಿ ಉಂಟಾಗುತ್ತದೆ. ಇಲ್ಲದಿದ್ದರೆ ಅದು ಜೀರ್ಣವಾಗುವಂತೆ ಮಾಡಲು ಉದ್ಯುಕ್ತರಾಗಬೇಕು. ಇದಕ್ಕಾಗಿ ಯೋಗಿಗಳು ಉಷಃಪಾನದ ಕ್ರಮವನ್ನು ಅಳವಡಿಸಿ ಕೊಳ್ಳುತ್ತಾರೆ. ಇದು ಎಲ್ಲರೂ ಮಾಡಲೇಬೇಕಾದ ವಿಷಯ ಅಲ್ಲದಿದ್ದರೂ ಉಷಃಪಾನದಿಂದ ಅನುಕೂಲವೂ ಆಗುತ್ತದೆ.

ಶೌಚಕ್ರಿಯೆ ಸರಿಯಾಗಿದ್ದರೆ ಉಷಃಪಾನದ ಅಗತ್ಯವಿಲ್ಲ. ಎದ್ದ ಕೂಡಲೇ ಮಲಮೂತ್ರಗಳನ್ನು ವಿಸರ್ಜಿಸಬೇಕು. ಬಲವಂತವಾಗಿ ಪ್ರವರ್ತಿಸಬಾರದು. ಬಲವಂತ ಪ್ರವೃತ್ತಿಯು ಮೂಲವ್ಯಾಧಿ, ರಕ್ತಮೂತ್ರ, ರಕ್ತಯುಕ್ತ ಮಲ ಪ್ರವೃತ್ತಿ ಹೀಗೆ ಇನ್ನೂ ಅನೇಕ ರೋಗಗಳಿಗೆ ಕಾರಣವಾಗಬಹುದು.

ಅನಂತರ ಮುಖಶೌಚ. ಕಹಿ, ವಗರು, ಪದಾರ್ಥಗಳಿಂದ ಹಲ್ಲುಜ್ಜುವುದು ಅಥವಾ ಭತ್ತದ ಹೊಟ್ಟಿನ ಮಸಿಯೂ ಅತ್ಯಧಿಕ ಪ್ಲೋರೀನ್ ಅಂಶದಿಂದ ಕೂಡಿರುತ್ತದೆ ಎಂದು ವೈಜ್ಞಾವಿಕವಾಗಿ ಸಾಬೀತಾಗಿದೆ. ಬಾಯಿ ಮುಕ್ಕಳಿಸಲು ಬಿಸಿನೀರನ್ನು ಉಪಯೋಗಿಸಬಹುದು. ಬಾಯಿಹುಣ್ಣು, ಹಲ್ಲಿನಲ್ಲಿ ರಕ್ತ ಬರುವುದು ಇತ್ಯಾದಿ ತೊಂದರೆಗಳಿದ್ದರೆ ಮಾವು, ಜಾಲಿ, ಹೊಂಗೆ, ಆಲ ಮುಂತಾದ ವಗರುರುಚಿಯ ಮರದ ಚಕ್ಕಳದ ಕಷಾಯದಿಂದ ಬಾಯಿ ಮುಕ್ಕಳಿಸಬೇಕು. ನಾಲಿಗೆ ದೋರಗಾಗಿದ್ದರೆ ಇದರೊಡನೆ ಎಣ್ಣೆ ಅಥವಾ ತುಪ್ಪವನ್ನು ಸೇರಿಸಿ ಬಾಯಿ ಮುಕ್ಕಳಿಸಬೇಕು.

ಮುಖಪ್ರಕ್ಷಾಲನ ಎಂದರೆ ಮುಖ ತೊಳೆಯುವುದು. ಚಳಿಗಾಲದಲ್ಲಿ ಬಿಸಿನೀರಿನಲ್ಲಿಯೇ ಮುಖ ತೊಳೆಯಬೇಕು. ಬೇಸಗೆಯಲ್ಲಿ ಬೆಚ್ಚಗಿನ ನೀರಿನಿಂದಲೂ ಅಥವಾ ತಣ್ಣೀರಿನಿಂದಲೋ ಮುಖ ತೊಳೆಯಬಹುದು. ಮಳೆಗಾಲದಲ್ಲಿ ಮೇಲೆ ಹೇಳಿದ ಕಷಾಯಗಳಿಂದ ಮುಖ ತೊಳೆದರೆ ಮುಖದ ಕಾಂತಿಯು ಹೆಚ್ಚುತ್ತದೆ.

ಕಣ್ಣು ಕಿವಿ ಮೂಗಿನ ಆರೋಗ್ಯಕ್ಕಾಗಿ ಕಣ್ಣಿಗೆ ಔಷಧಿಯುಕ್ತ ಕಾಡಿಗೆ ಹಚ್ಚುವುದು, ಮೂಗಿಗೆ ಕಿವಿಗೆ ಎಣ್ಣೆ ಹಾಕುವುದು, ಇತ್ಯಾದಿಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾಡುವುದು ಸೂಕ್ತ.

ಅನಂತರ ವ್ಯಾಯಾಮ. ನಿತ್ಯ ವ್ಯಾಯಾಮವನ್ನು ಪ್ರತಿಯೊಬ್ಬರೂ ಮಾಡಲೇ ಬೇಕು. ಇದು ಜೀರ್ಣಶಕ್ತಿಯನ್ನು ವರ್ಧಿಸುವುದಲ್ಲದೆ, ಮಾಂಸಖಂಡಗಳ ಬಲವನ್ನೂ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ವ್ಯಾಯಾಮದ ನಂತರ ಚರ್ಮದಲ್ಲಿರುವ ಬೆವರಿನ ಅಂಶ, ಬೆವರಿನೊಡನೆ ಹೊರಬಂದ ಜಿಡ್ಡಿನ ಅಂಶ ಚರ್ಮಕ್ಕೆ ಅಂಟದಂತಿರಲು ಅಕ್ಕಿ, ಆಲ, ಹೊಂಗೆ ಮುಂತಾದ ಮರದ ಕೆತ್ತೆಯ ಚೂರ್ಣಗಳಿಂದ ಮೈಯನ್ನು ತಿಕ್ಕಿ ಶುಭ್ರಗೊಳಿಸಿ, ನಂತರ ಸ್ವಲ್ಪ ಎಳ್ಳೆಣ್ಣೆಯನ್ನು ಮೈಗೆ ಹಚ್ಚಿ ಸ್ನಾನ ಮಾಡುವುದರಿಂದ ಚರ್ಮರೋಗಗಳಿಂದಲೂ, ಚರ್ಮ ಒಡೆಯುವಿಕೆಯಿಂದಲೂ ಮುಕ್ತಿ ಸಿಗುತ್ತದೆ.

ಸ್ನಾನದ ನಂತರ ಮನಸ್ಸಿನ ನೆಮ್ಮದಿಗೆ ಸ್ವಲ್ಪ ಧ್ಯಾನ; ನಂತರವೇ ಆಹಾರಸೇವನೆಯನ್ನು ಮಾಡಬೇಕು. ಇದು ಬೆಳಗಿನ ದಿನಚರಿಯಾದರೆ ದೇಹ,ಮನಸ್ಸು, ಇಂದ್ರಿಯಗಳು ಸ್ವಸ್ಥವಾಗಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT