ಸೋಮವಾರ, ಆಗಸ್ಟ್ 8, 2022
24 °C

ಆಸನ, ಆಟ: ಅವಘಡಕ್ಕೆ ಆಹ್ವಾನವಾಗದಿರಲಿ

ಎಸ್. ಎನ್. ಓಂಕಾರ್ Updated:

ಅಕ್ಷರ ಗಾತ್ರ : | |

Prajavani

ಆಸನಗಳಾಗಲಿ, ಆಟಗಳಾಗಲಿ, ಯಾವುದೇ ವ್ಯಾಯಾಮ ವಿಧಾನಗಳಾಗಲಿ, ಅಭ್ಯಾಸ ಮಾಡಬೇಕಾದರೆ ಪ್ರಮುಖವಾಗಿ ಈ ಮೂರನ್ನು ಗಮನಿಸಬೇಕು:

1. ದೇಹಧರ್ಮ

2. ವಯೋಧರ್ಮ

3. ಮನೋಧರ್ಮ

1. ದೇಹಧರ್ಮ: ದೇಹಧರ್ಮವೆಂದರೆ ನಮ್ಮ ದೇಹದ ವಿವಿಧ ಅಂಗಗಳ ಕಾರ್ಯಕ್ಷಮತೆಯ ಅರಿವು ಇರುವುದು.
ನಮ್ಮ ದೇಹಕ್ಕೆ ಒಗ್ಗುವಂತಹ ಕ್ರಮಗಳನ್ನು ಹಂತಹಂತವಾಗಿ ಅಳವಡಿಸಿಕೊಳ್ಳಬೇಕು. ಏಕಾಏಕಿ ದೇಹವನ್ನು ಅತಿಯಾದ ದಂಡನೆಗೆ ಒಳಪಡಿಸಕೂಡದು. ದೇಹದ ಕಾರ್ಯಕ್ಷಮತೆಯನ್ನು, ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ವರ್ಷಕೊಮ್ಮೆಯಾದರೂ ಮಾಡಿಸಿಕೊಳ್ಳುವ ಮೂಲಕ ದೃಢಪಡಿಸಿಕೊಳ್ಳಬೇಕು.

2. ವಯೋಧರ್ಮ: ನಾವು ಅಳವಡಿಸಿಕೊಳ್ಳುವ ವಿಧಾನಗಳು ವಯೋಧರ್ಮಕ್ಕೆ ಅನುಗುಣವಾಗಿರಬೇಕು. ವಯಸ್ಸಾದಂತೆಲ್ಲ ದೇಹವು ಅನೇಕ ಬದಲಾವಣೆಗೆ ಒಳಗಾಗುತ್ತದೆ. ಅದಕ್ಕೆ ತಕ್ಕ ಹಾಗೆ ನಮ್ಮ ಅಭ್ಯಾಸಗಳನ್ನು ಹೊಂದಿಸಿಕೊಳ್ಳಬೇಕು.

3. ಮನೋಧರ್ಮ: ನಾವು ಮಾಡುವ ಎಲ್ಲಾ ಚಟುವಟಿಕೆಗಳಲ್ಲಿ ಮನಸ್ಸಿನ ಪಾತ್ರ ಮಹತ್ತರವಾಗಿರುತ್ತದೆ. ನಾವು ಆಯ್ದುಕೊಳ್ಳುವ ಚಟುವಟಿಕೆಗಳು ಮನಸ್ಸಿಗೆ ಹಿತಕರವಾಗಿರುವಂತಹದ್ದಾಗಿರಬೇಕೇ ಹೊರತು ಬಲವಂಥದ್ದಾಗಿರಬಾರದು.

ಈ ಮೂರೂ ಧರ್ಮಗಳನ್ನು ಗೌರವಿಸಿ, ವ್ಯಾಯಾಮ ವಿಧಾನಗಳು ಹಾಗೂ ಅವುಗಳ ಅಭ್ಯಾಸದ ಮಟ್ಟಗಳಗಳನ್ನು ನಿರ್ಧರಿಸಿಕೊಳ್ಳಬೇಕು. ಇದೆಲ್ಲದರ ಜೊತೆ ಯಾವುದೇ ಚಟುವಟಿಕೆಗಳನ್ನು ಪ್ರಾರಂಭಿಸುವುದಕ್ಕೆ ಮುನ್ನ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.

ಉದಾಹರಣೆಗೆ, ಯಾವುದೇ ರೀತಿಯ ಯೋಗಾಸನಗಳ ಅಭ್ಯಾಸ ಮಾಡಬೇಕಾದರೆ ಕೆಲವು ಪೂರ್ವಸಿದ್ಧತಾ ಆಸನಗಳನ್ನು ಮಾಡಿ ನಮ್ಮ ದೇಹದ ಪ್ರಮುಖ ಸ್ಥಿರತೆಯ ಸ್ನಾಯುಗಳನ್ನು ಸಚೇತನಗೊಳಿಸಬೇಕು. ವಿಶೇಷವಾಗಿ ಸ್ನಾಯುಗಳ ಸಮೂಹ ನಮ್ಮ ಪೃಷ್ಠ, ಸೊಂಟ, ಅಸ್ತಿಕುಹರ ಹಾಗೂ ಉದರದ ಭಾಗಗಳಲ್ಲಿ ಇರುತ್ತದೆ. ಅಂತಹ ಕೆಲವು ಆಸನಗಳನ್ನು ಇಲ್ಲಿ ತೋರಿಸಲಾಗಿದೆ (ಚಿತ್ರಗಳನ್ನು ನೋಡಿ). ಈ ಆಸನಗಳನ್ನು ಆಟ ಆಡುವ ಮುನ್ನ, ಓಟದ ಮುನ್ನ, ನಡಿಗೆಯ ಮುನ್ನ ಅಳವಡಿಸಿಕೊಳ್ಳುವುದು ಉತ್ತಮ.

ಇದರೊಂದಿಗೆ ನಾವು ಆಳವಡಿಸಿಕೊಳ್ಳುವ ವಿಧಾನಗಳನ್ನು ಹಂತಹಂತವಾಗಿ ಅಭ್ಯಾಸ ಮಾಡಬೇಕು. ಪತಂಜಲಿಗಳು ಹೇಳುವಂತೆ ಅದು –

1. ದೀರ್ಘಕಾಲೀನವಾಗಿರಬೇಕು

2. ನಿರಂತರವಾಗಿರಬೇಕು

3. ಉತ್ಸಾಹಯುಕ್ತ ಮನಸ್ಸಿನಿಂದ ಮಾಡಬೇಕು

ಯೋಗಾಭ್ಯಾಸಿಗಳ ಸಂಖ್ಯೆ ಗಣನೀಯವಾಗಿ ಏರುತ್ತಿರುವಂತೆಯೇ ಇದರ ಸುರಕ್ಷತೆಯ ಬಗ್ಗೆಯೂ ಪ್ರಶ್ನೆಗಳು ಏಳುತ್ತಿವೆ. ಇತ್ತೀಚೆಗೆ ಯೊಗವನ್ನು ಚಿಕಿತ್ಸಾ ಪದ್ಧತಿಯಾಗಿ ಬಳಸುತ್ತಿರುವುದು ಇಂತಹ ಅನುಮಾನಗಳಿಗೆ ಕಾರಣವಾಗಿರುತ್ತದೆ. ಯೋಗ ಅಭ್ಯಾಸದಿಂದ ಉಂಟಾಗುವ ಅವಘಡಗಳ ಕುರಿತಾಗಿ ಅನೇಕ ಸಂಶೋಧನಾ ಲೇಖನಗಳು ಅಂತರ ರಾಷ್ಟ್ರೀಯ ವಿಜ್ಞಾನ ನಿಯತಕಾಲಿಕಗಳಲ್ಲಿ ಪ್ರಕಟಗೊಳ್ಳುತ್ತಿವೆ. ಉದಾಹರಣೆಗೆ: Cramer, H., Quinker, D., Schumann, D. et al. Adverse effects of yoga: a national cross-sectional survey. BMC Complement Altern Med 19, 190 (2019). https://doi.org/10.1186/s12906-019-2612-7

ಇಂತಹ ಅವಘಡಗಳಿಂದ ಜಿಮ್‍ಗಳು ಕೂಡ ಹೊರತಾಗಿಲ್ಲ.

ನೆನಪಿನಲ್ಲಿಡಲೇಬೇಕಾದ ಅಂಶಗಳು

* ಹೊರಾಂಗಣದಲ್ಲಿ ಅಭ್ಯಾಸ ಮಾಡುವವರು ವಾತಾವರಣದ ಬಗ್ಗೆ ಗಮನವಿಡುವುದು ಅತ್ಯವಶ್ಯಕ.

* ಇಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಯಾಮದ ಅನೇಕ ಚಿತ್ರಣಗಳು ಮೂಡಿಬರುತ್ತಿರುತ್ತವೆ. ಸ್ಪಷ್ಟವಾದ ಅರಿವಿಲ್ಲದೆ ಅವುಗಳನ್ನು ಅಭ್ಯಾಸ ಮಾಡಬಾರದು.

* ರೋಗನಿವಾರಕ ಕ್ರಮಗಳು ಆಗಾಗ ಅಂತರ್ಜಾಲ ಮಾಧ್ಯಮದಲ್ಲಿ ಕಾಣಸಿಗುತ್ತವೆ. ವೈದ್ಯರ ಸಲಹೆ ಇಲ್ಲದೇ ಅವುಗಳನ್ನು ಅಳವಡಿಸಿಕೊಳ್ಳಬಾರದು.

* ಆಹಾರಕ್ರಮಗಳ ಬಗ್ಗೆ ಗಮನವಿರಲಿ. ಅನೇಕ ಅವೈಜ್ಞಾನಿಕ ಆಹಾರ ನಿಯಂತ್ರಣ ಪದ್ಧತಿಗಳು ಹೇರಳವಾಗಿ ಲಭ್ಯವಿರುತ್ತದೆ. ಇವುಗಳ ಬಗ್ಗೆ ಎಚ್ಚರವಿರಲಿ.

* ಬಳ್ಳಿಯಂತೆ ತೆಳುಕಾಯದವರು (ಜೀರೋ ಸೈಜ್‌) ಆಗಬೇಕೆಂಬ ಅನಗತ್ಯ ಕೃತಕ ಒತ್ತಡಕ್ಕೆ ಒಳಗಾಗಬೇಡಿ. ದೇಹದ ಗಾತ್ರ ನಮ್ಮ ಪ್ರಕೃತಿಯನ್ನು ಅವಲಂಬಿಸಿರುತ್ತದೆ. ಎಲ್ಲರೂ ತೆಳುವಾಗಬೇಕೆಂಬ ಆಸೆ ಬೇಡ. ಸ್ಥೂಲಕಾಯದವರೂ ಆಹಾರ ಮತ್ತು ವ್ಯಾಯಾಮ ವಿಧಾನಗಳನ್ನು ನುರಿತ ಪರಿಣತರ ಸಲಹೆಯ ಮೇರೆಗೆ ಅಳವಡಿಸಿಕೊಳ್ಳಬೇಕು.

* ಸಪ್ರಮಾಣದ ವಿಶ್ರಾಂತಿಯ ಕಡೆಗೂ ಗಮನ ಕೊಡಬೇಕು.

* ಆಹಾರ ಮತ್ತು ವ್ಯಾಯಾಮಗಳಲ್ಲಿ ನೆನಪಿಡಬೇಕಾದ ಸತ್ಯ: ‘ಅತಿಯಾದರೆ ಅಮೃತವೂ ವಿಷ’.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು