ಕೈ ಕಾಲು ಆಡಿಸಿ... ಆರೋಗ್ಯಭಾಗ್ಯವ ನೋಡಿ

7
ಕಾಳಜಿ

ಕೈ ಕಾಲು ಆಡಿಸಿ... ಆರೋಗ್ಯಭಾಗ್ಯವ ನೋಡಿ

Published:
Updated:

ಕುಳಿತಲ್ಲೇ ಮಾಡುವ ಸರಳ ವ್ಯಾಯಾಮ ರಕ್ತನಾಳಗಳಿಗೆ ಹೊಸ ಚೈತನ್ಯ ತುಂಬುತ್ತದೆ. ಇದರಿಂದ ದೇಹದ ಎಲ್ಲಾ ಭಾಗಗಳಿಗೆ ರಕ್ತ ಸಂಚಾರ ಸುಗಮವಾಗಿ ಹೃದಯದ ಕಾಯಿಲೆ ಹಾಗೂ ರಕ್ತನಾಳಗಳ ತೊಂದೆರೆ ಕಡಿಮೆಯಾಗುತ್ತದೆ. ಕೈ ಹಾಗೂ ಕಾಲಿನ ಸರಳ ವ್ಯಾಯಾಮಗಳು ಉದ್ಯೋಗಸ್ಥರಿಗೆ ಅತ್ಯುತ್ತಮ ಆಯ್ಕೆಯಾಗಬಹುದು.

ಸತತವಾಗಿ ಏಳೆಂಟು ಗಂಟೆ ಒಂದೇ ಭಂಗಿಯಲ್ಲಿ ಕೂರುವುದರಿಂದ ರಕ್ತದ ಚಲನೆ ದೇಹದ ಭಾಗಗಳಿಗೆ ಸರಾಗವಾಗಿ ಆಗುವುದಿಲ್ಲ.  ಕೇವಲ 30 ನಿಮಿಷಗಳಷ್ಟು ಹೊತ್ತು ಒಂದೇ ಭಂಗಿಯಲ್ಲಿ ಕುಳಿತುಕೊಂಡರೂ ಕಾಲುಗಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ ಹಾಗೂ ಸ್ನಾಯುಗಳಿಗೆ ರಕ್ತ ಪೂರೈಕೆ ಮಾಡುವ ಸಣ್ಣ ರಕ್ತನಾಳಗಳ ಕೆಲಸವೂ ದುರ್ಬಲವಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಹಾಗಾಗಿ ಕುಳಿತುಕೊಂಡಿರುವಾಗ ಹಾಗೂ ಮಲಗಿರುವಾಗ ಹಾಗೇ ಸುಮ್ಮನೆ ಕಾಲಿನಿಂದ ಮಾಡುವ ಸರಳ ವ್ಯಾಯಾಮಗಳು ಹೃದಯದ ಆರೋಗ್ಯಕ್ಕೆ ಹಾಗೂ ರಕ್ತನಾಳಗಳ ಕೆಲಸಕ್ಕೆ ಉತ್ತಮ ಎನ್ನಲಾಗಿದೆ. ಕಚೇರಿಯಲ್ಲಿ ಒಂದೇ ಸಮನೆ ಕುಳಿತು ಕೆಲಸ ಮಾಡುವುದರಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಮೈಕೈ ನೋವು ಕೂಡ ಕಾಣಿಸಿಕೊಳ್ಳಬಹುದು. 

ಕಚೇರಿಯಲ್ಲಿ ಅಥವಾ ಮನೆಯಲ್ಲಿ ಕುರ್ಚಿ ಮೇಲೆ ಕುಳಿತು ಕೆಲಸ ಮಾಡುವಾಗ  ಕಾಲುಗಳನ್ನು ಸಮನಾಗಿ ಜೋಡಿಸಿಕೊಂಡು ನೇರವಾಗಿ ಕುಳಿತುಕೊಳ್ಳಿ. ಹೆಬ್ಬೆರಳು ನೇರವಾಗಿರಲಿ. ನಂತರ ಕಾಲುಗಳನ್ನು ಅಗಲ ಮಾಡಿ. ಕಾಲಿನ ಹಿಮ್ಮಡಿ ಮಾತ್ರ ನೆಲವನ್ನು ಸ್ಪರ್ಶಿಸಲಿ. ಇದನ್ನು ಪ್ರತಿ ಅರ್ಧ ಗಂಟೆಗೊಮ್ಮೆ 15ರಿಂದ 20 ಬಾರಿ ಮಾಡಿ. 

ನೇರವಾಗಿ ಕುಳಿತು ಕಾಲುಗಳನ್ನು ನೀಳವಾಗಿ ಚಾಚಿಕೊಂಡು ಬೆರಳುಗಳನ್ನು ನೇರವಾಗಿಟ್ಟುಕೊಳ್ಳಿ. ಹೊಟ್ಟೆಯ ಸ್ನಾಯುಗಳನ್ನು ಬಿಗಿ ಮಾಡಿಕೊಂಡು ಭುಜವನ್ನು ಸ್ಟ್ರೆಚ್‌ ಮಾಡಿ. ಭುಜ ಕುರ್ಚಿಯ ಹಿಂಭಾಗಕ್ಕೆ ಮುಟ್ಟಬೇಕು. ಬಲಗಾಲನ್ನು ಎದೆಯತ್ತ ಬಗ್ಗಿಸಿ. ಇದೇ ವ್ಯಾಯಾಮವನ್ನು ಎಡಗಾಲಿನಿಂದಲೂ ಮಾಡಿ. 

ಬೆನ್ನು ನೋವು ಇದ್ದಲ್ಲಿ ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು ಐದು ನಿಮಿಷ ಅಡ್ಡಾಡಿ. ಲಿಫ್ಟ್‌ ಬಳಸುವ ಬದಲು ಮೆಟ್ಟಿಲುಗಳನ್ನು ಬಳಸಿದರೆ ದೇಹಕ್ಕೆ ವ್ಯಾಯಾಮವೂ ಆಗುತ್ತದೆ.

ಈ ಸರಳ ವ್ಯಾಯಾಮಗಳನ್ನು ಕುಳಿತೇ ಮಾಡಬಹುದು. ಇದರಿಂದ ದೇಹ ಫಿಟ್‌ ಆಗಿರುವುದಲ್ಲದೇ  ಮನಸ್ಸಿನಲ್ಲಿ ಧನಾತ್ಮಕ ಯೋಚನೆಗಳು ಮೂಡಿ, ಕೆಟ್ಟ ಆಲೋಚನೆಗಳಿಂದ ಮನಸ್ಸನ್ನು ದೂರವಿರಿಸಿ ಪ್ರಶಾಂತವಾಗಿರುವಂತೆ ಮಾಡುತ್ತದೆ. ಕಚೇರಿ ಕೆಲಸದ ಗಡಿಬಿಡಿಯಲ್ಲಿ ಊಟ, ತಿಂಡಿ ಮಾಡುವುದನ್ನು ಮರೆಯಬಾರದು.

ಬೆಳಗ್ಗಿನ ತಿಂಡಿ ತಿನ್ನದೇ ಇದ್ದರೆ ಹೊಟ್ಟೆಯಲ್ಲಿ ಆ್ಯಸಿಡಿಟಿ ಆಗಬಹುದು. ಇದರಿಂದ ಏಕಾಗ್ರತೆಯಿಂದ ಕೆಲಸ ಮಾಡಲು ಸಾಧ್ಯವಾಗದೇ ಇರಬಹುದು.

ಬರಹ ಇಷ್ಟವಾಯಿತೆ?

 • 13

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !