ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಲ್ ಆಹಾರ, ಟೋಟಲ್ ಆರೋಗ್ಯ

Last Updated 6 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಆಹಾರಕ್ಕೂ ಆರೋಗ್ಯಕ್ಕೂ ಇರುವ ಸಂಬಂಧ ಎಂತಹುದು ಎಂದು ನಮಗೆಲ್ಲ ಗೊತ್ತೇ ಇದೆ. ಆಹಾರವಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲೂ ಆಗದು. ಹಿರಿಯರು, ವೈದ್ಯರು ಮತ್ತು ಆಹಾರತಜ್ಞರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಆಹಾರದ ಮಹತ್ವ ಎಂಥದ್ದು ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಹೀಗಿದ್ದೂ, ದಿನನಿತ್ಯ ಸೇವಿಸುವ ಆಹಾರದ ಬಗ್ಗೆ ಹಾಗೂ ಆರೋಗ್ಯದ ಮೇಲೆ ಆಹಾರದ ಪರಿಣಾಮಗಳ ಬಗ್ಗೆ ಕೊಂಚ ತಿಳಿದುಕೊಳ್ಳುವುದು ಉತ್ತಮ.

ಆಹಾರವೆನ್ನುವುದು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ಜಾತಿ, ಧರ್ಮ, ಸಂಸ್ಕೃತಿ ಮಾತ್ರವಲ್ಲ ಭೌಗೋಳಿಕ ಅಂಶಗಳು ಇಲ್ಲಿ ಮುಖ್ಯವಾಗುತ್ತವೆ. ಉದಾಹರಣೆಗೆ, ವಿಜಯಪುರದವರು ದಿನಾಲೂ ಜೋಳದ ರೊಟ್ಟಿಯನ್ನೇ ಇಷ್ಟಪಟ್ಟರೆ ಹಾಸನದವರಿಗೆ ರಾಗಿಮುದ್ದೆಯೇ ಮುದ್ದು! ಅದೇ ರೀತಿ ಇಟಾಲಿಯನ್ನರಿಗೆ ಪಾಸ್ತಾ, ನೂಡಲ್ಸ್ ನಿತ್ಯದ ಆಹಾರವಾದರೆ, ಮಾಂಸ ಮತ್ತು ಮೆಕ್ಕೆಜೋಳದ ಪದಾರ್ಥಗಳನ್ನು ಅಮೆರಿಕನ್ನರು ನಿತ್ಯ ಸೇವಿಸುತ್ತಾರೆ. ಮೀನು ಮತ್ತು ಆಲೂ(ಚಿಪ್ಸ್) ಬ್ರಿಟಿಷರಿಗೆ ಪ್ರಿಯ.

ಇಲ್ಲಿ ಗಮನಿಸಲೇಬೇಕಾದ ಅಂಶವೇನೆಂದರೆ ಎಲ್ಲರೂ ಅವರ ಸುತ್ತಮುತ್ತಲಿನ ಪರಿಸರದಲ್ಲೇ ಬೆಳೆಸಿದ ಪದಾರ್ಥಗಳನ್ನು ಹೆಚ್ಚಿನ ಮಟ್ಟಿಗೆ ಉಪಯೋಗಿಸುತ್ತಿರುವುದು. ಇದಕ್ಕೆ ಮುಖ್ಯಕಾರಣ ಅಲ್ಲಿನ ನೆಲದ ಸತ್ವವನ್ನು ಹೀರಿಕೊಂಡು ಬೆಳೆದ ಆಹಾರಧಾನ್ಯಗಳು ಅಥವಾ ತರಕಾರಿಗಳು ವಿಶಿಷ್ಟ ರುಚಿ ಹೊಂದಿ ಅಲ್ಲಿನ ಜನರ ಆರೋಗ್ಯಕ್ಕೆ ಕಾರಣವಾಗಿರುತ್ತವೆ. ನೈಸರ್ಗಿಕವಾಗಿ ಬೆಳೆದ ಸ್ಥಳೀಯ ಆಹಾರದಲ್ಲಿ ಕಂಡು ಬರುವ ಸತ್ವ ಬೇರೆಡೆಯಿಂದ ತಂದ ಸಂಸ್ಕರಿಸಿದ ಆಹಾರದಲ್ಲಿ ಇರುವುದಿಲ್ಲ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.

ಹೊರ ರಾಜ್ಯ ಅಥವಾ ಹೊರ ದೇಶದ ಖಾದ್ಯಗಳನ್ನು ಆಗಾಗ್ಗೆ ಸವಿಯುತ್ತೇವೆ. ಆದರೆ ಅವುಗಳು ನಿತ್ಯದ ಆಹಾರ ಪದ್ಧತಿಯಲ್ಲಿ ಇರುವುದಿಲ್ಲ. ಅದೇನಿದ್ದರೂ ಜಿಹ್ವಾಚಾಪಲ್ಯಕ್ಕೆ ಮಾತ್ರ. ಪೂರ್ವಜರಿಗೆ ಪರಿಸರಕ್ಕೆ ತಕ್ಕಂಥ ಆಹಾರಧಾನ್ಯ ಬೆಳೆಸುವ, ಫಸಲು ಸಂಗ್ರಹಿಸುವ ಪರಿಣತಿ ಇತ್ತು. ಸಾಂಪ್ರದಾಯಿಕವಾಗಿ ಬೆಳೆಸಿದ ಆಹಾರ ಆರೋಗ್ಯದ ಮೇಲೆ ಬೀರುವ ಉತ್ತಮ ಅಂಶಗಳ ಬಗ್ಗೆ ಅರಿತಿದ್ದರು. ನಮ್ಮ ಕಿಚನ್‌ ಗಾರ್ಡನ್‌ ಹಾಗೂ ಟೆರೇಸ್‌ ಗಾರ್ಡನ್‌ ಪರಿಕಲ್ಪನೆಗಳು ಹುಟ್ಟಿದ್ದೇ ಇವುಗಳ ತಳಹದಿಯ ಮೇಲೆ.

ಇತ್ತೀಚಿನ ದಿನಗಳಲ್ಲಿ ಪ್ರಪಂಚ ಒಂದು ‘ಗ್ಲೋಬಲ್ ವಿಲೇಜ್’ ಆಗಿ ಪರಿವರ್ತನೆಗೊಂಡಿದೆ. ಯಾವುದೇ ವಸ್ತು ಜಗತ್ತಿನ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಕೆಲವೇ ಗಂಟೆಗಳಲ್ಲಿ ತಲುಪುವ ವ್ಯವಸ್ಥೆ ಬಂದಿದೆ. ಜತೆಗೆ ಅಧಿಕ ಇಳುವರಿ ನೀಡುವ ಹೈಬ್ರಿಡ್ ತಂತ್ರಜ್ಞಾನ ಬಂದು ರೈತರು ತಮ್ಮ ಸಾಂಪ್ರದಾಯಿಕ ಉಳುಮೆಯನ್ನು ತೊರೆದು ಹೆಚ್ಚು ದುಡ್ಡು ತರುವ, ರಾಸಾಯನಿಕಗಳನ್ನು ಹೊಂದಿರುವ ಧಾನ್ಯ-ದಿನಸಿಗಳನ್ನು ಬೆಳೆಯುವ ಅನಿವಾರ್ಯತೆ ಎದುರಾಗಿದೆ. ಇದರ ಪರಿಣಾಮ ಆರೋಗ್ಯದ ಮೇಲೂ ಆಗಿದೆ.

ಸದ್ಯಕ್ಕೆ ಅನೇಕರಲ್ಲಿ ಕಂಡುಬರುವ ಸ್ಥೂಲಕಾಯ, ಮಧುಮೇಹ, ಶ್ವಾಸಸಂಬಂಧಿ ಕಾಯಿಲೆಗಳು ಬದಲಾದ ಆಹಾರಪದ್ಧತಿಯ ಪರಿಣಾಮಗಳು. ಹಾಗಾಗಿ ಸ್ಥಳೀಯವಾಗಿ ಸಿಗುವ ತಾಜಾ ಆಹಾರದಲ್ಲಿಯೇ ಆರೋಗ್ಯದ ಗುಟ್ಟಿದೆ ಎಂಬುದನ್ನು ಮರೆಯದಿರೋಣ.

ಪ್ರಯೋಜನಗಳು

* ಸ್ಥಳೀಯ ಆಹಾರ ಸದಾಕಾಲ ಲಭ್ಯವಿರುತ್ತದೆ. ತರಕಾರಿಗಳು, ಹಣ್ಣು-ಹಂಪಲುಗಳು ಮತ್ತು ಹೈನು ಪದಾರ್ಥಗಳು ತಾಜಾಸ್ಥಿತಿಯಲ್ಲೇ ಸಿಗುತ್ತವೆ. ಅಕ್ಕಪಕ್ಕದ ಹಳ್ಳಿಯವರು, ತೋಟದವರು ಮಾರುಕಟ್ಟೆಯಲ್ಲಿ ನಿತ್ಯ ಮಾರುವುದರಿಂದ ನಾವು ಇದನ್ನು ಎಲ್ಲಿಂದಲೋ ತರಿಸುವ, ಶೇಖರಿಸುವ ಪ್ರಮೇಯವೇ ಬರುವುದಿಲ್ಲ.

* ಪ್ಯಾಕ್ ಮಾಡಿದ ತಕ್ಷಣ ತರಕಾರಿಗಳು ಮತ್ತು ಹಣ್ಣು-ಹಂಪಲುಗಳಲ್ಲಿ ಜೀವಸತ್ವಗಳು ನಾಶವಾಗತೊಡಗುತ್ತವೆ. ಇನ್ನು ಅವುಗಳನ್ನು
ಹಲವಾರು ದಿನಗಳ ನಂತರ ಸೇವಿಸಿದರೆ ಅವು ಹೇಗೆ ಪೌಷ್ಟಿಕವೂ ಮತ್ತು ಸ್ವಾದಿಷ್ಟವೂ ಆಗಿರಲು ಸಾಧ್ಯ?. ಈ ಸ್ಥಳೀಯ ಆಹಾರಗಳನ್ನು ಕೊಳ್ಳುವುದರಿಂದ ಅಲ್ಲಿನ ರೈತರಿಗೆ, ಹೊಲದಲ್ಲಿ ದುಡಿಯುವವರಿಗೆ ಆದಾಯವೂ ಸಿಗುತ್ತದೆ.

* ಇಂದಿನ ಕಾಲದ ಮುಖ್ಯ ಸವಾಲೆಂದರೆ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು (ಕಾರ್ಬನ್ ಫುಟ್ ಪ್ರಿಂಟ್) ಆದಷ್ಟು ಕಡಿಮೆ ಮಾಡುವುದು. ಆಹಾರಸಂಗ್ರಹ, ಸಾಗಾಣಿಕೆಯಲ್ಲಿ ಅನೇಕ ರೀತಿಯ ಯಂತ್ರಗಳು, ಉಪಕರಣಗಳು ಮತ್ತು ವಾಹನಗಳು ಉಪಯೋಗಿಸಲ್ಪಡುತ್ತವೆ. ಇವೆಲ್ಲಗಳಿಂದ ಹೊರಸೂಸುವ ಇಂಗಾಲದ ಡೈಆಕ್ಸೈಡ್ ವಾತಾವರಣದ ಮೇಲೆ ಅಗಾಧ ಒತ್ತಡ ಬೀರುತ್ತದೆ. ಇದನ್ನು ಕಡಿಮೆಮಾಡಲು ಉತ್ತಮ ಪರಿಹಾರವೆಂದರೆ ಆಹಾರವನ್ನು ಸ್ಥಳೀಯವಾಗೇ ಬೆಳೆದು ಅಲ್ಲಿಯೇ ಉಪಯೋಗಿಸುವುದು.

ಸವಾಲುಗಳೇನು?

ಸ್ಥಳೀಯ ಆಹಾರ ಬಳಕೆಯಲ್ಲಿ ಸವಾಲುಗಳು ಇಲ್ಲವೆಲ್ಲಂದಿಲ್ಲ. ಸ್ಥಳೀಯ ಆಹಾರದ ಮೇಲೆ ಸಂಪೂರ್ಣವಾಗಿ ಅವಲಂಬನೆಗೊಂಡರೆ ಕೊಂಚಮಟ್ಟಿಗೆ ಅನನೂಕೂಲಗಳಿವೆ. ನಿತ್ಯದ ಅಡುಗೆಗೆ ಬೇಕಾಗುವ ಪ್ರತಿಯೊಂದು ಸಾಮಗ್ರಿಯೂ ನಮ್ಮಲ್ಲೇ ಬೆಳೆಯಲು ಸಾಧ್ಯವಿಲ್ಲ. ಅವಾಗ ಅಂಥ ಪದಾರ್ಥಗಳನ್ನು ಹೊರಗಡೆಯಿಂದ ತರಿಸುವುದು ಅನಿವಾರ್ಯ. ಇಲ್ಲದಿದ್ದರೆ ಆಹಾರದಲ್ಲಿ ಏಕತಾನತೆ ಕಾಡುತ್ತದೆ. ಸ್ಥಳೀಯ ಆಹಾರ ಸ್ವಲ್ಪ ದುಬಾರಿಯೆನ್ನಬಹುದು. ಏಕೆಂದರೆ ಇಲ್ಲಿ ಇಳುವರಿ ಕೊಂಚ ಕಡಿಮೆ. ಕೆಲರೈತರಷ್ಟೇ ಕಷ್ಟಪಟ್ಟು ಓಡಾಡಿ ಸಾಗುವಳಿ ಮಾಡುವುದರಿಂದ ಅವರಿಗೆ ತಗಲುವ ವೆಚ್ಚ ಕೂಡ ಜಾಸ್ತಿಯೇ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT