ಮಂಗಳವಾರ, ಜೂನ್ 28, 2022
28 °C

ಅಪರೂಪದ ಕಾಯಿಲೆ ಜಾಗೃತಿಗೆ ‘ರೇಸ್‌ ಫಾರ್ 7’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಪರೂಪದ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸಲು ಭಾರತೀಯ ಅಪರೂಪದ ಕಾಯಿಲೆ ಸಂಸ್ಥೆ (ಓಆರ್‌ಡಿಐ) ‘ರೇಸ್‌ಫಾರ್‌ 7’ ನಡಿಗೆ ಮತ್ತು ಓಟ ಆಯೋಜಿಸಿದೆ. 

‘ರೇಸ್‌ ಫಾರ್‌ 7’ ಅಭಿಯಾನದ ಏಳು ಸಂಖ್ಯೆ ಏಳು ಸಾವಿರ ಅಪರೂಪದ ಕಾಯಿಲೆಗಳನ್ನು ಪ್ರತಿನಿಧಿಸುತ್ತದೆ. ಈ ಕಾಯಿಲೆಗಳು ಗೋಚರಿಸಲು ಕನಿಷ್ಠ ಏಳು ವರ್ಷ ಬೇಕಾಗುತ್ತದೆ. ಜಾಗೃತಿ ನಡಿಗೆ ಮತ್ತು ಓಟದಲ್ಲಿ ಏಳು ಕಿ.ಮೀಟರ್‌ ದೂರವನ್ನು ಏಳು ಸಾವಿರ ಜನರು ಕ್ರಮಿಸಲಿದ್ದಾರೆ.

ಐದನೇ ಆವೃತ್ತಿ ಜಾಗೃತಿ ನಡಿಗೆ ಫೆಬ್ರುವರಿ 23ರಂದು ಬೆಳಗ್ಗೆ 6.30ಕ್ಕೆ ಯು.ಬಿ. ಸಿಟಿ ಎದುರಿನ ಸೇಂಟ್‌ ಜೋಸೆಫ್‌ ಇಂಡಿಯನ್‌ ಹೈಸ್ಕೂಲ್‌ ಮೈದಾನದಿಂದ ಆರಂಭವಾಗಲಿದೆ. 

ಫೆಬ್ರುವರಿ ಕೊನೆಯ ವಾರ ‘ರೇಸ್‌ಫಾರ್‌ 7’ ಅಪರೂಪದ ಕಾಯಿಲೆ ದಿನ ಎಂದು ಆಚರಿಸಲಾಗುತ್ತದೆ. ‘ಅಪರೂಪದ ಕಾಯಿಲೆಯನ್ನು ಅಪರೂಪವಾಗಿ ಮರು ಹೊಂದಿಸುವುದು’ ಈ ವರ್ಷದ ಧ್ಯೇಯ ವಾಕ್ಯ ಮತ್ತು ‘ಅಪರೂಪ ಹಲವು, ಅಪರೂಪ ಸದೃಢ ಮತ್ತು ಅಪರೂಪ ಹೆಮ್ಮೆ’ ಎಂಬ ಸಂದೇಶ ಸಾರಲಾಗುತ್ತಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ದಾವಣಗೆರೆ (ಫೆ.29) ಮತ್ತು ಮೈಸೂರು (ಮಾರ್ಚ್‌ 8) ಮತ್ತು ಫೆಬ್ರುವರಿ/ ಮಾರ್ಚ್‌ನಲ್ಲಿ ದೇಶದ 20 ನಗರಗಳಲ್ಲಿ ‘ರೇಸ್‌ಫಾರ್‌ 7’ ಜಾಗೃತಿ ನಡಿಗೆ ಆಯೋಜಿಸಲಾಗಿದೆ. 

ಇಂಥ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳು, ಮಹಿಳೆಯರು,ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ಸುದ್ದಿಗೋಷ್ಠಿಯಲ್ಲಿ ತಮ್ಮ ಅನುಭವ ಹಂಚಿಕೊಂಡರು.

ಜಾಗೃತಿ ನಡಿಗೆ ಮತ್ತು ಓಟದಲ್ಲಿ ಪಾಲ್ಗೊಳ್ಳಲು ಬಯಸುವ ಆಸಕ್ತರು http://registration.racefor7.com/ ಇಲ್ಲಿ ಹೆಸರು ನೋಂದಣಿ ಮಾಡಿಸಿಕೊಳ್ಳಬಹುದು.

‘ಅಪರೂಪ ಎಂದರೆ ಭಯ ಬೀಳಬೇಕಿಲ್ಲ’

‘ಅಪರೂಪ ಎನ್ನುವುದು ಯಾವಾಗಲೋ ಅಲ್ಲ, ಅದು ದೂರದಲ್ಲಿ ಇಲ್ಲ ಮತ್ತು ಅದು ಅಂದುಕೊಂಡಷ್ಟು ತೀರಾ ಅಪರೂಪವಲ್ಲ. ಅದು ಭಯವೂ ಅಲ್ಲ ಎಂದು ಜನರಿಗೆ ತಿಳಿಸುವ ಪ್ರಯತ್ನವೇ ಜಾಗೃತಿ ನಡಿಗೆ ಮತ್ತು ಓಟ’ ಎಂದು ಓಆರ್‌ಡಿಐ ಸಹ ಸಂಸ್ಥಾಪಕ ಪ್ರಸನ್ನ ಶಿರೋಳ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಪರೂಪದ ಕಾಯಿಲೆಗಳ ಬಗ್ಗೆ ತಿಳಿಯಲು ಮತ್ತು ಇಂಥ ರೋಗಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲು ಜಾಗೃತಿ ಕಾರ್ಯಕ್ರಮ ನೆರವಾಗಲಿದೆ. ಕೆಲವು ವರ್ಷಗಳಿಂದ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯುತ್ತಿದೆ. ರೋಗಕ್ಕೆ ಚಿಕಿತ್ಸೆ ಇಲ್ಲದ ಕಾರಣ ಸಕಾರಾತ್ಮಕ ನಿರ್ವಹಣೆಯೊಂದೇ ಸದ್ಯದ ಮಾರ್ಗ ಎಂದು ಡಾ. ಮೀನಾಕ್ಷಿ ಭಟ್‌ ಹೇಳಿದರು.

ದೇಶದ ಪ್ರತಿ ಐವರಲ್ಲಿ ಒಬ್ಬರು ಇಂಥ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.ಇಂಥ ರೋಗ ಭಾದಿಸುತ್ತಿದೆ ಎಂದು ಅರಿವಿಗೆ ಬರುವುದರೊಳಗೆ ಹಲವು ವರ್ಷ ಉರುಳಿ ಹೋಗಿರುತ್ತವೆ ಎಂದು ಡಾ. ಅನಿತಾ ತಿಳಿಸಿದರು. ರೋಗ ಪತ್ತೆ ಕಷ್ಟ. ಚಿಕಿತ್ಸೆ ಬಹಳ ದುಬಾರಿ. ಬಹುತೇಕ ಅಪರೂಪದ ರೋಗಗಳಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದೇ ಸಮಸ್ಯೆ ಬಿಗಡಾಯಿಸಲು ಕಾರಣ ಎಂದು ತಿಳಿಸಿದರು.

ಮೂರನೇ ಸ್ಥಾನದಲ್ಲಿ ಭಾರತ
* ಅಪರೂಪದ ಕಾಯಿಲೆಗಳ ಪಟ್ಟಿಯಲ್ಲಿ ಭಾರತಕ್ಕೆ ಮೂರನೇ ಸ್ಥಾನ
* ಭಾರತದಲ್ಲಿ ಏಳು ಕೋಟಿ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದು ಥಾಯ್ಲೆಂಡ್‌ ಜನಸಂಖ್ಯೆಗೆ ಸಮ
* ಈ ಕಾಯಿಲೆ ಪತ್ತೆಯಾಗಲು ಕನಿಷ್ಠ ಏಳು ವರ್ಷಬೇಕು
* ಈ ಕಾಯಿಲೆಗಳು ಬಹುತೇಕ ಆನುವಂಶಿಕ
* ಬಹಳಷ್ಟು ಕಾಯಿಲೆಗಳಿಗೆ ಭಾರತದಲ್ಲಿ ಚಿಕಿತ್ಸೆ ಲಭ್ಯ ಇಲ್ಲ. ಇರುವ ಚಿಕಿತ್ಸೆಯೂ ಭಾರಿ ದುಬಾರಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು