ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯವಿರುವುದು ಕಣ್ಣಿನಲ್ಲಲ್ಲ, ಮನಸ್ಸಿನಲ್ಲಿ

Last Updated 28 ಆಗಸ್ಟ್ 2020, 19:07 IST
ಅಕ್ಷರ ಗಾತ್ರ

*29 ವರ್ಷದ ಮಹಿಳೆ. ಸಾಧಾರಣ ರೂಪಿನವಳು. ಶಾಲೆಯಲ್ಲಿದ್ದಾಗ ಒಬ್ಬ ಸುಂದರ ಹುಡುಗನನ್ನು ಪ್ರೀತಿಸುತ್ತಿದ್ದೆ. ಅವನಿಗೆ ನನ್ನ ಮೇಲೆ ಯಾವುದೇ ಭಾವನೆಗಳಿರಲಿಲ್ಲ. ಈಗ ಅವನಿಗೆ ಮದುವೆಯಾಗಿದ್ದರೂ ನನಗೆ ಅವನನ್ನು ಮರೆಯಲಾಗುತ್ತಿಲ್ಲ. ಅಂತಹದೇ ರೂಪ, ಗುಣಗಳಿರುವ ಹುಡುಗನ ಜೊತೆ ಮದುವೆ ಮಾಡಿಸಿ ಎಂದು ಮನೆಯವರಿಗೆ ಹೇಳಿದರೆ ಅವರು ‘ನೀನೇನು ನೋಡೋಕೆ ಚೆನ್ನಾಗಿದ್ದೀಯಾ? ನಿನಗೇನು ಯೋಗ್ಯತೆ ಇದೆ?’ ಎಂದು ಹಂಗಿಸುತ್ತಾರೆ. ನಾನು ತುಂಬಾ ಬೇಸರದಲ್ಲಿದ್ದೇನೆ. ಪರಿಹಾರ ತಿಳಿಸಿ.

ಹೆಸರು ಊರು ಇಲ್ಲ.

-ನಿಮ್ಮ ಮನಸ್ಸಿನ ನೋವನ್ನು ಸ್ಪಷ್ಟವಾಗಿ ಬರೆದಿರುವ ರೀತಿ ಮೆಚ್ಚುಗೆಯಾಗಿದೆ. ಶಾಲೆಯಲ್ಲಿ ಆಕರ್ಷಕ ಎನ್ನಿಸಿದ ಹುಡುಗನನ್ನು ಮರೆಯಲಾಗದ ನೋವಿನಲ್ಲಿದ್ದೀರಿ. ನಿಮಗೆ ಅಂತಹವನೇ ಅಥವಾ ಅವನಿಗಿಂತ ಆಕರ್ಷಕ ಹುಡುಗ ಮುಂದೆ ಸಿಗಬಹುದು. ಅಂತಹವನು ನಿಮ್ಮನ್ನು ಪ್ರೀತಿಸುವುದು ಸಾಧ್ಯವಾಗಬೇಕಾದರೆ ರೂಪಕ್ಕಿಂತ ಹೆಚ್ಚಾಗಿ ನಿಮ್ಮಲ್ಲಿ ಸ್ವಂತವಾದ ಒಂದು ಗಟ್ಟಿ ವ್ಯಕ್ತಿತ್ವವಿರಬೇಕಲ್ಲವೇ? ಅದನ್ನು ಹೇಗೆ ಪಡೆದುಕೊಳ್ಳುವುದು ಎಂದು ಯೋಚಿಸಿದ್ದೀರಾ? ನೀವು ಹೇಗಿದ್ದರೆ ನಿಮ್ಮ ಬಗೆಗೆ ನಿಮಗೇ ಖುಷಿ, ಹೆಮ್ಮೆಯಾಗುತ್ತದೆ ಎಂದು ಯೋಚಿಸಿ. ಹಾಗಾಗುವುದಕ್ಕೆ ನಿಧಾನವಾಗಿ ಪ್ರಯತ್ನವನ್ನು ಪ್ರಾರಂಭಿಸಿ. ವಿದ್ಯಾಭ್ಯಾಸ, ಉದ್ಯೋಗ, ಆರ್ಥಿಕ ಸ್ವಾವಲಂಬನೆ, ಹವ್ಯಾಸಗಳು ಸ್ನೇಹಿತರು-ಹೀಗೆ ಎಲ್ಲಾ ವಿಚಾರಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ನೀವು ಬೆಳೆಯುತ್ತಾ ಬಂದಂತೆ ನಿಮ್ಮನ್ನು ಮೆಚ್ಚುವವರು ತಾವಾಗಿಯೇ ಬರುತ್ತಾರೆ.

ಸೌಂದರ್ಯದ ಬಗೆಗೆ ಮಾತ್ರ ಯೋಚಿಸುತ್ತಾ ನಿಮ್ಮೊಳಗಿನ ಬೇರೆಬೇರೆ ಶಕ್ತಿಗಳನ್ನು ಮರೆತಿದ್ದೀರಿ. ಅವುಗಳನ್ನು ಹೊರತನ್ನಿ. ಆಗ ನಿಮಗೆ ನೀವೇ ಆಕರ್ಷಕವಾಗಿ ಕಾಣುತ್ತೀರಿ.

*ಮದುವೆಯಾಗಿ 2 ಮಕ್ಕಳಿದ್ದಾರೆ. ಪಿಯು ಓದಿದ್ದೇನೆ. ನನಗೆ ಜನರ ಜೊತೆ ಮಾತನಾಡುವುದಕ್ಕೆ, ಹೊರಗಡೆ ಹೋಗುವುದಕ್ಕೆ ಭಯವಾಗುತ್ತದೆ. ಪರಿಹಾರ ತಿಳಿಸಿ.

-ಭಾಗ್ಯಶ್ರೀ ಊರಿನ ಹೆಸರಿಲ್ಲ.

ಹೊರಗಡೆ ಹೋಗುವುದನ್ನು, ಜನರ ಜೊತೆ ಬೆರೆಯುವುದನ್ನು ದೊಡ್ಡ ಅಪಾಯವೆಂದು ನಿಮ್ಮ ಮೆದುಳು ಗ್ರಹಿಸುತ್ತಿದೆಯಲ್ಲವೇ? ಈ ಅಪಾಯ ದೇಹದಲ್ಲಿ ಹೇಗೆ ಕಾಣಿಸುತ್ತಿದೆ? ಎದೆಬಡಿತ ಹೆಚ್ಚುವುದು, ಮೈಬೆವರುವುದು, ಮಾತು ಹೊರಡದಿರುವುದು ಮುಂತಾದ ರೂಪದಲ್ಲಿ ಇರುತ್ತದೆ. ಮನೆಯಲ್ಲಿಯೇ ಕುಳಿತು ಹೊರಗೆ ಹೋದಂತೆ ಕಲ್ಪಿಸಿಕೊಂಡು ಈ ಸೂಚನೆಗಳನ್ನು ಗಮನಿಸಿ. ನಿಧಾನವಾಗಿ ಉಸಿರಾಡುತ್ತಾ ದೇಹವನ್ನು ಸಮಾಧಾನಗೊಳಿಸಿ. ದಿನಕ್ಕೆ ಹಲವಾರು ಬಾರಿ ಇದನ್ನು ಮಾಡಿ. ಹೊರಗಡೆ ಹೋದಾಗಲೂ ದೇಹದಲ್ಲಿ ಆಗುವ ಇಂತಹ ಕಿರಿಕಿರಿಗಳನ್ನು ನಿಧಾನವಾಗಿ ಹಿಡಿತಕ್ಕೆ ತನ್ನಿ.

ನಿಮಗಿರುವ ಆತ್ಮಗೌರವದ ಕೊರತೆ ಭಯವಾಗಿ ಕಾಣಿಸಿಕೊಳ್ಳುತ್ತಿದೆ. ಹೊರಗಡೆ ಹೋಗಬೇಕು ಎಂದುಕೊಂಡ ಕೂಡಲೆ ನಿಮ್ಮ ತಲೆಯಲ್ಲಿ ಹಲವಾರು ಧ್ವನಿಗಳು ಕೇಳಿಸುತ್ತವೆ. ಅವುಗಳನ್ನು ಗುರುತಿಸಿ. ನನಗೆ ಹೊರಗಿನ ಜನರನ್ನು, ಕೆಲಸಗಳನ್ನು ನಿಭಾಯಿಸುವ ಶಕ್ತಿಯಿಲ್ಲ, ಎಲ್ಲರೆದುರು ನನಗೆ ಅವಮಾನವಾಗುತ್ತದೆ, ಎಲ್ಲರೂ ನನ್ನನ್ನು ನೋಡಿ ನಗಬಹುದು, ನನ್ನಿಂದ ಕೆಲಸಗಳುಮತ್ತು ಸಂಬಂಧಗಳು ಹಾಳಾಗುತ್ತವೆ- ಮುಂತಾದ ಅಭಿಪ್ರಾಯಗಳು ಅಲ್ಲಿ ಕೇಳಿಸುತ್ತವೆ. ಇವುಗಳಿಂದ ಹೊರಬರಲು ತಜ್ಞ ಮನೋಚಿಕಿತ್ಸಕರ ಸಹಾಯ ಪಡೆಯಿರಿ.

*ಎಂಎಸ್ಸಿ ಪದವೀಧರೆ. 5 ವರ್ಷಗಳ ಹಿಂದೆ ಹುಡುಗನೊಬ್ಬನ ಪರಿಚಯವಾಯಿತು. ಆತ 10ನೇ ತರಗತಿ ಓದಿದ್ದರೂ ಎಂ.ಟೆಕ್‌ ಮಾಡಿದ್ದೇನೆ ಎಂದು ಹೇಳಿ ನನ್ನ ಜೊತೆ ಪ್ರೀತಿಯ ನಾಟಕವಾಡಿದ್ದ. ಅವನೊಬ್ಬ ದೊಡ್ಡ ವಂಚಕನೆಂದು ನಂತರ ತಿಳಿಯಿತು. ಒಂದು ನಕಲಿ ವಿಡಿಯೋ ಮಾಡಿ ನನ್ನನ್ನು ಬೆದರಿಸತೊಡಗಿದ್ದ. ಪೋಲೀಸರಿಗೆ ದೂರು ನೀಡಿದರೆ ಅವರು ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ. ಈಗ ಅವನು ದಿನವೂ ನನ್ನ ಮನೆ, ಕೆಲಸದ ಸ್ಥಳಕ್ಕೆ ಬಂದು ತೊಂದರೆ ಕೊಡುತ್ತಿದ್ದಾನೆ. ನನ್ನ ಪ್ರಯತ್ನಗಳೆಲ್ಲವೂ ವಿಫಲವಾಗಿದ್ದು ಏನು ಮಾಡುವುದು ತಿಳಿಯದಾಗಿದೆ. ಸಲಹೆ ನೀಡಿ.

-ಹೆಸರು, ಊರು ಇಲ್ಲ.

ಅಸ್ಥಿರವಾದ ಮನಸ್ಸಿನ ಹುಡುಗನಿಂದ ನೀವು ಮಾನಸಿಕ ಹಿಂಸೆ ಅನುಭವಿಸುತ್ತಿದ್ದೀರಿ. ಇದು ಕಾನೂನಿನ ಸಮಸ್ಯೆಯಾಗಿದ್ದು ಪೊಲೀಸರಿಂದ ಸಹಾಯವಾಗಲಿಲ್ಲವೆಂದು ಹೇಳಿದ್ದೀರಿ. ವಕೀಲರ ಜೊತೆ ಮಾತನಾಡಿ ನೇರವಾಗಿ ನ್ಯಾಯಾಲಯವನ್ನು ಮೊರೆಹೋಗುವ ಬಗೆಗೆ ಚರ್ಚಿಸಿ. ಸಾಮಾಜಿಕವಾಗಿ ನಿಮಗೆ ಆಗುವ ಮಾನಸಿಕ ಹಿಂಸೆಯನ್ನು ನಿಭಾಯಿಸಿಕೊಂಡು ಸಮಾಧಾನದಲ್ಲಿರುವುದು ಹೇಗೆ ಎನ್ನುವುದರ ಬಗೆಗೆ ಹೆಚ್ಚು ಗಮನನೀಡಿ. ನೀವು ಭಯಪಟ್ಟಷ್ಟೂ ಅವನ ಧೈರ್ಯ ಹೆಚ್ಚುತ್ತದೆ. ಅವನು ನಿಮ್ಮನ್ನು ಸಮೀಪಿಸಿದರೆ ಸಾರ್ವಜನಿಕವಾಗಿ ಅವಮಾನಿಸಲು ಹಿಂಜರಿಯಬೇಡಿ. ಸಾಧ್ಯವಿದ್ದರೆ ಮಹಿಳಾ ಸಹಾಯವಾಣಿಯನ್ನೂ ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT