ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಯಲ್ಲಿ ಬೆಚ್ಚಗಿರಿ

Last Updated 13 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಚಳಿಗಾಲ ಬಂತೆಂದರೆ ಹಿರಿಯ ನಾಗರಿಕರು ‘ಚಳಿಗೆ ಮೂಳೆ ಎಲ್ಲ ಹಿಡಿದುಕೊಳ್ಳುತ್ತೆ; ನೋವು ಹೆಚ್ಚಾಗುತ್ತೆ’ ಎಂದು ಗೊಣಗುವುದು ಸಾಮಾನ್ಯ. ಆದರೆ ಈಗೀಗ ವಯಸ್ಸಿನ ಅಂತರವಿಲ್ಲದೇ ಎಲ್ಲರನ್ನೂ ಮೂಳೆ-ಕೀಲಿನ ತೊಂದರೆ ಕಾಡುತ್ತಿದೆ. ಬೆಳಿಗ್ಗೆಯಾದರೆ ಕೀಲುಗಳ ಬಿಗಿತ, ಸಂಜೆಯಾದೊಡನೆ ಕಾಲಿನಲ್ಲಿ ಸೆಳೆತ. ಇದು ಚಳಿಗಾಲದ ಕಥೆ. ಮೂಳೆ–ಕೀಲುಗಳಿಗೆ ಸಂಬಂಧಪಟ್ಟ ಸಮಸ್ಯೆಗಳು ಅತಿ ಹೆಚ್ಚಾಗಿ ಕಾಣಿಸಿಕೊಳ್ಳುವುದು ಚಳಿಗಾಲದಲ್ಲಿ!

ಚಳಿಗಾಲದಲ್ಲಿ ಮೂಳೆ-ಕೀಲುಗಳ ಬಿಗಿತ-ನೋವು ಹೆಚ್ಚಾಗಲು ಕಾರಣವಿದೆ. ನಮ್ಮ ದೇಹದೊಳಗೆ ನಡೆಯುವ ಆಂತರಿಕ ಕ್ರಿಯೆಗಳು ದೇಹಕ್ಕೆ ಸಿಗುವ ಸೂರ್ಯನ ಬೆಳಕನ್ನು ಅವಲಂಬಿಸಿದೆ. ಋತುಗಳು ಬದಲಾದಂತೆ ಸೂರ್ಯನ ಬೆಳಕಿನಲ್ಲೂ ವ್ಯತ್ಯಾಸವಾಗುತ್ತದೆ. ಚಳಿಗಾಲದಲ್ಲಿ ಭೂಮಿಯಿಂದ ಸೂರ್ಯ ದೂರವಿರುವ ಕಾರಣ ಬೆಳಕಿನ ಪ್ರಮಾಣ ಮತ್ತು ಪ್ರಖರತೆ ಕಡಿಮೆ. ಹೀಗಾಗಿ ದೇಹಕ್ಕೆ ಸಿಗುವ ಸೂರ್ಯನ ಬೆಳಕು ಕಡಿಮೆಯಾಗಿ ಆ ಮೂಲಕ ಸಿಗುವ ವಿಟಮಿನ್ ಡಿ ಪ್ರಮಾಣವೂ ಅಲ್ಪ. ಮೂಳೆಗಳ ಆರೋಗ್ಯಕ್ಕೆ ಕಾರಣವಾದ ವಿಟಮಿನ್ ಡಿ ಕೊರತೆಯಾಗಿ ಮೂಳೆ ದುರ್ಬಲವಾಗುತ್ತದೆ. ಇದಲ್ಲದೇ ಚಳಿಗಾಲದಲ್ಲಿ ಸುತ್ತಲಿನ ವಾತಾವರಣದ ಒತ್ತಡ ತಗ್ಗಿ, ದೇಹದ ಒಳಗಿನ ಒತ್ತಡ ನರಗಳ ಮೇಲೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ನೋವಿನ ತೀವ್ರತೆ ಹೆಚ್ಚು. ಇದರೊಂದಿಗೆ ತಾಪಮಾನ ತೀವ್ರ ಇಳಿಕೆಯಾದಾಗ ಕೀಲುಗಳ ಒಳಗಿನ ದ್ರವ ಸ್ನಿಗ್ಧವಾಗಬಹುದು. ಇದು ಕೀಲುಗಳ ಚಲನೆಗೆ ಅಡ್ಡಿಯಾಗುತ್ತದೆ.

ಕೆಲವು ಸಲಹೆಗಳು

ವ್ಯಾಯಾಮ: ಕೊರೆಯುವ ಚಳಿಗೆ ವ್ಯಾಯಾಮ ಮಾಡುವುದಕ್ಕಿಂತ ಬೆಚ್ಚಗೆ ಮಲಗುವುದೇ ಸುಖ ಎನ್ನಿಸುವುದು ಸಹಜವೇ! ಆದರೆ ದೈಹಿಕ ಚಟುವಟಿಕೆ ಇದ್ದಾಗ ಮಾತ್ರ ಕೀಲುಗಳ ಚಲನೆಯಾಗುತ್ತದೆ; ಅವನ್ನು ಆಗ ಸುಲಭವಾಗಿ ಬಗ್ಗಿಸಬಹುದು. ಚಳಿಗಾಲದಲ್ಲಿ ವ್ಯಾಯಾಮ ಮಾಡುವುದು ಇಡೀ ದೇಹಕ್ಕೆ ರಕ್ತಚಲನೆಯನ್ನು ಹೆಚ್ಚಿಸುವ ಉತ್ತಮ ಮಾರ್ಗ. ಚಳಿ ಹೆಚ್ಚಾದಂತೆ ರಕ್ತನಾಳಗಳು ಸಂಕುಚನಗೊಳ್ಳುತ್ತವೆ. ಮಹತ್ವದ ಅಂಗಗಳಾದ ಹೃದಯ, ಶ್ವಾಸಕೋಶ, ಮೆದುಳಿಗೆ ರಕ್ತಸಂಚಾರ ಪೂರೈಸುವ ಸಲುವಾಗಿ ಪರಿಧಿಯಲ್ಲಿರುವ ಕೈಕಾಲುಗಳಿಗೆ ರಕ್ತಚಲನೆ ಕಡಿಮೆಯಾಗುತ್ತದೆ. ಹೀಗಾದಾಗ ಮೂಳೆಗಳಲ್ಲಿ ಬಿಗಿತ-ನೋವು ಹೆಚ್ಚು. ವ್ಯಾಯಾಮ ಮಾಡಿದಾಗ ರಕ್ತಸಂಚಾರ ಹೆಚ್ಚಿ ಬಿಗಿತ ಕಡಿಮೆಯಾಗುತ್ತದೆ. ಹಿರಿಯರಲ್ಲಿ ವ್ಯಾಯಾಮದಿಂದ ಕೈ-ಕಾಲುಗಳು ಮತ್ತು ಮೆದುಳಿನ ಹೊಂದಾಣಿಕೆಯೂ ಹೆಚ್ಚುತ್ತದೆ. ಮೂಳೆಯ ಸಾಂದ್ರತೆ ಹೆಚ್ಚಿಸಲು, ಅಸ್ಥಿರಂಧ್ರತೆ ತಡೆಯಲು ವ್ಯಾಯಾಮ ಚಳಿಗಾಲದಲ್ಲೂ ಕಡ್ಡಾಯ!

ಬಿಸಿಲು: ಕಿಟಕಿ-ಬಾಗಿಲು ಭದ್ರ ಮಾಡಿ, ದಪ್ಪ ಸ್ವೆಟರ್ ಹಾಕಿ ಮನೆಯೊಳಗೆ ಕುಳಿತರೆ ಚಳಿ ಕಡಿಮೆಯಾದರೂ ಮೂಳೆ ದುರ್ಬಲವಾಗುವುದು ಖಂಡಿತ! ಸನ್‍ಶೈನ್ ವಿಟಮಿನ್ ಎಂದೇ ಕರೆಯಲಾಗುವ ವಿಟಮಿನ್ ಡಿ ದೇಹದ ಚಯಾಪಚಯ ಕ್ರಿಯೆ, ರೋಗನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆ ಮೂಳೆಗಳನ್ನೂ ದೃಢವಾಗಿಸುತ್ತದೆ. ಬೆಳಿಗ್ಗೆ ಹತ್ತರಿಂದ ಮಧ್ಯಾಹ್ನ ಮೂರರವರೆಗೆ ಚಳಿಗಾಲದಲ್ಲಿ ಸೂರ್ಯನ ಬಿಸಿಲು ಪ್ರಖರವಾಗಿದ್ದು ವಾರಕ್ಕೆರಡು ದಿನವಾದರೂ ಒಂದು ತಾಸು ಆ ಬಿಸಿಲಿಗೆ ಮೈ ಒಡ್ಡುವುದು ಒಳ್ಳೆಯದು.

ಬೆಚ್ಚನೆಯ ಉಡುಪು–ಬಿಸಿನೀರ ಸ್ನಾನ: ಚಳಿಗಾಲದಲ್ಲಿ ಬೆಚ್ಚನೆಯ ಉಣ್ಣೆಯ ಉಡುಪು ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತದೆ. ದೇಹ ಬೆಚ್ಚಗಿದ್ದಷ್ಟೂ ಮೂಳೆ-ಕೀಲುಗಳ ಮೇಲೆ ಚಳಿಯ ಪ್ರಭಾವ ಕಡಿಮೆಯಾಗುತ್ತದೆ. ಅತಿ ದಪ್ಪದ ಒಂದೇ ಬಟ್ಟೆಗಿಂತ ಪದರ ಪದರಗಳಾಗಿ ಬಟ್ಟೆ ಧರಿಸಿದಾಗ ದೇಹದಿಂದ ಉಷ್ಣತೆ ಹೊರಹೋಗುವ ಸಾಧ್ಯತೆ ಕಡಿಮೆಯಾಗುತ್ತದೆ. ಚಳಿಗಾಲದಲ್ಲಿ ದಿನಕ್ಕೊಮ್ಮೆಯಾದರೂ ಮೈಗೆ ಹಿತವೆನಿಸುವಷ್ಟು ಬಿಸಿನೀರಿನ ಸ್ನಾನ ಮಾಡಬೇಕು; ಏಕೆಂದರೆ ಕೀಲುಗಳ ಬಿಗಿತವನ್ನು ಬಿಸಿನೀರು ಕಡಿಮೆ ಮಾಡುತ್ತದೆ.

ಆಹಾರ: ಚಳಿಗಾಲದಲ್ಲಿ ಹಸಿವು ಹೆಚ್ಚು. ಕರಿದ, ಮಸಾಲೆಯುಕ್ತ ಆಹಾರ ಬಾಯಿಗೆ ರುಚಿ ಎನಿಸಿದರೂ ಆಹಾರ‌ಸೇವನೆ ಬಗ್ಗೆ ಗಮನವಿರಲಿ. ರಜೆ-ಹಬ್ಬ-ಹೊಸವರ್ಷ-ಪ್ರವಾಸ ಹೀಗೆ ಚಳಿಗಾಲದಲ್ಲಿ ತೂಕ ಹೆಚ್ಚುವುದು ಸಾಮಾನ್ಯ. ಆದರೆ ತೂಕ ಹೆಚ್ಚಾದಷ್ಟೂ ದೇಹದ ಭಾರ ಹೊರುವ ಮೂಳೆ-ಕೀಲುಗಳ ಮೇಲೆ ಹೊರೆ ಹೆಚ್ಚು. ಹಾಗಾಗಿ ತೂಕ ನಿಯಂತ್ರಣ ಮುಖ್ಯ.

ಮೂಳೆಗಳು ಸದೃಢವಾಗಲು ಕ್ಯಾಲ್ಶಿಯಮ್ ಬೇಕು. ಈ ಕ್ಯಾಲ್ಶಿಯಮ್ ಹಾಲು, ಮೊಸರು, ಬಾದಾಮಿ, ಒಣಗಿದ ಹಣ್ಣು, ದ್ವಿದಳ ಧಾನ್ಯಗಳಲ್ಲಿ ಹೇರಳವಾಗಿವೆ. ಇದರೊಂದಿಗೆ ಮೂಳೆಗಳು ಕ್ಯಾಲ್ಶಿಯಮ್ ಹೀರಿಕೊಳ್ಳಲು ಮೂರು ವಿಟಮಿನ್ ಗಳು (ಡಿ, ಕೆ ಮತ್ತು ಸಿ) ಅವಶ್ಯಕ. ಇವುಗಳಲ್ಲಿ ವಿಟಮಿನ್ ಡಿ - ಸಿಗಡಿ ಮೀನು, ಮೊಟ್ಟೆಯ ಹಳದಿ ಭಾಗ, ಹಾಲು ಮತ್ತು ಚೀಸ್; ವಿಟಮಿನ್ ಕೆ - ಹಸಿರುಸೊಪ್ಪು ಮತ್ತು ತರಕಾರಿಗಳಾದ ಪಾಲಕ್, ಎಲೆಕೋಸು, ಬ್ರೋಕೋಲಿ; ವಿಟಮಿನ್ ಸಿ - ಕಿತ್ತಳೆ, ಲಿಂಬೆ, ಕಿವಿ, ಸ್ಟ್ರಾಬೆರಿ ಹಣ್ಣಿನಲ್ಲಿ ಅಧಿಕವಾಗಿರುತ್ತದೆ. ಇವೆಲ್ಲವೂ ಸೇರಿದ ಹಿತಮಿತ ಸಮತೋಲನ ಆಹಾರ ಅನುಸರಿಸಬೇಕು.

ನೀರು: ಚಳಿ ಎಂದು ಈ ಸಮಯದಲ್ಲಿ ನೀರು ಕುಡಿಯುವ ಪ್ರಮಾಣ ಕಡಿಮೆಯಾಗುತ್ತದೆ. ನೀರು ಕಡಿಮೆಯಾಗಿ ನಿರ್ಜಲೀಕರಣವಾದಾಗ ಕೀಲುಗಳಲ್ಲಿರುವ ದ್ರವವೂ ಕಡಿಮೆಯಾಗಿ ಊತ, ನೋವು ಇರಬಹುದು. ಕೀಲುಗಳಲ್ಲಿರುವ ಸೈನೋವಿಯಲ್ ದ್ರವದ ಉತ್ಪಾದನೆಗೆ ನೀರು ಅಗತ್ಯ. ಆದ್ದರಿಂದ ಅಗತ್ಯವಿದ್ದಷ್ಟು ನೀರು ಕುಡಿಯುವುದನ್ನು ಮರೆಯಬಾರದು.

ಸರಿಯಾದ ಭಂಗಿ: ನಾವು ಕೂರುವ-ನಿಲ್ಲುವ-ಭಾರ ಎತ್ತುವ ರೀತಿ ನಮ್ಮ ಮೂಳೆಗಳ ಸಮಸ್ಯೆಗೆ ಕಾರಣವಾಗಬಹುದು. ಚಳಿಗಾಲದಲ್ಲಿ ಎಲ್ಲೂ ಹೊರಗೆ ಹೋಗದೇ ಮನೆಯಲ್ಲೇ ಬೆನ್ನು ಬಗ್ಗಿಸಿ ಮೊಬೈಲ್ ಆಟ, ಟಿವಿ ನೋಡುವುದು, ಕಂಪ್ಯೂಟರ್ ವೀಕ್ಷಣೆ, ಆನ್‌ಲೈನ್ ಕ್ಲಾಸ್ ಇವುಗಳಿಂದ ಬೆನ್ನು ಮತ್ತು ಸೊಂಟದ ನೋವು ಸಹಜ. ಸರಿಯಾದ ಭಂಗಿ ಅನುಸರಿಸುವುದರ ಜೊತೆ ಗಂಟೆಗಟ್ಟಲೇ ಒಂದೇ ಜಾಗದಲ್ಲಿ ಕೂರುವ ಬದಲು ಅರ್ಧಗಂಟೆಗೊಮ್ಮೆ ಎದ್ದು ಓಡಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT